ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ 69

192
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ 69
ಓಂ ನಮೋ ಹನುಮತೇ ನಮಃ

517) ಹನುಮಂತನು ಆಲೋಚನೆಯಲ್ಲಿ ಒಂದರೆಕ್ಷಣ ಮೈಮರೆತ. ಅಷ್ಟರಲ್ಲಿ ಸಿಡಿಲು ಬಡಿದಂತೆ ಆಯಿತು. ಬೆಚ್ಚಿಬಿದ್ದು ನೋಡುವುದರೊಳಗೆ ರಾವಣ ಕೋಪದಿಂದ ಕುದ್ದುಹೋಗುತ್ತಿದ್ದ. “ಸೀತಾ! ಗರ್ವದಿಂದ ಮಿತಿಮೀರುತ್ತಿರುವೆ! ನಾನು ಬಗ್ಗಿದಷ್ಟೂ ನೀನು ಹೆಚ್ಚಿಕೊಳ್ಳುತ್ತಿರುವೆ. ನಿನಗೆ ಮುಂಚೆ ಒಂದು ಗಡುವು ಕೊಟ್ಟಿದೆ. ಈ ಗಡುವಿನೊಳಗೆ ನೀನಾಗೇ ನನ್ನ ಮನೆಯನ್ನು ಸೇರಿಕೊಂಡೆಯೋ ಸರಿ, ಇಲ್ಲದೇ ಹೋದರೆ ಮಾರನೇ ದಿನದ ಬೆಳಿಗ್ಗೆ ಉಪಾಹಾರಕ್ಕೆ ನಿನ್ನನ್ನು ಕತ್ತರಿಸಿ ಕೊಡುತ್ತಾರೆ” ಎಂದು ಎಚ್ಚರಿಸುತ್ತಿದ್ದ.
518) ರಾಕ್ಷಸರಾಜ ಹಾಗೆ ಕೋಪದಿಂದ ಕಿರುಚಾಡುತ್ತಿದ್ದರೆ ಅಲ್ಲಿದ್ದ ಕಾವಲಿನವರು, ಜೊತೆಯಲ್ಲಿ ಬಂದಿದ್ದ ಹೆಂಗಸರು ಗಡಗಡನೆ ನಡುಗುತ್ತಿದ್ದರು.
519) ಆದರೆ ಅವರ ಪೈಕಿ ಧ್ಯಾನಮಾಲಿನಿ ಎಂಬ ಸುಂದರಿಯು ತಟಕ್ಕನೆ ಎಲ್ಲರ ಮುಂದೆಯೇ ರಾವಣನನ್ನು ತಬ್ಬಿಕೊಂಡು ಮುತ್ತುಕೊಡುತ್ತಾ “ಬೇಡ ಅನ್ನೋಳ ಹಿಂದೆ ಬಿದ್ದಿದ್ದೀಯಲ್ಲಾ! ನಿನಗೆ ನಾನಿಲ್ಲವೇ? ನಾವೆಲ್ಲಾ ಇಲ್ವೇ! ಅವಳ ವಿಷಯ ಅವರು ನೋಡ್ಕೊಳ್ತಾರೆ ಬಿಡು, ಬಾ ಹೋಗೋಣ” ಎಂದು ಮುದ್ದುಮಾಡಿದಳು. ಇದರಿಂದ ರಾವಣ ಮೆತ್ತಗಾದ. ಕಿರುನಗೆ ನಗುತ್ತಾ, “ಈ ಮಾನವ ಸುಂದರಿಯನ್ನು ಹೆದರಿಸಿ ದಾರಿಗೆ ತನ್ನಿರೇ” ಎಂದು ಕಾವಲಿನವರನ್ನು ಎಚ್ಚರಿಸಿ ಅಲ್ಲಿಂದ ಹೊರಟುಹೋದ.
520) ಮೇಲಿದ್ದ ಹನುಮಂತ “ಮಳೆ ಬಂದು ನಿಂತಂತಿದೆ” ಅಂದುಕೊಳ್ಳುತ್ತಿರುವಾಗಲೇ ಕೆಳಗಡೆ ಇನ್ನೇನೋ ಗಲಾಟೆ ಶುರುವಾಯಿತು. ರಾವಣ ಅತ್ತ ಹೋದನೋ ಇಲ್ಲವೋ, ಅಲ್ಲಿಯವರೆಗೂ ಬಿಗಿಯಾಗಿ, ನಿಂತಿದ್ದ ಕಾವಲುಗಾತಿಯರೆಲ್ಲಾ ಏಕಕಾಲದಲ್ಲಿ ಸೀತೆಯನ್ನು ಸುತ್ತುವರೆದು, ರಾವಣಾಸುರ ಹೇಳಿದಹಾಗೆ ಒಪ್ಪಿಕೋ, ಒಪ್ಪಿಕೋ, ಎಂದು ಬಲವಂತ ಮಾಡುತ್ತಿದ್ದರು.
ಸೀತಾದೇವಿಯ ರಹಸ್ಯ ಸಂಕೇತ
521) ಕಾಟವನ್ನು ತಾಳಲಾರದೇ ಸೀತಾದೇವಿ ಅಲ್ಲಿಂದ ಎದ್ದು, ಹನುಮಂತ ಕುಳಿತಿದ್ದ ಶಿಂಶುಪಾ ವೃಕ್ಷದ ಕೆಳಗೆ ಬಂದು ನಿಂತು,
ಶ್ಲೋಕ೤೤
ದೀನೋ ವಾ ರಾಜ್ಯ ಹೀನೋವಾ ಯೋವು ಭರ್ತಾ ಸಮೇ ಗುರುಃ೤
ತಂ ನಿತ್ಯಮನುರಕ್ತಾಸ್ಮಿ ಯಥಾ ಸೂರ್ಯಂ
ಸುವರ್ಚಲಾ೤೤

(ದೀನನಾದರೂ ಸರಿ, ರಾಜ್ಯಹೀನನಾದರೂ ಸರಿ, ನನ್ನ ಗಂಡನೇ ನನಗೆ ಗುರು. ನಾನವನನ್ನು ಯಾವಾಗಲೂ ಪ್ರೇಮಿಸುತ್ತೇನೆ. ಸುವರ್ಚಲಾ ಸೂರ್ಯನನ್ನು ಬಿಟ್ಟಿರದ ಹಾಗೆ ನಾನವನನ್ನು ಬಿಡಲಾರೆ.)
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share