ಸಂಪಾದಕೀಯ;ಆ 26ರ,ರ್ಯಾಲಿ ಪರಾಮರ್ಶಿಸಿ

166
Mysore Pathrike Main
Share

 ಇದೇ ಆಗಸ್ಟ 26 ರಂದು ಮಡಿಕೇರಿಯಲ್ಲಿ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಒಬ್ಬರ ವಿರುದ್ಧ ಇನ್ನೊಬ್ಬರು ಪ್ರತಿಭಟನಾ ರ್ಯಾಲಿ ನಡೆಸಲು ಮುಂದಾಗುತ್ತಿದ್ದಾರೆ.ರಾಜ್ಯ ಸರ್ಕಾರ ಕೂಡಲೇ ಎರಡೂ ಪಕ್ಷಗಳಿಗೆ ಕರೆ ನೀಡಿ ಈ ರ್ಯಾಲಿಯನ್ನು ರದ್ದು ಪಡಿಸಬೇಕೆಂದು ಕೋರುವುದು ಒಳಿತು.ಒಂದು ವೇಳೆ ಸರ್ಕಾರ ಇದನ್ನು ಹತ್ತಿಕ್ಕಲು ಪ್ರಯತ್ನಿಸದಿದ್ದರೆ ಕೊಡಗಿನಲ್ಲಿ ದೊಡ್ಡ ರಾದ್ಧಾಂತವೇ ಆಗುವ ಸಾಧ್ಯತೆ ಇದೆ.ಕಾಂಗ್ರೆಸ್ ಪಕ್ಷ ಈಗ ಅಧಿಕಾರದಲ್ಲಿ ಇಲ್ಲದೆ ಇರುವುದೇನೋ ನಿಜ ಆದರೆ ಸಿಕ್ಕ ವಿಷಯಗಳನ್ನೆಲ್ಲಾ ದೊಡ್ಡದಾಗಿ ಮಾಡಿಸಿಕೊಂಡು ರಾಜಕೀಯ ಲೇಪನಗಳನ್ನು ಹಚ್ಚಿ ಅವಕಾಶವಾದಿಗಳಾಗುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಓರ್ವ ವ್ಯಕ್ತಿ ಮೊಟ್ಟೆ ಎಸೆದ ಪ್ರಕರಣವನ್ನು ಆಡಳಿತನಡೆ ಸುತ್ತಿರುವ ಭಾರತೀಯ ಜನತಾ ಪಕ್ಷದ ಮುಖಂಡರೇ ನಡೆಸಿದ್ದಾರೆ ಎಂಬ ಆರೋಪ, ಮಾಂಸ ತಿನ್ನುವ ವಿಚಾರದಲ್ಲಿ ,ಟಿಪ್ಪು ವಿಷಯದಲ್ಲಿ ಕೊಡಗಿನಲ್ಲಿ ಅಶಾಂತಿ ಹುಟ್ಟು ಹಾಕುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷದವರು ಕಾಂಗ್ರೆಸ್ ನವರ ವಿರುದ್ಧ ಸಮರ. ಈ ಪೈಪೋಟಿಯ ಸಮರ ಸಾರಲು ಒಂದೇ ದಿನ ಒಂದೇ ಸ್ಥಳ ಆಯ್ದುಕೊಂಡಿರುವುದು ದೊಡ್ಡ ರಾದ್ಧಾಂತದ ಮುನ್ಸೂಚನೆ ಕಾಣುತ್ತಿದೆ.ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕೊಡಗು ಸೇರಿದಂತೆ ರಾಜ್ಯದ ಎಲ್ಲೆಡೆ ಬೇಹುಗಾರಿಕೆಯನ್ನು ಬಲಪಡಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಣ್ಗಾವಲು ಇಡಬೇಕಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರಿಂದ ಹಿಡಿದು ಪ್ರಮುಖ ಮುಖಂಡರ ನಡವಳಿಕೆ ವಾಕ್ಸಮರದಿಂದ ಜನತೆ ಬೇಸತ್ತು ಹೋಗಿದ್ದಾರೆ.ಕೊಡಗಿನ ನಂತರ ರಾಜ್ಯದ ಇತರ ನಗರಗಳಲ್ಲಿಯೂ ಇಂತಹದೇ ಸಮರ ಸಮಾವೇಶಗಳು ನಡೆದು ರಾಜ್ಯದ ಸ್ಥಿತಿ ಅಯೋಮಯ ವಾಗುವ ಸಾಧ್ಯತೆ ಇದೆ.ಆದುದರಿಂದ ಎರಡೂ ಪಕ್ಷಗಳ ಹಿರಿಯ ಮುಖಂಡರುಗಳು ತಮ್ಮ ತಮ್ಮ ಪಕ್ಷಗಳ ಸಾಮಾನ್ಯ ಕಾರ್ಯಕರ್ತನವರೆಗೆ ಕರೆ ನೀಡಿ ಯಾರೊಬ್ಬರೂ ಸಹ ಸಹನೆ ಕಳೆದುಕೊಳ್ಳಬಾರದು ಹಾಗೂ ಪ್ರಚೋದನಾತ್ಮಕವಾಗಿ ನಡೆದುಕೊಳ್ಳಬಾರದೆಂದು ತಕ್ಷಣವೇ ಕರೆ ನೀಡಬೇಕು. ಸಾಧ್ಯವಾದರೆ ಸರಕಾರ ಕಾನೂನಾತ್ಮಕವಾಗಿ ಅಂದಿನ ಸಭೆ ಸಮಾರಂಭಗಳನ್ನು ನಿಷೇಧಿಸುವುದೇ ಒಳಿತು.
ಆ 26ರ ರ್ಯಾಲಿ ಪರಾಮರ್ಶಿಸಿ


Share