MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮದ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 9

422
Share

 

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 9

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

33. ಓಂ ವಿನಾಯಕಾಯ ನಮಃ
34. ಓಂ ವಿರೂಪಾಕ್ಷಾಯ ನಮಃ
35. ಓಂ ಧೀರಶೂರಾಯ ನಮಃ
36. ಓಂ ವರಪ್ರದಾಯ ನಮಃ
37. ಓಂ ಮಹಾಗಣಪತಯೇ ನಮಃ

33. ಓಂ ವಿನಾಯಕಃ : –
ಭಾಷ್ಯ :
ವಿಪಕ್ಷಿರೂಪೋ ಜೀವೌಘಸ್ತನ್ನೇತೃತ್ವಾದ್ವಿನಾಯಕಃ |

“ ವಿ + ನಾಯಕ ‘ ‘ ವಿ ‘ ಎಂದರೆ ಪಕ್ಷಿ ಎಂದರ್ಥ . ಪಕ್ಷಿರೂಪವಾದ ಜೀವ ಸಮೂಹವನ್ನು ಮುನ್ನಡೆಸುವುದರಿಂದ ವಿನಾಯಕನು .
ಓಂ ವಿನಾಯಕಾಯ ನಮಃ

34. ಓಂ ವಿರೂಪಾಕ್ಷಃ : –
ಭಾಷ್ಯ :
ವಿರೂಪಾಕ್ಟೋ ವಿಸದೃಶೈರ್ನೇತ್ರೈರಗ್ನಿರವೀಂದುಭಿಃ |

ಸಾದೃಶ್ಯವಿಲ್ಲದ ಅಗ್ನಿ , ಸೂರ್ಯ , ಚಂದ್ರರನ್ನು ನೇತ್ರಗಳನ್ನಾಗಿರಿಸಿಕೊಂಡಿದ್ದರಿಂದ ಅವನು ವಿರೂಪಾಕ್ಷನು . ( ಶಿವನಂತೆ ಗಣೇಶನೂ ವಿಷಮನೇತ್ರನೇ ಆಗಿದ್ದಾನೆ . ) ಓಂ ವಿರೂಪಾಕ್ಷಾಯ ನಮಃ

35. ಓಂ ಧೀರಶೂರಃ : –
ಭಾಷ್ಯ :
ಧೀರಶೂರೋ ಧೈರ್ಯಶೌರ್ಯ ಸಾಮಾನಾಧಿಕರಣ್ಯತಃ ।

ಧೈರ್ಯ , ಶೌರ್ಯಗಳೆರೆಡೂ ಇರುವುದರಿಂದ ಅವನು ಧೀರಶೂರನು . ( ಧೈರ್ಯವೆಂದರೆ ಬುದ್ಧಿಬಲ ಅಥವಾ ಮನೋಬಲ , ಶೌರ್ಯವೆಂದರೆ ದೇಹಬಲ . ) ಓಂ ಧೀರಶೂರಾಯ ನಮಃ

36. ಓಂ ವರಪ್ರದಃ : –
ಭಾಷ್ಯ :
ವರಾನ್ ಸ್ವಪಾದಸೇವಿಭ್ಯೋ ದದಾತೀತಿ ವರಪ್ರದಃ

ತನ್ನ ಪಾದಗಳನ್ನು ಸೇವಿಸಿದವರಿಗೆ ವರಗಳನ್ನು ಕೊಡುವುದರಿಂದ ವರಪ್ರದನು .
ಓಂ ವರಪ್ರದಾಯ ನಮಃ

ಮಹಾಗಣಪತಿರ್ಬುದ್ಧಿಪ್ರಿಯಃ ಕ್ಷಿಪ್ರಪ್ರಸಾದನಃ |
ರುದ್ರಪ್ರಿಯೋ ಗಣಾಧ್ಯಕ್ಷ ಉಮಾಪುತ್ರೋ ೭ ಘನಾಶನಃ ||

37. ಓಂ ಮಹಾಗಣಪತಿಃ
ಭಾಷ್ಯ :
ಗುಣಗುಲ್ಮಾ ದಯಸ್ಸೇನಾಭೇದಾಸ್ತೇಷು ಯ ಉತ್ತಮಾಃ |
ಸೂಲಾಸ್ತಾನಪಿ ಪಾತೀತಿ ಮಹಾಗಣಪತಿರ್ಮತಃ ||

ಸೇನಾಗಣವನ್ನು ‘ ಗುಣ , ಗುಲ್ಮ ‘ ಎಂದು ಕರೆಯುತ್ತಾರೆ . ಸೇನಾಗಣದ ಉತ್ತಮ ವೀರರನ್ನು ಸ್ಥೂಲರೆಂದು ಕರೆಯುತ್ತಾರೆ . ಆ ಸ್ಥೂಲರನ್ನು ಪಾಲಿಸುತ್ತಾನಾದ್ದರಿಂದ ಮಹಾಗಣಪತಿ ಎಂದೆನಿಸಿಕೊಂಡಿದ್ದಾನೆ . ( 45 ಮಂದಿ ಕಾಲಾಳುಗಳು , 27 ಕುದುರೆಗಳು , 9 ರಥಗಳು , 9 ಆನೆಗಳು , ಇವುಗಳ ಸಮೂಹವನ್ನು ಗುಲ್ಮ ಎಂದು ಕರೆಯುತ್ತಾರೆ . )
ಓಂ ಮಹಾಗಣಪತಯೇ ನಮಃ

( ಮುಂದುವರೆಯುವುದು )

(ಸಂಗ್ರಹ )
* ಭಾಲರಾ
ಬೆಂಗಳೂರು


Share