ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 33

165
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 33
ಓಂ ನಮೋ ಹನುಮತೇ ನಮಃ

294) ಹೀಗೆ ಸುಗ್ರೀವನು ಹನುಮಂತನ ಬುದ್ಧಿಯನ್ನು ಕಡಿಮೆಮಾಡಿ ಮಾತಾಡಿದ. ಇದರಿಂದ ಹನುಮಂತನೂ ಸ್ವಲ್ಪ ಮೆತ್ತಗಾದ. ಸುಗ್ರೀವ ಹೇಳಿದ್ದು ನಿಜವೇ ಇರಬೇಕೆಂದು ತಾನೂ ಸ್ವಲ್ಪ ನಡುಗಿದ.
295) ಸುಗ್ರೀವ ಚೇತರಿಸಿಕೊಂಡು ಹೀಗೆ ಹೇಳಿದ –
1. ಹನುಮ! ನಾವು ಅಷ್ಟೊಂದು ಭಯಪಡಬೇಕಾಗಿಲ್ಲವೇನೋ!
2. ನೀನು ಒಳ್ಳೆಯ ಮಾತುಗಾರ. ಮಾತಿನಲ್ಲಿ ಎದುರಾಳಿಯನ್ನು ಬುಟ್ಟಿಗೆ ಹಾಕಿಕೊಳ್ಳಬಲ್ಲೆ. ಮೇಲಾಗಿ, ನಿನ್ನ ಹತ್ತಿರ ವೇಷ ಬದಲಾಯಿಸಿಕೊಳ್ಳುವ ವಿದ್ಯೆಯಿದೆ.
3. ಆದ್ದರಿಂದ ನೀನು ವೇಷ ಬದಲಾಯಿಸಿ, ವೇದಾಭ್ಯಾಸ ಮಾಡುವ ಬ್ರಹ್ಮಚಾರಿಯಂತೆ ವೇಷ ಹಾಕಿಕೊಂಡು ಹೋಗು.
4. ಹೇಗೂ ಇಲ್ಲಿ ಮತಂಗ ಮುನಿಯ ಆಶ್ರಮ ಇದೆಯಲ್ಲವೇ? ಅಲ್ಲೇ ವಿದ್ಯಾಭ್ಯಾಸ ಮಾಡಿಕೊಂಡು ಇದ್ದೇನೆ ಎಂದು ಹೇಳಿಬಿಡು. ಅವನು ಹೇಗೂ ನಮಗೆ ಗುರು. ನಾವು ಸುಳ್ಳು ಹೇಳಿದಂತೆಯೂ ಆಗುವುದಿಲ್ಲ.
5. ಹಾಗೆ ಹೇಳಿ, ಅವರನ್ನು ಮಾತಿಗೆ ಎಳಿ. ಅವರ ವಿಷಯವನ್ನು ತಿಳಿದುಕೋ.
6. ಅವರನ್ನು ನಮ್ಮ ಅಣ್ಣ ಕಳಿಸಿದ್ದಾರೆ, ಉಪಾಯವಾಗಿ ಅವರ ದಾರಿ ತಪ್ಪಿಸು.
7. ನಮ್ಮ ಅಣ್ಣನಿಗೂ ಅವರಿಗೂ ಏನೂ ಸಂಬಂಧವಿಲ್ಲ ಎನ್ನುವುದಾದರೆ, ಅವರ ಮನಸ್ಸನ್ನು ಮೆತ್ತಗಾಗಿಸಿ ನನ್ನ ಹತ್ತಿರ ಕರೆದುಕೊಂಡ ಬಾ. ಅವರನ್ನು ನಮ್ಮ ಪಕ್ಷದಲ್ಲಿ ಇಟ್ಟುಕೊಂಡರೆ ನಮಗೆ ಯಾವಾಗಲಾದರೂ ಕೆಲಸಕ್ಕೆ ಬರುತ್ತಾರೆ.
8. ಇಂತಹ ಕೆಲಸಗಳನ್ನು ಮಾಡುವುದರಲ್ಲಿ ನಿನ್ನದು ಎತ್ತಿದ ಕೈ.

ಹನುಮಂತನ ದೌತ್ಯ
296) ಹೀಗೆ ಹೊಗಳಿದ್ದರಿಂದ ಹನುಮಂತನ ಚಾಕಚಕ್ಯತೆ ಎಂಬ ಅಂಶವು ನಿಜವಾಗೇ ಹೊರಬಂತು. ವೇದ ವಿದ್ಯಾರ್ಥಿಯಂತೆ ವೇಷಹಾಕಿಕೊಂಡು,
ಆ ಹೊಸಬರ ಹತ್ತಿರ ಹೋದ. ಮೆಲ್ಲಗೆ ಮಾತಿಗಾರಂಭಿಸಿದ.
1. ನೀವು ಯಾರು ಸ್ವಾಮಿ! ನೋಡಿದರೆ ಮುನಿಕುಮಾರರಂತೆ ಇದ್ದೀರ! ಆದರೆ ಬಿಲ್ಲುಗಳನ್ನು ಧರಿಸಿದ್ದೀರ! ಇದೂ ಒಂದು ಬಗೆಯ ತಪಸ್ಸೇ? ಎಂದು ಮುಗ್ಧನಂತೆ ಕೇಳಿದನು.
2. ನೀವು ಯಾವ ಗೆಡ್ಡೆ ಗೆಣಸು ತಿನ್ನುತ್ತೀರ? ನಿಮ್ಮ ತೋಳುಗಳು ಅಷ್ಟು ದಷ್ಟಪುಷ್ಟವಾಗಿವೆ!
3. ನಮ್ಮ ಪ್ರದೇಶದಲ್ಲಿ ಅಷ್ಟು ಪುಷ್ಟಿಕರವಾದ ಕಂದಮೂಲಗಳು, ಹಣ್ಣುಗಳು ಇಲ್ಲಾರೀ! ನೀವು ಅದಕ್ಕೋಸ್ಕರ ಹುಡುಕುತ್ತಿದ್ದೀರೇನೋ! ಎಂದ.
( ಮುಂದುವರೆಯುವುದು )

ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು


Share