ಕ್ರೀಡಾಪಟುಗಳು,ದೇಶದ ಅಮೂಲ್ಯ ಆಸ್ತಿಗಳಾಗಿ – ಡಿ ಕೆ ಶಿ

20
Share

 

ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಸಿ ದೇಶದ ಅಮೂಲ್ಯ ಆಸ್ತಿಗಳಾಗಿ – ಡಿ ಕೆ ಶಿವಕುಮಾರ್

ಮೈಸೂರು – ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಕ್ರೀಡೆಗಳಲ್ಲಿ ಪ್ರದರ್ಶನ ಮಾಡಿ, ರಾಷ್ಟೀಯ ಅಂತಾರಾಷ್ಟ್ರೀಯ ಕ್ರೀಡಾಕೂಟ ಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದು ದೇಶದ ಅಮೂಲ್ಯ ಆಸ್ತಿಗಳಾಗಿ ಎಂದು ಮಾನ್ಯ ಉಪ ಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ಅವರು ತಿಳಿಸಿದರು

ಇಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದಸರಾ ಕ್ರೀಡಾ ಉಪಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ, ಸಿ ಎಂ ಕಪ್ 2023 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾನು 16 ನೆ ವಯಸ್ಸು ಇದ್ದಾಗ ಜಾವಲಿನ್ ಎಸೆತಕ್ಕೆ ಹಾಗೂ 14.5 ಕಿಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಈ ಕ್ರೀಡಾಂಗಣಕ್ಕೆ ಬಂದಿದ್ದೆ. ಇಂದು ಈಗ ಉದ್ಘಾಟನೆಗೆ ಬಂದಿದ್ದೇನೆ ಎಂದರು.

ಶ್ರಮ ಇದ್ದಲ್ಲಿ ಫಲ ಇರುತ್ತದೆ. ನೀವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲಿ ಎಂದು ಹಾರೈಸಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆಯ ಸಚಿವರಾದ ನಾಗೇಂದ್ರ ಅವರು ಮಾತನಾಡಿ ರಾಜ್ಯದ 5 ವಿಭಾಗಗಳಿಂದ ಕ್ರೀಡಾಪಟುಗಳು ಆಗಮಿಸಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಳೆ ಅಭಾವ ಇದ್ದರೂ ಕ್ರೀಡೆಗೆ ಪ್ರೋತ್ಸಾಹ ಕಡಿಮೆ ಮಾಡಿಲ್ಲ. ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆ. ದಸರಾ ಆರಂಭದಲ್ಲಿ ಕೇವಲ 10 ಕ್ರೀಡೆಗಳು ಇತ್ತು. ಈಗ 35 ಕ್ರೀಡೆಗಳಲ್ಲಿ 10 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ ಎಂದರು.

ಚೈನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ಪದಕಗಳನ್ನು ಪಡೆದಿದ್ದಾರೆ. ಈ ಕ್ರೀಡಾಪಟುಗಳಿಗೆ ಸನ್ಮಾನ ಮಾಡಿ ಪ್ರೋತ್ಸಾಹ ಧನ ನೀಡಲಾಗುವುದು. ಕ್ರೀಡೆಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲು ಪದಕ ಪಡೆದ ಕ್ರೀಡಾಪಟುಗಳಿಗೆ ಸರ್ಕಾರಿ ಕೆಲಸದಲ್ಲಿ ಶೇಕಡಾ 3 ರಷ್ಟು ಮೀಸಲಾತಿ ನೀಡಲು ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಇಲ್ಲಿ ಭಾಗವಹಿಸುವಿಕೆ ಮುಖ್ಯ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ ವಿಭಾಗ ಹಾಗೂ ಕಲ್ಬುರ್ಗಿ ವಿಭಾಗದ ಕ್ರೀಡಾಪಟುಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಗಣ್ಯರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀವತ್ಸ, ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಕೆ ಹರೀಶ್ ಗೌಡ, ಮಂಜುನಾಥ ಎಂ ಆರ್, ಉಪ ಮಹಾ ಪೌರಾರದ ರೂಪ, ಒಲಂಪಿಕ್ ಅಸೋಶಿಯೇಶನ್ ನ ಅಧ್ಯಕ್ಷರು ಹಾಗೂ ಸಿ ಎಂ ಕಾರ್ಯದರ್ಶಿಗಳಾದ ಗೋವಿಂದರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Share