MP ಕವನ ಸಂಗ್ರಹ : “ವಿಶ್ವ ಸುಂದರಿ ದಸರ ” – ಶ್ರೀಮತಿ . ಆಶಾಲತ

207
Share

ವಿಶ್ವ ಸುಂದರಿ ದಸರಾ

ದಸರಾವೆಂಬ ಚೆಂದುಳ್ಳಿ
ಚೆಲುವೆಯೇ
ನೋಡಲು ನಿನ್ನೆಷ್ಟು ಸುಂದರಿ
ನಯನ ಮನೋಹರಿ
ಬಣ್ಣಿಸಲು ಪದಗಳಿಲ್ಲ ಎನ್ನಲಿ
ಸುರಲೋಕದ ಸುರಕನ್ನಿಕೆಯಂತೆ
ಕಂಗೊಳಿಪೆ ನೀನು
ಐತಿಹಾಸಿಕ ಮನ್ನಣೆ ಪಡೆದವಳು
ಚಾರಿತ್ರಿಕ ಹಿನ್ನಲೆಯುಳ್ಳವಳು
ಎಷ್ಟು ಪೊಗಳಿದರು ಸಾಲದು ನಿನ್ನ ಸೊಬಗಿನ ಸಿರಿಯ
ಎಷ್ಟು ಬಣ್ಣಿಸಿದರು ಸಾಲದು ನಿನ್ನ
ವೈಭವದ ಅಲಂಕಾರವ ||1||

ನವರಾತ್ರಿ ಸಮಯದಿ ವೈಭೋಪೇತ
ವಾಗಿ ಜಗಮಗಿಸುವೆ ನೀನು
ದೀಪಾಲಂಕರವೇ ನೀ ತೊಡುವ ಆಭರಣಗಳು
ತಳಿರು-ತೋರಣ, ಪುಷ್ಪಾಲಂಕಾರಗಳಿಂದ ದೇವ ಲೋಕದ ಅಪ್ಸರೆಯಂತೆ ಕoಗೊಳಿಸುವೆ ನೀನು, ಜಗದ ಚೆಲುವೆಲ್ಲವೂ ಅಡಕವಾಗಿ ವಿಶ್ವ
ಸುಂದರಿಯಂತೆ ಪ್ರಜ್ವಲಿ ಸುವೆ
ನಿನ್ನ ಹಬ್ಬದಲ್ಲಿ ತಾಯಿ ಚಾಮುಂಡಿಗೆ ಅಗ್ರ ಪೂಜೆ
ಎಷ್ಟು ಪೊಗಳಿದರು ಸಾಲದು ನಿನ್ನ
ಸೊಬಗಿನ ಸಿರಿಯ
ಎಷ್ಟು ಬಣ್ಣಿಸಿದರು ಸಾಲದು ನಿನ್ನ
ವೈಭವದ ಅಲಂಕಾರವ||2||

ಕರುನಾಡನ್ನಾಳಿದ ರಾಜರ ವೀರತ್ವದ, ಶಕ್ತಿ ಸಾಮರ್ಥ್ಯದ ಸಂಕೇತವಾಗಿರುವೆ ನೀನು
ಕರುನಾಡಿನ ಸಿರಿವಂತಿಕೆಯ, ವೈಭವದ ಪ್ರತೀಕವಾಗಿರುವೆ ನೀನು
“ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ’ಯ ದ್ಯೋತಕವಾಗಿರುವೆ ನೀನು
ಬೊಂಬೆ ಹಬ್ಬವೆಂದು ಪ್ರಸಿದ್ದಿ ಪಡೆದಿರುವ ನೀನು ‘ನವರಾತ್ರಿ ರಾಣಿ’ಯಾಗಿ ಶೋಭಿಸುವೆ
ನವದುರ್ಗೆಯ ಅವತಾರ ತಾಳಿದ
ನಿನ್ನನ್ನು ಪೂಜಿಸಿದ ಮೇಲೆ ಶಾಂತ
ಮೂರ್ತಿಯಾಗಿ ಕಂಗೊಳಿಸುವೆ
ಎಷ್ಟು ಪೊಗಳಿದರು ಸಾಲದು ನಿನ್ನ ಸೊಬಗಿನ ಸಿರಿಯ
ಎಷ್ಟು ಬಣ್ಣಿಸಿದರು ಸಾಲದು ನಿನ್ನ ವೈಭವದ ಅಲಂಕಾರವ ||3||

ವಿಜಯ ನಗರದ ಅರಸರೇ ನಿನ್ನ ಹಬ್ಬಕ್ಕೆ ಬುನಾದಿ
ಮೈಸೂರರಸರೆ ನಿನ್ನ ಆಚರಣೆಗೆ
ನಾಂದಿ
ನಾಡು-ನುಡಿ, ಕಲೆ -ಸಂಸ್ಕೃತಿಯ
ಪ್ರತೀಕವಾಗಿರುವೆ
ರಾಮಾಯಣ, ಮಹಾಭಾರತ ಕಾಲದಿಂದಲೂ ಪೌರಾಣಿಕ ಮಹತ್ವ
ಪಡೆದಿರುವೆ
ಸಪ್ತ ಶರಧಿಗಳ ದಾಟಿ ಬರುವರು
ನಿನ್ನ ಚೆಲುವ ಆಸ್ವಾದಿಸಲು
ನಿನ್ನ ಆಚರಣೆಯಿಂದ ಕರುನಾಡು ವಿಶ್ವ ಪ್ರಸಿದ್ದಿ ಪಡೆದಿದೆ
ಕನ್ನಡ ನಾಡಿನ ಕೀರ್ತಿ ದಶದಿಕ್ಕುಗಳಲ್ಲಿ ಪಲೈಸಿದೆ
ಎಷ್ಟು ಪೊಗಳಿದರು ಸಾಲದು ನಿನ್ನ ಸೊಬಗಿನ ಸಿರಿಯ
ಎಷ್ಟು ಬಣ್ಣಿಸಿದರು ಸಾಲದು ನಿನ್ನ ವೈಭವದ ಆಲಂಕಾರವ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share