MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 165

232
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 165

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

891 . ಓಂ ಸಪ್ತಸ್ವರಾಶ್ರಯಾಯ ನಮಃ
892 . ಓಂ ಸಪ್ತಾಬ್ಧಿಕೇಲಿಕಾಸಾರಾಯ ನಮಃ
893 . ಓಂ ಸಪ್ತಮಾತೃನಿಷೇವಿತಾಯ ನಮಃ
894 . ಓಂ ಸಪ್ತಚ್ಛಂದೋಮೋದಮದಾಯ ನಮಃ
895 . ಓಂ ಸಪ್ತಚ್ಛಂದೋಮಖಪ್ರಭವೇ ನಮಃ

891. ಓಂ ಸಪ್ತಸ್ವರಾಶ್ರಯಃ-
ಭಾ: ಷಡ್ಜಾದಿ ಸ್ವರವಾನ್ನಾದ ಇತಿ ಸಪ್ತಸ್ವರಾಶ್ರಯಃ|
ನವಿಲು, ಎತ್ತು, ಮೇಕೆ, ಕ್ರೌಂಚಪಕ್ಷಿ, ಕೋಗಿಲೆ, ಕುದುರೆ, ಆನೆ ಇವುಗಳ ರೂಪದಲ್ಲಿ ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದಗಳೆಂಬ ಸಪ್ತಸ್ವರಗಳಿಗೆ ಆಶ್ರಯಭೂತನಾಗಿರುವುದರಿಂದ ಸಪ್ತಸ್ವರಾಶ್ರಯನು.
ಓಂ ಸಪ್ತಸ್ವರಾಶ್ರಯಾಯ ನಮಃ

892. ಓಂ ಸಪ್ತಾಬ್ಧಿಕೇಲಿಕಾಸಾರಃ-
ಭಾ: ಸಪ್ತಾಬ್ಧಿಕೇಲಿಕಾಸಾರೋ ಯಸ್ಯ ಕ್ರೀಡಾಸರೋ7ರ್ಣವಃ|
ದಧಿ (ಮೊಸರು), ಕ್ಷೀರ, ಸರ್ಪಿಸ್ (ತುಪ್ಪ), ಇಕ್ಷು (ಕಬ್ಬಿನರಸ), ಸುರಾ, ಲವಣ, ಸ್ವಾದು (ಜೇನುತುಪ್ಪ), ಶುದ್ಧಜಲ ಸಮುದ್ರಗಳನ್ನು ತನ್ನ ಕ್ರೀಡಾ ಸರೋವರಗಳನ್ನಾಗಿ ಮಾಡಿಕೊಂಡಿದ್ದರಿಂದ ಅವನು ಸಪ್ತಾಬ್ಧಿಕೇಲಿಕಾಸಾರನು.
ಓಂ ಸಪ್ತಾಬ್ಧಿಕೇಲಿಕಾಸಾರಾಯ ನಮಃ

893. ಓಂ ಸಪ್ತಮಾತೃನಿಷೇವಿತಃ-
ಭಾ: ಬ್ರಾಹ್ಮ್ಯಾದಿ ಮಾತೃಸೇವ್ಯತ್ವಾತ್ ಸಪ್ತಮಾತೃನಿಷೇವಿತಃ
ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡಾ ಎಂಬ ಸಪ್ತ ಮಾತೃಕಾ ದೇವತೆಗಳಿಂದ ಸೇವಿಸಲ್ಪಡುವವನಾದ್ದರಿಂದ ಸಪ್ತಮಾತೃನಿಷೇವಿತನು.
ಓಂ ಸಪ್ತಮಾತೃನಿಷೇವಿತಾಯ ನಮಃ
ಸಪ್ತಚ್ಛಂದೋಮೋದಮದಃ ಸಪ್ತಚ್ಛಂದೋಮಖಪ್ರಭುಃ|
ಅಷ್ಟಮೂರ್ತಿಧ್ಯೇಯಮೂರ್ತಿ-ರಷ್ಟಪ್ರಕೃತಿಕಾರಣಮ್‌||

894. ಓಂ ಸಪ್ತಚ್ಛಂದೋಮೋದಮದಃ-
ಭಾ: ಪಥ್ಯಾನಿ ಸಪ್ತಚ್ಛಂದಾಂಸಿ ತೇಷಾಂ ಮೋದೇನ ಯೋ ಮದಃ|
ತೇನೈವ ಘೂರ್ಣನಾತ್ ಸಪ್ತಚ್ಛಂದೋಮೋದಮದಃ ಸ್ಮೃತಃ||
ನಾವು ಹಿಂದೆಯೇ ತಿಳಿದುಕೊಂಡ ಏಳು ಛಂದಸ್ಸುಗಳಿಂದ ಉಂಟಾಗುವ ಆನಂದದಿಂದ ಮೈಮರೆತವನಾದ್ದರಿಂದ ಅವನು ಸಪ್ತಚ್ಛಂದೋಮೋದಮದನು.
(ಛಂದಸ್ಸುಗಳ ಸಮೂಹವನ್ನು ಪಥ್ಯವೆನ್ನುತ್ತಾರೆ. ಗಣೇಶನು ವೇದವನ್ನು ಕೇಳುತ್ತಾ ಮೈಮರೆತು ಅನುಗ್ರಹ ಮಾಡುತ್ತಾನೆ. ಆದ್ದರಿಂದ ಎಲ್ಲರೂ ವೇದಪಾರಾಯಣವನ್ನು ಮಾಡಬೇಕು ಹಾಗೂ ಮಾಡಿಸಬೇಕು.)
ಓಂ ಸಪ್ತಚ್ಛಂದೋಮೋದಮದಾಯ ನಮಃ

895. ಓಂ ಸಪ್ತಚ್ಛಂದೋಮಖಪ್ರಭುಃ-
ಭಾ: ಪಥ್ಯಾದ್ಯಕ್ರತುಪೂಜ್ಯತ್ವಾತ್ ಸಪ್ತಚ್ಛಂದೋಮಖಪ್ರಭುಃ|
ಛಂದಸ್ಸೇ ಪ್ರಧಾನವಾಗಿರುವ ಯಜ್ಞಗಳಿಂದ ಗಣೇಶನು ಪೂಜಿಸಲ್ಪಡುತ್ತಾನೆ. ಅಗ್ನಿಸ್ವರೂಪದಲ್ಲಿ ಯಜ್ಞಗಳಿಗೆ ಗಣೇಶನೇ ಪ್ರಭುವಾಗಿದ್ದಾನೆ. ಆದ್ದರಿಂದ ಅವನು ಸಪ್ತಚ್ಛಂದೋಮಖಪ್ರಭುವು.
ಓಂ ಸಪ್ತಚ್ಛಂದೋಮಖಪ್ರಭವೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share