ಸಂಪಾದಕೀಯ – ಇನ್ನು ಮುಂದೆ ಸಾಮರ್ಥ್ಯರಿಗಷ್ಟೆ ರಾಜಕೀಯ ಭವಿಷ್ಯ

81
Share

ಲೋಕಸಭಾ ಚುನಾವಣೆಯಲ್ಲಿ. ಎಲ್ಲಾ ಪಕ್ಷದವರು ಅಬ್ಬರದಿಂದ ಪ್ರಚಾರ ನಡೆಸುತ್ತಿದ್ದು. ಆದರೆ ಈ ಚುನಾವಣೆಯಲ್ಲಿ ಕೇಳಿಬರುತ್ತಿರುವ ಒಂದು ಹೊಸ ಅಂಶ ಟಾರ್ಗೆಟ್ ನೀಡುತ್ತಿರುವುದು.
ಕರ್ನಾಟಕದ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಒಳ್ಳೇ ಲೀಡ್ ನಲ್ಲಿ ಗೆಲ್ಲಿಸದಿದ್ದಲ್ಲಿ ಅವರವರ ಕುರ್ಚಿಗೆ ಸಂಚಕಾರ ಎನ್ನುವ ಮಾತು ಬಹಳ ಸದ್ದು ಮಾಡುತ್ತಿದೆ. ಕಾಂಗ್ರೆಸ್ ನಲ್ಲಿ ನಾಯಕರು ಪಣತೊಟ್ಟು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಇವರು ಗೆದ್ದು ಸ್ಥಾನ ಉಳಿಸಿಕೊಳ್ಳುತ್ತಾರೋ ಅಥವ ಚುನಾವಣೆ ಹಾಗೂ ಈಗಿರುವ ಸ್ಥಾನ ಎರೆಡೂ ಕಳೆದುಕೊಳ್ಳುತ್ತಾರೋ ಸ್ವಲ್ಪ ದಿನದಲ್ಲೆ ಗೊತ್ತಾಗುತ್ತದೆ.
ಹಿಂದೆಲ್ಲ ಶಾಸಕರು, ಸಂಸದರು ಒಮ್ಮೆ ಚುನಾವಣೆ ಮುಗಿಯಿತೆಂದರೆ ಮತ್ತೆ ಮುಂದಿನ ಚುನಾವಣೆ ತನಕ ಅವರ ಮುಖವನ್ನೇ ಕ್ಷೇತ್ರದಲ್ಲಿ ತೋರಿಸುತ್ತಿರಲಿಲ್ಲ. ಆದರೆ ಈ ಬದಲಾವಣೆ ನೋಡಿದರೆ ಕ್ಷೇತ್ರದ ಅಭಿವೃದ್ಧಿ ಮಾಡುವುದಕ್ಕೂ ಪಕ್ಷಗಳು ಟಾರ್ಗೆಟ್ ನೀಡುವ ಸಮಯ ದೂರವಿಲ್ಲ ಎನ್ನಿಸುತ್ತದೆ. ಕಾರ್ಪೊರೇಟ್ ಮಾದರಿ ರಾಜಕೀಯದಲ್ಲೂ ಪ್ರವೇಶಿಸುವ ಎಲ್ಲ ಸೂಚನೆಗಳು ಕಂಡು ಬರುತ್ತಿವೆ.
ಕ್ಷೇತ್ರದ ನಾಯಕರು ಒಬ್ಬರಾದರೆ ಅವರ ಚಲನವಲನಗಳನ್ನು ಗಮನಿಸುವವರು ಸಾಕಷ್ಟು ಜನ. ಮೀಡಿಯಾ, ಸಾಮಾಜಿಕ ಜಾಲತಾಣ, ಜನ ಸಾಮಾನ್ಯರು ಗಮನಿಸುತ್ತಲೇ ಇರುತ್ತಾರೆ. ಇಷ್ಟು ಜನರ ಕಣ್ತಪ್ಪಿಸಿ ಇರುವುದು ಅಷ್ಟೊಂದು ಸುಲಭದ ಮಾತಲ್ಲ.
  ಅಷ್ಟು ನುಂಗಿದರು ಇಷ್ಟಾದರೂ ಅಭಿವೃದ್ಧಿ ಆಗುವ ಸೂಚನೆಗಳು ಕಂಡು ಬರುತ್ತಿವೆ. ಒಟ್ಟಿನಲ್ಲಿ ಭಾರತ ದೇಶವು ಸುಭದ್ರ ಹಾಗೂ ಅಭಿವೃದ್ಧಿ ಭಾರತದತ್ತ ದಾಪುಗಾಲು ಹಾಕದಿದ್ದರೂ ಅಂಬೆಗಾಲಾದರೂ ಇಡುತ್ತಿದೆ ಎಂದು ಹೇಳಬಹುದು. ‘ Survival of the fittest ‘ ಡಾರ್ವಿನ್ ತಿಯರಿಯಂತೆ ಬಲಿಷ್ಠರು , ಸಾಮರ್ಥ್ಯರಿಗಷ್ಟೆ ರಾಜಕೀಯ ಭವಿಷ್ಯ ಎನ್ನುವುದು ನಾಯಕರೂ ಅರಿತುಕೊಳ್ಳಲೇ ಬೇಕಾದ ಸಮಯ ಬಂದಿದೆ.


Share