MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮದ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 7

377
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 7

ಸಂಸ್ಕೃತದಿಂದ ಕನ್ನಾಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ,
ಅವಧೂತ ದತ್ತ ಪೀಠಂ,
ಮೈಸೂರು.

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

23. ಓಂ ಹೇರಂಬಾಯ ನಮಃ
24. ಓಂ ಶಂಬರಾಯ ನಮಃ
25. ಓಂ ಶಂಭವೇ ನಮಃ
26. ಓಂ ಲಂಬಕರ್ಣಾಯ ನಮಃ
27. ಓಂ ಮಹಾಬಲಾಯ ನಮಃ

23. ಓಂ ಹೇರಂಬ : –
ಭಾಷ್ಯ :
ಹಃ ಶಂಕರೇ ರಬಿಃ ಶಬ್ದೇ ಶೈವ ತಂತ್ರ ಪ್ರವರ್ತನಾತ್ |
ಉದ್ದಾಮಶೌರ್ಯವತ್ತ್ವಾದ್ವಾ ಹೇರಂಬ ಇತಿ ಕಥ್ಯತೇ ||

‘ ಹ ‘ ಎಂದರೆ ಶಿವನೆಂದು ಅರ್ಥ . ‘ ರಬಿ ‘ ಧಾತುವಿಗೆ ಶಬ್ದವೆಂದು ಅರ್ಥ . ಶಿವನ ವಿಷಯದಲ್ಲಿ ಶಬ್ದಪ್ರವರ್ತಕ – ( ಶೈವಾಗಮ ಕರ್ತೃ ) ನಾದ್ದರಿಂದ ಗಣೇಶನು ಹೇರಂಬನು . ಅವನಿಗೆ ಹೆಚ್ಚಾದ ಶೌರ್ಯವಿದೆ . ಆದ್ದರಿಂದಲೂ ಅವನು ಹೇರಂಬನೆನಿಸಿಕೊಳ್ಳುತ್ತಾನೆ .
ಓಂ ಹೇರಂಬಾಯ ನಮಃ

24. ಓಂ ಶಂಬರ : –
ಭಾಷ್ಯ :
ಶಂ ಸುಖಂ ತದ್ವರಂ ಶ್ರೇಷ್ಠಂ ಯಸ್ಮಿನ್ನಸ್ತಿ ಸ ಶಂಬರಃ ।
ಶಂಬಂ ವಾ , ಕುಲಿಶಂ ರಾಶಿ, ಯದ್ವಾ ಸಲಿಲ ವಿಗ್ರಹಃ ॥

‘ ಶಂ ‘ ಎಂದರೆ ಸುಖ , ‘ ಬರ ‘ ಎಂದರೆ ಶ್ರೇಷ್ಠವೆಂದು ಅರ್ಥ . ಶ್ರೇಷ್ಠವಾದ ಸುಖವುಳ್ಳವನು ಅಥವ ಶ್ರೇಷ್ಠವಾದ ಸುಖವನ್ನು ಕೊಡುವವನು. ಆದ್ದರಿಂದ ಗಣೇಶನು ಶಂಬರನು .
ಶಂಬವನ್ನು ( ವಜ್ರಾಯುಧವನ್ನು ) ಒಂದಾನೊಂದು ಸಂದರ್ಭದಲ್ಲಿ ಇಂದ್ರನಿಗೆ ಬಹುಮತಿಯಾಗಿ ಕೊಟ್ಟಿದ್ದರಿಂದ ಅವನು ಶಂಬರನು . ( ಅಥವಾ ) ಅಷ್ಟಮೂರ್ತಿಗಳಲ್ಲಿ ಒಂದಾದ ಜಲಮೂರ್ತಿ ಸ್ವರೂಪವನ್ನು ಶಂಬರ ಎಂದು ಕರೆಯುತ್ತಾರೆ . ಗಣೇಶನು ಜಲಮೂರ್ತಿಯಾಗಿದ್ದಾನೆ .
ಓಂ ಶಂಬರಾಯ ನಮಃ

25. ಓಂ ಶಂಭು : –
ಭಾಷ್ಯ :
ಶಂಭುಸ್ತು ಶಂ ಭವತ್ಯಸ್ಮಾಚ್ಛವಾಭೇದೇನ ವೋದಿತಃ ।

‘ ಶಂ ‘ ಎಂದರೆ ಶುಭ . ಶುಭಗಳು ಅವನಿಂದ ಹುಟ್ಟುತ್ತವೆ . ಆದ್ದರಿಂದ ಅವನು ಶಂಭುವು , ಶಿವನಿಗೂ , ಗಣೇಶನಿಗೂ ಅಭೇದವಿರುವುದರಿಂದಲೂ ಅವನನ್ನು ಶಂಭುವೆಂದು ಕರೆಯುತ್ತಾರೆ .
ಓಂ ಶಂಭವೇ ನಮಃ

26. ಓಂ ಲಂಬಕರ್ಣ : –
ಭಾಷ್ಯ :
ಯತ್ರಕ್ವಾಪಿಕೃತಂ ಭಕ್ತೈ ರಾಹ್ವಾನಸ್ತವನಾದಿಕಂ ।
ನಾತಿದೂರ ಇವಾಕರ್ಣ್ಯ ಲಂಬಕರ್ಣ ಇತಿ ಸ್ಮತಃ ॥

ಭಕ್ತರು ಯಾವ ಪ್ರದೇಶದಿಂದ ಕೂಗಿದರೂ , ಸ್ತೋತ್ರ ಮಾಡಿದರೂ ಅದನ್ನು
ಹತ್ತಿರದಲ್ಲೇ ಇರುವವನ ಹಾಗೆ ಕೇಳುವುದರಿಂದ ಅವನು ಲಂಬಕರ್ಣನು. ( ಕ್ಷಣಮಾತ್ರದಲ್ಲಿ ರಕ್ಷಣೆ ಮಾಡುತ್ತಾನೆಂದರ್ಥ.)
ಓಂ ಲಂಬಕರ್ಣಾಯ ನಮಃ

27 . ಓಂ ಮಹಾಬಲ : –
ಭಾಷ್ಯ :
ಮಹಾನ್ ಬಲಾಸುರೋ ಯೇನ ಬಲಿತ್ವಾದ್ವಾ ಮಹಾಬಲಃ ।

ಬಲಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿದ್ದರಿಂದಲೂ, ಮಹಾಬಲವಂತನಾದ್ದರಿಂದಲೂ ಗಣೇಶನು ಮಹಾಬಲನು.

ಓಂ ಮಹಾಬಲಾಯ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share