MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 158

716
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 158

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

855 . ಓಂ ಪಂಚಾಕ್ಷರಾತ್ಮನೇ ನಮಃ
856 . ಓಂ ಪಂಚಾತ್ಮನೇ ನಮಃ
857 . ಓಂ ಪಂಚಾಸ್ಯಾಯ ನಮಃ
858 . ಓಂ ಪಂಚಕೃತ್ಯಕೃತೇ ನಮಃ
859 . ಓಂ ಪಂಚಾಧಾರಾಯ ನಮಃ

855. ಓಂ ಪಂಚಾಕ್ಷರಾತ್ಮಾ-
ಭಾ: ನಾದಬಿಂದು ಮಕಾರೋಕಾರಾಕಾರಾಃ ಪ್ರಣವಸ್ಥಿತಾಃ|
ತಚ್ಛರೀರಮತಃ ಪಂಚಾಕ್ಷರಾತ್ಮಾ ಪರಿಕೀರ್ತ್ಯಸೇ||
ನಾದ, ಬಿಂದು, ಅಕಾರ, ಉಕಾರ, ಮಕಾರಗಳೆಂಬ ಐದು ಅಂಶಗಳು ಸೇರಿದರೆ ಪ್ರಣವಮಂತ್ರ (‘ಓಂ’ಕಾರ) ವಾಗುವುದು.
ಹೇ ಗಣೇಶ! ಪ್ರಣವದ ಆ ಐದು ಅಂಶಗಳು ನಿನ್ನ ಶರೀರವೇ ಆದ್ದರಿಂದ ನೀನು ಪಂಚಾಕ್ಷರಾತ್ಮ ಎಂದು ಕೀರ್ತಿಸಲ್ಪಡುತ್ತೀಯೆ.
ಓಂ ಪಂಚಾಕ್ಷರಾತ್ಮನೇ ನಮಃ

856. ಓಂ ಪಂಚಾತ್ಮಾ-
ಭಾ: ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ|
ಯಸ್ಯೈತೇ ವಿಗ್ರಹಾಃ ಪಂಚ ಸ ಪಂಚಾತ್ಮೇತಿ ಗೀಯಸೇ||
ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಇವರನ್ನು ಪಂಚಬ್ರಹ್ಮರೆಂದು ಕರೆಯುತ್ತಾರೆ. ಗಣೇಶನು ಪಂಚಬ್ರಹ್ಮ ಸ್ವರೂಪನಾದ್ದರಿಂದ ಪಂಚಾತ್ಮನು.
ಓಂ ಪಂಚಾತ್ಮನೇ ನಮಃ

857. ಓಂ ಪಂಚಾಸ್ಯಃ-
ಭಾ: ವಿಸ್ತೀರ್ಣಂ ವದನಂ ಯಸ್ಯ ಬ್ರಹ್ಮಾಂಡ ಕಬಲಕ್ಷಮಮ್‌|
ಪಚೇರ್ವಿಸ್ತಾರ ವಾಚಿತ್ವಾ-ತ್ಸ ಪಂಚಾಸ್ಯ ಇತಿ ಸ್ಮೃತಃ||
ವಿಸ್ತಾರವೆಂಬ ಅರ್ಥವಿರುವ ‘ಪಚ’ ಧಾತುವಿನಿಂದ ‘ಪಂಚ’ ಶಬ್ದವು ವ್ಯುತ್ಪನ್ನವಾಗಿದೆ. ಗಣೇಶನು ಪಂಚಾಸ್ಯನು. ಬ್ರಹ್ಮಾಂಡವನ್ನೇ ನುಂಗಿಹಾಕುವಷ್ಟು ವಿಸ್ತೀರ್ಣವಾದ ಮುಖದಿಂದ ಕೂಡಿದವನು.
ಓಂ ಪಂಚಾಸ್ಯಾಯ ನಮಃ

858. ಓಂ ಪಂಚಕೃತ್ಯಕೃತ್-
ಭಾ: ಸೃಷ್ಟಿಃ ಸ್ಥಿತಿಶ್ಚ ಸಂಹಾರಸ್ತಿರೋಧಾನಮನುಗ್ರಹಃ|
ಬ್ರಹ್ಮಾದಿರೂಪೈರೇತಾನಿ ಕುರ್ವಾಣಃ ಪಂಚಕೃತ್ಯಕೃತ್‌||
ಬ್ರಹ್ಮಾದಿ ರೂಪಗಳನ್ನು ತಾಳಿ, ಸೃಷ್ಟಿಸುವುದು, ರಕ್ಷಿಸುವುದು, ಪ್ರಳಯಮಾಡುವುದು, ಮರೆಮಾಡುವುದು, ಅನುಗ್ರಹಿಸುವುದು ಎಂಬ ಈ ಐದು ಕೃತ್ಯ(ಕೆಲಸ)ಗಳನ್ನು ಮಾಡುತ್ತಾನಾದ್ದರಿಂದ ಗಣೇಶನು ಪಂಚಕೃತ್ಯಕೃತ್.
ಓಂ ಪಂಚಕೃತ್ಯಕೃತೇ ನಮಃ
ಪಂಚಾಧಾರಃ ಪಂಚವರ್ಣಃ ಪಂಚಾಕ್ಷರ ಪರಾಯಣಃ|
ಪಂಚತಾಲಃ ಪಂಚಕರಃ ಪಂಚ ಪ್ರಣವಭಾವಿತಃ||

859. ಓಂ ಪಂಚಾಧಾರಃ-
ಭಾ: ಪಂಚಾಧಾರೋsಸಿ ಭೂತಾನಾಂ ಪಂಚಾನಾಮಪಿ ಧಾರಕಃ|
ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಎಂಬೀ ಐದು ಭೂತಗಳಿಗೂ ಆಧಾರಭೂತನಾದ್ದರಿಂದ ಪಂಚಾಧಾರನು.
ಓಂ ಪಂಚಾಧಾರಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share