ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 93

146
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 93
ಓಂ ನಮೋ ಹನುಮತೇ ನಮಃ

665) ಹನುಮಂತನು ದುರ್ದಂಡಿಗೆ ತನ್ನ ಪರಿಚಯ ಹೇಳಿದ. ತಾನು ಬಂದ ಉದ್ದೇಶವನ್ನು ಸಂಕ್ಷಿಪ್ತವಾಗಿ ಹೇಳಿದ. ಕೊನೆಗೆ ಹೀಗೆ ಹೇಳಿದ.
1. ಅಮ್ಮಾ ದುರ್ದಂಡಿ! ನೀನು ರಾಮಕಾರ್ಯಕ್ಕೆ ಸಹಾಯ ಮಾಡು.
2. ನನ್ನನ್ನು ಪ್ರಾಕಾರದೊಳಗೆ ಸೇರಿಸು.
3. ಆಮೇಲಿನ ಸಂಗತಿ ನಾನು ನೋಡಿಕೊಳ್ಳುತ್ತೇನೆ.
4. ನಿನ್ನ ಮಗನಿಗೆ ನಾನು ಪಟ್ಟಾಭಿಷೇಕ ಮಾಡುತ್ತೇನೆ.
ಹನುಮಂತನ ಪುರಪ್ರವೇಶ
666) ದುರ್ದಂಡಿ ನಿಟ್ಟುಸಿರು ಬಿಡುತ್ತಾ ಹನುಮಂತನನ್ನು ಹೀಗೆ ಕೊಂಡಾಡಿದಳು.
1. ಶ್ಲೋಕ೤೤
ಅಂಜನಾ ನಂದನಂ ವೀರಂ
ಜಾನಕೀ ಶೋಕ ನಾಶನಮ್‌೤
ಕಪೀಶಮಕ್ಷ ಹಂತಾರಂ
ವಂದೇ ಲಂಕಾ ಭಯಂಕರಮ್‌೤೤
ಅರ್ಥ : ಅಂಜನಾ ದೇವಿಗೆ ಆನಂದಕಾರಕನೂ, ಸೀತಾಮಾತೆಯ ಶೋಕವನ್ನು ಹೋಲಾಡಿಸಿದವನೂ, ಕಪಿಶ್ರೇಷ್ಠನೂ, ಅಕ್ಷ ಕುಮಾರನನ್ನು ಸಂಹರಿಸಿದವನೂ ಲಂಕಾನಗರಕ್ಕೆ ಭಯ ಹುಟ್ಟಿಸಿದವನೂ ಆದ ವೀರ ಹನುಮಂತನಿಗೆ ನಮಸ್ಕರಿಸುತ್ತೇನೆ.
ದುರ್ದಂಡಿ ಆಗಲೇ ಹನುಮಂತನ ಸಮುದ್ರಲಂಘನ, ಅಶೋಕವನ ಧ್ವಂಸ, ಅಕ್ಷಕುಮಾರ ಸಂಹಾರ ಮೊದಲಾದುವುಗಳ ಬಗ್ಗೆ ಕೇಳಿದ್ದಳು.
2. ಆದರೆ ನಿನ್ನನ್ನು ಒಳಗೆ ಕರೆದುಕೊಂಡು ಹೋಗುವುದು ಅಸಾಧ್ಯ.
3. ಶಿವನಿಂದ ಮೈರಾವಣ ಅನೇಕ ವರಗಳನ್ನು ಪಡೆದಿದ್ದಾನೆ.
4. ಮೊದಲ ದ್ವಾರದಲ್ಲೇ ಕಣ್ಣಿಗೆ ಕಾಣಿಸದ ಒಂದು ತಕ್ಕಡಿ ಇದೆ.
5. ಶತ್ರುಗಳು ಯಾರಾದರೂ ಪ್ರವೇಶಿಸಿದಾಗ ಆ ತಕ್ಕಡಿ ಒಂದುಕಡೆ ವಾಲುತ್ತದೆ. ಆಗ ಗಣ ಗಣ ಗಂಟೆ ಹೊಡೆದುಕೊಳ್ಳುತ್ತದೆ.
6. ತಕ್ಷಣ ನಾಲ್ಕೂ ಕಡೆಗಳಿಂದ ಸೈನಿಕರು ಬಂದು ಆ ಶತ್ರುವನ್ನು ನಾಶಮಾಡಿಬಿಡುತ್ತಾರೆ.
7. ಆದ್ದರಿಂದ ಹನುಮಂತಾ! ದಯವಿಟ್ಟು ನೀನೊಬ್ಬನಾದರೂ ನಿನ್ನ ಪ್ರಾಣವನ್ನು ಕಾಪಾಡಿಕೋ. ನನ್ನ ಮಾತು ಕೇಳು.
667) ಹನುಮಂತ ನಕ್ಕು ಹೀಗೆ ಹೇಳಿದ –
1. ಅಮ್ಮಾ ಭಯಪಡಬೇಡ. ಒಂದು ಉಪಾಯ ಹೇಳುತ್ತೇನೆ ಕೇಳು.
2. ನಾನು ಶಮೀಪತ್ರದಷ್ಟು ಚಿಕ್ಕದಾಗಿ ಬಿಡುತ್ತೇನೆ. ನಿನ್ನ ಬಿಂದಿಗೆಯ ಅಂಚಿನಲ್ಲಿ ಕುಳಿತುಕೊಳ್ಳುತ್ತೇನೆ.
ಶ್ಲೋ೤೤
ಶಮೀಪತ್ರಾಕೃತಿಂ ಧೃತ್ವಾ
ಕುಂಭೇಸ್ಮಿನ್ ಪ್ರವಿಶಾಮ್ಯಹಂ
ತ್ವಂ ತತಃ ಪ್ರವಿಶ ದ್ವಾರಂ
ಘಂಟಾನಾದಂ ಭವತ್ವಪಿ
ಸೇನಾ ಅಪಿ ಚ ಆಯಾಂತು
ಪುರೋಂತಃ ಪ್ರವಿಶಾಭಿಯಾ
3. ನೀನು ನೀರಿನ ಕೊಡದೊಡನೆ ದ್ವಾರದೊಳಗೆ ಕಾಲಿಡುತ್ತಲೇ ಗಂಟೆ ಹೊಡೆದುಕೊಳ್ಳುತ್ತದೆ, ಹೊಡೆದುಕೊಳ್ಳಲಿ. ಸೈನ್ಯ ಬರುತ್ತದೆ, ಬರಲಿ.
4. ನೀನು ಮಾತ್ರ ನಿಲ್ಲಬೇಡ. ನೇರವಾಗಿ ಅಂತಃಪುರದೊಳಗೆ ಹೋಗು.
5. ಸೈನಿಕರು ಶತ್ರು ಎಲ್ಲಿ ಎಂದು ಹುಡುಕುತ್ತಲೇ ಇರುತ್ತಾರೆ. ನಾನು ಮಾತ್ರ ನಿನ್ನ ಜೊತೆ ಅಂತಃಪುರದೊಳಕ್ಕೆ ಬಂದುಬಿಡುತ್ತೇನೆ.
6. ಮುಂದಿನ ವಿಷಯ ನನಗೆ ಬಿಡು.
668) ದುರ್ದಂಡಿ ಇದಕ್ಕೆ ಒಪ್ಪಿ, ನೀರಿನ ಕೊಡವನ್ನು ಭುಜದ ಮೇಲಿಟ್ಟುಕೊಂಡಳು. ಹನುಮಂತನು ಶಮೀಪತ್ರದಷ್ಟು ಚಿಕ್ಕ ಆಕೃತಿಯನ್ನು ಧರಿಸಿ, ಕೊಡದ ಒಳ ಅಂಚನ್ನು ಗಟ್ಟಿಯಾಗಿ ಹಿಡಿದುಕೊಂಡು ಕೂತಿದ್ದ.
669) ದುರ್ದಂಡಿ ದ್ವಾರದೊಳಗೆ ಕಾಲಿಡುತ್ತಲೇ ಗಂಟೆ ಮೊಳಗಿತು. ನಾಲ್ಕು ಕಡೆಗಳಿಂದಲೂ ಸೈನಿಕರು ಬಂದರು. ಎಲ್ಲರೂ ಹುಡುಕುತ್ತಿದ್ದಾರೆ. ರಾಜ ಸೋದರಿಯನ್ನು ನೋಡಿ ಪಕ್ಕಕ್ಕೆ ಸರಿದರು. ದುರ್ದಂಡಿ ಒಳಗೊಳಗೇ ಹೆದರುತ್ತಾ ನಡೆಯುತ್ತಿದ್ದಳು.
670) ಹಾಗೆ ಸ್ವಲ್ಪದೂರ ನಡೆದು, ಒಂದು ಅನುಕೂಲಕರವಾದ ಸ್ಥಳಕ್ಕೆ ಬರುತ್ತಲೇ ಹನುಮಂತ ಮೆಲ್ಲಗೆ ಕೊಡದೊಳಗಿಂದ ಹೊರಗೆ ಹಾರಿ, ತನ್ನ ಆಕಾರವನ್ನು ಹಿಗ್ಗಿಸಿಕೊಳ್ಳಲಾರಂಭಿಸಿದ.
671) ಆಕಾಶದಿಂದ ಕಳಚಿ ಬಿದ್ದಂತೆ ವಾನರನೊಬ್ಬನು ಅಂತಃಪುರದ ಬಳಿ ಕಾಣಿಸಿಕೊಂಡಾಗ ರಾಕ್ಷಸ ವೀರಲೆಲ್ಲಾ ಒಮ್ಮೆಲೇ ಹನುಮಂತನ ಮೇಲೆ ಎರಗಿದರು.
672) ಆದರೆ ಹನುಮಂತನು ಕೆಲ ಕ್ಷಣಗಳಲ್ಲೇ ಅವರೆಲ್ಲರನ್ನೂ ಧೂಳೀಪಟ ಮಾಡಿದ.

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share