MP : ಆಧ್ಯಾತ್ಮಿಕ ಅಂಗಳ 07/08/2021 ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ ( ಭಾಷ್ಯ )

418
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯಾರ್ಥ – ಪುಟ : 2

ಸಂಸ್ಕೃತದಿಂದ ಕನ್ನಡಾನುವಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
ಅವಧೂತ ಪೀಠ,
ಮೈಸೂರು .

ಇಂದಿನ ನಾಮಾವಳಿಗಳು : –

2. ಓಂ ಗಣಕ್ರೀಡಾಯ ನಮಃ
3. ಓಂ ಗಣನಾಥಾಯ ನಮಃ
4. ಓಂ ಗಣಾಧಿಪಾಯ ನಮಃ
5. ಓಂ ಏಕದಂಷ್ಟ್ರಾಯ ನಮಃ
6. ಓಂ ವಕ್ರತುಂಡಾಯ ನಮಃ

2. ಓಂ ಗಣಕ್ರೀಡಃ
ಭಾಷ್ಯ :
ಸಾಕ್ಷಾಚ್ಛಿಷ್ಯೋ ಗಣೇಶಸ್ಯ ಗಣಕ್ರೀಡಾಭಿಧೋ ಗುರುಃ ।
ತಚ್ಛಿಷ್ಯೋ ವಿಕಟಸ್ತಸ್ಯ ಶಿಷ್ಯೋ ವೈ ವಿಘ್ಣಾಯಕಃ ॥
ಇತ್ಯಾದಯೋಪ್ಯಭೇದೇನ ಗಣೇಶಾ ಏವ ದೇಶಿಕಾಃ ।
ಮಂತ್ರಾರಂಭೇ ಗುರುಂ ಸ್ಮೃತ್ವಾ ವಶ್ಯಕತ್ವೇನ ಕೀರ್ತಿತಾಃ ॥
ವಿಯದಾದಿ ಗಣಸ್ಯಾಂತಃ ಪ್ರವಿಶ್ಯ ಕ್ರೀಡನೇನವಾ ।
ಗಣಕ್ರೀಡ ಇತಿ ಪ್ರೋಕ್ತಸ್ತತ್ ಸೃಷ್ಟ್ವೇತ್ಯಾದಿ ವಿಶೃುತೇಃ ॥

ಗಣಕ್ರೀಡನೆಂಬುವವನು ಗಣೇಶನ ಸಾಕ್ಷಾತ್ ಶಿಷ್ಯನು. ಅವನ ಶಿಷ್ಯನು ವಿಕಟ. ವಿಕಟನ ಶಿಷ್ಯನ ಹೆಸರು ವಿಘ್ನನಾಯಕನೆಂದು. ಇವರೆಲ್ಲರೂ ಕೂಡಾ ಗಣೇಶನಿಗಿಂತ ಅಭಿನ್ನರಾದ ಗುರುಸ್ಥಾನದವರಾಗುದ್ದು, ಗಣೇಶನ ಉಪಾಸನೆಯನ್ನು ಭೋಧಿಸಿದವರು. ಗಣೇಶ ಸಹಸ್ರನಾಮವು ಮಂತ್ರಗಳ ಒಂದು ಸಂಪುಟ. ಮಂತ್ರಾರಂಭದಲ್ಲಿ ಗುರುಸ್ಮರಣೆಯನ್ನುವಮಾಡಬೇಕೆಂಬುದು ವಿಧಿ. ಆದ್ದರಿಂದ ಈ ಎರಡನೇ ನಾಮದಲ್ಲಿ ಗಣೇಶನು ಗಣಕ್ರೀಡನೆಂಬ ಗುರುವಿನ ರೂಪದಲ್ಲಿ ಸಂಸ್ಕೃತನಾಗಿದ್ದಾನೆ.
‘ ತತ್ಸೃಷ್ಟ್ವಾ ತದೇವಾನುಪ್ರಾವಿಶತ್ ‘ ಭಗವಂತನು ಈ ವಿಶ್ವವನ್ನೆಲ್ಲಾ ಸೃಷ್ಟಿ ಮಾಡಿ ಇದರಲ್ಲಿ ತಾನೇ ಪ್ರವೇಶಿಸಿದ್ದಾನೆ, ಎಂಬ ವೇದವಾಕ್ಯದಿಂದ ಗಣೇಶನು ಗಣವೆಂಬ ವಿಶ್ವವನ್ನು ಸೃಷ್ಟಿ ಮಾಡಿ ಅದರಲ್ಲಿ ಪ್ರವೇಶಿಸಿ ಕ್ರೀಡಿಸುತ್ತಿದ್ದಾನೆ ಎಂದು ತಿಳಿದು ಬರುತ್ತದೆ. ಆದ್ದರಿಂದ ಗಣೇಶನಿಗೆ ‘ ಗಣಕ್ರೀಡ’ನೆಂದು ಹೆಸರು.

ಓಂ ಗಣಕ್ರೀಡಾಯ ನಮಃ

3. ಓಂ ಗಣನಾಥ :-
ಭಾಷ್ಯ :
ಗಣನಂ ಗುಣಸಂಖ್ಯಾನಂ ಅಥ ಶಬ್ದಾತ್ತು ಮಂಗಕಮ್ ।
ಕೃತೇತಯೋರ್ಬಹುವ್ರೀಹೌ ಗಣನಾಥ ಇತಿ ಸ್ಮೃತಃ ॥

ಗಣನಾಥ ಎಂಬ ಶಬ್ದದಲ್ಲಿ ಗಣನ-ಅಥ ಎಂಬ ಎರಡು ಶಬ್ದಗಳಿವೆ. ಅನಂತ ಗುಣಗಳನ್ನು ಎಣಿಸುವುದು ಗಣನೆ. ಅಥ ಎಂಬ ಶಬ್ದವು ಮಂಗಳವಾಚಕವು. ‘ ಗಣನಂ ಚ ಅಥ ಚ ಯಸ್ಯ ಸಃ ‘ ಎಂದು ಬಹುವ್ರೀಹಿ ಸಮಾಸವನ್ನು ಮಾಡಿದರೆ ಗಣನಾಥ ಎಂಬ ಶಬ್ದದ ವ್ಯುತ್ಪತ್ತಿ .
ಜೀವಿಗಳ ಸತ್ಕರ್ಮಗಳನ್ನೂ, ಗುಣಗಳನ್ನೂ ಗಣನೆ ಮಾಡಿ ಅದಕ್ಕೆ ತಕ್ಕಂತೆ ಮಂಗಳವನ್ನು ಉಂಟುಮಾಡುತ್ತಾನೆ. ಆದ್ದರಿಂದ ಗಣೇಶನು ಗಣನಾಥನಾಗಿದ್ದಾನೆ. ( ಗಣಗಳಿಗೆ ನಾಥನೆಂದು ಕೂಡಾ ಅರ್ಥೈಸಬಹುದು )
ಓಂ ಗಣನಾಥಾಯ ನಮಃ

4. ಓಂ ಗಣಾಧಿಪ :-
ಭಾಷ್ಯ :
ಆದಿತ್ಯವಿಶ್ವವಸ್ವಾದ್ಯಾ ರುದ್ರಾಂತಾಃ ।
ತದಾಧಿಪತ್ಯಶಾಲಿತ್ವಾನ್ಮಮ ದೇವೋ ಗಣಾಧಿಪಃ ॥
ಆದಿತ್ಯನು, ವಸುಗಳು, ವಿಶ್ವದೇವರುಗಳಿಂದ ರುದ್ರಾಂತವಾಗಿರುವ ಸಮೂಹಗಳನ್ನು ಗಣದೇವತೆಗಳು ಎಂದು ಕರೆಯುತ್ತಾರೆ . ಆ ಗಣದೇವತೆಗಳ ಆಧಿಪತ್ಯವನ್ನು ಹೊತ್ತು , ನನ್ನ ದೇವನಾದ ಗಣೆಶನು ಗಣಾಧಿಪನೆಂದು ಕರೆಯಲ್ಪಡುತ್ತಿದ್ದಾನೆ.
ಓಂ ಗಣಾಧಿಪಾಯ ನಮಃ

5. ಓಂ ಏಕದಂಷ್ಟ್ರ :-
ಭಾಷ್ಯ :
ಏಕಾಮುಖ್ಯಾ ಕೇವಲಾ ವಾ ದಂಷ್ಟ್ರಾ ಯಸ್ಯ ಗಣೇಶಿತುಃ ।
ಭೂಮ್ಯುದ್ಧಾರೇ ಜಗನ್ನಾಶೇ ವೈಕದಂಷ್ಟ್ರಃ ಸ ಕೀರ್ತ್ಯತೇ ॥
ಗಣೇಶನಿಗೆ ಒಂದೇ ಒಂದು ಮುಖ್ಯವಾದ ದಂತವಿರುವುದು. ಆ ದಂತವೇ ಸಮುದ್ರಗರ್ಭದಿಂದ ಭೂಮಿಯನ್ನು ಉದ್ಧರಿಸುವ ಸಮಯದಲ್ಲಿಯೂ, ಪ್ರಳಯಕಾಲದಲ್ಲಿ ಜಗತ್ತಿನ ನಾಶದ ಸಮಯದಲ್ಲಿಯೂ ಪ್ರಧಾನಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಗಣೇಶನು ಏಕದಂಷ್ಟ್ರನು. ( ಈ ನಾಮದಿಂದ ಸ್ವಾಮಿಯ ವಾರಾಹಶಕ್ತಿಯನ್ನು ಸ್ಮರಿಸಿದಂತಾಗಿದೆ )
ಓಂ ಏಕದಂಷ್ಟ್ರಾಯ ನಮಃ

6. ಓಂ ವಕ್ರತುಂಡ :-
ಭಾಷ್ಯ :
ಶುಂಡಾದಂಡಸ್ಯ ವಕ್ರತ್ವಾತ್ ವಕ್ರತುಂಡ ಇತೀರ್ಯತೇ ।
ಶ್ರಿಯಂ ತನೋತಿ ರಮ್ಯಾಣಾಂ ವಿಕಾರೋಪೀತಿ ಲೋಕವಾಕ್ ॥
ಸೊಂಡಿಲು ವಕ್ರವಾಗಿರುವುದರಿಂದ ಸ್ವಾಮಿಗೆ ವಕ್ರತುಂಡನೆಂದು ಹೆಸರು. ವಿಕಾರವಾಹಿದ್ದರೇನಂತೆ ಯಾರ ಮನಸ್ಸು ವಿಕಾರ ರಹಿತವಾಗಿಯೂ , ಶುದ್ಧವಾಗಿಯೂ ಇದೆಯೋ ಅಂತಹ ಭಕ್ತರಿಗೆ ಗಣೇಶನು ಸಕಲ ಸಂಪತ್ತನ್ನೂ ಕೊಡುತ್ತಾನೆ ಎಂಬುದು ಲೋಕ ಪ್ರಸಿದ್ಧವಾದ ಮಾತು ಲೋಕಪ್ರಸಿದ್ಧವಾದ ಮಾತು.
( ಗಣೇಶನ ವಕ್ರತುಂಡವು ಓಂಕಾರವನ್ನೂ, ಗಂ ಬೀಜಾಕ್ಷರವನ್ನು ಬುದ್ಧಿಯಲ್ಲಿ ಸ್ಮರಿಸುವಂತೆ ಮಾಡುತ್ತದೆ )

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು .


Share