MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 166

302
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 166

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

896 . ಓಂ ಅಷ್ಟಮೂರ್ತಿಧ್ಯೇಯಮೂರ್ತಯೇ ನಮಃ
897 . ಓಂ ಅಷ್ಟಪ್ರಕೃತಿಕಾರಣಾಯ ನಮಃ
888 . ಓಂ ಅಷ್ಟಾಂಗಯೋಗಫಲಭುವೇ ನಮಃ
899 . ಓಂ ಅಷ್ಟಪತ್ರಾಂಬುಜಾಸನಾಯ ನಮಃ
900 . ಓಂ ಅಷ್ಟಶಕ್ತಿಸಮೃದ್ಧಶ್ರಿಯೇ ನಮಃ

896. ಓಂ ಅಷ್ಟಮೂರ್ತಿಧ್ಯೇಯಮೂರ್ತಿಃ-
ಭಾ: ಅಷ್ಟಮೂರ್ತಿಶ್ಶಿವಸ್ತೇನ ಯನ್ಮೂರ್ತಿರ್ಹೃದಿ ಚಿಂತ್ಯತೇ|
ಸೋsಷ್ಟಮೂರ್ತಿಧ್ಯೇಯಮೂರ್ತಿಃ ಧ್ಯೇಯೋ ವಾ ಪೃಥಗಷ್ಟಭಿಃ||
ಪಂಚಭೂತಗಳು, ಸೂರ್ಯಚಂದ್ರರು, ಯಾಗ ಮಾಡುವವನು, ಈ ಎಂಟರ ಸ್ವರೂಪನಾದ್ದರಿಂದ ಶಿವನನ್ನು ಅಷ್ಟಮೂರ್ತಿ ಎನ್ನುತ್ತಾರೆ. ಗಣೇಶನು ಶಿವನಿಂದ ಧ್ಯಾನಿಸಲ್ಪಡುವ ಮೂರ್ತಿಮಂತನಾಗಿದ್ದಾನೆ. ಆದ್ದರಿಂದ ಅವನು ಅಷ್ಟಮೂರ್ತಿಧ್ಯೇಯಮೂರ್ತಿಯು. ಹಾಗೂ ಗಣೇಶನನ್ನು ಭೂರಾದಿ ಎಂಟು ವಿಧವಾದ ರೂಪಗಳಲ್ಲಿ ಪ್ರತ್ಯೇಕವಾಗಿ ಉಪಾಸನೆ ಮಾಡುತ್ತಾರೆ. ಆದ್ದರಿಂದಲೂ ಅವನು ಅಷ್ಟಮೂರ್ತಿಧ್ಯೇಯಮೂರ್ತಿಯಾಗಿದ್ದಾನೆ.
ಓಂ ಅಷ್ಟಮೂರ್ತಿಧ್ಯೇಯಮೂರ್ತಯೇ ನಮಃ

897. ಓಂ ಅಷ್ಟಪ್ರಕೃತಿಕಾರಣಮ್-
ಭಾ: ಪ್ರಕೃತ್ಯಹಂಕೃತಿಮಹತ್ಪಂಚ ತನ್ಮಾತ್ರಸಂಜ್ಞಿತಾಃ|
ಪ್ರಕೃತೀರ್ಯೋ ಜನಯತಿ ಸೋsಷ್ಟಪ್ರಕೃತಿಕಾರಣಮ್‌||
ಪ್ರಕೃತಿ, ಅಹಂಕಾರ, ಮಹತ್ತತ್ತ್ವ ಪಂಚತನ್ಮಾತ್ರಗಳೆಂಬ ಅಷ್ಟಪ್ರಕೃತಿಗಳಿಗೆ ಕಾರಣನಾದ್ದರಿಂದ ಅಷ್ಟಪ್ರಕೃತಿಕಾರಣಮ್.
ಓಂ ಅಷ್ಟಪ್ರಕೃತಿಕಾರಣಾಯ ನಮಃ
(ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳು ಪಂಚತನ್ಮಾತ್ರೆಗಳು)
ಅಷ್ಟಾಂಗ ಯೋಗ ಫಲಭೂ-ರಷ್ಟಪತ್ರಾಂಬುಜಾಸನಃ|
ಅಷ್ಟಶಕ್ತಿ ಸಮೃದ್ಧ ಶ್ರೀ-ರಷ್ಟೈಶ್ವರ್ಯಪ್ರದಾಯಕಃ||

898. ಓಂ ಅಷ್ಟಾಂಗಯೋಗಫಲಭೂಃ-
ಭಾ: ಅಷ್ಟಾಂಗಯೋಗ ಫಲಭೂಃ ಸಮಾಧ್ಯಂತೈರ್ಯಮಾದಿಭಿಃ|
ಅಂಗೈರ್ಯುಕ್ತಸ್ಯ ಹೃದ್ವೃತ್ತಿರೋಧಸ್ಯ ಫಲದಾಯಕಃ||
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳೆಂಬ ಎಂಟು ಅಂಗಗಳಿಂದ ಕೂಡಿದ ಚಿತ್ತವೃತ್ತಿ ನಿರೋಧವೆಂಬ ಯೋಗದ ಫಲವನ್ನು ಕೊಡುವವನಾದ್ದರಿಂದ ಗಣೇಶನು ಅಷ್ಟಾಂಗಯೋಗಫಲಭೂಃ.
ಓಂ ಅಷ್ಟಾಂಗಯೋಗಫಲಭುವೇ ನಮಃ

899. ಓಂ ಅಷ್ಟ ಪತ್ರಾಂಬುಜಾಸನಃ-
ಭಾ: ಪಂಕಜೇsಷ್ಟದಲೇ ತಿಷ್ಠನ್ ಅಷ್ಟಪತ್ರಾಂಬುಜಾಸನಃ|
ಅಷ್ಟದಳಗಳ ಪದ್ಮದಲ್ಲಿ (ಯಂತ್ರದಲ್ಲಿ) ವಾಸವಿರುವವನಾದ್ದರಿಂದ ಅಷ್ಟಪತ್ರಾಂಬುಜಾಸನನು.
ಓಂ ಅಷ್ಟಪತ್ರಾಂಬುಜಾಸನಾಯ ನಮಃ

900. ಓಂ ಅಷ್ಟಶಕ್ತಿ ಸಮೃದ್ಧಶ್ರೀಃ-
ಭಾ: ಅಷ್ಟಶಕ್ತಿ ಸಮೃದ್ಧಶ್ರೀ-ರ್ದಲಾಷ್ಟಕ ನಿವಾಸಿನಾ|
ತೀವ್ರಾದಿಶಕ್ತ್ಯಷ್ಟಕೇನ ಪರಿತಃ ಸೇವಿತೋ ಭವಾನ್‌||
ಹೇ ಗಣೇಶ! ನೀನು ಎಂಟು ದಳಗಳಲ್ಲಿರುವ ತೀವ್ರಾ, ಜ್ವಾಲಿನೀ, ನಂದಾ, ಭೋಗದಾ, ಕಾಮರೂಪಿಣೀ, ಉಗ್ರಾ, ತೇಜೋವತೀ, ಸತ್ಯಾ ಎಂಬ ಎಂಟು ಮಂದಿ ಶಕ್ತಿದೇವತೆಗಳಿಂದ ಆವೃತನಾಗಿ ಸೇವಿಸಲ್ಪಡುತ್ತಿದ್ದೀಯೆ. ಆದ್ದರಿಂದ ನೀನು ಅಷ್ಟಶಕ್ತಿಸಮೃದ್ಧಶ್ರೀಃ.
ಓಂ ಅಷ್ಟಶಕ್ತಿಸಮೃದ್ಧಶ್ರಿಯೇ ನಮಃ
ಇತಿ ಭಾರತ್ಯುಪಾಖ್ಯಸ್ಯ ಭಾಸ್ಕರಾಗ್ನಿಚಿತಃ ಕೃತೌ|
ಗಣೇಶನಾಮ ಸಾಹಸ್ರ ಖದ್ಯೋತೇ ನವಮಂ ಶತಮ್‌||
ಭಾರತೀ ಎಂಬ ಹೆಸರಿನ ಭಾಸ್ಕರಾಗ್ನಿಹೋತ್ರಿಗಳ ಕೃತಿಯಾದ ಗಣೇಶ ನಾಮಸಹಸ್ರದ ಖದ್ಯೋತವೆಂಬ ಭಾಷ್ಯದಲ್ಲಿ ಒಂಭತ್ತನೆಯ ಶತಕವು ಸಂಪೂರ್ಣವಾಯಿತು.


Share