ಶ್ರೀ ಪಾದ ಶ್ರೀ ವಲ್ಲಭರ ಚರಿತ್ರೆ ಪುಟ -11

645
Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ ಅಧ್ಯಾಯ – 2

ಪುಟ – 11

ನಾನು ನನ್ನ ವಿಶೇಷ ಅದೃಷ್ಟಕ್ಕಾಗಿ ಆಶ್ಚರ್ಯ ಪಡುತ್ತಾ ಶ್ರೀಪಾದವಲ್ಲಭರ ದಿವ್ಯಚರಣಗಳನ್ನು ಎಂದಿಗೂ ಬಿಡಕೂಡದೆಂದು ತೀರ್ಮಾನಿಸಿದೆನು. ಎಂದಿಗೆ ಕುರುವಪುರವನ್ನು ಸೇರುತ್ತೇನೆ ಎಂದು ನನ್ನ ಮನಸ್ಸು ಅತ್ಯಂತ ತವಕ ಪಡುತ್ತಿತ್ತು.
ಮಾರನೆಯ ದಿನ ಬೆಳಗ್ಗೆ ಏಳುತ್ತಿರುವಾಗಲೇ ನಾನು ಸಂಭ್ರಮಾಶ್ಚರ್ಯಗಳಲ್ಲಿ ಮುಳುಗಿ ಹೋದೆ. ಏಕೆಂದರ ನಾನು ಒಂದು ಎತ್ತರದ ಗುಡ್ಡದ ಮೇಲೆ ಇದ್ದ ಅರಳೀಮರದ ಬುಡದ ಬಳಿಯಲ್ಲಿ ಇದ್ದೆನು. ಸುತ್ತಲೂ ಜನಸಂಚಾರವೇ ಇಲ್ಲ, ಹಿಂದಿನ ರಾತ್ರಿ ನಾನು ಸಿದ್ದಯೋಗೀಂದ್ರರ ಆಶ್ರಮದಲ್ಲಿ ಇದ್ದದ್ದು ಬರೀ ಭ್ರಮೆಯೇ ಎಂಬ ಸಂದೇಹವು ನನ್ನ ಮನಸ್ಸಿನಲ್ಲಿ ಭುಗಿಲೆದ್ದು ಕುಣಿಯಿತು. ಶ್ರೀಸಿದ್ದಯೋಗೀಂದ್ರರು ಮಾಯಾವಿಗಳೇ ? ಯಕ್ಷರೇ ? ಮಾಂತ್ರಿಕರೇ ? ಎಂಬ ಅನುಮಾನಗಳು ಹುಟ್ಟಿದವು. ಶ್ರೀಸಿದ್ದಯೋಗೀಂದ್ರರು ದತ್ತ ಪ್ರಭುಗಳನ್ನು ಕುರಿತು ಹೇಳಿದ ವಾಕ್ಯಗಳು ನನ್ನ ಕಿವಿಗಳಲ್ಲಿ ಜೋರಿನಿಂದ ಪ್ರತಿಧ್ವನಿಸುತ್ತಿತ್ತು. ನನ್ನನ್ನು ಈ ರೀತಿಯ ಸಂಕಟ ಸ್ಥಿತಿಯಲ್ಲಿ ಇಡುವುದರಿಂದ ಶ್ರೀಪಾದವಲ್ಲಭರಿಗೆ ಬರುವ ಭಾಗ್ಯವಾದರೂ ಏನು ? ಎಂದು ಕೂಡ ತುಂಬಾ ಆಲೋಚಿಸಿದನು. ಮನಸ್ಸಿನಲ್ಲಿ ವಿಧ ವಿಧವಾದ ಸಂಕಲ್ಪ ದಿನಗಳು ಭುಗಿಲೆದ್ದು ಕುಣಿಯುತ್ತಿದ್ದವು. ನನ್ನ ಗಂಟು ಮೂಟೆಗಳನ್ನು ಹೊತ್ತುಕೊಂಡು ನನ್ನ ಪ್ರಯಾಣವನ್ನು ಮುಂದುವರೆಸಿದನು.
ಬೆಳಗಿನಿಂದ ಮಧ್ಯಾಹ್ನದವರೆಗೆ ಪ್ರಯಾಣವು ಸಾಗಿತು. ಅಷ್ಟು ಹೊತ್ತಿಗೆ ಸಣ್ಣ ಸಣ್ಣ ಮನೆಗಳುಳ್ಳ ಒಂದು ಹಳ್ಳಿಯನ್ನು ನೋಡಿದೆನು. ನನಗೆ ಹಸಿವಿನ ಬಾಧೆ ಹೆಚ್ಚಾಯಿತು. ನಾನು ಹುಟ್ಟಿನಿಂದ ಬ್ರಾಹ್ಮಣನು, ಬ್ರಾಹ್ಮಣರ ಮನೆಯಲ್ಲಲ್ಲದೆ ಬೇರೆ ಕಡೆಯಲ್ಲಿ ಊಟ ಮಾಡುವುದಿಲ್ಲ, ಊಟದ ಸಾಮಗ್ರಿಗಳನ್ನು ಯಾರಾದರೂ ಒದಗಿಸಿದರೆ ನಾನೇ ಅಡುಗೆ ಮಾಡಿಕೊಂಡು ಊಟ ಮಾಡುವುದೆಂದುಕೊಂಡೆನು. ಆ ಹಳ್ಳಿಯಲ್ಲಿ ಯಾರಾದರೂ ಬ್ರಾಹ್ಮಣರು ಇದ್ದಾರೇನೋ ಎಂಬ ಸಂದೇಹವು ಹುಟ್ಟಿ ಅಲ್ಲಿ ವಿಚಾರಿಸಿದೆನು. ಅವರಲ್ಲೊಬ್ಬರು , ” ಸ್ವಾಮಿ ! ನಾವು ಗುಡ್ಡಗಾಡು ಜನರು, ನಾನು ಈ ಹಳ್ಳಿಗೆ ಯಜಮಾನನು. ನಮ್ಮ ಹಳ್ಳಿಯಲ್ಲಿ ಬ್ರಾಹ್ಮಣರು ಯಾರೂ ಇಲ್ಲ ನಿಮಗೆ ಅಭ್ಯಂತರವಿಲ್ಲದಿದ್ದರೆ ನಮ್ಮಿಂದ ಹಣ್ಣು ಮತ್ತು ಜೇನುತುಪ್ಪವನ್ನು ಸ್ವೀಕರಿಸಬಹುದು ” ಎಂದರು. ‘ ಮಾರ್ಗಮಧ್ಯೆ ಶೂದ್ರವದಾಚರೇತ್’ ಮಾರ್ಗಮಧ್ಯದಲ್ಲಿ ಯಾರೋ ಕೊಟ್ಟ, ಏನನ್ನು ತಿಂದರೂ ದೋಷವಿಲ್ಲವೆಂದು ಭಾವಿಸಿದನು. ಅವರು ಗುಡ್ಡಗಾಡು ಪ್ರದೇಶದಲ್ಲಿ ಲಭ್ಯವಾಗುವ ಹಣ್ಣುಗಳನ್ನೂ ಜೇನುತುಪ್ಪವನ್ನು ತಂದು ನನ್ನೆದುರಿಗೆ ಇಟ್ಟರು. ನಾನು ತಿನ್ನುವಷ್ಟರಲ್ಲಿಯೇ ಎಲ್ಲಿಂದಲೋ ಒಂದು ಕಾಗೆಯು ಬಂದು ನನ್ನ ತಲೆಯ ಮೇಲೆ ಕುಕ್ಕಲು ಪ್ರಾರಂಭಿಸಿತು. ನಾನು ಅದನ್ನು ಓಡಿಸಲು ಪ್ರಯತ್ನ ಪಟ್ಟರೂ ಏನೂ ಪ್ರಯೋಜನವಾಗಲಿಲ್ಲ. ಇಷ್ಟರಲ್ಲಿ ಮತ್ತಷ್ಟು ಕಾಗೆಗಳು ಬಂದು ತಮಗೆ ಇಷ್ಟ ಬಂದ ಕಡೆ ನನ್ನ ದೇಹವನ್ನು ಕುಕ್ಕಲು ಮೊದಲು ಮಾಡಿದವು. ನಾನು ಭಯದಿಂದ ಓಡಲು ಪ್ರಾರಂಭಿಸಿದನು. ಅವು ನನ್ನ ಹಿಂದೆಯೇ ಹಾರಿಬರುತ್ತಿವೆ ! ಆ ಹಳ್ಳಿಯ ಜನರಲ್ಲಿ ಯಾರೂ ನನ್ನ ಸಹಾಯಕ್ಕೆ ಬರಲೇ ಇಲ್ಲ, ನನ್ನ ಹತ್ತಿರ ಈ ಮೊದಲು ಮಾತಾಡಿದ ಆ ಹಳ್ಳಿಯ ಯಜಮಾನನು, “ ಆಹಾ ! ಏನಾಶ್ಚರ್ಯ ! ನಮ್ಮ ಪ್ರಾಂತದಲ್ಲಿ ಕಾಗೆಗಳು ಯಾರಿಗೂ ಹಾನಿಮಾಡುವುದಿಲ್ಲ. ನಿಮ್ಮ ಮೇಲೆ ಇಷ್ಟು ಉಗ್ರರೂಪದಿಂದ ಧಾಳಿ ಮಾಡುತ್ತಿರುವುದನ್ನು ನೋಡಿ ನಮಗೇ ಆಶ್ಚರ್ಯವಾಗುತ್ತಿದೆ. ನೀವು ಯಾರಾದರೂ ಸಿದ್ಧಪುರುಷರನ್ನು ನಿಂದಿಸಿಯೋ, ಅವಮಾನಿಸಿಯೋ ಇರಬೇಕು. ಅವರ ಶಾಪ ಫಲಿತವಾಗಿ ಈ ರೀತಿಯ ಶಿಕ್ಷೆಯನ್ನು ಹೊಂದುತ್ತಿದ್ದೀರಿ. ನಾವು ಅಡ್ಡಿಪಡಿಸಿದರೆ ನಾವೂ ಸಹ ಋಷೀಶ್ವರರ ಆಗ್ರಹಕ್ಕೆ ಗುರಿಯಾಗಬಹುದು . ಆದ್ದರಿಂದ ನಾವು ದೈವಲೀಲೆಯ ಈ ಘಟನೆಯ ಮಧ್ಯೆ ಪ್ರವೇಶಿಸಲು ಇಷ್ಟಪಡುತ್ತಿಲ್ಲ. ತಾವು ತಪ್ಪು ತಿಳಿದುಕೊಳ್ಳಬಾರದು” ಎಂದು ನಮ್ರತೆಯಿಂದ ಹೇಳಿದನು
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 12

ಕೆಟ್ಟದ್ದೆಲ್ಲ ಮಾಡಿದೆ –
ಹೊಟ್ಟೆ ಪಾಡಿಗಾಗಿ,
ಇತರರ ಹೊಟ್ಟೆ ಹೊಡೆದೆ –
ನಿನ್ನ ಹೊಟ್ಟೆ ತುಂಬಿಸಿದೆ.
ಕೆಟ್ಟು ಹೋಯಿತು ಹೊಟ್ಟೆ,
ಕೆಟ್ಟೆ ಕೆಟ್ಟೆ ಎಂದು ಹುಯಿಲಿಟ್ಟೆ.
ಬಟ್ಟೆದೋರಿಸು ಪ್ರಭುವೆ ಕನಿಕರಿಸಿ ಎನಗೀಗ
ಪರಮ ಕರುಣಾಳು ಗುರು – ಸಚ್ಚಿದಾನಂದ.

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share