ಸಂಪಾದಕೀಯ : ಸರ್ಕಾರದ ಅವಿವೇಕತನ !

207
Share

ಸರ್ಕಾರಿ ನೌಕರರು ನಿರ್ಭೀತಿಯಿಂದ ಕೆಲಸ ಮಾಡಲು ಆಗುತ್ತಿಲ್ಲ ಅದರಲ್ಲೂ ಹೆಣ್ಣುಮಕ್ಕಳು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.
ಪ್ರತಿನಿತ್ಯ ಸಾರ್ವಜನಿಕರು ಓಡಾಡುವ ಸರಕಾರಿ ಕಚೇರಿಗಳಲ್ಲಿ ಅನಗತ್ಯ ಫೋಟೋ ವಿಡಿಯೋಗಳನ್ನು ತೆಗೆದು ಜಾಲತಾಣಗಳಲ್ಲಿ ಹರಿಯಬಿಟ್ಟು ಸುಗಮ ಕೆಲಸಕ್ಕೆ ಅಡ್ಡಿಯುಂಟಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ವೇಳೆ ಮೇಲಾಧಿಕಾರಿಗಳ ಅಪ್ಪಣೆಯಿಲ್ಲದೆ ಯಾರುಕೂಡ ಅದರಲ್ಲೂ ಸಾರ್ವಜನಿಕರು ಫೋಟೋ ವೀಡಿಯೋ ಕ್ಲಿಕ್ಕಿಸ ಬಾರದೆಂದು ನಿನ್ನೆಯ ದಿನ ನಿಷೇದ ಹೊರಡಿಸಿತ್ತು.
ಈ ನಿಷೇಧದ 24 ತಾಸಿನೊಳಗೆ ಮತ್ತೊಂದು ಆಜ್ಞೆಯನ್ನು ಸರ್ಕಾರ ಹೊರಡಿಸಿ ಈ ನಿಷೇಧವನ್ನು ಹಿಂತೆಗೆದುಕೊಂಡಿರುವುದಾಗಿ ಇದೀಗ ತಿಳಿಸಿದೆ.
ಸರ್ಕಾರದ ಈ ತೀರ್ಮಾನಗಳು ಅಸಮರ್ಪಕ ಹಾಗೂ ಹಾಸ್ಯಾಸ್ಪದ ಎಂದು ಹೇಳಬಹುದಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ವಿವೇಚನೆ ಇಲ್ಲದ ಸರ್ಕಾರ ಎಂದು ಸಾಬೀತುಪಡಿಸಿದೆ.
ಎಲ್ಲೆಡೆ ಈ ಸರ್ಕಾರ 40% ಸರ್ಕಾರ ಎಂದು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಇದರ ಛಾಪು ಮೂಡಬಾರದು ಎಂಬ ಹಿನ್ನೆಲೆಯಲ್ಲಿ ಈ ಮೊದಲು ಸರ್ಕಾರ ಫೋಟೋ ಹಾಗೂ ವೀಡಿಯೋ ನಿಷೇಧ ಹೇರಿತ್ತು.
ಇದೀಗ ಇದೇ ವಿಷಯ ಮತ್ತೊಂದು ರೀತಿಯಲ್ಲಿ ವ್ಯಾಖ್ಯಾನಿಸಿ ಸರ್ಕಾರ ನಿಜ ಭ್ರಷ್ಟರನ್ನು ಪ್ರೋತ್ಸಾಹಿಸುತ್ತಿದೆ ಎಂದು ಕೇಳಿ ಬರಲು ಹೊರಟ ತಕ್ಷಣವೇ ಇಂದು ಮತ್ತೊಮ್ಮೆ ತನ್ನ ಆದೇಶವನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿ ಮೂರ್ಖತನಕ್ಕೆ ಎಡೆಮಾಡಿದೆ.
ಏಕೆ ಸರ್ಕಾರ ಯಾವುದೇ ಆಜ್ಞೆ ಹೊರಡಿಸುವ ಮುನ್ನ ಅದರ ಸಾಧಕಬಾಧಕಗಳನ್ನು ಚರ್ಚಿಸುವುದಿಲ್ಲವೇ? ಅಥವಾ ಅಧಿಕಾರಿಗಳ ಕೈಗೊಂಬೆಯಾಗಿ ಕುಣಿಯುತ್ತಿದೆಯೇ?.
ಆಡಳಿತದ ಚುಕ್ಕಾಣಿ ಹಿಡಿದಿರುವ ನಮ್ಮ ರಾಜಕಾರಿಣಿಗಳಿಗೆ ತಾವು ಸಾರ್ವಜನಿಕ ವಲಯದಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಅಸಮರ್ಥರು ಎಂದು ಸಾಬೀತು ಪಡಿಸಬೇಕೇ?.
ಕಾಲಾಯ ತಸ್ಮೈ ನಮಃ


Share