ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 50

1091
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 50
ಅನ್ನಮಾಚಾರ್ಯ, ವೇಂಗಮಾಂಬರ ಭಕ್ತಿಯ ಕಥೆಯನ್ನು ಕೇಳಿದೆವು.
ಇಂದು ಹಾತಿರಾಂ ಭಾವಾಜಿಯವರ ಕಥೆಯನ್ನು ಎಲ್ಲಿಯ ತನಕ ಕೇಳಬಹುದು ನೋಡೋಣ.
ಸ್ವಾಮಿಗೆ ಬಂಗಾರದ ಉಯ್ಯಾಲೆಯಲ್ಲಿ ಕುಳಿತು ಶ್ರೀದೇವಿ ಭೂದೇವಿಯರೊಂದಿಗೆ ಪಗಡೆಯಾಡುವುದೆಂದರೆ ಬಹಳ ಪ್ರಿಯವಾದದ್ದು. ಹಾಗಾಗಿ ಭಾವಜಿಗೆ ಭಗವಂತನೊಡನೆ ಪಗಡೆಯಾಡಬೇಕೆಂಬ ಬಯಕೆಯಾಯಿತು. ಅದರಲ್ಲಿ ನಾಪುಣ್ಯತೆಯನ್ನು ಹೊಂದಿದ. ಮನೆಯ ಮುಂದೆ ಜಗುಲಿ ಮೇಲೆ ಕುಳಿತು ಎದುರಿಗೆ ಸ್ವಾಮಿಯು ಕುಳಿತಿದ್ದಾನೆಂಬ ಭಾವನೆಯಿಂದ ಇಬ್ಬರ ಆಟವನ್ನು ತಾನೇ ಆಡುತ್ತಿದ್ದ. ಇದನ್ನು ನೋಡಿದ ಜನರೆಲ್ಲ ಇವನಿಗೆ ಹುಚ್ಚು ಹಿಡಿದಿದೆಯೆಂದು ಭಾವಿಸಿದರು.
ಇತ್ತ ಸ್ವಾಮಿಯು ದೇವಿಯರೊಡನೆ ಆಟವಾಡುತ್ತಿದ್ದ ಆದರೆ ಅವನ ಆಟದ ವೈಕರಿ ಬದಲಾಗಿತ್ತು. ಸಾಮಾನ್ಯವಾಗಿ ಅವನು ದೇವಿಯರೊಡನೆ ಅಥವ ಭಕ್ತರೊಡನೆ ಆಡಿದರೆ ಅವರ ಮೇಲಿನ ಪ್ರೀತಿಯಿಂದ ತಾನೇ ಸೋಲುತ್ತಿದ್ದ. ಆದರೆ ಈಗ ಪ್ರತಿಭಾರಿಯು ತಾನೇ ಗೆಲ್ಲುತ್ತಿದ್ದ. ಕಾರಣ ಇವನ ಆಟವನ್ನು ಭಾವಾಜಿ ಆಡುತ್ತಿದ್ದ. ದೇವಿಯರು ಈ ಮಾತನ್ನು ಹೇಳಿದಾಗ ಸ್ವಾಮಿಯು ನಿಜವಾಗಿಯೂ ಅವನೊಡನೆ ಆಡುವುದಾಗಿ ಭಾವಾಜಿ ಬಳಿ ಬಂದು ತನ್ನ ಆಟವನ್ನು ತಾನೇ ಆಡುವುದಾಗಿ ಹೇಳಿದ. ಸ್ವಾಮಿಯನ್ನು ನೋಡಿ ಸಂತಸದಿಂದ ಅವನೊಡನೆ ಆಡಲು ಶುರುಮಾಡಿದ. ಇದು ಪ್ರತಿನಿತ್ಯದ ಕೆಲಸವಾಯಿತು. ಒಮ್ಮೆ ಭಾವಾಜಿಗೆ ಅನ್ನಿಸಿತು ದಿನವೂ ಸ್ವಾಮಿಯು ಇಲ್ಲಿಯ ತನಕ ಬರುವುದು ತೊಂದರೆಯಾಗಬಹುದು ಎಂದು ತಾನೇ ತಿರುಮಲಕ್ಕೆ ಹೋಗಿ ಅಲ್ಲೇ ವಾಸವಾದ. ದಿನನಿತ್ಯವು ಸ್ವಾಮಿಯೊಡನೆ ಪಗಡೆಯಾಡುತ್ತಿದ್ದ. ಇದನ್ನು ಅರಿಯದ ರಾಜನಿಗೆ ಇವನಮೇಲೆ ಕೋಪ ಬಂದಿತು. ಇವನು ಸ್ವಾಮಿಯ ಸೇವೆ ಮಾಡದೇ ಆಟಆಡಿಕೊಂಡು ಕಾಲಕಳೆಯುತ್ತಿದ್ದಾನೆ ಎಂದು ಭಾವಾಜಿಯನ್ನು ಬಂಧಿಸಿದ. ಸ್ವಾಮಿಯು ಕಾರಾಗೃಹಕ್ಕೂ ಹೋಗಿ ಅವನೊಡನೆ ಆಟವಾಡುತ್ತಿದ್ದ. ರಾಜಭಟರಿಗೆಲ್ಲಾ ಆಶ್ಚರ್ಯ , ಇದೇನು ಭಾವಾಜಿ ಬರುವಾಗ ಬರಿಗೈಯಲ್ಲಿ ಬಂದ, ಆದರೆ ಇಲ್ಲಿ ದಾಳಗಳ ಶಬ್ದ ಕೇಳುತ್ತಿದೆ ಮತ್ತು ಇನ್ನೊಬ್ಬರ ಜೊತೆ ಮಾತನಾಡುತ್ತಿರುವಂತೆ ಕೇಳಿಬರುತ್ತಿದೆ ಎನಿಸಿತು.
ಮುಂದೇನು ಆಗುತ್ತದೆ ಎಂಬ ಸ್ವಾರಸ್ಯಕರ ಹಂತದಲ್ಲಿ ನಿಲ್ಲಿಸಿದ್ದಾರೆ. ಇಂದು ನೋಡಿದವರು ನಾಳೆಯೂ ಮತ್ತೆ ನೋಡಲೇಬೇಕೆನ್ನುವ ಹಂತದಲ್ಲಿ ನಿಲ್ಲಿಸಿದ್ದಾರೆ ಶ್ರೀ ಸ್ವಾಮೀಜಿ ಯವರು.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share