MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 167

266
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 167

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

901 . ಓಂ ಅಷ್ಟೈಶ್ವರ್ಯಪ್ರದಾಯಕಾಯ ನಮಃ
902 . ಓಂ ಅಷ್ಟಪೀಠೋಪಪೀಠಶ್ರಿಯೇ ನಮಃ
903 . ಓಂ ಅಷ್ಟಮಾತೃಸಮಾವೃತಾಯ ನಮಃ
904 . ಓಂ ಅಷ್ಟಭೈರವಸೇವ್ಯಾಯ ನಮಃ
905 . ಓಂ ಅಷ್ಟವಸುವಂದ್ಯಾಯ ನಮಃ

901. ಓಂ ಅಷ್ಟೈಶ್ವರ್ಯ ಪ್ರದಾಯಕಃ-
ಭಾ: ದಾತಾ7ಣಿಮಾದಿ ಸಿದ್ಧೀನಾಮಷ್ಟೈಶ್ವರ್ಯ ಪ್ರದಾಯಕಃ|
ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ, ವಶಿತ್ವಗಳೆಂಬ ಅಷ್ಟಸಿದ್ಧಿಗಳನ್ನು ದಯಪಾಲಿಸುವವನಾದ್ದರಿಂದ ಅಷ್ಟೈಶ್ವರ್ಯಪ್ರದಾಯಕನು.
ಓಂ ಅಷ್ಟೈಶ್ವರ್ಯಪ್ರದಾಯಕಾಯ ನಮಃ
ಅಷ್ಟಪೀಠೋಪಪೀಠಶ್ರೀರಷ್ಟಮಾತೃಸಮಾವೃತಃ|
ಅಷ್ಟಭೈರವ ಸೇವ್ಯೋsಷ್ಟಾವಸುವಂದ್ಯೋsಷ್ಟಮೂರ್ತಿಭೃತ್‌||

902. ಓಂ ಅಷ್ಟಪೀಠೋಪಪೀಠಶ್ರೀಃ-
ಭಾ: ಅಷ್ಟಪೀಠೋಪಪೀಠಶ್ರೀಃ -ಮಹಾಪೀಠೋಪಪೀಠಯೋಃ|
ಪುರಾಣೇ ಸ್ಫುಟಯೋರ್ಭೂರಿ ಸಂಖ್ಯಯೋಸ್ಸಂಪದಾತ್ಮಕಃ||
ಕಾಮಗಿರಿ, ಜಾಲಂಧರ, ಓಡ್ಯಾಣ, ಪೂರ್ಣಗಿರಿಗಳೆಂಬ ಮಹಾಪೀಠಗಳು, ಮುದ್ರಾಪೀಠ, ಮಂಡಲಪೀಠ, ಮಂತ್ರಪೀಠ, ವಿದ್ಯಾಪೀಠಗಳೆಂಬ ನಾಲ್ಕು ಉಪಪೀಠಗಳು ಗಣೇಶನ ಸಂಪತ್ತಾಗಿವೆ. ಅಥವಾ ಪುರಾಣಗಳಲ್ಲಿ ಹೇಳಲ್ಪಟ್ಟ ಅಸಂಖ್ಯಾಂತವಾದ ಪೀಠಗಳು ಗಣೇಶನ ಸಂಪತ್ತಾಗಿವೆ. ಆದ್ದರಿಂದಲೂ ಗಣೇಶನು ಅಷ್ಟಪೀಠೋಪಪೀಠಶ್ರೀ.
ಓಂ ಅಷ್ಟಪೀಠೋಪಪೀಠಶ್ರಿಯೇ ನಮಃ

903. ಓಂ ಅಷ್ಟಮಾತೃಸಮಾವೃತಃ-
ಭಾ: ಅಷ್ಟಮೀ ತು ಮಹಾಲಕ್ಷ್ಮೀರ್ಬ್ರಾಹ್ಮ್ಯಾದ್ಯಾಃ ಸಪ್ತಮಾತರಃ|
ಆವೃತೌ ಯಸ್ಯ ತಿಷ್ಠನ್ತಿ ಸೋsಷ್ಟಮಾತೃಸಮಾವೃತಃ||
ಹಿಂದೆ ತಿಳಿಸಿದ ಸಪ್ತಮಾತೃದೇವತೆಗಳೊಂದಿಗೆ ಮಹಾಲಕ್ಷ್ಮೀ ದೇವಿಯನ್ನು ಸೇರಿಸಿದರೆ ಅಷ್ಟಮಾತೃಕೆಯರು ಆಗುತ್ತಾರೆ. ಗಣೇಶನ ಯಂತ್ರಾವರಣದಲ್ಲಿ ಅಷ್ಟಮಾತೃಕೆಯರು ಇದ್ದಾರೆ. ಆದ್ದರಿಂದ ಅವನು ಅಷ್ಟಮಾತೃಸಮಾವೃತನು.
ಓಂ ಅಷ್ಟಮಾತೃಸಮಾವೃತಾಯ ನಮಃ

904. ಓಂ ಅಷ್ಟಭೈರವಸೇವ್ಯಃ-
ಭಾ: ಅಷ್ಟಭೈರವಸೇವ್ಯೋ7ಷ್ಟೌ ಭೈರವಾ ವಟುಕಾದಯಃ|
ತೈಸ್ಸೇವ್ಯಃ…………………||
ವಟುಕಭೈರವ ಮೊದಲಾದ ಅಷ್ಟಭೈರವರಿಂದ ಸೇವಿಸಲ್ಪಡುವವನಾದ್ದರಿಂದ ಅಷ್ಟಭೈರವಸೇವ್ಯನು. ವಟುಕ, ತ್ರಿಪುರಾಂತಕ, ಅಗ್ನಿಭೇತಾಳ, ಯಮಜಿಹ್ವ, ಕಾಲಾಖ್ಯ, ಕಪಾಲಿಕ, ಏಕಪಾದ, ಭೀಮರೂಪರು ಅಷ್ಟಭೈರವರು. ಇವರಲ್ಲದೆ ಅಸಿತಾಂಗ, ರುರು, ಚಂಡ, ಕ್ರೋಧ, ಉನ್ಮತ್ತ, ಕಪಾಲಿ, ಭೀಷಣ, ಸಂಹಾರ ಇವರನ್ನು ಕೂಡಾ ಅಷ್ಟಭೈರವರೆನ್ನುತ್ತಾರೆ.
ಓಂ ಅಷ್ಟಭೈರವಸೇವ್ಯಾಯ ನಮಃ

905. ಓಂ ಅಷ್ಟವಸುವಂದ್ಯಃ-
ಭಾ: …………ವಸವೋ7ಷ್ಟೌ ತು ಪ್ರಭಾಸಾಂತಾ ಧರಾದಯಃ|
ತೈರ್ವಂದಿತೋ ಭವಾನಷ್ಟ-ವಸುವಂದ್ಯಃ ಪ್ರಕೀರ್ತಿತಃ||
1. ಧರ (ಆಪ), 2. ಧ್ರುವ, 3. ಸೋಮ, 4. ವಿಷ್ಣು (ಅಧ್ವರ), 5. ಅನಿಲ, 6. ಅನಲ, 7. ಪ್ರತ್ಯೂಷ, 8. ಪ್ರಭಾಸ ಎಂಬುವರು ಅಷ್ಟವಸುಗಳು. ಗಣೇಶನು ಅಷ್ಟವಸುಗಳಿಂದ ವಂದ್ಯನಾಗಿದ್ದಾನೆ. ಆದ್ದರಿಂದ ಅವನು ಅಷ್ಟವಸುವಂದ್ಯನು.
ಓಂ ಅಷ್ಟವಸುವಂದ್ಯಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share