MP : 21/09/2021 ರ ಕವನ ಸಂಗ್ರಹ

414
Share

ನೆನಪಿನಂಗಳದಿಂದ

ಚುಕ್ಕಿ – ಚನ್ನೇಮನೆಯಾಟ, ಚೌಕಬಾರದಾಟ, ಜೋಕಾಲಿ ಜೂಟಾಟ, ಹಾವು ಏಣಿಯಾಟ
ಐಸ್ ಪೈಸ್ ಮನೆಯಾಟ, ಕಳ್ಳ ಪೊಲೀಸ್ಆಟ ಎಲ್ಲವೂ ಎಲ್ಲಿ ಹೋದವಮ್ಮ ||1||

ಆ ಕೆರೆಯಂಗಳದ ನೀರಾಟ
ಆ ಗದ್ದೆಬಯಲ ಕೆಸರಾಟ, ನದಿ
ಕಾಲುವೆಗಳ ಈಜಾಟ, ಮಡಿಕೆ
ಕುಡಿಕೆಗಳ ಮಣ್ಣಿನಾಟವಾಡುವ
ದಿನಗಳೆಲ್ಲಾ ಎಲ್ಲಿ ಹೋದವಮ್ಮಾ ||2||

ಆ ಗುಬ್ಬಚ್ಚಿ, ಗೀಜಗನಗೂಡು ನೋಡುವಾಟ ಹಕ್ಕಿ ಪಕ್ಷಿಗಳ ಒಡನಾಟ, ಹಸು -ಕರು, ಕುರಿ -ಮೇಕೆ, ಕೋಳಿ – ಹುಂಜಗಳ ಜಗಳದಾಟದ ನೋಡುವ ದೃಶ್ಯವೆಲ್ಲಾ ಎಲ್ಲಿ ಹೋದವಮ್ಮಾ ||3 ||

ಬೇಸಿಗೆಯೆಂದರೆ ಅಜ್ಜಿಮನೆ
ಅಜ್ಜಿ ಮನೆಯೆಂದರೆ ಸ್ವಾತಂತ್ರ್ಯ
ಆ ಪ್ರಶಾಂತ ತಣ್ಣನೆಯ ಗಾಳಿ
ನಿರ್ಮಲ ಸ್ವಚಂದ ಪರಿಸರ ಧೋ ಎಂದು ಸುರಿಯುವ ಮಳೆಯಲ್ಲಿ ತೊಯ್ಯುವ ಆನಂದದ ಕ್ಷಣಗಳೆಲ್ಲ ಎಲ್ಲಿ ಹೋದವಮ್ಮಾ ||4||

ಕೊಬ್ಬರಿ ಬೆಲ್ಲ ತಿನ್ನುವ, ಜೋನಿ ಬೆಲ್ಲ ಸವಿಯುವ, ತಾಜಾ ಕಬ್ಬಿನ ಹಾಲಿನ ರಸ ಹೀರುವ, ಕಡೆಗೋಲಲ್ಲಿ ಕಡೆದ ನವನೀತವ ಮೆಲ್ಲುವ, ಅಜ್ಜಿಯ ಕೈ ರುಚಿಯ ಸಿಹಿಯಡುಗೆಯ ಮಧುರಾಮೃತವ ಸವಿಯುವ
ನೆರೆ ಹೊರೆಯವರ ಪ್ರೀತಿ – ವಿಶ್ವಾಸದ ನುಡಿ ಆಲಿಸುವ, ಸುಮಧುರ ಭಾಂದವ್ಯವ ಬೆಸೆಯುವ ಕಾಲವೆಲ್ಲ ಎಲ್ಲಿ ಹೋದವಮ್ಮಾ ||5||

ಅತ್ತಿ ಹಣ್ಣು, ಕಾರೆಹಣ್ಣು, ಮಾವು ಪೇರಳೆ ಹಣ್ಣುಗಳ
ನಲ್ಲಿ, ಸೀಬೆ, ಹಲಸು ಸೀತಾಫಲ
ಹಣ್ಣುಗಳ ಕಿತ್ತು ತಿನ್ನುವ ಕಾಲವೆಲ್ಲಾ ಎಲ್ಲಿ ಹೋದವಮ್ಮಾ
ಎಲ್ಲವೂ ಅಜ್ಜ ಅಜ್ಜಿಯರ ಹಿಂದೆ ನಡೆದು ಕಣ್ಮರೆಯಾಗಿವೆಯಮ್ಮ
ಪ್ರೀತಿ ವಿಶ್ವಾಸ, ಆತ್ಮೀಯತೆ, ಸ್ನೇಹ ಬಂಧುತ್ವದ ಮಧುರ ಕ್ಷಣಗಳ ಹುಡುಕ ಬೇಕಮ್ಮ ||6||

ಎಂ.ಎಸ್. ಆಶಾಲತಾ, ಸಹಾಯಕ ವ್ಯವಸ್ಥಾಪಕರು, ಎಂಡಿಸಿಸಿಬ್ಯಾಂಕ್, ಮದ್ದೂರು (ಚನ್ನಪಟ್ಟಣ)


Share