M.P. ಫೋಕಸ್ – ಬರೆದೆನೆಂದರೂ ಏನನ್ನಾ ಬರೆಯಲಿ……ಅಪ್ಪು………!

58
Share

 

*ಬರೆದೆನೆಂದರೂ ಏನನ್ನಾ ಬರೆಯಲಿ……ಅಪ್ಪು………!*

ಕೋಟಿ ಪದಗಳು ಸಾಲದು‌ ಕನ್ನಡಿಗರ ಕೋಟ್ಯಾಧಿಪತಿಯ ವರ್ಣಿಸಲು. ನಾನು ಸಾಕಷ್ಟು‌ ಬಾರಿ‌ ಶಪಿಸಿದ್ದೇನೆ ಆ ವಿಧಿಯನ್ನು, ಜೊತೆಗೆ ಆ ಕಾಲನನ್ನು. ಅಪ್ಪು ಸಾವನ್ನಪ್ಪಿದಾಗಲೂ ಮತ್ತೊಮ್ಮೆ ಅದೇ ರಿಪೀಟ್ ಆಗಿತ್ತು. ಆಗ ನೆಪವಾಗಿದ್ದು ಕನ್ನಡದ ಕಣ್ಮಣಿ ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಸಾವು. ನಿಜಕ್ಕೂ ಬರೆಯಲು ಪದಗಳೇ ಸಿಗುತ್ತಿರಲಿಲ್ಲ. ಹೃದಯ ತುಂಬಿ ಬರುತ್ತಿತ್ತು. ಯಾಕಂದ್ರೆ ಅಪ್ಪು ಬಗ್ಗೆ ಬರೆಯಲು ಪದಗಳು ತಲೆಯಿಂದಲ್ಲ, ಹೃದಯದಿಂದ ಬರಬೇಕಿತ್ತು. ಇಂತಹ ವೇಳೆ ಹೇಗೆ ಬರಲು ಸಾಧ್ಯ… ನೀವೆ ಹೇಳಿ ? ಹೃದಯದ ಬಗ್ಗೆ ಯೋಚಿಸಲು ಮನಸ್ಸಾಗುತ್ತಿರಲಿಲ್ಲ. ಯಾಕಂದ್ರೆ ನನ್ನ ಪ್ರೀತಿಯ ಅಪ್ಪುವಿನ ಸಾವಿಗೆ ಕಾರಣವಾಗಿದ್ದೇ ಆ ಹೃದಯ.

*ನಾಚಿ ನೀರಾಗುತ್ತಿದ್ದ ಅಪ್ಪು….*

ನನ್ನ ಪ್ರೀತಿಯ ಅಪ್ಪು ಸರಳತೆಯ *ರಾಜಕುಮಾರ,* ಸಜ್ಜನಿಕೆಯ *ಅರಸು,* ಮಾನವೀಯತೆಯ
*ಪರಮಾತ್ಮ,* ಅಕ್ಕರೆಯ *ದೊಡ್ಡ ಮನೆ ಹುಡ್ಗ,* ಯುವಕರ ಪಾಲಿನ *ಯುವರತ್ನ,* ಪ್ರೀತಿಯ *ಆಕಾಶ* ಹೀಗೆ ಅಪ್ಪು ನಾನಾ ರೂಪ ನೋಡಿದವರಿಗೆ ಅಪ್ಪು ತೆರೆಯ ಮೇಲೆ ಅಬ್ಬರಿಸಿ ಆರ್ಭಟಿಸುವ *ಅಣ್ಣಾಬಾಂಡ್,* ಪಂಚಿಂಗ್ ಡೈಲಾಗ್‌ಗಳ ಉದ್ದ ನೋಡದೆ ಭಾವಪೂರ್ಣವಾಗಿ ಪಟ ಪಟನೇ‌ ಹೇಳುವ *ಬಿಂದಾಸ್* ನಟ. ಸ್ಟೇಜ್ ಸಿಕ್ಕರೆ ಸಾಕು‌ ಕಾಲುಗಳು ಹಿಡಿತ ತಪ್ಪಿದಂತೆ ಕುಣಿದು ಕುಪ್ಪಳಿಸುತ್ತಿದ್ದ ಆ *ಪವರ್* ಎಲ್ಲರಿಗೂ ಗೊತ್ತಿರುವುದೇ. ಆದರೆ ಇದನ್ನು ಮೀರಿ ಬಹುತೇಕರಿಗೆ ಗೊತ್ತಿರದ ಅಥವಾ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಕಾಣ ಸಿಗುತ್ತಿದ್ದ ಅಪ್ಪುವಿನ ಮತ್ತೊಂದು ಗುಣವೇ ನನಗೆ ತುಂಬಾ ಇಷ್ಟವಾಗುತ್ತಿತ್ತು. ಅದುವೇ ನನ್ನ ಅಪ್ಪುವಿನ ಅಪರೂಪದ ಹಾಗೂ ನನ್ನ ಮೆಚ್ಚಿನ ಸಂಕೋಚದ ಸ್ವಭಾವ.

*ನಾಚಿ‌ ನೀರಾಗುತ್ತಿದ್ದ ಅಪ್ಪು….*

ಸಂಕೋಚಕ್ಕೂ ಸಂಕೋಚವಾಗುವಷ್ಟು ನಾಚಿಕೊಳ್ಳುತ್ತಿದ್ದರು ನನ್ನ ಅಪ್ಪು. ಅಪ್ಪುವನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬಹುತೇಕರ ಗಮನಕ್ಕೆ‌ ಇದು ಬಂದಿರುತ್ತದೆ. ಪುನೀತ್ ರಾಜಕುಮಾರ್ ಅತ್ಯಂತ ಸಂಕೋಚ ಸ್ವಭಾವದವರಾಗಿದ್ದರು. ಅವರು ಆಡುತ್ತಿದ್ದ ಪ್ರತಿ ಮಾತಿನಲ್ಲೂ ಒಂದು ಪ್ರಬುದ್ದತೆಯಿತ್ತು. ಅವರ ಮಾತು ಕೇಳುಗರನ್ನು ಸೂಜಿಗಲ್ಲಿನಂತೆ ಸೆಳೆಯುತಿತ್ತು. ಆಳವಾದ ಚಿಂತನೆಗೆ ಒಳಪಡಿಸುತಿತ್ತು. ಅದರ ಹಿಂದೆ ಇದ್ದದ್ದು ಅವರು ಬೆಳೆದು ಬಂದ ಹಾದಿ, ಕಲಿತ ಸಂಸ್ಕಾರ ಹಾಗೂ ಸಂಸ್ಕೃತಿ. *ನಟ ಸಾರ್ವಭೌಮ* ನ ಮಗನಾದರೂ‌ *ಆಕಾಶ* ದೆತ್ತರಕ್ಕೆ ಬೆಳೆದಿದ್ದರು. ಅವರ ಕಾಲುಗಳು *ಪೃಥ್ವಿ* ಯಲ್ಲೇ ಇದ್ದವು. ಎಂದೂ ಸಜ್ಜನಿಕೆಯ ಗುಣವನ್ನು ಮರೆತವರಲ್ಲ. ಅವರು ಆಡಿದ ಮಾತು ಎಂದು ಹದ್ದು ಮೀರಲಿಲ್ಲ. ಅಪ್ಪಿ ತಪ್ಪಿಯೂ ವಿವಾದಕ್ಕೆ ಕಾರಣವಾಗಲಿಲ್ಲ. ಅಳೆದು ತೂಗಿ‌ ಮಾತನಾಡುತ್ತಿದ್ದ ಅಪ್ಪು ಬಹುತೇಕ ಸಂದರ್ಭಗಳಲ್ಲಿ ತಾವಾಡಿದ ಮಾತಿಗೆ ತಾವೇ ನಾಚಿ‌ ನೀರಾಗುತ್ತಿದ್ದರು. ಆ ಭಾವ ನಿಜಕ್ಕೂ ಅದ್ಬುತ, ಅಮೋಘ. ಇಂತಹ ಭಾವವನ್ನು ನಾನು ಮತ್ತೊಬ್ಬ ನಟನಲ್ಲಿ ಕಂಡಿಲ್ಲ.

*ತೆರೆಯ ಮೇಲೆ, ತೆರೆಯ ಹಿಂದೆ*

ಬಹುತೇಕ ನಟರು ತೆರೆಯ ಮೇಲೆ ಇರುವಂತೆ ನಿಜ ಜೀವನದಲ್ಲಿ ಇರುವುದಿಲ್ಲ. ಆದರೆ ಅಪ್ಪು ತೆರೆಯಲ್ಲಿಯೂ *ರಾಜ* ನಂತಹ ಗುಣವನ್ನು ಹೊಂದಿದ್ದರು. ತೆರೆಯ ಹಿಂದೆ ನಿಜ ಜೀವನದಲ್ಲೂ *ರಾಮ* ನಂತೆಯೇ ಇದ್ದರು. ಎಲ್ಲರ ಪಾಲಿನ *ಭಾಗ್ಯವಂತ* ರಾಗಿದ್ದರು. ಇದಕ್ಕೆ ಸಾಕ್ಷಿ ಅವರು ವಿಧಿ ವಶರಾದ ನಂತರ ಗೊತ್ತಾದ ಅವರ ಸಮಾಜಮುಖಿ ಕೆಲಸಗಳು. ಅವರು ಮಾಡಿದ ಕಾರ್ಯಗಳನ್ನು ನೋಡಿದರೆ ಅಬ್ಬಾ ಆತ *ಭೂಮಿಗೆ ಬಂದ ಭಗವಂತ* ಅನ್ನಿಸದೆ ಇರಲಾರದು. ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಲೆಕ್ಕವಿಲ್ಲದಷ್ಟಿವೆ ಅವೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋ ಮಾತನ್ನು ಅಕ್ಷರಶಃ ಪಾಲಿಸಿದ *ಭಕ್ತ ಪ್ರಹ್ಲಾದ* ಅವರು. ಇನ್ನು ಅವರು ಬದುಕಿದ್ದರೆ ಅಪ್ಪು ಜೀವಮಾನದ ಕನಸು *ಡಾ ರಾಜ್ ಲರ್ನಿಂಗ್* ಆ್ಯಪ್ ಬಿಡುಗಡೆಯಾಗುತಿತ್ತು. ಶಿಕ್ಷಣದಿಂದ ವಂಚಿತರಾಗಿದ್ದವರಿಗಾಗಿ ಅದರಲ್ಲೂ ಗ್ರಾಮೀಣ ಭಾಗದ ಅನ್ನದಾತನ ಹೆಣ್ಣು ಮಕ್ಕಳು ಹಾಗೂ ಕೂಲಿ ಕಾರ್ಮಿಕರ ಹೆಣ್ಣು ಮಕ್ಕಳು ಸೇರಿದಂತೆ ಶಿಕ್ಷಣ ವಂಚಿತರಾದ ಎಲ್ಲರಿಗೂ ಶಿಕ್ಷಣ ಕೊಡಿಸುವ ಮಹಾ ಆಶಯದ ಅತ್ಯದ್ಭುತ ಪರಿಕಲ್ಪನೆಯ ಯೋಜನೆಯಿದಾಗಿತ್ತು. ಆದ್ರೆ ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ.‌ ಆದರೆ ಸಾವು ಅಂತ್ಯವಲ್ಲ ಸಾವಿನಾಚೆಗೆ ಬದುಕಬಹುದು ಅನ್ನೋ ಮಾತಿದೆ. ವ್ಯಕ್ತಿಯ ದೇಹಕ್ಕೆ ಸಾವೇ ಹೊರತು ಆತನ ವ್ಯಕ್ತಿತ್ವ ಹಾಗೂ ಆತನ ಚಿಂತನೆಗಳಿಗಲ್ಲ ಅನ್ನುವುದು ಅಪ್ಪು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪುನೀತ್ ಕನಸನ್ನು ನಾನು ಸಾಕಾರಗೊಳಿಸುತ್ತೇನೆ ಅಂತಾ ಸಾಕಷ್ಟು ಜನ ಕೈ ಜೋಡಿಸಿದ್ದಾರೆ. ಅದರಲ್ಲೂ ತಮಿಳಿನ ಯುವ ನಟ ವಿಶಾಲ್ ಸಹಾ ಒಬ್ಬರು. ಅವರ ಅಂದು ಹೇಳಿದ ಮಾತುಗಳು ಅಪ್ಪುವಿನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಅದರಲ್ಲೂ ಅವರು ಬಳಸಿದ ಪದಗಳು ಜಸ್ಟ್ ವಾವ್

*From next year i will take care of those 1800+ students on behalf of my brother….*

ಹೌದು ಇದು ನಿಜವಾದ ಅಪ್ಪು. ಇದು ಅಪ್ಪು ಮಾಡಿದ ಸಾಧನೆ.

*ಸ್ವ ಅನುಭವ……..ಅಪ್ಪು ಜೊತೆ ಮೊದಲ ಶೂಟ್*

ನಾನು ಅಪ್ಪು ಅವರನ್ನು ಸಾಕಷ್ಟು ಬಾರಿ‌ ಭೇಟಿಯಾಗಿದ್ದೇನೆ. ಅವರ ಸಂದರ್ಶನ‌ ಮಾಡಿದ್ದೇನೆ, ಮಾತನಾಡಿದ್ದೇನೆ. ನಾ ಕಂಡ ಅತ್ಯಂತ ಸರಳ‌ ಸಜ್ಜನ ನಟ ಪುನೀತ್. ಅದು 2010 ನಾನು‌ ಕೆಲಸಕ್ಕೆ ಸೇರಿ 1 ವರ್ಷವಾಗಿತ್ತು. ನನಗೆ ಅತ್ಯಂತ ಕಷ್ಟ ಅನಿಸಿದ್ದು ಸಿನಿಮಾದವರ ಬೈಟ್ ತೆಗೆದುಕೊಳ್ಳುವುದು. ಆಗ ತಾನೇ *ಪೃಥ್ವಿ* ಸಿನಿಮಾ‌ ಬಿಡುಗಡೆಯಾಗಿತ್ತು. ಗಣಿಗಾರಿಕೆಯ ಕಥಾ ಹಂದರದ ಚಿತ್ರದಲ್ಲಿ ಅಪ್ಪು ಜಿಲ್ಲಾಧಿಕಾರಿ‌ ಪಾತ್ರ ನಿರ್ವಹಿಸಿದ್ದರು. ಇದು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಮಾಜಿ ಪ್ರಧಾನಿ ಹೆಚ್ ಡಿ‌ ದೇವೇಗೌಡ ಸೇರಿ ಗಣ್ಯಾತೀಗಣ್ಯರು ಸಿನಿಮಾ‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವತ್ತು ಅಪ್ಪು ಮೈಸೂರಿನ ಸದರನ್ ಸ್ಟಾರ್ ಹೋಟೆಲ್‌ನಲ್ಲಿದ್ದರು. ನಮ್ಮ ಸಿನಿಮಾ‌ ಬ್ಯೂರೋದವರು ಅದಗಾಲೇ ಅಪ್ಪು ಜೊತೆ ಮಾತನಾಡಿದ್ದರು. ನಾನು ಹಾಗೂ ನನ್ನ ಕ್ಯಾಮೆರಾಪರ್ಸನ್ ಹೇಮಂತ್ ಕುಮಾರ್ ಅಂಜುತ್ತಲೆ ಅಳುಕುತ್ತಲೆ‌ ಅಲ್ಲಿಗೆ ಹೋದೆವು. ಇದಕ್ಕೆ ಕಾರಣ ಸಹಾ ಇದೆ. ಇದಕ್ಕಿಂತ ಮುಂಚೆ ನಾನು ಒಂದಷ್ಟು ಸ್ಟಾರ್ ನಟರ ಸ್ಟೋರಿಗೆ ಹೋಗಿದ್ದೆ. ಅಲ್ಲಿಂದ ಬರುವಷ್ಟರಲ್ಲಿ ಹೈರಾಣಾಗಿದ್ದೆ. ಅದರಲ್ಲೂ ಕೆಲವರಂತೂ ಅದೇನೋ ಆನೆ ನಡೆದಿದ್ದೆ ದಾರಿ ಅನ್ನೋ ರೀತಿ ಯಾವುದಕ್ಕೂ ಸಹಕಾರ ಕೊಡುತ್ತಿರಲಿಲ್ಲ. ಲೈಟಿಂಗ್ ಸರಿಯಿಲ್ಲ ಅಂದ್ರೂ ಒಮ್ಮೆ ಕುಳಿತ ಕುರ್ಚಿಯಿಂದ ಅಲುಗಾಡುತ್ತಿರಲಿಲ್ಲ. ಕೇಳಿಕೊಂಡರು, ಮನವಿ ಮಾಡಿದರೂ ನೋ ಚೇಂಜ್. ಇನ್ನು ನಾವು ಹೋದ 5 ನಿಮಿಷದಲ್ಲಿ ಅಪ್ಪು ಲಾಬಿಗೆ ಬಂದರು. *( ನಿಮಗೆ ಗೊತ್ತಿರಲಿ ಈ ಹಿಂದೆ ಹಾಗೂ ಈಗಲೂ ಗಂಟೆ ಗಟ್ಟಲೇ ಕಾಯಿಸುವವರೇ ಹೆಚ್ಚು )* ನಾನು ಕೂತಿದ್ದವನು ಎದ್ದು ನಿಂತೆ. ನಾನು ಸರ್ ಅದು ಬೆಂಗಳೂರು ಅಂದೇ…. ಹೂಂ ಹೇಳಿದ್ದಾರೆ ಬನ್ನಿ ಶುರು ಮಾಡೋಣ್ವಾ ಅಂದ್ರು. ಹೂ ಸರ್ ಅಂದೆ. ಅವರು ಲಾಬಿಯ ಸೋಪಾ ಮೇಲೆ ಕುಳಿತರು. ಕುಳಿತವರೇ ಮೊದಲು ಕೇಳಿದ ಪ್ರಶ್ನೆ. ಲೈಟಿಂಗ್ ಸರಿ ಇದೆಯಾ ? ಅಥವಾ ಆ ಕಡೆ ಕುಳಿತುಕೊಳ್ಳಲಾ ? ಆ ಕ್ಷಣವೇ ನಾನು ಅವರಿಗೆ ಫಿದಾ ಆಗಿ ಹೋದೆ. ಅದಾದ ನಂತರ ನಾನು ಲ್ಯಾಪಲ್ ಮೈಕ್ ಹಾಕಲು ಮುಂದಾದೆ ಆಗ ಅವರು ಕೊಡಿ ನಾನೇ ಹಾಕಿಕೊಳ್ಳುತ್ತೇನೆ ಅಂತಾ ಹಾಕಿಕೊಂಡರು. ತಾವೇ ಸ್ವತಃ ಆಡಿಯೋ ಟೆಸ್ಟ್ ಕೊಟ್ಟರು. ಸುಮಾರು ಅರ್ಧ ಗಂಟೆ ನಾನು ಸಿನಿಮಾ ಬಗ್ಗೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದರು. ನನಗೆ ಜಾಸ್ತಿ ಸಮಯ ತೆಗೆದುಕೊಂಡೆ ಅನಿಸಿದರು ಅಪ್ಪು ಮಾತ್ರ ಈ ಬಗ್ಗೆ ಎಳ್ಳಷ್ಟು ಚಿಂತಿಸಲಿಲ್ಲ. ಅಪ್ಪು ಬೈಟ್ ತೆಗದುಕೊಂಡ ಮರುಕ್ಷಣವೇ ಯಾವುದೇ ನಾಯಕ ನಾಯಕಿಯನ್ನು ನನ್ನ ಫೇವರೇಟ್ ಅಂದುಕೊಳ್ಳದವನು ಅಪ್ಪು ಅವರನ್ನು ನನ್ ಫೇವರೇಟ್ ಅಂದುಕೊಂಡೆ. ಇದಾದ ನಂತರ ಸಾಕಷ್ಟು ಬಾರಿ ಅಪ್ಪು ಅವರನ್ನು ಭೇಟಿಯಾಗಿದ್ದೇನೆ. ಚಾಮುಂಡಿ ಬೆಟ್ಟ ಹತ್ತುವುನ್ನು ಶೂಟ್ ಮಾಡಲು ಹೋದಾಗ, ನಾನು ಯಾರಿಗೂ ಹೇಳ್ದೆ ಬಂದಿದ್ದೀನಿ ಅದೇಗೆ ನಿಮ್ಗೆ ಗೊತ್ತಾಗಿ ಬಿಡುತ್ತೇ ! ಸರಿಯಿಲ್ಲ ನೀವು ಅಂತಾ ಕಿಚಾಯಿಸಿದ್ದಾರೆ. ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಇದೇ ಕಾರಣಕ್ಕೂ ಏನೋ ನನಗೆ ಈಗಲೂ ಅಪ್ಪು ಇಲ್ಲ ಅಂತಾ ನೆನೆದರೆ ಸಾಕು ಗಂಟಲು ಉಬ್ಬುತ್ತಿದೆ. ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದೆ. ಅದರಲ್ಲೂ ಅವರ ಬಗ್ಗೆ ಅವರಿವರು ಹೇಳುವುದನ್ನು ಕೇಳಿದರೆ ಅದು ಇಮ್ಮಡಿಯಾಗುತ್ತಿದೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಇಷ್ಟು ವರ್ಷಕ್ಕೆ ನ್ಯೂಸ್ ಚಾನೆಲ್‌ನಲ್ಲಿ ನ್ಯೂಸ್ ನೋಡಲು ಸಂಕಟವಾಗಿದ್ದು ಇದೇ ಮೊದಲು .

*ನನ್ನ ಪತ್ನಿಯನ್ನು ಸಂತೈಸಿ ಆರೈಕೆ‌ ಮಾಡಿದ್ದ ಅಪ್ಪು…….!*

ನನ್ನ ಪತ್ನಿ ಕನ್ನಡದ ಕೋಟ್ಯಾಧಿಪತಿಗೆ ಹೋಗಿದ್ದರು. ಹಾಟ್‌ಸೀಟ್‌ಗೂ ಹೋಗಿದ್ದರು. ನಿಮಗೆ ಗೊತ್ತಿರಲಿ ನಾವು ನೋಡುವುದು ಕೋಟ್ಯಾಧಿಪತಿಯ ರೆಕಾರ್ಡೆಡ್ ಕಾರ್ಯಕ್ರಮ. ನಾನೀಗ ಹೇಳುತ್ತಿರುವುದು ರೆಕಾರ್ಡಿಂಗ್ ಸಮಯದಲ್ಲಿ ಆದ ಘಟನೆಯ ಬಗ್ಗೆ. ನನ್ನ ಪತ್ನಿ ಹಾಟ್ ಸೀಟ್‌ನಲ್ಲಿ ಕುಳಿತಿದ್ದರು ಎದರುಗಡೆ ಅಪ್ಪು. ಆಗ ಆಕಸ್ಮಿಕ ಘಟನೆಯೊಂದು ನಡೆದು ಹೋಯ್ತು. ನನ್ನ ಪತ್ನಿ ಸಾಕಷ್ಟು ವರ್ಷಗಳ ಕಾಲ ಮಾತನಾಡದ ಒಬ್ಬರನ್ನು ಕಾರ್ಯಕ್ರಮದ ಮೂಲಕ ಒಂದು ಮಾಡಲು ವಾಹಿನಿಯ ಸಿಬ್ಬಂದಿ ಮುಂದಾಗಿದ್ದರು. ಸರ್‌ಪ್ರೈಸ್ ಆಗಿ ಅವರಿಗೆ ಕರೆ ಮಾಡಿ‌ ಅಪ್ಪುಗೆ ಕನೆಕ್ಟ್ ಮಾಡಿ ಬಿಟ್ಟರು. ವಾಹಿನಿಯವರ ಉದ್ದೇಶ ಒಳ್ಳೆಯದೇ ಆಗಿತ್ತು. ಆದ್ರೆ ಕರೆ ಸ್ವೀಕರಿಸಿದವರಿಗೆ ಅದು ಇಷ್ಟವಾಗಲಿಲ್ಲ. ಅಪ್ಪುವಿನ ಮೇಲೆ ಸಿಟ್ಟಾದರೂ. ಅಪ್ಪುವನ್ನೇ ಬಯ್ಯಲು ಶುರು ಮಾಡಿಬಿಟ್ಟರು. ಅಪ್ಪುಗೂ ಆ ಕ್ಷಣಕ್ಕೆ ಏನು ಮಾಡುವುದು ತೋಚಲಿಲ್ಲ. ಇತ್ತ ಇದನೆಲ್ಲಾ ನೋಡುತ್ತಿದ್ದ ನನ್ನಾಕೆ ಗಾಬರಿಯಾದರೂ ದಿಢೀರ್ ಅಂತಾ ಪಲ್ಸ್ ರೇಟ್ ಕುಸಿಯಿತು. ನೋಡು ನೋಡುತ್ತಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಇದಾದ ಒಂದು ಗಂಟೆಗಳ ಕಾಲ ಅಪ್ಪುವಿನ ಆರೈಕೆ, ಸಾಂತ್ವನದ ಮಾತುಗಳು ನಿಜಕ್ಕೂ ಅದ್ಬುತ. ತಪ್ಪೇ ಇಲ್ಲದೆ ಸ್ಟಾರ್ ನಟನೊಬ್ಬನಿಗೆ ಗೊತ್ತು ಗುರಿಯಿಲ್ಲದವರು ಕಾರಣವೇ ಇಲ್ಲದೆ ಬೈದರು ಸಹಾ ಕೊಂಚವು ವಿಚಲಿತರಾಗದೆ, ಆ ಸಂದರ್ಭದಲ್ಲಿ ನನ್ನಾಕೆಯ ಆರೈಕೆ ಮಾಡಿ, ಧೈರ್ಯ ಹೇಳಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಒಂದು ರೀತಿ ಆಕೆಗೆ ಮರು ಜೀವ ಕೊಟ್ಟ ಪುಣ್ಯಾತ್ಮ ಪುನೀತ್ ರಾಜಕುಮಾರ್. ಈ ವೇಳೆ ರಾಘಣ್ಣ ಸಹಾ ನನ್ನಾಕೆಯನ್ನು ಮಗುವಿನಂತೆ ಸಂತೈಸಿ ಆರೈಕೆ ಮಾಡಿದ್ದಾರೆ. ಈ ವಿಚಾರ ಕೇಳಿದ ನಂತರವಂತೂ‌ ನನಗೆ ಅಪ್ಪು ಅವರ ಮೇಲಿದ್ದ ಗೌರವ ಸಾವಿರ ಪಟ್ಟು ಹೆಚ್ಚಾಯಿತು.

*ಕೊನೆ ಮಾತು*

ತುಂಬಿದ ಕೊಡ ತುಳುಕುವುದಿಲ್ಲ. ಅನ್ನೋದಕ್ಕೆ ದೊಡ್ಮನೆ ರತ್ನ ಪುನೀತ್ ರಾಜಕುಮಾರ್ ಅನ್ವರ್ಥ. ಅವರ ಅಗಲಿಕೆ ಎಲ್ಲರಿಗಾಯ ಭರಿಸಲಾಗದ ನೋವನ್ನು ತಂದಿಟ್ಟಿದೆ. ಆ ದೇವರು ಸಹಾ ಮನುಷ್ಯರಂತೆ ಸ್ವಾರ್ಥಿಯಾದನಾ ? ಅನಿಸತೊಡಗಿದೆ. ಅಪ್ಪು ಸಾವನ್ನಪ್ಪಿದಾಗ ಓ‌ ದೇವರೇ ಪುನೀತ್ ಬಾಳ ಸಿನಿಮಾದಲ್ಲಿ ಇದೊಂದು ಸೀನ್ ಕಟ್ ಮಾಡಿಬಿಡಬಾರದಿತ್ತಾ. ಮತ್ತೊಂದು ರೀಟೇಕ್ ಹೇಳ ಬಾರದಿತ್ತಾ ? ಅಪ್ಪು ಮತ್ತೆ ಟೇಕ್ ಕೊಡ್ತಾರೆ ಅಂತಾ ಪ್ರಾರ್ಥಿಸಿದವರೆಷ್ಟೋ…! ಅಪ್ಪು ಮೆಟ್ಟಿಲು ಹತ್ತಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಗುರುರಾಯರನ್ನು ಬಹುವಾಗಿ ನಂಬಿದ್ದರು ಅಪ್ಪು. ಏಕೆ ಚಾಮುಂಡಿ ಕಾಯಲಿಲ್ಲ ? ಗುರು ರಾಯರು ರಕ್ಷಣೆ ಮಾಡಲಿಲ್ಲ ? ಅಂತಾ ದೇವರಿಗೆ ಧಿಕ್ಕಾರ ಕೂಗಿದವರೆಷ್ಟೋ ಗೊತ್ತಿಲ್ಲ. ಆದರೂ ಅಪ್ಪು ನಮ್ಮನ್ನು ಬಿಟ್ಟು ಹೋಗಬಾರದಿತ್ತು. ಇನ್ನಷ್ಟು ಕಾಲ ನಮ್ಮ ಜೊತೆಗಿರಬೇಕಿತ್ತು. ಅಪ್ಪು We Really Miss You Lot.

ಅಂದು ಯಾರೋ ಅನಾಮಿಕ ಗೀಚಿದ್ದು ಮನಸಿಗೆ ತಟ್ಟಿತು.

ಇಂದು ನೀವೊಬ್ಬರೇ ಸತ್ತಿಲ್ಲ. ನೀವಿಲ್ಲದೇ ಕಥೆಗಾರರ ಕನಸಿನ ಹತ್ತಾರು ಕೂಸುಗಳು ಸತ್ತಿವೆ. ನೂರಾರು ಹಾಡುಗಳು ನಿಮ್ಮ ದ್ವನಿ ಇಲ್ಲದೆ ಸತ್ತಿವೆ. ನಿಮ್ಮ ಚಿತ್ರಗಳು ಮತ್ತೆಂದು ಬಾರದೆಂದು ಚಿತ್ರಮಂದಿರದ ಸಾವಿರಾರು ಸೀಟುಗಳು ಸತ್ತಿವೆ. ನಿಮ್ಮ ನಗು ಕಾಣದೆ ಕಂಗಾಲಾಗಿ ಕೋಟ್ಯಾಂತರ ಮನಸುಗಳು ಸತ್ತಿವೆ. ಅಷ್ಟೇ ಯಾಕೆ ನಮ್ಮೆಲ್ಲರ ಪಾಲಿಗೆ ನಿಮ್ಮನ್ನು ಇಷ್ಟು ಬೇಗ ಕರೆದೋಯ್ದ ಆ ದೇವರೇ ಸತ್ತಿದ್ದಾನೆ.

ಹೋಗಿ ಬನ್ನಿ *ಅಪ್ಪು ಸರ್* ಎಂದು ಕಳುಹಿಸಿಕೊಟ್ಟಿದ್ದು ಈಗಲೂ ಕಾಡುತ್ತಿದೆ….????

*ರಾಮ್ ಮೈಸೂರು*


Share