ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 85

213
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 85
ಓಂ ನಮೋ ಹನುಮತೇ ನಮಃ

605) ಆ ಮಾತನ್ನು ಕೇಳಿದ ಶ್ರೀರಾಮನು ಮಂದಹಾಸದಿಂದ ವಾನರ ಸಭೆಗೆ ಹೀಗೆ ಹೇಳಿದ –
ಶ್ಲೋಕ೤೤
ಸಕೃದೇವ ಪ್ರಪನ್ನಾಯ
ತವಾಸ್ಮೀತಿ ಚ ಯಾಚತೇ೤
ಅಭಯಂ ಸರ್ವ ಭೂತೇಭ್ಯೋ
ದದ್ಯಾ ಮ್ಯೇತದ್ ವ್ರತಂ ಮಮ೤೤
“ಬಂದು ಒಂದು ಸಾರಿ ಶರಣು ಎಂದರೆ ಸಾಕು, ಆತ್ಮಾರ್ಪಣೆ ಮಾಡಿಕೊಂಡರೆ ಸಾಕು, ನಾನು ನಿನ್ನವನೆಂದು ಪ್ರಾರ್ಥಿಸಿದರೆ ಸಾಕು, ಪ್ರಪಂಚದ ಸಮಸ್ತ ಜೀವಿಗಳಿಗೂ ನಾನೇ ಅಭಯ ಕೊಟ್ಟೇ ಕೊಡುತ್ತೇನೆ. ಇದು ನನ್ನ ವ್ರತ”.
(ಇದು ಶ್ರೀರಾಮ ಮಹಾ ಮಂತ್ರಗಳಲ್ಲಿ ಒಂದು ಎಂದು ಹಿರಿಯರು ಹೇಳುತ್ತಾರೆ. ರಾಮಾಯಣದ ನಿಜವಾದ ತತ್ತ್ವವೆಲ್ಲಾ ಈ ವಾಕ್ಯದಲ್ಲಿ ಇದೆ ಎಂದೂ ಹಿರಿಯರು ಹೇಳುತ್ತಾರೆ.
606) ಶ್ರೀರಾಮನು ಹೀಗೆ ಪ್ರತಿಜ್ಞೆ ಮಾಡಿ, ವಿಭೀಷಣನಿಗೆ ಅಭಯ ನೀಡಿ, ಕೂಡಲೇ ಲಂಕಾರಾಜ್ಯದ ಚಕ್ರವರ್ತಿಯಾಗಿ ಪಟ್ಟಾಭಿಷೇಕವನ್ನು ಮಾಡಿಸಿದ.
ಸೇತುವೆ ನಿರ್ಮಾಣ
607) ನಂತರ ಶ್ರೀರಾಮನು ದಾರಿ ಕೊಡು ಎಂದು ಸಮುದ್ರದೇವತೆಯನ್ನು ಪ್ರಾರ್ಥಿಸುತ್ತಾ ಮೂರುದಿನ ಉಪವಾಸ ಮಾಡಿದನು. ಆದರೂ ಸಮುದ್ರ ದೇವತೆ ಏನೂ ಮಾಡಲಿಲ್ಲ.
608) ಆಗ ರಾಮನಿಗೆ ಕೋಪಬಂದು, ಇಡೀ ಸಮುದ್ರವನ್ನೇ ಒಣಗಿಸಿಬಿಡಬೇಕೆಂದು ಬಾಣವನ್ನು ಕೈಗೆತ್ತಿಕೊಂಡ.
609) ಆಗ ಸಮುದ್ರ ದೇವನು ನಡುಗುತ್ತಾ “ದೇವದೇವಾ! ಕ್ಷಮಿಸು. ಕಲ್ಲುಗಳಿಂದ ಸೇತುವೆ ಕಟ್ಟಿಸಿ, ಅದರ ಮೇಲಿಂದ ಲಂಕಾರಾಜ್ಯದತ್ತ ಪ್ರಯಾಣ ಮಾಡು. ಆಗ ನನ್ನ ಗೌರವ ನನಗುಳಿಯುತ್ತದೆ” ಎಂದು ಪ್ರಾರ್ಥಿಸಿದ.
610) ಸರಿ ಎಂದು ಶ್ರೀರಾಮನು ವಾನರರ ಕೈಲಿ ದೊಡ್ಡದೊಡ್ಡ ಬಂಡೆಗಳನ್ನು ತರಿಸಿ ಸೇತುವೆ ಕಟ್ಟಲು ಪ್ರಯತ್ನಿಸಿದ. ಬಂಡೆಗಳೆಲ್ಲಾ ಮುಳುಗಿಹೋಗುತ್ತಿವೆ. ಎಷ್ಟು ಬಂಡೆಗಳನ್ನು ತಂದರೂ ಸಾಲುತ್ತಿಲ್ಲ.
611) ಇದನ್ನು ಗಮನಿಸಿದ ಶ್ರೀರಾಮನು ಹನುಮಂತನನ್ನು ಕರೆದು “ಹನುಮಾ! ಇದಕ್ಕೆ ನೀನೇ ಏನಾದರೂ ಉಪಾಯ ಮಾಡಬೇಕು” ಎಂದು ಹೇಳಿದ.
612) ಕೂಡಲೇ ಹನುಮಂತನು ಒಂದು ಕಲ್ಲಿನ ಮೇಲೆ ಉಗುರಿನಿಂದ ‘ರಾಮ’ ಎಂದು ಅಕ್ಷರಗಳನ್ನು ಕೆತ್ತಿ, ಅದನ್ನು ಸಮುದ್ರದೊಳಗೆ ಹಾಕಿದ. ಅದು ನೀರಿನ ಮೇಲೆ ದೋಣಿಯಂತೆ ತೇಲಾಡಿತು.
613) ಇದನ್ನು ಗಮನಿಸಿದ ವಾನರರು ಪ್ರತಿಯೊಂದು ಕಲ್ಲಿನ ಮೇಲೂ ರಾಮನಾಮವನ್ನು ಕೆತ್ತಿ ಅದನ್ನು ತೇಲಿ ಬಿಟ್ಟರು. ಪ್ರತಿಯೊಂದು ಕಲ್ಲೂ ತೇಲುತ್ತಿತ್ತು.
614) ಶರವೇಗದಲ್ಲಿ ಸೇತುವೆಯ ನಿರ್ಮಾಣವಾಯತು. ಶ್ರೀರಾಮನು ವಾನರ ಸೈನ್ಯ ಸಮೇತನಾಗಿ ಲಂಕೆಯನ್ನು ತಲುಪಿದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share