ಇಂದು ಅಂತರರಾಷ್ಟ್ರೀಯ ಹುಲಿ ಸಂರಕ್ಷಣಾ ದಿನ- ನರಭಕ್ಷಕ v/s ನರಹಂತಕ-

228
Share

 

ನರಭಕ್ಷಕ – ನರಹಂತಕ

ಮಾನವ ಕಾಡುಪ್ರಾಣಿಗಳ ಸಂಘರ್ಷ ತಾರಕಕ್ಕೇರಿದೆ. ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುವ ಕಾಡು ಪ್ರಾಣಿಗಳು ಕಾಡಂಚಿನ ಜನರ ನಿದ್ದೆಗೆಡಿಸಿವೆ. ಅದರಲ್ಲೂ ಕೆಲ ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಚೌಡಳ್ಳಿ ಗ್ರಾಮಕ್ಕೆ ಎಂಟ್ರಿ ಕೊಟ್ಟ ಹುಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದು ವ್ಯಾಪಕ ಚರ್ಚೆಗೆ ಕಾರಣವಾಯ್ತು. ಅಷ್ಟೇ ಅಲ್ಲ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿಗೆ ಬಂದು ವೃದ್ದ ಸೇರಿ ಹಲವರುನ್ಮು ಕೊಂದಿದ್ದ ಹುಲಿ ಮೇಲೆ ಎಲ್ಲರೂ ಕೆಂಡಾಮಂಡಲರಾಗಿದ್ದರು. ಅದು ಸಹಜ ಕೂಡ, ಯಾಕಂದ್ರೆ ಜೀವದ ಮೌಲ್ಯ ಅಷ್ಟಿದೆ. ಯಾವಾಗ ಹುಲಿ ಮನುಷ್ಯರನ್ನು ಕೊಂದು ಹಾಕಿತೋ ಅಲ್ಲಿಗೆ ಆ ಹುಲಿಗೆ *ನರಭಕ್ಷಕ* ಅನ್ನೋ ಹಣೆಪಟ್ಟಿ ಕಟ್ಟಲಾಯ್ತು. ಆದರೆ ವಾಸ್ತವವಾಗಿ ಆ ಹುಲಿ ನರಭಕ್ಷಕ ಹುಲಿಯಾಗಿರಲಿಲ್ಲ. ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ ರೈತರನ್ನು ಕೊಂದ ಹುಲಿ ಅವರನ್ನು ತಿಂದಿರಲಿಲ್ಲ. ಅವರ ಮೇಲೆ ದಾಳಿ ಮಾಡಿ ಕೊಂದು ಹಾಕಿ ಅಲ್ಲಿಂದ ಜಾಗ ಖಾಲಿ‌ ಮಾಡಿತ್ತು.

ಘಟನೆ ನಡೆದ ಕೆಲ ದಿನಗಳಲ್ಲಿ ಎರಡು ಕಡೆಯೂ ಹುಲಿ ಸೆರೆಯಾಗಿತ್ತು. ಆ ಹುಲಿ ಬಂದಿದ್ದು ಹೇಗೆ ? ಅದಕ್ಕೆ ಕಾರಣ ಏನು ? ಅದು ಬಾರದಂತೆ ತಡೆಯುವುದು ಹೇಗೆ ? ಇದಕ್ಕೆಲ್ಲಾ‌ ಕಾರಣ ಏನು ? ಯಾರು ಕಾರಣ ? ಇತ್ಯಾದಿ ಇತ್ಯಾದಿ ವಿಚಾರವನ್ನು ನಾನು ಇಲ್ಲಿ ಪ್ರಸ್ತಾಪಿಸುತ್ತಿಲ್ಲ. ಆದರೆ ನಾನು ಇಲ್ಲಿ ಹೇಳಲು ಹೊರಟಿರುವುದು *ನರಭಕ್ಷಕ ಹುಲಿ ಹಾಗೂ ನರಹಂತಕ ಹುಲಿಗೆ* ಇರುವ ವ್ಯತ್ಯಾಸದ‌ ಬಗ್ಗೆ ಅಷ್ಟೇ.

ಹುಲಿಯೊಂದು ಮನುಷ್ಯನ ಮೇಲೆ ದಾಳಿ ಮಾಡಿ ಆತನನ್ನು ಕೊಂದು ಹಾಕಿದ ತಕ್ಷಣಕ್ಕೆ ಅದನ್ನು *ನರಭಕ್ಷಕ ಹುಲಿ* ಅನ್ನೋದು ಸರಿಯಲ್ಲ‌. ಯಾಕಂದರೆ ಶೇಕಡ 90ರಷ್ಟು ಹುಲಿಗಳು ನರಭಕ್ಷಕ ಹುಲಿಗಳಲ್ಲ. ನನಗೆ ತಿಳಿದ ಮಟ್ಟಿಗೆ ಹುಲಿಗೆ ಮನುಷ್ಯ ನೈಸರ್ಗಿಕ ಆಹಾರ ಅಲ್ಲ. ಅದು ತನ್ನ ಆಹಾರವನ್ನು ಬೇಟೆಯಾಡುವಾಗ ಆಕಸ್ಮಿಕವಾಗಿ ಮನುಷ್ಯ ಎದುರಾದರೆ ತನ್ನ ಸ್ವರಕ್ಷಣೆ ಹಾಗೂ ತನ್ನ ಆಹಾರಕ್ಕೆ ಅಡ್ಡ ಬಂದನಲ್ಲ ಅನ್ನೋ ಕೋಪಕ್ಕೆ ಆತನ‌ ಮೇಲೆ ದಾಳಿ ಮಾಡುತ್ತದೆ. ಇದಕ್ಕೆ ಒಂದು ಚಿಕ್ಕ ಉದಾಹರಣೆ ನೀಡುವುದಾದರೆ. ನಮಗೆ ಚೆನ್ನಾಗಿ ಹೊಟ್ಟೆ ಹಸಿದು ಜೀವವೇ ಹೋದಂತಾದ ವೇಳೆ ಎಲ್ಲಾದರೂ ಮೃಷ್ಟಾನ್ನ ಭೋಜನ ಸಿಕ್ಕಿ ಇನ್ನೇನು ನಾವು ಅದನ್ನು ತಿನ್ನಬೇಕು ಅನ್ನೋ ಸಮಯದಲ್ಲಿ ಯಾರಾದರೂ ಆ ಅನ್ನವನ್ನು ಕಸಿದುಕೊಂಡರೆ ಹೇಗೆ ನಾವು ಕೋಪಗೊಂಡು ಅವರ ಕಪಾಲಕ್ಕೆ ಬಾರಿಸುತ್ತೇವೆಯೋ ಅದರಂತೆ ಹುಲಿ ಸಹಾ ಪ್ರತಿಕ್ರಿಯಿಸುತ್ತದೆ. ಮನುಷ್ಯರ ಕಪಾಲ ಮೋಕ್ಷಕ್ಕೂ ಹುಲಿಯ ಕಪಾಲ ಮೋಕ್ಷಕ್ಕೂ ಇರುವ ವ್ಯತ್ಯಾಸ ಹೇಳುವು ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಆದ್ದರಿಂದ ನಾನು ಈ ಮೊದಲೇ ಹೇಳಿದಂತೆ ಶೇಕಡ 90ರಷ್ಟು ಹುಲಿಗಳು *ನರಹಂತಕ ಹುಲಿಗಳೇ ಹೊರತು ನರಭಕ್ಷಕ* ಅಲ್ಲ ಅನ್ನೋದು ನನ್ನ ಅಭಿಪ್ರಾಯ. ಉಳಿದ ಶೇಕಡ 10ರಷ್ಟು ಹುಲಿಗಳನ್ನು ಖಂಡಿತಾ ನಾವು ನರಭಕ್ಷಕ ಹುಲಿ ಅಂತಾ ಹೇಳಬಹುದು. ಕಾರಣ ಆ ಹುಲಿಗಳು ತಮ್ಮ ವಯೋಸಹಜ ಸಮಸ್ಯೆಗಳಿಂದ ಶಕ್ತಿ ಕಳೆದುಕೊಂಡು ಬೇಟೆಯಾಡಲು ಸಾಧ್ಯವಾಗದೆ ಸುಲಭವಾಗಿ ಸಿಗುವ ಕಾಡಂಚಿನ ದನಗಾಹಿ ಕುರಿಗಾಹಿಗಳನ್ನು ಬೇಟೆಯಾಡಿ ತಿನ್ನಲು ಆರಂಭಿಸುತ್ತವೆ. ಅದು ಸಹಾ ಬದುಕಿನ ಅನಿವಾರ್ಯತೆಗೆ ತಾನು ಬದುಕಲು.

*ಕೊನೆಯದಾಗಿ ಹುಲಿಯನ್ನು ಒಳಗೊಂಡಂತೆ ಜಗತ್ತಿನ ಬಹುತೇಕ ಪ್ರಾಣಿಗಳು ಹೊಟ್ಟೆ ತುಂಬಿದ ನಂತರ ಬೇಟೆಯಾಡುವುದಾಗಲಿ ನಾಳೆಗಾಗಿ ಶೇಖರಣೆ ಮಾಡುವುದಾಗಲಿ ಮಾಡುವುದಿಲ್ಲ ಮನುಷ್ಯರನ್ನು ಹೊರತುಪಡಿಸಿ.*

ಆದ್ದರಿಂದ ದಯಮಾಡಿ ಹುಲಿಯನ್ನು ನರಭಕ್ಷಕ ಅಂತಾ ಕರೆಯುವ ಮುನ್ನ ದಯಮಾಡಿ ಕೊಂಚ ಯೋಚಿಸಿ ಅನ್ನೋದಷ್ಟೇ ನನ್ನ ಕಳಕಳಿಯ ಮನವಿ. ಯಾಕೆಂದರೆ ಈ ಭೂಮಿ ಮೇಲೆ ನಮಗೆ ಇರುವಷ್ಟೇ ಜೀವಿಸುವ ಹಕ್ಕು ಸಕಲ‌ ಜೀವಿಗಳಿಗೆ ಇದೆ. ಆದ್ದರಿಂದ *ಬದುಕಿ ಬದುಕಲು ಬಿಡಿ* ಅನ್ನೋ‌ದು ಕೇವಲ ಘೋಷಣೆಗೆ ಸೀಮಿತಗೊಳಿಸದೆ ಅದನ್ನು ಪಾಲಿಸುವ ಕೆಲಸವನ್ನು ಸಹಾ ಮಾಡೋಣ. ಎಲ್ಲರಿಗೂ ಒಳ್ಳೆಯದಾಗಲಿ.

T.V.9.ರಾಮ್ ಮೈಸೂರು


Share