ಸಾಹಿತ್ಯ ಲೋಕಕ್ಕೆ ಹೊಸಬೆಳಕು ಚೆಲ್ಲಿದ ಪೂರ್ಣಚಂದ್ರ:ಬನ್ನೂರು ಕೆ. ರಾಜು

1031
Share

ಸಾಹಿತ್ಯ ಲೋಕಕ್ಕೆ ಹೊಸಬೆಳಕು ಚೆಲ್ಲಿದ ಪೂರ್ಣಚಂದ್ರ

  • ಬನ್ನೂರು ಕೆ. ರಾಜು
    ಸಾಹಿತಿ-ಪತ್ರಕರ್ತ

ಸುವಿಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಸಾಹಿತಿಯಷ್ಟೇ ಆಗಿರಲಿಲ್ಲ. ಬಹುಮುಖಿ ತೇಜಸ್ಸು ಅವರದು. ಎಲ್ಲವೂ ಸಮಾಜಮುಖಿಯೇ. ಅದ್ಭುತ ಫೋಟೋಗ್ರಾಫರ್, ಅಪ್ರತಿಮ ಸಹಜ ಕೃಷಿಕ. ಅನನ್ಯ ಚಿತ್ರ ಕಲಾವಿದ, ಅಸಾಮಾನ್ಯ ಬೇಟೆಗಾರ, ಅಪೂರ್ವ ಸಂಗೀತಗಾರ, ಅಸಮಬಲ ಹೋರಾಟಗಾರ, ಕನ್ನಡ ಸಾಫ್ಟ್‌ವೇರ್ ಅಭಿವೃದ್ಧಿಗಾರ, ಅರಣ್ಯ ಸುತ್ತುವ ಸಾಹಸಿಗ, ಪರಿಸರ ಸಂರಕ್ಷಕ… ಹೀಗೆ ತೇಜಸ್ವಿಯವರ ಆಸಕ್ತಿಯ ಕ್ಷೇತ್ರ ಹಲವು. ಹಾಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಏರಿದಷ್ಟೇ ಎತ್ತರಕ್ಕೆ ಅಥವಾ ಅದಕ್ಕಿಂತಲೂ ಮಿಗಿಲಾಗಿ ಸಾಹಿತ್ಯದಿಂದಾಚೆಗೂ ಅವರು ಮಿಂಚಿದ್ದು ಈಗಲೂ ಕನ್ನಡಿಗರ ಕಣ್ಮುಂದೆ ವಿಸ್ಮಯವಾಗಿ ನಿಂತಿದೆ. ತೇಜಸ್ವಿಯವರು ಕ್ಲಿಕ್ಕಿಸಿರುವ ಫೋಟೋಗಳೇ ಇದಕ್ಕೆ ಉತ್ತಮ ಉದಾಹರಣೆ. ಗಿಡ-ಮರ, ಹಕ್ಕಿ-ಪಕ್ಷಿ, ಹೂವು-ಹಣ್ಣು, ಮಣ್ಣು-ನೀರು, ಇಳೆ-ಬೆಳೆ, ಕಾಡು-ಮೇಡು ಅಂತ ಸದಾ ನಿಸರ್ಗದಲ್ಲೇ ಸ್ವರ್ಗ ಕಾಣುತ್ತಿದ್ದ ತೇಜಸ್ವಿಯವರು ಜನಾರಣ್ಯದಿಂದ ದೂರವಿದ್ದು ಒಂದು ರೀತಿ ಮಲೆನಾಡಿನ ಕಾಡಿನಲ್ಲಿ ಸಂತನಂತೆ ಬದುಕಿದವರು. ಕಾಡಿನ ಬದುಕಿನಲ್ಲೂ ನಾಡಿನ ಹಿತವೇ ಮುಖ್ಯವಾಗಿತ್ತೆಂಬುದು ಇವರ ಬದುಕಿನ ಶೈಲಿಯಲ್ಲೇ ಕಾಣಬಹುದಿತ್ತು. ತೇಜಸ್ವಿ ಬದುಕನ್ನು ರಾಬಿನ್ಸನ್ ಕ್ರೂಸೋ ಬದುಕಿಗೆ ಹೋಲಿಸುವುದುಂಟು.

ತಮ್ಮ ಉದಾತ್ತ ಚಿಂತನೆಗಳಿಂದ, ಪ್ರಗತಿಪರ ಧೋರಣೆಯಿಂದ, ವಿಚಾರಾತ್ಮಕ ಸೃಜನ ಶೀಲ ಕೃತಿಗಳಿಂದ, ಸಾಹಿತ್ಯ; ವೈeನಿಕ ಬರವಣಿಗೆಯಿಂದ ಕನ್ನಡ ಸಾರಸ್ವತ ಲೋಕವನ್ನು ’ಪೂರ್ಣಚಂದ್ರ’ನಂತೆಯೇ ಬೆಳಗಿದವರು ತೇಜಸ್ವಿಯವರು.

ಇಂಥ ಕನ್ನಡದ ಅನರ್ಘ್ಯ ರತ್ನ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಹುಟ್ಟಿದ್ದು ೧೯೩೮ರ ಸೆಪ್ಟೆಂಬರ್ ೮ ರಂದು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮ ಇವರ ಜನ್ಮ ಸ್ಥಳ. ತಂದೆ ಕನ್ನಡವನ್ನು ವಿಶ್ವದ ಉದ್ದಗಲಕ್ಕೂ ಮೆರೆಸಿದ ಮೇರುಕವಿ ಕುವೆಂಪು. ತಾಯಿ ಹೇಮಾವತಿ ಕುವೆಂಪು. ಬಾಲ್ಯದಿಂದಲೂ ಗ್ರಾಮೀಣ ಬದುಕನ್ನೇ ಅಪ್ಪಿಕೊಂಡಿದ್ದರಿಂದಾಗಿ ಇವರ ಬರಹಗಳಲ್ಲಿ ಮಲೆನಾಡಿನ ದಟ್ಟ ವರ್ಣನೆಯೇ ಯಥೇಚ್ಛವಾಗಿವೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮುಗಿಸಿದ ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್‍ಸ್ ಮಾಡಿ ನಂತರ ಮಾನಸ ಗಂಗೋತ್ರಿಯಲ್ಲಿ ಎಂ.ಎ. ಪದವಿಗಳಿಸಿದರು. ಆದರೆ ಎಲ್ಲರಂತೆ ನಗರ ಜೀವನಕ್ಕೆ ಅಂಟಿಕೊಂಡು ಅಧ್ಯಾಪಕ ವೃತ್ತಿಯ ದಾರಿ ಹಿಡಿಯದೆ ಸ್ವತಂತ್ರ ಪ್ರವೃತ್ತಿಯ ತೇಜಸ್ವಿ ಕಾಡಿನ ಪರಿಸರದ ಹಳ್ಳಿಯತ್ತ ಮುಖ ಮಾಡಿದ್ದರು. ತಂದೆ ಕುವೆಂಪು ಅವರು ಮಲೆನಾಡಿನ ಹಳ್ಳಿಯಿಂದ ಮೈಸೂರು ನಗರಕ್ಕೆ ಬಂದು ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಮೈಸೂರಿನಲ್ಲೇ ಬಾಳಿ ಬದುಕಿ ಅಲ್ಲೇ ತಮ್ಮ ಸಾಹಿತ್ಯ ಕೃಷಿಯನ್ನೆಲ್ಲಾ ಮಾಡಿದರಾದರೂ ಅವರ ಮಗ ತೇಜಸ್ವಿಯವರು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ನಗರ ಜೀವನಕ್ಕೆ ಗುಡ್‌ಬೈ ಹೇಳಿ ಮತ್ತೆ ಮಲೆನಾಡಿಗೆ ಮರಳಿ ಕೃಷಿ ಕಾಯಕಕ್ಕಿಳಿದಿದ್ದರು. ಅಲ್ಲಿಂದಾಚೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅವರ ಕಾರ್ಯಕ್ಷೇತ್ರವಾಯಿತು. ನಿಜ ಅರ್ಥದಿ ಅಪ್ಪಟ ರೈತನಾಗಿ ’ಮಣ್ಣಿನ ಮಗ’ ಆಗಿದ್ದರು.

ಭೂಮಿ ಕೃಷಿಯ ಜೊತೆ ಜೊತೆಯಲ್ಲೇ ಸಾಹಿತ್ಯ ಕೃಷಿಯನ್ನೂ ಮಾಡುತ್ತಾ ಸಾರ್ಥಕ ಪಥದಲ್ಲಿ ಬದುಕಿನ ಬಂಡಿಯನ್ನು ನೂಕಿದ ಈ ಕಾಡಿನ ಸಂತ ೧೯೫೦ರ ದಶಕದಲ್ಲಿ ಪ್ರಪ್ರಥಮವಾಗಿ ’ಲಿಂಗ ಬಂದ’ ಕಥೆಯ ಮೂಲಕ ಸಾಹಿತ್ಯ ಲೋಕಕ್ಕೆ ಅಡಿಯಿಟ್ಟು ತಮ್ಮ ಮೊದಲ ಕೃತಿಯಲ್ಲೇ ಹೊಸ ಜಾಡು ಹಿಡಿದು ವಿಮರ್ಶಕರ ಗಮನ ಸೆಳೆದಿದ್ದರು. ತಮ್ಮ ಈ ಮೊದಲ ಕಥೆಗೇ ’ಪ್ರಜಾವಾಣಿ’ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. ಹಾಗೆಯೇ ಅವರ ಮತ್ತೊಂದು ಕಥೆ ’ಗುಡುಗು ಹೇಳಿದ್ದೇನು’ ತೀರ್ಪುಗಾರರ ಮೆಚ್ಚುಗೆಪಡೆದಿತ್ತು. ಬರವಣಿಗೆಯ ಆರಂಭದಲ್ಲಿ ನವ್ಯ ಚಳವಳಿಯ ಜತೆ ಹೆಜ್ಜೆಹಾಕಿದರೂ ನಂತರದ ದಿನಗಳಲ್ಲಿ ತಮ್ಮದೇ ಆದ ಹೊಸ ಹಾದಿ ಕಂಡುಕೊಂಡ ತೇಜಸ್ವಿ ’ಅಬಚೂರಿನ ಪೋಸ್ಟ್ ಆಫೀಸು’ ಹೊತ್ತಿಗೆ ಆನೆ ನಡೆದದ್ದೇ ಹಾದಿ ಎಂಬಂತೆ ತಮ್ಮೊಳಗಿನ ಚಿಂತನೆಯ ಧಾರೆಯಲ್ಲಿ ನೂತನ ಕಥನ ಶೈಲಿಯಿಂದ ತಾವೇ ಒಂದು ಹೆದ್ದಾರಿಯಾಗಿ ಬೆಳೆದು ಸಾಹಿತ್ಯ ಲೋಕವನ್ನು ಬೆರಗುಗೊಳಿಸಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ಕಾಳಜಿ, ವೈಚಾರಿಕ ಪ್ರಜ್ಞೆ ಮತ್ತು ವೈeನಿಕ ಮನೋಧರ್ಮಗಳು ಇವರ ಬರಹಗಳುದ್ದಕ್ಕೂ ಕಲಾತ್ಮಕವಾಗಿ ಅಭಿವೃಕ್ತಿಗೊಂಡು ಒಂದು ರೀತಿ ಹೊಸ ಜಗತ್ತು ಕಂಡಂತೆ ಓದುಗ ರೋಮಾಂಚನಗೊಳ್ಳುವಂತೆ ಸಾಹಿತ್ಯ ಕೃತಿಗಳನ್ನು ಸೃಷ್ಟಿ ಮಾಡಿದ್ದು ತೇಜಸ್ವಿಯ ವಿಶೇಷ. ಇವರ ’ಮಿಲೆನಿಯಂ ಸರಣಿ’ಯಂಥ ಕೃತಿಗಳು ಓದುಗಲೋಕದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದ್ದವು. ತಮಗರಿವಿಲ್ಲದಂತೆಯೇ ಕನ್ನಡ ಓದು ಪ್ರಪಂಚವನ್ನು ವಿಸ್ತಾರಗೊಳಿಸಿದ್ದರು. ಅಂತೆಯೇ ತಂದೆ ಕುವೆಂಪು ಅವರ ಪ್ರಭಾವಲಯದಿಂದ ಹೊರಬಂದು ಸಾರಸ್ವತ ಪ್ರಪಂಚದಲ್ಲಿ ತಮ್ಮದೇ ಆದಂಥ ಛಾಪು ಮೂಡಿಸಿದ ಅದ್ಭುತ ಪ್ರತಿಭೆ ತೇಜಸ್ವಿಯವರದು!

ತಬರನ ಕಥೆ, ಕಿರಗೂರಿನ ಗಯ್ಯಾಳಿಗಳು, ಹುಲಿಯೂರಿನ ಸರಹದ್ದು, ಚಿದಂಬರ ರಹಸ್ಯ, ಮಾಯಾಲೋಕ, ಜುಗಾರಿ ಕ್ರಾಸ್, ಕರ್ವಲೋ, ಮಲೆನಾಡಿನ ಹಕ್ಕಿಗಳು, ಪರಿಸರದ ಕಥೆ, ಹೆಜ್ಜೆ ಮೂಡದ ಹಾದಿಯಲ್ಲಿ, ಕಾಡಿನ ಕಥೆಗಳು ಕೃತಿಗಳ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ತೇಜಸ್ವಿಯವರು ಹೊಸತೊಂದು ಪ್ರಭಾವಳಿಯನ್ನೇ ತೊಡಿಸಿದ್ದಾರೆ. ಹಾಗೆಯೇ ತಂದೆ ಕುವೆಂಪು ಅವರನ್ನು ಕುರಿತ ’ಅಣ್ಣನ ನೆನಪು’ ಮತ್ತು ’ಅಲೆಮಾರಿಯ ಅಂಡಮಾನ್’ ಕೃತಿಗಳು ಇವರಿಂದ ಸೃಷ್ಟಿಯಾದ ಅಪೂರ್ವ ಸಾಹಿತ್ಯ ರತ್ನಗಳು. ಇವು ಸೃಜನ ಶೀಲ ಮತ್ತು ಸೃಜನೇತರ ಎಂಬ ಸಾಹಿತ್ಯಕ್ಕೆ ಪರಿಭಾಷೆಗಳನ್ನೇ ಬದಲಾಯಿಸುವಂತೆ ಮಾಡಿ ಶ್ರೇಷ್ಠತೆಯಿಂದ ಮೆರೆದಿವೆ. ಸಹಜ ಕೃಷಿ, ವಿಕಾಸವಾದ, ಇಕಲಾಜಿ, ಪ್ಲೈಂಯಿಂಗ್ ಸಾಸರ್, ಕನ್ನಡ ನಾಡಿನ ಹಕ್ಕಿಗಳು ಕೃತಿಗಳೂ ಸಹಾ ತೇಜಸ್ವಿಯವರ ದೈತ್ಯ ಪ್ರತಿಭೆಗೆ ಸಾಕ್ಷಿಗಲ್ಲುಗಳಾಗಿವೆ. ಹಾಗೆಯೇ ಇವರು ಬರೆದದ್ದು ’ಯಮಳ ಪ್ರಶ್ನೆ’ ಎಂಬ ಒಂದೇ ನಾಟಕವಾದರೂ ಕೂಡ ವೃತ್ತಿನಿರತ ನಾಟಕಕಾರರಿಗಿಂತಲೂ ಹೆಚ್ಚಾಗಿ ರಂಗದಲ್ಲಿ ಹೆಜ್ಜೆ ಮೂಡಿಸಿದ್ದಾರೆ. ಕಾರಣ ’ಕೃಷ್ಣೇಗೌಡರ ಆನೆ’ಯಂಥ ಕಿರು ಕಾದಂಬರಿಯಿಂದ ಹಿಡಿದು ’ಚಿದಂಬರ ರಹಸ್ಯ’ದವರೆಗೆ ಇವರ ಬಹುತೇಕ ಕೃತಿಗಳು ನಾಟಕಕ್ಕೆ ರೂಪಾಂತರಗೊಂಡಿವೆ. eನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್, ಕೆ.ವಿ. ಸುಬ್ಬಣ್ಣ, ಟಿ.ಎಸ್. ನಾಗಾಭರಣ, ಗಿರೀಶ್ ಕಾಸರವಳ್ಳಿ, ಟಿ.ಎನ್. ನರಸಿಂಹನ್‌ರಂಥ ಘಟಾನುಘಟಿಗಳು ತೇಜಸ್ವಿಯವರ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ತೇಜಸ್ವಿಯವರ ಅಬಚೂರಿನ ಪೋಸ್ಟ್ ಆಫೀಸು, ಕುಬಿ ಮತ್ತು ಇಯಾಲ, ತಬರನ ಕಥೆ ಕೃತಿಗಳು ಬೆಳ್ಳಿತೆರೆಯನ್ನು ಅಲಂಕರಿಸಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರ ಮುಖೇನ ಕನ್ನಡ ಚಿತ್ರರಂಗದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ತೇಜಸ್ವಿಯವರು ಎಂದೂ ಕೂಡ ಪ್ರಶಸ್ತಿ, ಪುರಸ್ಕಾರಗಳ ಬೆನ್ನುಹತ್ತಿದವರಲ್ಲ. ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪರಿಸರ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿಗಳಂಥ ಅನೇಕ ಪ್ರಶಸ್ತಿಗಳು ತೇಜಸ್ವಿಯವರನ್ನು ಅಲಂಕರಿಸಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ. ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಕೃಪಾಕರ-ಸೇನಾನಿ ನಿರ್ದೇಶನದಲ್ಲಿ ತೇಜಸ್ವಿ ಅವರನ್ನು ಕುರಿತು ’ಮಾಯಾಲೋಕ’ ಎಂಬ ಸಾಕ್ಷ್ಯ ಚಿತ್ರ ನಿರ್ಮಿಸಿ ಗೌರವ ಸಲ್ಲಿಸಿದೆ.

ಸಾಹಿತ್ಯದ ಜೊತೆಗೆ ಸಾಂಸ್ಕೃತಿಕವಾಗಿಯೂ ನಾಡುಕಟ್ಟುವ ಕೆಲಸದಲ್ಲಿಯೂ ಮುಂಚೂಣಿಯಲ್ಲಿದ್ದ ತೇಜಸ್ವಿಯವರು ಗೆಳೆಯರೊಡಗೂಡಿ ೧೯೭೪ ರಲ್ಲಿ ’ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ’ವನ್ನು ಸ್ಥಾಪಿಸಿದ್ದರು. ಇದು ಇವರ ಸಾಂಸ್ಕೃತಿಕ ಮನಸ್ಸಿಗೆ ಸಾಕ್ಷಿಯಾಗಿದೆ. ಇದೇ ಸಂಘಟನೆ ಮುಂದೆ ರೈತ ಚಳವಳಿ, ದಲಿತ ಚಳವಳಿ, ಬಂಡಾಯ ಸಾಹಿತ್ಯ ಚಳವಳಿಗಳಿಗೆ ಮುನ್ನುಡಿಯಾದದ್ದು ಈಗ ಇತಿಹಾಸ. ಆ ಕಾಲದಲ್ಲಿ ಈ ಎಲ್ಲಾ ಚಳವಳಿಗಳಲ್ಲೂ ತೇಜಸ್ವಿಯವರಿದ್ದರು. ತಮ್ಮ ಬದುಕಿನುದ್ದಕ್ಕೂ ವಿಶ್ವಮಾನವರಾಗಿಯೇ ಪ್ರಜ್ವಲಿಸಿದ ತೇಜಸ್ವಿಯವರು ೧೯೬೬ ರಲ್ಲಿ ತಾವು ಪ್ರೀತಿಸಿದ ಆರ್. ರಾಜೇಶ್ವರಿ ಯವರನ್ನು ಅಂತರ್ಜಾತಿ ವಿವಾಹವಾಗಿ, ಸುಸ್ಮಿತಾ ಮತ್ತು ಈಶಾನ್ಯೆ ಎಂಬ ಎರಡು ಹೆಣ್ಣು ಮಕ್ಕಳ ತಂದೆಯಾಗಿ ಪಟ್ಟಣದ ಸೋಂಕಿಲ್ಲದೆ ಪ್ರಕೃತಿಯ ತೊಟ್ಟಿಲು ಮೂಡಿಗೆರೆಯ ’ಚಿತ್ರಕೂಟ’ ಎಂಬ ತೋಟದ ಮನೆಯಲ್ಲಿ ಬದುಕು ಕಳೆದು ಸಾಹಿತ್ಯ ಲೋಕಕ್ಕೆ ತಮ್ಮ ಅಮೂಲ್ಯ ಕೃತಿಗಳನ್ನು ಕಾಣಿಕೆಯಾಗಿ ನೀಡಿ ಹೋಗಿದ್ದಾರೆ. ಕೃತಿಗಳ ಮೂಲಕ ಚಿರಂಜೀವಿಯಾಗಿದ್ದಾರೆ.


Share