M.P. ವೀಕ್ ಎಂಡ್ ನ್ಯೂಸ್ಸಾಹಿತಿ- ಡಾ.ಭೇರ್ಯ ರಾಮಕುಮಾರ್ ಗೆ ಡಾ.ರಾಜಕುಮಾರ್ ನೆನಪಿನ ರಾಜ್ಯಮಟ್ಟದ ನವರತ್ನ ಪ್ರಶಸ್ತಿ

369
Share

 

ಸಾಹಿತಿ ಡಾ.ಭೇರ್ಯ ರಾಮಕುಮಾರ್ ಗೆ
ಡಾ.ರಾಜಕುಮಾರ್ ನೆನಪಿನ ರಾಜ್ಯಮಟ್ಟದ ನವರತ್ನ ಪ್ರಶಸ್ತಿ

 

ಸಾಹಿತ್ಯ, ಜಾನಪದ, ಕಲೆ, ಪರಿಸರ ಸಂರಕ್ಷಣೆ, ವಿಶೇಷಚೇತನರ ಸೇವೆ,ಪುಸ್ತಕ ಪ್ರಕಟಣೆ,ಪತ್ರಿಕಾ ಸೇವೆ ಸಾಮೂಹಿಕ ನೇತ್ರದಾನ, ದೇಹದಾನ…ಹೀಗೆ ನಮ್ಮ ಸಾಲಿಗ್ರಾಮ ತಾಲ್ಲೂಕಿನವರೇ ಆದ ಡಾ.ಭೇರ್ಯ ರಾಮಕುಮಾರ್ ಅವರದು ಬಹುಮುಖ ಸೇವೆಯನ್ನು ಗೌರವಿಸಿ ಸಾಲಿಗ್ರಾಮದ ಡಾ.ರಾಜಕುಮಾರ್ ವೇದಿಕೆಯ ವತಿಯಿಂದ ಡಾ.ರಾಜಕುಮಾರ್, ಡಾ.ಪುನೀತ್ ರಾಜಕುಮಾರ್ ನೆನಪಿನಲ್ಲಿ ನವರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದೆ.

ಭೇರ್ಯ ರಾಮಕುಮಾರ್ ಅವರು ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ 1964 ರ ಏಪ್ರಿಲ್ 18 ರಂದು ಜನಿಸಿದರು. ಇವರ ತಂದೆ ಬಿ.ಹೆಚ್.ಶ್ರೀಕಂಠಮೂರ್ತಿ ಅವರು ಶಿಕ್ಷಕರು. ತಾಯಿ ಶ್ರೀಮತಿ ಪ್ರೇಮಲೀಲಾ ಸದ್ಗೃಹಿಣಿ. ಇವರ ತಾತಬಿ.ಹೆಚ್.ಹನುಮಂತಮೂರ್ತಿ ಅವರು ಭೇರ್ಯ ಗ್ರಾಮದಲ್ಲಿ ಪೋಸ್ಸ್ಟ್ ಮಾಸ್ಟರ್ ಆಗಿ, ಸಮಾಜಸೇವಕರಾಗಿ ಜನಮನ್ನಣೆ ಗಳಿಸಿದ್ದರು. ಜೊತೆಗೆ ಗ್ರಾಮದ ನೂರಾರು ಮಕ್ಕಳಿಗೆ ಪ್ರತಿನಿತ್ಯ ಉಚಿತ ಮನೆಪಾಠ ಮಾಡುತ್ತಿದ್ದರು. ಅಜ್ಜಿ ಶ್ರೀಮತಿ ಜಾನಕಮ್ಮ ಅವರು ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದರು. ಬಡ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು. ಹೀಗಾಗಿ ಬಾಲ್ಯದಲ್ಲೇ ಮನೆಯ ವಾತಾವರಣವು ರಾಮಕುಮಾರ್ ಅವರ ಜೀವನದ ಮೇಲೆ ಪ್ರಭಾವ ಬೀರಿತು.

ಡಾ.ಭೇರ್ಯ ರಾಮಕುಮಾರ್ ಅವರು ಭೇರ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾನುಬಾಳಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ, ಕೆ.ಆರ್.ನಗರದ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕಲಾ ಪದವಿ ಶಿಕ್ಷಣ, ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಸ್ನಾತಕೋತ್ತರ ಪದವಿ, ಶಾರದಾ ವಿಲಾಸ ಕಾಲೇಜಿನಲ್ಲಿ ಬಿ.ಇಡಿ.ಪದವಿ ಗಳಿಸಿದರು. ಪದವಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾಗಲೇ ಗ್ರಾಮೀಣ ಕವಿ,ಕಲಾವಿದರ ಅಭ್ಯುದಯಕ್ಕಾಗಿ ಗ್ರಾಮಾಂತರ ಬುದ್ದಿಜೀವಿಗಳ ಬಳಗ ಸಂಸ್ಥೆಯನ್ನು ಆರಂಬಿಸಿದರು. ಈ ಸಂಸ್ಥೆಯನ್ನು ಅಂದಿನ ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಪಿ.ಲಂಕೇಶ್ ಅವರು ರೈತರಿಗೆ ಸಸಿಗಳ ವಿತರಣೆ ಮಾಡುವ ಮೂಲಕ ಉದ್ಘಾಟನೆ ಮಾಡಿದ್ದು ಇವರ ಸಾಧನೆ. ಇವರ ಸಾಧನೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು 1997 ರಲ್ಲಿ ಸ್ವಾಮಿ ವಿವೇಕಾನಂದ ರಾಷ್ಟೀಯ ಯುವ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರು ಕೆಂಪೇಗೌಡ ಪ್ರಶಸ್ತಿ, ಮಂತ್ರಾಲಯದ ವತಿಯಿಂದ ಶ್ರೀ ರಾಘವೇಂದ್ರ ಸದ್ಬಾವನಾ ಪ್ರಶಸ್ತಿ, ಪರಾತನ ಇತಿಹಾಸ ಹೊಂದಿರುವ ರಾಣೆಬೆನ್ನೂರು ಕನ್ನಡ ಸಂಘದ ದಸರಾ ಸಾಹಿತ್ಯ ಪ್ರಶಸ್ತಿ ..ಸೇರಿದಂತೆ ವಿವಿಧ ಪ್ರತಿಷ್ಟಿತ ಸಂಸ್ಥೆಗಳ ಸುಮಾರು ಇನ್ನೂರಕ್ಕೂ ಹೆಚ್ಚು ಪ್ರತಿಷ್ಟಿತ ಪ್ರಶಸ್ತಿಗಳು ಇವರ ಸೇವೆಗೆ ಸಂದಿವೆ. ಮಹಾರಾಷ್ಟ್ರದ ಪ್ರತಿಷ್ಟಿತ ವಿಶ್ವವಿದ್ಯಾನಿಲಯವೊಂದರ (ಇಂಡಿಯನ್ ವರ್ಚುಯಲ್ ಯೂನಿವರ್ಸಲ್ ಅಕಾಡೆಮಿ) ಗೌರವ ಡಾಕ್ಟರೇಟ್ ಪ್ರಶಸ್ತಿ ಇವರ ಸೇವೆಗೆ ದೊರೆತಿದೆ

ಗ್ರಾಮಾಂತರ ಬುದ್ದಿಜೀವಿಗಳ ಬಳಗದ ಅಧ್ಯಕ್ಷರಾಗಿ 1985 ರಿಂದ ಇಂದಿನವರೆಗೆ 301 ರಾಜ್ಯಮಟ್ಟದ ಕವಿಗೋಷ್ಟಿಗಳನ್ನು ಸಂಘಟಿಸಿದ್ದಾರೆ. ತಮ್ಮ ಪ್ರತಿಯೊಂದು ಸಾಹಿತ್ಯ ಕಾರ್ಯಕ್ರಮದಲ್ಲೂ ಸಾಮೂಹಿಕ ನೇತ್ರದಾನ ಕಾರ್ಯಕ್ರಮ ನಡೆಸುವ ಮೂಲಕ ಇದುವರೆಗೆ ಸುಮಾರು ಎಂಟು ಸಾವಿರ ಜನರಿಂದ ನೇತ್ರದಾನಕ್ಕೆ ತಮ್ಮ ಒಪ್ಪಿಗೆ ಪತ್ರ ಕೊಡಿಸಿದ್ದಾರೆ. ಪ್ರತಿ ಸಾಹಿತ್ಯ ಕಾರ್ಯಕ್ರಮದಲ್ಲೂ ಭಾಗವಹಿಸಿದ ಎಲ್ಲಾ ಕವಿಗಳು ಹಾಗೂ ಕಲಾವಿದರಿಗೆ ಉಚಿತವಾಗಿ ಸಸಿಗಳನ್ನು ಕಳೆದ ಮೂವತ್ತೆಂಟು ವರ್ಷಗಳಿಂದ ವಿತರಿಸಲಾಗುತ್ತಿದೆ. ಇದುವರೆಗೆ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಗಿದೆ. ಜೊತೆಗೆ ಪ್ರತಿ ಸಾಹಿತ್ಯ ಕಾರ್ಯಕ್ರಮದಲ್ಲೂ ದೇಹದಾನ(ಅಂಗಾಂಗ ದಾನ ) ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗುತ್ತಿದೆ.

ಇವರು 1985 ರಷ್ಟು ಹಿಂದೆಯೇ ನದಿದಡದಲ್ಲಿ ಕವಿಗೋಷ್ಟಿ, ಉದ್ಯಾನವನಗಳಲ್ಲಿ ಕವಿಗೋಷ್ಟಿ, ದೇವಾಲಯ,ಮಸೀದಿ ಹಾಗೂ ಚರ್ಚ್ ಗಳ ಆವರಣದಲ್ಲಿ, ಸಾಹಿತ್ಯಾಸಕ್ತರ ಮನೆ ಆವರಣದಲ್ಲಿ ಕವಿಗೋಷ್ಟಿಗಳನ್ನು ನಡೆಸಲಾರಂಬಿಸಿದರು. ಇದು ಕನ್ನಡ ಸಾಹಿತ್ಯ ಪ್ರಪಂಚದಲ್ಲೇ ಪ್ರಪ್ರಥಮ ಪ್ರಯತ್ನವಾಗಿತ್ತು. ಆದ್ದರಿಂದ ಇವರನ್ನು ಮನೆಮನೆ ಕವಿಗೋಷ್ಟಿಯ ಪಿತಾಮಹ ಎಂದೂ ಸಹ ಕರೆಲಾಗುತ್ತಿದೆ.

ಇವರು ಪತ್ರಕರ್ತರಾಗಿ ಸುಮಾರು ಮೂವತ್ತೆಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರಿನ ಆರತಿ, ಸಾದ್ವಿ, ಮೈಸೂರುಮಿತ್ರ, ಸಂಜೆಸಮಾಚಾರ ದಿನಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ವಾಂಚಲ್ಯ ವಾರಪತ್ರಿಕೆಯಲ್ಲಿ ಸುದ್ದಿಸಂಪಾದಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ತಮ್ಮದೇ ಆದ ಪ್ರಜಾಸೌರಭ ವಾರಪತ್ರಿಕೆಯ ಮೂಲಕ ಗ್ರಾಮೀಣ ಜನರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿದ್ದಾರೆ. ಇದೀಗ ಸಾಹಿತ್ಯ ಸಂಭ್ರಮ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಅಪ್ರತಿಮ ಕನ್ನಡ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ಅಭಿವೃದ್ದಿ ಪ್ರಾಧಿಕಾರದ ಸಹಸಂಸ್ಥೆಯಾದ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ ನೇಮಕ ಮಾಡಿದೆ. ಈ ಸಮಿತಿಯ ಸದಸ್ಯರಾಗಿ ನಾಮಫಲಕ ಅಭಿಯಾನ, ಬ್ಯಾಂಕ್ ಗಳಲ್ಲಿ ಕನ್ನಡ ಭಾಷಾ ಬಳಕೆಗೆ ಅಭಿಯಾನ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಹಕ್ಕೊತ್ತಾಯ, ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ನ ರಸ್ತೆಗಳಿಗೆ ಹಾಗೂ ವೃತ್ತಗಳಿಗೆ ಆಯಾ ಪ್ರದೇಶದ ಹಿರಿಯ ಸಾಹಿತಿಗಳ ಹಾಗೂ ಸಾಧಕರ ಹೆಸರು ನಾಮಕರಣಕ್ಕೆ ಒತ್ತಾಯ.. ಹೀಗೆ ಹತ್ತು ಹಲವು ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿದ್ದಾರೆ. ಅಶಕ್ತರು, ಅಂಗವಿಕಲರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ.
ಮೈಸೂರು-ಅರಸೀಕೆರೆ ರೈಲ್ವೆ ಪ್ರಯಾಣಿಕರ ಸಂಘದ ಅದ್ಯಕ್ಷರಾಗಿ ಈ ಮಾರ್ಗದ ರೈಲುಗಳ ಅಭಿವೃದ್ದಿಗೆ 1986 ರಿಂದ ನಿರಂತರ ಹೋರಾಟ ನಡೆಸಿ ಈ ಮಾರ್ಗದ ಅಭಿವೃದ್ದಿಗೆ ಕಾರಣರಾಗಿದ್ದಾರೆ.

ಮೇರುನಟ ಡಾ.ರಾಜಕುಮಾರ್ ಅವರ ಅಪ್ರತಿಮ ಅಭಿಮಾನಿಯಾಗಿರುವ ಇವರು ಇನ್ನೂ ಪದವಿ ವಿದ್ಯಾರ್ಥಿಯಾಗಿದ್ದಾಗಲೇ (1985) ‘ಕನ್ನಡಪುತ್ರ ರಾಜಕುಮಾರ’ ಎಂಬ ಕವನ ಸಂಕಲನವನ್ನು ಹೊರತಂದು ಡಾ.ರಾಜಕುಮಾರ್ ಅವರ ಹೃದಯ ಗೆದ್ದಿದ್ದಾರೆ.

ಗೋಕಾಕ್ ವರದಿ ಹೋರಾಟ, ಮಹಾಜನ್ ವರದಿ ಹೋರಾಟ,
ಬೆಳಗಾವಿಯಲ್ಲಿ ಕನ್ನಡ ನಾಡು-ನುಡಿಗೆ ಅವಮಾನ ಉಂಟಾದಾಗ ಹೋರಾಟ ..ಹೀಗೆ ಹತ್ತು ಹಲವು ಕನ್ನಡ ಪರಹೋರಾಟಗಳಲ್ಲಿ ಇಡೀ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದಿದ್ದಾರೆ.ಇವರ ಪತ್ನಿ ಶ್ರೀಮತಿ ಹೆಚ್.ಎನ್.ಸವಿತಾ ವೃತ್ತಿಯಲ್ಲಿ ಶಿಕ್ಷಕಿ. ಪುತ್ರಿ ಬಿ.ಆರ್.ಸಾಹಿತ್ಯ ಇಂಜನಿಯರ್ ಪಧವೀಧರೆ. ತಂದೆ-ತಾಯಿ-ಮಗಳು ಮೂರು ಜನರೂ ಸಹ ಕವಿಗಳಾಗಿರುವುದು ಇವರ ಕುಟುಂಬದ ವೈಶಿಷ್ಟ್ಯ. ಡಾ.ಭೇರ್ಯ ರಾಮಕುಮಾರ್ ನವಚೇತನ, ಬಾಳೊಂದು ಪಗಡೆಯಾಟ ಎಂಬ ಕವನ ಸಂಕಲನಗಳನ್ನು, ನಾವು ಬದುಕಲು ಬಿಡಿ, ಅಧಿಕಾರ ಬೇಕು ಅಧಿಕಾರ ಎಂವ ಬೀದಿನಾಟಕ ಸಂಕಲನಗಳನ್ನು, ನಮ್ಮವರು ಎಂಬ ಕಥಾಸಂಕಲನವನ್ನು ಸ್ವತಃ ರಚಿಸಿ, ಪ್ರಕಟಿಸಿದ್ದಾರೆ.ತಮ್ಮದೇ ಆದ ಪ್ರಗತಿಪರ ಪ್ರಕಾಶನದ ಮೂಲಕ. ರಾಜ್ಯದ ವಿವಿಧ ಜಿಲ್ಲೆಗಳ ಕವಿಗಳ ಹಾಗೂ ಕವಯತ್ರಿಯರ ಸುಮಾರು ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಅಪ್ರತಿಮ ಕನ್ನಡ ಪರ ಸೇವಕರೂ, ಸಾಹಿತಿಗಳೂ, ಪರಿಸರ ಪ್ರೇಮಿಗಳೂ ಆಗಿರುವ ಡಾ.ಭೇರ್ಯ ರಾಮಕುಮಾರ್ ಅವರ ಅತ್ಯಮೂಲ್ಯ ಸೇವೆಯ ನ್ನು ಗೌರವಿಸಿ, ಅವರಿಗೆ ಡಾ.ರಾಜಕುಮಾರ್, ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ನೆನಪಿನ ರಾಜ್ಯಮಟ್ಟದ ನವರತ್ನ ‌‌ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಡಾ.ರಾಜಕುಮಾರ್ ಅವರ ಪತ್ನಿಯ ತವರು ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ನೀಡುತ್ತಿರುವುದು ಒಂದು ವಿಶೇಷ. ಹಿರಿಯ ಸಾಧಕರ ಸಮ್ಮುಖದಲ್ಲಿ ಮುಂಬರುವ ಆಗಸ್ಟ್ 11 ರಂದು ನಡೆಯುವ ಕಾರ್ಯಕ್ರಮದಲ್ಲಿ ಡಾ. ರಾಜ್, ಡಾ.ಪುನೀತ್ ರಾಜ್ ನೆನಪಿನ ನವರತ್ನ ಪ್ರಶಸ್ತಿಯನ್ನು ಡಾ.ಭೇರ್ಯ ರಾಮಕುಮಾರ್ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ಸಾಲಿಗ್ರಾಮದ ಡಾ.ರಾಜಕುಮಾರ್ ವೇದಿಕೆಯ ಅಧ್ಯಕ್ಷರಾದ ಹಾಗೂ ಡಾ.ರಾಜ್ ಕುಟುಂಬದ ನಿಕಟವರ್ತಿಗಳಾದ ಗುಣಚಂದ್ರಕುಮಾರ್ ಜೈನ್ ಅವರು ತಿಳಿಸಿದ್ದಾರೆ.


Share