ಮೈಸೂರು ನಗರ ಸೈಬರ್ ಪೊಲೀಸರಿಂದ ಎಚ್ಚರಿಕೆ

1528
Share

 

ಮೈಸೂರು ನಗರ ಸೈಬರ್ ಪೊಲೀಸರಿಂದ ಸಾರ್ವಜನಿಕರಲ್ಲಿ ಅನ್‌ಲೈನ್/ಸೈಬರ್ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ  ಸೂಚನೆ ನೀಡಲಾಗಿದೆ
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು, ಸಾರ್ವಜನಿಕರಿಗೆ ಅನ್‌ಲೈನ್‌ನಲ್ಲಿ ಅಮಿಷವೊಡ್ಡಿ ಹಲವು ವಿವಿಧ ರೀತಿಗಳಲ್ಲಿ ಅಮಾಯಕರಿಂದ ಈ ಕೆಳಕಂಡಂತೆ ಮೋಸ ಮಾಡುತ್ತಿರುವುದು ಕಂಡು ಬಂದಿರುತ್ತದೆ.
ಡಿಜಿಟಲ್ ಅರೆಸ್ಟ್
ಸೈಬರ್ ಅಪರಾಧಿಗಳು ಪೊಲೀಸರು ಅಥವಾ ತನಿಖಾ ಸಂಸ್ಥೆ ಹೆಸರು ಹೇಳಿಕೊಂಡು ಜನರಿಗೆ ಕರೆಮಾಡಿ ವಂಚಿಸುತ್ತಿದ್ದಾರೆ. ನಿಮ್ಮ ಮನೆಯ ವಿಳಾಸಕ್ಕೆ ಪೆಡೆಕ್ಸ್ ಅಥವಾ ಬೇರೆ ಕಂಪನಿ ಕೊರಿಯರ್‌ನಿಂದ ಪಾರ್ಸಲ್ ಬಂದಿದೆ ಅಥವಾ ನಿಮ್ಮ ವಿಳಾಸದಿಂದ ಕಳುಹಿಸಲಾಗಿದೆ ಎಂದು ಹೇಳುವ ಸೈಬರ್ ವಂಚಕರು. ನಿಮ್ಮ ದಾಖಲಾತಿಗಳು ಡ್ರಗ್ಸ್ ವ್ಯವಹಾರದಲ್ಲಿ & ಮನಿ ಲಾಂಡರಿಂಗ್ ನಲ್ಲಿ ತೊಡಗಿದೆ ಎಂದು ಹೇಳಿ ಭಯ ಹುಟ್ಟಿಸುತ್ತಾರೆ. ಬಳಿಕ ಸೈಪ್ ಲಿಂಕ್ ನೀಡಿ ಲಾಗಿನ್ ಆಗುವಂತೆ ತಿಳಿಸುವ ವಂಚಕರು, ಪೊಲೀಸ್ ಸಮವಸ್ತ್ರದಲ್ಲೆ ಅಥವಾ ಸಿಬಿಐ/ಇಡಿ ವಿಭಾಗದ ಹಿರಿಯ ಅಧಿಕಾರಿಗಳ ಸೋಗಿನಲ್ಲಿ ಸಂಭಾಷಣೆ ನಡೆಸುತ್ತಾರೆ. ಸಿಬಿಐ/ಇಡಿ ಯ ಪ್ರಮುಖ ವ್ಯಕ್ತಿಗಳ/ರಾಜಕಾರಣಿಗಳ ಪ್ರಕರಣಗಳಲ್ಲಿ ನೀವು ಭಾಗಿಯಾಗಿದ್ದೀರೆಂದು ತಿಳಿಸಿ ಸರ್ವೋಚ್ಛ ನ್ಯಾಯಾಲಯದ/ ಆರ್ ಬಿ ಐ/ಇಡಿ/ಸಿಬಿಐ ಪತ್ರಗಳನ್ನು ಸೃಷ್ಟಿಸಿ ಅದರಲ್ಲಿ ಸರ್ಕಾರಿ ಇಲಾಖೆಯ ಚಿಹ್ನೆಗಳನ್ನು ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ಮತ್ತು ಸಹಿಯನ್ನು ಬಳಸಿರುವ ಪತ್ರಗಳನ್ನು ಸೈಪ್ ಆಪ್ ಮೂಲಕ ಕಳುಹಿಸುತ್ತಾರೆ. ನಂತರ ವಿಚಾರಣೆಗೆ ಹಾಜರಾಗಬೇಕೆಂದು ಬೆದರಿಕೆ ಹಾಕುತ್ತಾರೆ. ವಿಚಾರಣೆಗೆ ವಿನಾಯಿತಿ ಬೇಕಾದರೆ ಬ್ಯಾಂಕ್ ಖಾತೆಗೆ ಹಣ ಹಾಕಿ. ಇಲ್ಲದಿದ್ದರೆ ಬಂಧಿಸುತ್ತೇವೆ ಅಥವಾ ನಿಮ್ಮ ಮನೆ ಮೇಲೆ ರೈಡ್ ಮಾಡಿ ದಸ್ತಗಿರಿ ಮಾಡುತ್ತೇವೆಂದು ತಿಳಿಸುತ್ತಾರೆ. ಬಳಿಕ ಹಲವು ಗಂಟೆಗಳ ಕಾಲ ಸ್ಟೆಪ್ ಬಿಟ್ಟು ಬೇರೆ ಕಡೆ ಹೋಗಲು ಬಿಡುವುದಿಲ್ಲ. ನಿಮ್ಮನ್ನು
ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಇಲ್ಲೇ ಇರಬೇಕೆಂದು ಬೆದರಿಕೆ ಹಾಕಲಾಗುತ್ತದೆ.
ಷೇರುಮಾರುಕಟ್ಟೆಯಲ್ಲಿ ಹೂಡಿಕೆ ವಂಚನೆ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ನೀಡುವ ಭರವಸೆಯೊಂದಿಗೆ ವಾಟ್ಸಾಪ್, ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಸೈಬರ್ ವಂಚಕರು ಈಗಾಗಲೇ ಹಲವಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಾಪ್, ಟೆಲಿಗ್ರಾಂ ಗ್ರೂಪ್‌ ಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಬಗ್ಗೆ ಜಾಹೀರಾತುಗಳನ್ನು ನೀಡುತ್ತಾರೆ. ಮೊದಲಿಗೆ ನೈಜವಾದ ಆಪ್ ಅಥವಾ ವೆಬ್ ಸೈಟ್ ಮೂಲಕ ಹಣವನ್ನು
ಹೂಡಿಕೆ ಮಾಡಿಸಿ ಲಾಭ ಬರುವಂತೆ ಸಲಹೆಗಳನ್ನು ನೀಡುತ್ತಾರೆ. ನಂತರ ತಮ್ಮದೆ ಆದ ಕಂಪನಿಯ ಮುಖಾಂತರ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ಆಸೆ ತೋರಿಸಿ ನಕಲಿ ಆಪ್ ಅಥವಾ ವೆಬ್‌ಸೈಟ್ ಮುಖಾಂತರ ಹಣವನ್ನು ಹೂಡಿಕೆ ಮಾಡಿಸಿಕೊಂಡು ನಕಲಿ ಆಪ್ ಅಥವಾ ವೆಬ್‌ಸೈಟ್ ನಲ್ಲಿ ಹೆಚ್ಚಿನ ಲಾಭ ಬಂದಿರುವುದಾಗಿ ತೋರಿಸುತ್ತಾ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಹಿಸಲು ತೋರಿಸಿದಾಗ ಟ್ಯಾಕ್ಸ್/ಜಿಎಸ್‌ಟಿ/ಇತರೆ ಚಾರ್ಜ್‌ಗಳನ್ನು ಪಾವತಿಸಬೇಕೆಂದು ಹೇಳಿ ಹೆಚ್ಚಿನ ಹಣವನ್ನು ವರ್ಗಾಹಿಸಿಕೊಂಡು ಯಾವುದೇ ಲಾಭವನ್ನಾಗಲೀ, ಹೂಡಿಕೆ ಮಾಡಿದ ಹಣವನ್ನಾಗಲೀ ವಂಚಿಸುತ್ತಾರೆ.
ಕ್ರಿಸ್ಟೋ ಕರೆನ್ಸಿಯಲ್ಲಿ ಹೂಡಿಕೆ ವಂಚನೆ
ಕ್ರಿಸ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ನೀಡುವ ಭರವಸೆಯೊಂದಿಗೆ ವಾಟ್ಸಾಪ್, ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಸೈಬರ್ ವಂಚಕರು ಈಗಾಗಲೇ ಹಲವಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಾಪ್, ಟೆಲಿಗ್ರಾಂ ಗ್ರೂಪ್‌ ಗಳಲ್ಲಿ ಕ್ರಿಸ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಬಗ್ಗೆ ಜಾಹಿರಾತುಗಳನ್ನು ನೀಡುತ್ತಾರೆ. ನಂತರ ವಾಟ್ಸಾಪ್ ಅಥವಾ ಟೆಲಿಗ್ರಾಂ ಗ್ರೂಪ್ ಗಳಿಗೆ ಸೇರಿಸಿಕೊಂಡು ಹಣವನ್ನು ಕ್ರಿಸ್ಟೋ ಕರೆನ್ಸಿಯಲ್ಲಿ ಇನ್ವೆಸ್ಟ್ ಮಾಡುವ ಬಗ್ಗೆ ಸಲಹೆಗಳನ್ನು ನೀಡುತ್ತಾರೆ. ಮೊದಲಿಗೆ ನೈಜವಾದ ಕ್ರಿಸ್ಟೋ ಕರೆನ್ಸಿ ಅಪ್ಲಿಕೇಷನ್ ಮುಖಾಂತರ ಹಣವನ್ನು ಹೂಡಿಕೆ ಮಾಡಿಸಿ ಲಾಭಬರುವಂತೆ ಸಲಹೆಗಳನ್ನು ನೀಡುತ್ತಾರೆ. ನಂತರ ತಮ್ಮದೆ ಆದ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದೆಂದು ಆಸೆ ತೋರಿಸಿ ಕ್ರಿಸ್ಟೋ ಕರೆನ್ಸಿಯನ್ನು ನಕಲಿ ವೆಬ್ ಸೈಟ್/ ಅಪ್ಲಿಕೇಷನ್ ಮುಖಾಂತರ ಹೂಡಿಕೆ ಮಾಡಿಸಿಕೊಂಡು ವೆಬ್‌ಸೈಟ್/ ಅಪ್ಲಿಕೇಷನ್‌ ನಲ್ಲಿ ಹೆಚ್ಚಿನ ಲಾಭ ಬಂದಿರುವುದಾಗಿ ತೋರಿಸುತ್ತ ಕ್ರಿಸ್ಟೋ ಕರೆನ್ಸಿಯನ್ನು ಖಾತೆಗೆ ಜಮಾಮಾಡಲು ಪ್ರಯತ್ನಿಸುವಾಗ ನೀವು ಟ್ಯಾಕ್ಸ್/ ಜಿಎಸ್‌ಟಿ/ ಇತರ ಚಾರ್ಜ್‌ಗಳನ್ನು ಪಾವತಿಸಬೇಕೆಂದು ಇನ್ನು ಹೆಚ್ಚಿನ ಹಣವನ್ನು ಖಾತೆಗಳಿಗೆ ವರ್ಗಾಯಿಸಿಕೊಂಡು ಯಾವುದೇ ಲಾಭವನ್ನಾಗಲೀ/ ಹೂಡಿಕೆ ಮಾಡಿದ ಕ್ರಿಸ್ಟೋ ಕರೆನ್ಸಿಯನ್ನಾಗಲೀ ನೀಡದೆ ವಂಚಿಸುತ್ತಾರೆ.
ಪಾರ್ಟ್ ಟೈಮ್ ಜಾಬ್ / ಆನ್‌ ಲೈನ್ ಉದ್ಯೋಗ ವಂಚನೆ
ಮನೆಯಲ್ಲೇ ಕುಳಿತು ಉದ್ಯೋಗ ಮಾಡುವವರನ್ನೇ ಗುರಿಯಾಗಿರಿಸಿಕೊಂಡ ಖದೀಮರು ಲಿಂಕ್‌ಗಳನ್ನು ಶೇರ್ ಮಾಡಿ ಹಣ ಗಳಿಸುವ ಆಮಿಷವೊಡ್ಡಿ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ. ವಂಚಕರು ಮೊದಲಿಗೆ 100 ರೂ. ಕಳಿಸಿ. ನಾವೊಂದಿಷ್ಟು ಅಂಕ್‌ಗಳನ್ನು ಕಳಿಸುತ್ತೇವೆ ಎಂದು ಆರಂಭಗೊಳ್ಳುವ ವಂಚನೆಯ ಆಟ ವ್ಯಕ್ತಿ ತಮ್ಮ ಬಲೆಗೆ ಸಂಪೂರ್ಣವಾಗಿ ಬಿದ್ದಿದ್ದಾನೆ ಎಂಬುದು ಖಚಿತವಾಗುತ್ತಿದ್ದಂತೆ ಸಾವಿರಾರು ರೂ. ವಂಚಿಸುತ್ತಿದ್ದಾರೆ. ಹೆಚ್ಚುವರಿ ದುಡಿಮೆಯ ಆಸೆ ಹೊತ್ತಿರುವ ಯುವ ಜನತೆ. ಅದರಲ್ಲೂ ಯುವತಿಯರನ್ನೇ ಟಾರ್ಗೆಟ್ ಮಾಡಿ ವಂಚಕ ಜಾಲ ಸಕ್ರಿಯವಾಗಿರುವುದು ವಿಶೇಷ. ಭದ್ರತಾ ಠೇವಣಿ ರೂಪದಲ್ಲಿ 100 ರೂ. ಪಡೆಯುವ ವಂಚಕರು, ಆನ್‌ಲೈನ್‌ನಲ್ಲಿ ಕೆಲವು ಲಿಂಕ್‌ಗಳನ್ನು ಕಳಿಸಿ ಅದನ್ನು ಎಲ್ಲರಿಗೂ ಶೇರ್ ಮಾಡುವಂತೆ ಹೇಳುತ್ತಾರೆ. ಹೋಟೆಲ್ ವೆಬ್‌ ಸೈಟ್‌ ಗಳಲ್ಲಿ ರೀವ್ಯೂ ನೀಡುವುದು. ಯೂಟ್ಯೂಬ್ ಚಾನೆಲ್‌ಗಳನ್ನು ಲೈಕ್ ಮಾಡುವುದು ಈ ರೀತಿಯಾದ ಟಾಸ್ಟ್‌ಗಳನ್ನು ನೀಡಿ ಈ ಕೆಲಸ ಯಶಸ್ವಿಯಾಗಿ ಮಾಡಿದ್ದೀರೆಂದು ಸಂಬಂಧಿತ ವ್ಯಕ್ತಿಯ ಖಾತೆಗೆ 125 ರೂ.ಗಳನ್ನು ಜಮೆ ಮಾಡುತ್ತಾರೆ. ನಂತರ ಹೆಚ್ಚಿನ ಲಾಭ ಪಡೆಯಬೇಕಾದರೆ ಪ್ರೈಮ್ ಮೆಂಬರ್ ಅಥವಾ ನೀವೇ ಹೂಡಿಕೆದಾರರಾಗಬಹುದೆಂದು
ನಂಬಿಸಿ ಇವರನ್ನು ವಾಟ್ಸಾಪ್ ಟೆಲಿಗ್ರಾಮ್ ಗ್ರೂಪ್ ಗಳಿಗೆ ಸೇರಿಸುತ್ತಾರೆ ಸದರಿ ಗ್ರೂಪ್‌ ಗಳಲ್ಲಿ ವಂಚಕರೇ ಇದ್ದು ತಮಗೂ ಹೆಚ್ಚಿನ ಲಾಭ ಬಂದಿರುವುದಾಗಿ ಸುಳ್ಳು ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಹೀಗೆ 100 ರೂ.ನಿಂದ ಆರಂಭಗೊಳ್ಳುವ ವ್ಯವಹಾರ 1,000. 10,000. ಲಕ್ಷಕ್ಕೂ ಮೀರಿ ಮುಂದುವರಿಯುತ್ತದೆ. ಲಕ್ಷಾಂತರ ಹಣ ಹಾಕಿಸಿಕೊಂಡು ಮೋಸ ಮಾಡುತ್ತಾರೆ.
ಸಾರ್ವಜನಿಕರು ಅನ್‌ಲೈನ್ ಮತ್ತು ಸೈಬರ್ ಅಪರಾಧಗಳ ಬಗ್ಗೆ ಹೆಚ್ಚಿನ ಜಾಗರೂಕತೆಯಿಂದ ಇರುವಂತೆ. ಡಿಜಿಟಲ್ ಅರೆಸ್ಟ್ ಹಾಗೂ ಸೈಬರ್ ವಂಚರು ನೀಡಿರುವ ಅಮಿಷಗಳಿಗೆ ಒಳಪಡದೆ ಅನ್‌ಲೈನ್ ಮತ್ತು ಸೈಬರ್ ವಂಚಕರಿಂದ ಬರುವ ಅಂಕ್/ ಆಪ್‌ ಗಳನ್ನು ಬಳಸಿ ಹಣವನ್ನು ಕಳೆದುಕೊಳ್ಳದಂತೆ ಜಾಗೃತರಾಗಿಲು ತಿಳಿಸಲಾಗಿದೆ. ಸಾರ್ವಜನಿಕರು ಸೈಬರ್ ಕ್ರೈಂ ವಂಚನೆಗೊಳಗಾದಲ್ಲಿ ತಕ್ಷಣ ಸೈಬರ್ ಕ್ರೈಂ ಹೆಜ್ಜೆ ಲೈನ್ ನಂಬರ್ 1930 ಗೆ ಕರೆ ಮಾಡಿ ದೂರು ನೀಡುವಂತೆ ನಂತರ ಸಿಇಎನ್ ಕ್ರೈಂ ಪೊಲೀಸ್ ಠಾಣೆ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುವಂತೆ ಮೈಸೂರು  ನಗರದ ಪೋಲಿಸ್  ಆಯುಕ್ತರಾದ ಬಿ. ರಮೇಶ್ ಐ.ಪಿ.ಎಸ್ ರವರು ಕೋರಿರುತ್ತಾರೆ.

Share