MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 171

296
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 171

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

721 . ಓಂ ದಶದಿಕ್ಪತಿವಂದಿತಾಯ ನಮಃ
722 . ಓಂ ದಶಾಧ್ಯಾಯಾಯ ನಮಃ
723 . ಓಂ ದಶಪ್ರಾಣಾಯ ನಮಃ
724 . ಓಂ ದಶೇಂದ್ರಿಯನಿಯಾಮಕಾಯ ನಮಃ
725 . ಓಂ ದಶಾಕ್ಷರಮಹಾಮಂತ್ರಾಯ ನಮಃ

921. ಓಂ ದಶದಿಕ್ಪತಿವಂದಿತಃ-
ಭಾ: ಇಂದ್ರಾದಯೋsಷ್ಟೌ ದಿಕ್ಪಾಲಾ ಊರ್ಧ್ವಾಧೋ ದಿಗಧೀಶ್ವರೌ|
ಕ್ರಮಾದ್ಬ್ರಹ್ಮಾನಂತ ಇತಿ ದಶದಿಕ್ಪತಿವನ್ದಿತಃ||
1. ಇಂದ್ರ, 2. ಅಗ್ನಿ, 3. ಯಮ, 4. ನಿರೃತಿ 5. ವರುಣ, 6. ವಾಯು, 7. ಕುಬೇರ, 8. ಈಶಾನ, 9. ಬ್ರಹ್ಮ, 10. ಅನಂತ ಎಂಬುವರು ಕ್ರಮವಾಗಿ ಪೂರ್ವಾದಿ ದಿಕ್ಕುಗಳಿಗೆ ಅಧಿಪತಿಯರು.
ಊರ್ಧ ಅಧೋ ದಿಕ್ಕುಗಳಿಗೆ ಬ್ರಹ್ಮನು, ಅನಂತನು, ಅಧಿಪತಿಗಳಾಗಿದ್ದಾರೆ. ಈ ಹತ್ತು ದಿಕ್ಪಾಲಕರಿಂದ ನಮಿಸಲ್ಪಟ್ಟವನಾದ್ದರಿಂದ ದಶದಿಕ್ಪತಿವಂದಿತನು. (ಪೂರ್ವಾದಿ ದಶ ದಿಕ್ಕುಗಳು – ಪೂರ್ವ, ಆಗ್ನೇಯ, ದಕ್ಷಿಣ, ನೈರೃತ್ಯ, ಪಶ್ಚಿಮ, ವಾಯವ್ಯ, ಉತ್ತರ, ಈಶಾನ್ಯ, ಊರ್ಧ್ವ, ಅಧಃ.)
ಓಂ ದಶದಿಕ್ಪತಿವಂದಿತಾಯ ನಮಃ

922. ಓಂ ದಶಾಧ್ಯಾಯಃ-
ಭಾ: ದಶಾಧ್ಯಾಯಶ್ಚತುರ್ವೇದೀ ಷಡಂಗಾಧ್ಯಯನಾನ್ಮತಃ||
ನಾಲ್ಕು ವೇದಗಳನ್ನೂ, ಆರು ವೇದಾಂಗಗಳನ್ನೂ, ಅಧ್ಯಯನ ಮಾಡಿದವರೆಲ್ಲರ ಆತ್ಮವು ಗಣೇಶನೇ ಆಗಿದ್ದಾನೆ. ಆದ್ದರಿಂದ ದಶಾಧ್ಯಾಯನು.
ಓಂ ದಶಾಧ್ಯಾಯಾಯ ನಮಃ

923. ಓಂ ದಶಪ್ರಾಣಃ-
ಭಾ: ದಶಪ್ರಾಣಃ ಪಂಚ ಪಂಚ ಪ್ರಾಣನಾಗಾದಿ ರೂಪವಾನ್‌|
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಪಂಚ ಪ್ರಧಾನಪ್ರಾಣಗಳು ನಾಗ, ಕೂರ್ಮ, ಕ್ರುಕರ, ದೇವದತ್ತ, ಧನಂಜಯಗಳೆಂಬ ಐದು ಉಪಪ್ರಾಣಗಳು ಗಣೇಶನ ರೂಪಗಳೇ ಆಗಿವೆ. ಆದ್ದರಿಂದ ಅವನು ದಶಪ್ರಾಣನು.
ಓಂ ದಶಪ್ರಾಣಾಯ ನಮಃ

924. ಓಂ ದಶೇಂದ್ರಿಯ ನಿಯಾಮಕಃ-
ಭಾ: ವಾಗಾದ್ಯಾತ್ಮ ತ್ವಗಾದ್ಯಾತ್ಮ ದಶೇಂದ್ರಿಯ ನಿಯಾಮಕಃ|
ತ್ವಕ್ (ಚರ್ಮ), ಚಕ್ಷು (ಕಣ್ಣುಗಳು), ಶ್ರೋತ್ರ (ಕಿವಿಗಳು), ಜಿಹ್ವ (ನಾಲಿಗೆ), ಘ್ರಾಣ(ಮೂಗು)ಗಳೆಂಬ ಪಂಚ ಜ್ಞಾನೇಂದ್ರಿಯಗಳನ್ನೂ, ವಾಕ್, ‘ಮಾತು’ ಪಾಣಿ (ಕೈಗಳು), ಪಾದ (ಕಾಲುಗಳು), ಪಾಯು (ಗುದಸ್ಥಾನ), ಉಪಸ್ಥ (ಜನನೇಂದ್ರಿಯ)ಗಳೆಂಬ ಐದು ಕರ್ಮೇಂದ್ರಿಯಗಳನ್ನೂ ತನ್ನ ಹತೋಟಿಯಲ್ಲಿಟ್ಟುಕೊಂಡು ನಡೆಸುತ್ತಾನೆ. ಆದ್ದರಿಂದ ದಶೇಂದ್ರಿಯನಿಯಾಮಕನು.
ಓಂ ದಶೇಂದ್ರಿಯನಿಯಾಮಕಾಯ ನಮಃ
ದಶಾಕ್ಷರಮಹಾಮಂತ್ರೋ ದಶಾಶಾವ್ಯಾಪಿವಿಗ್ರಹಃ|
ಏಕಾದಶಾದಿಭೀರುದ್ರೈಃ ಸ್ತುತ ಏಕಾದಶಾಕ್ಷರಃ||
925. ಓಂ ದಶಾಕ್ಷರಮಹಾಮಂತ್ರಃ-
ಭಾ: ಉಕ್ತೋ ಹಸ್ತಿಪಿಶಾಚೀತಿ ಮಂತ್ರಶ್ಚೇತ್ಪ್ರಣವಾದಿಮಃ|
ದಶಾಕ್ಷರಮಹಾಮಂತ್ರ- ಸ್ತ್ವದ್ದೈವತ್ಯಸ್ತ್ವಮೇವ ಸಃ||
ಪ್ರಣವವು (ಓಂಕಾರವು) ಆದಿಯಲ್ಲಿರುವ ‘ಹಸ್ತಿಪಿಶಾಚಿ ಲಿಖೇ ಸ್ವಾಹಾ’ ಎಂಬ ನವಾಕ್ಷರಮಂತ್ರವು, ದಶಾಕ್ಷರ ಮಹಾಮಂತ್ರವೆಂದು ಕರೆಯಲ್ಪಡುತ್ತದೆ. ಹೇ ಗಣೇಶ! ನೀನು ದಶಾಕ್ಷರಮಹಾಮಂತ್ರದ ಸ್ವರೂಪನು ಅಧಿಷ್ಠಾನ ದೇವನೂ ಆಗಿದ್ದೀಯೆ.
ಓಂ ದಶಾಕ್ಷರಮಹಾಮಂತ್ರಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share