MP: ಆಧ್ಯಾತ್ಮಿಕ ಅಂಗಳ : ಶ್ರೀಪಾದ ಶ್ರೀವಲ್ಲಭರ ಚರಿತ್ರೆ ಪುಟ – 252

383
Share

ಶ್ರೀ ಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ –
ಅಧ್ಯಾಯ 43
ಪುಟ – 252

ರಾಜರಾಜೇಶ್ವರಿ ಮಹಿಮೆ

ರಾಜರಾಜೇಶ್ವರಿ ಚೈತನ್ಯ ಮಾತೃಮೂರ್ತಿಗೆ ಅನಂತವಾದ ಕರುಣೆ ಇರುತ್ತದೆ . ಎಲ್ಲರನ್ನೂ ಆಕೆ ತನ್ನ ಮಕ್ಕಳನ್ನಾಗಿಯೇ ಭಾವಿಸುತ್ತಾಳೆ . ಪ್ರಾಣಮಯ , ಮನೋಮಯ ಭೂಮಿಕೆಗಳಲ್ಲಿ ಅಂಧಕಾರ ಪಕ್ಷಕ್ಕೆ ಸೇರಿದವರು ಅಸುರರು . ಇವರಿಗೆ ಆತ್ಮ ನಿಗ್ರಹ ತಪಸ್ಸು ತಿಳುವಳಿಕೆ ಇರುತ್ತದೆ . ಅವರು ಅಹಂಕಾರಪೂರ್ಣರು . ಕೆಳಗಿರುವ ಪ್ರಾಣಮಯ ಭೂಮಿಕೆಯಲ್ಲಿ ಅಂಧಕಾರ ಪಕ್ಷಕ್ಕೆ ಸೇರಿದವರನ್ನು ರಾಕ್ಷಸರು ಎನ್ನುತ್ತಾರೆ . ಅವರಿಗೆ ಪ್ರಚಂಡವಾದ ತೀವ್ರ ಭಾವನೆಗಳು ಪ್ರಭಾವಗಳು ಇರುತ್ತವೆ . ಇನ್ನೂ ಕೆಳಗಿರುವ ನಿಮ್ಮ ಪ್ರಾಣಮಯ ಭೂಮಿಕೆಗಳಲ್ಲಿ ಇತರ ವಿಧವಾದ ಜೀವಿಗಳಿರುತ್ತಾರೆ . ಅವರನ್ನು ಪಿಶಾಚಿಗಳು ಪ್ರಮಥರು ಎನ್ನುತ್ತಾರೆ . ಆಸುರಮಾಯೆ ಯಾವ ವೇಷವನ್ನಾದರೂ ಧರಿಸಬಲ್ಲದು . ಪಿಶಾಚಿಗಳು ನಿಜವಾಗಿ ವ್ಯಕ್ತಿಗಳು ಅಲ್ಲ ಮನಸ್ಸಿಲ್ಲದ ಕೇವಲ ಒಂದು ಬಯಕೆಯ ಅಥವಾ ಒಂದು ದುರಾಸೆಯ ರೂಪ ಕಲ್ಪನೆಗಳು . ರಾಕ್ಷಸರಿಗೆ ಶಕ್ತಿಯುತವಾದ ಪ್ರಾಣಮಯ ಸ್ಥಿತಿ ಇರುತ್ತದೆ . ಮನಸ್ಸು ಇರುವುದಿಲ್ಲ , ಕಂಡದ್ದನ್ನೆಲ್ಲಾ ಕಬಳಿಸಬೇಕೆಂದು ನೋಡುತ್ತಿರುತ್ತಾರೆ .

ಆಸುರಿ , ಕಾಳಿ , ಶ್ಯಾಮ , ಮಹಾಕಾಳಿ ಸ್ವರೂಪಗಳು

ಕಾಳಿ , ಶ್ಯಾಮಾ ಮೊದಲಾದವು ಪ್ರಾಣಮಯ ಸ್ಥಿತಿಯ ಮೂಲಕ ನಮಗೆ ಕಾಣುವ ರೂಪಗಳು . ಕಾಳಿ ಅನ್ನುವುದು ವಿಧ್ವಂಸಕ ಶಕ್ತಿ , ಕಷ್ಟಗಳು ಮುತ್ತಿಗೆ ಹಾಕಿದಾಗ ಅಂಥ ಸಂಘರ್ಷಣೆಯಿಂದ ಪ್ರತಿಯೊಂದನ್ನು ಭಿನ್ನ ಭಿನ್ನ ಮಾಡುತ್ತಾ ಹೋಗುವ ಅಜ್ಞಾನದೊಳಗಿನ ಪ್ರಕೃತಿಶಕ್ತಿಯು ಆಕೆ . ಆದರೆ ಮಹಾಕಾಳಿ ಎನ್ನುವುದು ಉನ್ನತ ಭೂಮಿಕೆಗೆ ಸೇರಿದೆ . ಆಕೆ ಸಾಧಾರಣವಾಗಿ ಬಂಗಾರದ ಬಣ್ಣದಲ್ಲಿ ಕಾಣಿಸುತ್ತಾಳೆ . ಆಕೆ ಅಸುರರಿಗೆ ಮಹಾ ಭಯಂಕರಿ , ರಾಜರಾಜೇಶ್ವರಿಯು ವಿವೇಕಕ್ಕೆ ಪ್ರತಿನಿಧಿಯಾದರೆ ಮಹಾಕಾಳಿಯು ಬಲಕ್ಕೆ , ಶಕ್ತಿಗೆ ಪ್ರತಿನಿಧಿ . ಆ ಮಹಾ ತಾಯಿಯಲ್ಲಿ ತಲೆಸಿಡಿದು ಹೋಗುವಂತಹ ತೀವ್ರತೆ : ಸಾಧಿಸುವುದಕ್ಕೆ ಬೇಕಾಗುವ ಬ್ರಹ್ಮಾಂಡವಾದ ಭಾವತೀವ್ರತೆ , ಪ್ರತಿಯೊಂದು ಪರಿಮಿತಿಯನ್ನು , ಪ್ರತಿಯೊಂದು ಅಡೆತಡೆಯನ್ನು
ಛಿದ್ರಛಿದ್ರವಾಗಿ ಮಾಡುವುದಕ್ಕೆ ಬೇಕಾಗುವ ದಿವ್ಯ ಹಿಂಸೆ ಇರುತ್ತದೆ . ಕಾಳಿಯ ಶಕ್ತಿಯಲ್ಲಿ ಯಾವುದನ್ನೂ ಲೆಕ್ಕಿಸದೆ ದೇವರ ಮೇಲೆಯೇ ಧಾಳಿ ಮಾಡುವವರೆಗೂ ಸುಮ್ಮನಿರದಂತಹ ಪ್ರಚಂಡ ವೇಗವು ಇದೆ . ಸಂಘರ್ಷಣೆ , ವಿನಾಶನಗಳಿಂದ ಅವಳು ಶಾಂತಳಾಗುತ್ತಾಳೆ . ಆದರೆ ಮಹಾಕಾಳಿ ಬೇರೆ . ಶಕ್ತಿಗೆ ಮೀರಿದ ಆತಂಕಗಳು ಎದುರಾದಾಗ ನಮ್ಮ ಪ್ರಗತಿಯನ್ನು ನಿರೋಧಿಸುವ ಶಕ್ತಿಗಳು ವಿಜೃಂಭಿಸಿದಾಗ ಸಾಧಕನು ಮಹಾ ಕಾಳಿಯ ಶಕ್ತಿಯನ್ನು ತನ್ನೊಳಕ್ಕೆ ತಪ್ಪದೆ ಆಹ್ವಾನಿಸಬೇಕು .

ಸಾಧಕರ ಭೂಮಿಕೆಗೆ ಮಹಾಕಾಳಿ , ಮಹಾಲಕ್ಷ್ಮೀ , ಮಹಾಸರಸ್ವತಿ ಸ್ವರೂಪ

ಮಹಾಲಕ್ಷ್ಮಿಯಲ್ಲಿ ಸೌಂದರ್ಯ ಶೋಭೆ ಇರುತ್ತದೆ . ವಿವೇಕ , ಶಕ್ತಿ , ಸಂಪೂರ್ಣತೆಯನ್ನು ಹೊಂದುವುದಕ್ಕೆ ಸೌಂದರ್ಯವು ಬೇಕು . ಅಂದರೆ ಇದು ಇಲ್ಲದಿದ್ದರೆ ನಾವು ಎಂತಹ ಪರಿಪೂರ್ಣತೆಯನ್ನು ಸಾಧಿಸಬೇಕೆಂದುಕೊಂಡರೂ ಅದಕ್ಕೆ ಪರಿಪೂರ್ಣತ್ವವು ಬರುವುದಿಲ್ಲ ಅಂದರೆ ಒಂದಾನೊಂದು ಸ್ಥಾಯಿಯಲ್ಲಿ ಒಂದು ವಿಧವಾದ ಸಮತೋಲನಾ ಸ್ಥಿತಿಯು ಏರ್ಪಡುತ್ತಾ ಇರುತ್ತದೆ . ಅದನ್ನು ಪರಿಪೂರ್ಣತೆ ಎಂದು ಅಂದುಕೊಳ್ಳುತ್ತೇವೆ . ಆದರೆ ಅದಕ್ಕಿಂತ ಇನ್ನೂ ಸ್ವಲ್ಪ ಉನ್ನತ ಮಟ್ಟಕ್ಕೆ ಹೋದಾಗ ಅಲ್ಲಿ ಮತ್ತೆ ನಮಗೆ ಹೊಸ ಶಕ್ತಿಗಳು , ಹೊಸ ಪರಿಸ್ಥಿತಿಗಳು ಏರ್ಪಡುತ್ತಾ ಇರುತ್ತದೆ . ಇವುಗಳಿಗನುಸಾರವಾದ ಹೊಸ ಸಮತೋಲನೆಯು ಏರ್ಪಡುತ್ತದೆ . ಆ ಸ್ಥಾಯಿಯಲ್ಲಿ ಅದು ಪರಿಪೂರ್ಣತೆಯನ್ನು ಹೊಂದುತ್ತದೆ . ಆದುದರಿಂದ ಪರಿಪೂರ್ಣವಾದ ಪರಿಪೂರ್ಣತೆಗೆ ಮಹಾಲಕ್ಷ್ಮಿಯು ಪ್ರತೀಕ . ವಿವೇಕದಲ್ಲಿ ಪರಿಪೂರ್ಣತೆ ಬಂದು ಬಲದಲ್ಲಿ ಪರಿಪೂರ್ಣತೆ ಬರದಿದ್ದರೆ ಅದು ಪೂರ್ಣಸಿದ್ದಿ ಎಂದು ಅನ್ನಿಸಿಕೊಳ್ಳುವುದಿಲ್ಲ . ಆದುದರಿಂದ ನಮಗೆ ಪರಿಪೂರ್ಣ ಪರಿಪೂರ್ಣತೆಯಲ್ಲಿ ವಿವೇಕ , ಬಲ , ಸೌಂದರ್ಯ , ಪರಿಪೂರ್ಣತೆ ಎನ್ನುವ ನಾಲ್ಕು ಅವುಗಳಿಗೆ ಸೇರಿದ ಸರಿಯಾದ ಪ್ರಮಾಣದಲ್ಲಿರುತ್ತದೆ . ಮನುಷ್ಯನಿಗೆ ತಿಳಿಯಲಾರದ ನಿಗೂಢವಾದ ರಹಸ್ಯ ಏನೆಂದರೆ ದಿವ್ಯ ಸಾಮರಸ್ಯವನ್ನು ಹೊಂದಿದ ಸೌಂದರ್ಯ . ಇದು ವಿಶ್ವವನ್ನೆಲ್ಲಾ ವ್ಯಾಪಿಸಿರುವ ಸೊಗಸು . ಮಹಾಲಕ್ಷ್ಮೀ ಅನುಗ್ರಹದಿಂದ ಮಾತ್ರವೇ ಅನಂತ ವೈವಿಧ್ಯತೆಯನ್ನು ಹೊಂದಿದ ಈ ಸೃಷ್ಟಿಯಲ್ಲಿ ಇಷ್ಟೊಂದು ವಸ್ತುಗಳು , ಶಕ್ತಿಗಳು , ಜೀವರಾಶಿಗಳು ಸೇರಿಕೊಳ್ಳುತ್ತವೆ . ಎಲ್ಲವೂ ಒಂದಾಗುತ್ತವೆ . ಏಕತ್ವ ಸ್ಥಿತಿಯಿಂದ ಆನಂದವು ಪ್ರಾಪ್ತವಾಗುತ್ತದೆ . ವಿಧವಿಧವಾದ ವಸ್ತುಗಳು , ಶಕ್ತಿಗಳು , ಜೀವಿಗಳು ಎಂಬುವುಗಳನ್ನು ಅವುಗಳಿಗೆ ಸರಿಹೊಂದುವ ಲಯಗಳಾಗಿ ರೂಪಗಳಾಗಿ ಮಹಾಲಕ್ಷ್ಮಿಯು ಮಾಡಿಕೊಳ್ಳುತ್ತಾಳೆ , ಮಹಾಲಕ್ಷ್ಮಿ ಪರಮ ಪ್ರೇಮ ಆನಂದಗಳಿಗೆ ಅಧಿದೇವತೆ . ಆದರೆ ಲಕ್ಷ್ಮಿ ಎಂಬುವುದು ಭೌತಿಕ ವಸ್ತು ಸಂಚಯಗಳಿಗೆ ಮಾತ್ರವೇ ಪ್ರತೀಕ . ಮಹಾಲಕ್ಷ್ಮಿ ಅನ್ನುವುದು ಭೌತಿಕ ವಸ್ತುಗಳ ಸಂಚಯ , ಭೌತಿಕ ಶಕ್ತಿಗಳು , ಭೌತಿಕ ಜೀವಿಗಳು , ಇವುಗಳನ್ನು ದಿವ ಸಾಮರಸ್ಯಕ್ಕೆ ಅನುಕೂಲವಾಗಿ ಪರಿವರ್ತನೆ ಮಾಡಿ ದಿವ್ಯ ಜೀವನವನ್ನು ಪ್ರಸಾದಿಸಬಲ್ಲ ಮಹಾಶಕ್ತಿ .
( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 254
ಮನೆತುಂಬ ಮಕ್ಕಳಿರಬೇಕು ಎನ್ನುವರು .
ಮನ ತುಂಬ ಸಂತೋಷ ಕೂಡ ಇರಬೇಕು .
ವನ ತುಂಬ ಹೂ ಬಳ್ಳಿ ತುಳುಕಾಡುತಿರಬೇಕು .
ಇದುವೇ ಭೂಸ್ವರ್ಗವೆಂದೆನಿಸುತಿರಬೇಕು
ಎನ್ನುವ ಭೂರಮೆಯ ಸ್ವಾಮಿ
– ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share