ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 60

194
Share

ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 60
ಓಂ ನಮೋ ಹನುಮತೇ ನಮಃ

467) ಅಲ್ಲಿರುವ ಕಾವಲುಗಾರರನ್ನು, ಇತರ ಚಿಹ್ನೆಗಳನ್ನು ನೋಡಿ, ಹನುಮಂತನು ಅದು ಯಾರ ಮನೆ ಆಗಿರಬಹುದು ಎಂದು ತಿಳಿದುಕೊಳ್ಳುತ್ತಿದ್ದ. ಅವೆಲ್ಲವೂ ಸುಪ್ರಸಿದ್ಧವಾದ ಹೆಸರುಗಳೇ. ಆ ಪ್ರಸಿದ್ಧ ಪುರುಷರಲ್ಲಿ ಕೆಲವರು ಇಷ್ಟಾಗೋಷ್ಠಿಯಾಗಿ ಹರಟೆ
ಹೊಡೆಯುತ್ತಾ, ಒಬ್ಬರ ಹೆಸರನ್ನು ಇನ್ನೊಬ್ಬರು ಕರೆಯುತ್ತಿದ್ದುದರಿಂದ, ಕೆಲವು ಸೇನಾಪತಿಗಳನ್ನೂ ಮಂತ್ರಿಗಳನ್ನೂ ಹನುಮಂತ ಗುರ್ತಿಸಿದ.
468) “ಓಹೋ! ಇವನೇನಾ ಪ್ರಹಸ್ತ! ವಿದ್ಯುನ್ಮಾಲಿ ಅಂದ್ರೆ ಇವನಾ! ಇವರೇ ಇಷ್ಟೊಂದು ಭಯಂಕರವಾಗಿದ್ದಾರೆ ಅಂದರೆ, ಇವರ ನಾಯಕ ಇನ್ನೆಷ್ಟು ಭಯಂಕರವಾಗಿ ಇದ್ದಾನೋ ಏನೋ!” ಅಂದುಕೊಂಡ ಹನುಮಂತ.
469) ಹಾಗೇ ಹನುಮಂತನು ಇಂದ್ರಜಿತ್ತು, ಕುಂಭಕರ್ಣರ ಮನೆಗಳಿಗೂ ಇಣುಕುಹಾಕಿ, ಒಂದಿಂಚೂ ಬಿಡದಂತೆ ಪರಿಶೀಲಿಸಿದ.
470) ಪ್ರತಿಯೊಂದು ಮನೆಯಲ್ಲೂ ಗಂಡಸರು ಕ್ರೂರಾಕಾರದಿಂದ ಇದ್ದರೂ, ಹೆಂಗಸರು ಮಾತ್ರ ಮಿಂಚಿನ ಬಳ್ಳಿಗಳಂತೆ, ಮೆರೆಯುತ್ತಿದ್ದರು. ಆದರೆ ಅವರಲ್ಲಿ ಅನೇಕರಮುಖದಲ್ಲಿ ರಾಕ್ಷಸ ಜಾತಿಯ ಹೋಲಿಕೆಗಳೇ ಹೆಚ್ಚಾಗಿ ಕಾಣಿಸಿದವು.
471) ಅಲ್ಲಲ್ಲಿ ಮಾನವ ಜಾತಿಯ ಹೆಂಗಸರು ಕಾಣಿಸಿದರೂ, ರಾಮನು ಹೇಳಿದ ಸೀತೆಯ ಲಕ್ಷಣಗಳುಳ್ಳ ಯಾವ ಹೆಂಗಸೂ ಕಾಣಿಸಲಿಲ್ಲ. ರಾಮನು ತೋರಿಸಿದ್ದ ಸೀತಾದೇವಿಯ ಆಭರಣಗಳಮೇಲೆ ಯಾವ ಬಗೆಯ ಶೈಲಿ ಇತ್ತೋ ಆ ಶೈಲಿಯ ಆಭರಣಗಳು
ಎಲ್ಲೂ ಕಾಣಿಸಲಿಲ್ಲ.
472) ಹನುಮಂತನಿಗೆ ರೇಗಿಹೋಗುತ್ತಿತ್ತು. ಆದರೂ ತನ್ನನ್ನು ತಾನು ನಿಗ್ರಹಿಸಿಕೊಂಡು ಮುಂದುವರೆದ. ಪ್ರತಿಯೊಂದು ಮನೆಯನ್ನೂ ಒಂದಿಂಚೂ ಬಿಡದೇ ಶೋಧಿಸಿದ. ಪ್ರತಿ ಮನೆಯೂ ‘ಇದೇ ಮುಖ್ಯವಾದ ರಾಜಭವನವೇನೋ!’ ಅನ್ನುವಂತಿತ್ತು. ಹಾಗೇ
ಮುಂದುವರೆದಾಗ ಒಂದುಕಡೆ ಎತ್ತರವಾದ ಒಂದು ದೊಡ್ಡ ಭವನ ಕಾಣಿಸಿತು.
ಅಂತಃಪುರ
473) ಏಕೋ ಏನೋ! ಆ ಭವನ ಸ್ವಲ್ಪ ಕ್ರೂರವಾಗಿ ಕಂಡಿತು. ಜೊತೆಗೆ, ಎಲ್ಲೂ ಕಾಣಿಸದ ವಿಕಾರವಾದ ರಾಕ್ಷಸ ಸ್ತ್ರೀ ಸೈನಿಕರು ಇಲ್ಲಿ ಕಾಣಿಸಿದರು. ಹನುಮಂತ ಪುಸುಕ್ಕನೆ ಅದರೊಳಗೆ ಪ್ರವೇಶಿಸಲು ಹೋಗಿ, ಏನೋ ಅನುಮಾನ ಬಂದ ಹಾಗೇ ನಿಂತ.
474) ಇದು ನಿಜವಾಗಿಯೂ ಭವನವೇ? ಎಂದು ಅನುಮಾನ ಬಂತು. ಭವನದಂತೆಯೇ ಇದೆ. ಆದರೆ ಹನುಮಂತನು ಅನುಮಾನದಿಂದ ಸುತ್ತಲೂ ತಿರುಗಾಡಿ ನೋಡಿದಾಗ, ಆ ಭವನದ ಕೆಳಗೆ ಕೆಲವು ಸಾವಿರ ಭೂತಗಣಗಳು ಸೂಕ್ಷ್ಮರೂಪದಲ್ಲಿದ್ದು, ಅದನ್ನು
ಹೊತ್ತುಕೊಂಡಿದ್ದಂತೆ ಕಾಣಿಸಿತು.
475) ಆಗ ಹನುಮಂತನು ಇನ್ನೊಮ್ಮೆ ಪರಿಶೀಲಿಸಿ ನೋಡಿದನು. ಅದು ಭವನಾಕಾರದಲ್ಲಿದ್ದ ವಿಮಾನವಾಗಿತ್ತು. ರಾವಣಾಸುರನು ಗರ್ವದಿಂದ ಕೊಚ್ಚಿಕೊಳ್ಳುತ್ತಿದ ಪುಷ್ಪಕ ವಿಮಾನ ಅದು! ಯಾವುದಕ್ಕೂ ಒಳ್ಳೆಯದು ಎಂದು ಕೆಳಗೆ ಭೂತಗಣಗಳನ್ನು ಇಟ್ಟು,
ಮೇಲೆ ವಿಮಾನವನ್ನು ಇಟ್ಟು ಅದನ್ನೇ ಮಹಾ ಭವನವನ್ನಾಗಿ ಮಾಡಿಕೊಂಡು, ಅದರೊಳಗೇ ವಾಸವಾಗಿದ್ದ ರಾವಣಾಸುರ!
476) ಹೀಗೆ ಸದಾಕಾಲವೂ ಯುದ್ಧಕ್ಕೆ ಸಿದ್ದನಾಗಿದ್ದ ರಾವಣನ ಬುದ್ಧಿ ವಂತಿಕೆಯನ್ನೂ ಸಾಮರ್ಥ್ಯವನ್ನೂ ಹನುಮಂತ ಮೆಚ್ಚಿಕೊಂಡ.
477) ಏಕೆಂದರೆ, ಅದು ಸ್ವತಃ ಒಂದು ವಿಮಾನ. ತಮ್ಮನೇ ಆದ ಕುಬೇರನನ್ನು ಹೊಡೆದು ತಂದುಕೊಂಡಿದ್ದ ದೇವತಾ ವಿಮಾನ. ಸಹಜವಾಗೇ ಅದು ತನ್ನ ಯಜಮಾನನ ಸಂಕಲ್ಪಕ್ಕೆ ಅನುಗುಣವಾಗಿ ಆಕಾಶದಲ್ಲಿ ಸಂಚಾರಮಾಡಬಲ್ಲ ದಿವ್ಯಶಕ್ತಿ ಉಳ್ಳದ್ದು. ಅದರ
ಕೆಳಗೆ ಭೂತಗಣಗಳನ್ನು ಇರಿಸಿದ್ದ. ಇನ್ನು ಆ ರಾವಣನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡರೆ ಸಾಕು, ಏನೂ ಮುಟ್ಟಲೂ ಬೇಕಾಗಿಲ್ಲ, ವಿಮಾನ ಎತ್ತಬೇಕೋ ಅತ್ತ ಹೋಗುತ್ತದೆ. ಇಂತಹ ಏರ್ಪಾಡುಮಾಡಿಕೊಂಡು, ರಾಕ್ಷಸ-ರಾಕ್ಷಸಿಯರ ಸೈನ್ಯವನ್ನು
ಕಾವಲಿರಿಸಿಕೊಂಡು, ಒಳಗಡೆ ತಾನು ಮಾತ್ರ ಸುಖ-ಭೋಗಗಳಲ್ಲಿ ತೇಲಿಹೋಗುತ್ತಿದ್ದ ಆ ರಾವಣ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರಾ
ಬೆಂಗಳೂರು


Share