MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 187

282
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 187

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಅಥ ಗ್ರಂಥಫಲಶೃತಿಃ
ಇತಿ ವೈನಾಯಕಂ ನಾಮ್ನಾಂ ಸಹಸ್ರಮಿದಮೀರಿತಂ೤
ಇದಂ ಬ್ರಾಹ್ಮೇ ಮುಹೂರ್ತೇ ಯಃ ಪಠತಿ ಪ್ರತ್ಯಹಂ ನರಃ೤
ಕರಸ್ಥಂ ತಸ್ಯ ಸಕಲಮೈಹಿಕಾಮುಷ್ಮಿಕಂ ಸುಖಮ್‌೤೤
ಆಯುರಾರೋಗ್ಯಮೈಶ್ವರ್ಯಂ ಧೈರ್ಯಂ ಶೌರ್ಯಂ ಬಲಂ ಯಶಃ೤
ಮೇಧಾ ಪ್ರಜ್ಞಾ ಧೃತಿಃ ಕಾಂತಿಃ ಸೌಭಾಗ್ಯಮತಿರೂಪತಾ೤೤
ಸತ್ಯಂ ದಯಾ ಕ್ಷಮಾ ಶಾಂತಿರ್ದಾಕ್ಷಿಣ್ಯಂ ಧರ್ಮಶೀಲತಾ೤
ಜಗತ್ಸಂಯಮನಂ ವಿಶ್ವಸಂವಾದೋ ವಾದಪಾಟವಮ್‌೤೤
ಸಭಾಪಾಂಡಿತ್ಯಮೌದಾರ್ಯಂ ಗಾಂಭೀರ್ಯಂ ಬ್ರಹ್ಮವರ್ಚಸಂ೤
ಔನ್ನತ್ಯಂ ಚ ಕುಲಂ ಶೀಲಂ ಪ್ರತಾಪೋ ವೀರ್ಯಮಾರ್ಯತಾ೤೤
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಸ್ಥೈರ್ಯಂ ವಿಶ್ವಾತಿಶಾಯಿತಾ೤
ಧನಧಾನ್ಯಾಭಿವೃದ್ಧಿಶ್ಚ ಸಕೃದಶ್ಚ ಜಪಾದ್ಭವೇತ್‌೤೤
ಈ ರೀತಿಯಲ್ಲಿ ಗಣೇಶನ ಸಹಸ್ರಸಂಖ್ಯಾಕವಾದ ನಾಮಗಳು ಹೇಳಲ್ಪಟ್ಟವು. ಇದನ್ನು ಪ್ರತಿನಿತ್ಯವೂ ಬ್ರಾಹ್ಮೀಮುಹೂರ್ತದಲ್ಲಿ ಪಠಿಸುವವರ ಕರಸ್ಥವಾಗಿ ಐಹಿಕ ಮತ್ತು ಆಮುಷ್ಮಿಕ ಸುಖವಿರುತ್ತದೆ. ಒಂದು ಸಲ ಈ ಸಹಸ್ರನಾಮವನ್ನು ಪಠಿಸುವುದರಿಂದ ಆಯುಸ್ಸು, ಆರೋಗ್ಯ, ಐಶ್ವರ್ಯ, ಧೈರ್ಯ, ಶೌರ್ಯ, ಬಲ, ಯಶಸ್ಸು ಒಳ್ಳೆಯ ಧಾರಣಾಶಕ್ತಿಯುಳ್ಳ ಬುದ್ಧಿ, ಗ್ರಾಹಕ ಶಕ್ತಿ, ಶರೀರಕಾಂತಿ, ಸೌಭಾಗ್ಯ, ಸೌಂದರ್ಯ, ಸತ್ಯ, ದಯೆ, ಕ್ಷಮೆ, ಶಾಂತಿ, ದಾಕ್ಷಿಣ್ಯ, ಧರ್ಮಶ್ರದ್ಧೆ, ಜಗತ್ತನ್ನುವಶಪಡಿಸಿಕೊಳ್ಳುವ ಶಕ್ತಿ, ಮಾತಿನಿಂದ ವಿಶ್ವವನ್ನೇ ಗೆಲ್ಲಬಲ್ಲ ವಾಕ್ಶಕ್ತಿ, ಸಭಾಪಾಂಡಿತ್ಯ, ಉದಾರಭಾವನೆ, ಗಂಭೀರಸ್ವಭಾವ, ಬ್ರಹ್ಮವರ್ಚಸ್ಸು, ದೊಡ್ಡತನ, ಸತ್ಕುಲಪ್ರಾಪ್ತಿ, ಒಳ್ಳೆಯ ನಡವಳಿಕೆ, ಪ್ರತಾಪ, ವೀರ್ಯ, ಹಿರಿಮೆ ಇವಿಷ್ಟೂ ಪ್ರಾಪ್ತವಾಗುತ್ತವೆ.
ಭಾ: ಇತೀತಿ, ಅನೇನ ಪ್ರಕಾರೇಣೇ7ತ್ಯರ್ಥಃ ಇದಮಿತ್ಯಂಗುಲ್ಯಾ ನಿರ್ದೇಶಃ ಪದದ್ವಯೇನ ಸಹಸ್ರಸಂಖ್ಯಾಯಾಃ ಅನ್ಯೂನಾನಧಿಕತಾ ಧ್ವನಿತಾ, ತೇನಾಷ್ಟೌ ನಾಮಾನೀಹಾಧಿಕೃತ್ಯ ಪದಾನಿ ಛಿಂದಂತೋ ವಚನಾಭಾವಾನ್ನಿರಸ್ತಾಃ೤ ಯತ್ತು ಅಷ್ಟಸಂಖ್ಯಾಧಿಕ್ಯಂ ವಿನಾಸ್ಯ ಫಲಪ್ರದತ್ವಂ ನಾಸ್ತೀತ್ಯುಕ್ತ್ವಾ ಸೋಮಕ್ರಯ ಪ್ರಕರಣಸ್ಯ ಅಷ್ಟಸಂಖ್ಯಾರ್ಥ ವಾದಂ ಲಿಖಂತಿ ತತ್ಪಾಮರ ಪ್ರತಾರಣಮಾತ್ರಂ ವಿಷ್ಣು ಲಲಿತಾದಿ ಸಹಸ್ರನಾಮಸು ಕ್ವಾಪಿ ಫಲಾಸಿದ್ಧ್ಯತ್ಯನಾಪತ್ತೇಃ, ತಸ್ಮಾತ್ಸ್ವಸ್ಯ ನಾಮ ಪದಚ್ಛೇದಾ ಸಾಮರ್ಥ್ಯಂ, ಅಪನ್ಹೋತುಂ ತದ್ವಚನಮಿತಿ ದಿಕ್‌೤ ಅಸ್ಯ ಸ್ತೋತ್ರಸ್ಯ ಜಪ ಐಹಿಕ ಕಾಮಸ್ಯ, ಆಮುಷ್ಮಿಕ ಕಾಮಸ್ಯ, ನಿಷ್ಕಾಮಕಾಮಸ್ಯ ಚೇತಿ ತ್ರಿವಿಧಃ೤ ತತ್ರ ಪ್ರಥಮಮಾಹ ಸಾರ್ಧೈಃ ಷೋಡಶಭಿಃ ಆಯುರಿತ್ಯಾದಿಭಿಃ೤ ಪ್ರಜ್ಞಾಗ್ರಾಹಿಣೀ ಬುದ್ಧಿಃ, ಮೇಧಾ ಧಾರಣಾವತೀ ಬುದ್ಧಿಃ, ಕ್ಷಮಾ ಪರಾಪಕಾರಪ್ರತೀಕಾರಕ್ರೀಯಾಭಾವಃ, ಕ್ಷಾಂತಿಃ ಪರಕೃತಾಪಕಾರ ಪ್ರಯುಕ್ತ ಕ್ರೋಧಸ್ಯಾಪ್ಯಭಾವಃ೤ ಜ್ಞಾನಂ ಮೋಕ್ಷ ಜನಕ ಚರಮವೃತ್ತಿಃ೤ ವಿಜ್ಞಾನಂ ಶಿಲ್ಪವಿಷಯಕಂ ಶಾಸ್ತ್ರಂ೤
ಈ ವಿಧವಾಗಿ ಗಣೇಶಸಹಸ್ರನಾಮವು ಹೇಳಲ್ಪಟ್ಟಿತು ಎಂದು ಹೇಳಲು ಫಲಶ್ರುತಿಯಲ್ಲಿ ಇತಿ ಶಬ್ದ ಪ್ರಯೋಗವು. ಇದು ಸಹಸ್ರ ಸಂಖ್ಯಾಕವಾದ ಸ್ತೋತ್ರವು ಎಂದು ಬೆರಳಿಟ್ಟು ತೋರಿಸಿರುವಂತೆ ಹೇಳಲು ‘ಇದಂ’ ಶಬ್ದವನ್ನು ಎರಡು ಪರ್ಯಾಯ ಬಳಸಿದ್ದಾರೆ. ಹಾಗೆ ಹೇಳಿದ್ದರಿಂದ ಸಾವಿರಕ್ಕಿಂತ ಕಡಿಮೆಯಲ್ಲ ಹೆಚ್ಚಿಗೂ ಅಲ್ಲ ಎಂದು ಕೂಡಾ ತಿಳಿಸಿದಂತಾಯಿತು. ಹಾಗೆ ತಿಳಿಸುವುದರಿಂದ ಸಾವಿರದ ಎಂಟು ನಾಮಗಳು ಎಂದು ಎಂಟು ನಾಮಗಳನ್ನು ಹೆಚ್ಚಿಗೆ ಹೇಳುವವರ ಅಭಿಪ್ರಾಯವನ್ನು ಖಂಡಿಸಿದಂತಾಯಿತು. ಸೊನ್ನೆಯು ಕೊನೆಯಲ್ಲಿ ಇರುವುದು ಒಳ್ಳೆಯದಲ್ಲ, ಎಂಟು ನಾಮಗಳನ್ನು ಹೆಚ್ಚಿಗೆ ಹೇಳಿಕೊಳ್ಳದಿದ್ದರೆ ಫಲಸಿಗುವುದಿಲ್ಲ ಎಂದೆಲ್ಲಾ ಹೇಳುವವರ ಮಾತುಗಳಿಗೆ ಆಧಾರವಿಲ್ಲ. ಅವು ಕೇವಲ ಪಾಮರರನ್ನು ತೃಪ್ತಿಪಡಿಸುವ ಮಾತುಗಳಾಗಿವೆ. ಸಾವಿರ ನಾಮಗಳಿರುವ ವಿಷ್ಣು, ಲಲಿತಾ ಸಹಸ್ರನಾಮಗಳಲ್ಲಿ ಫಲಸಿದ್ಧಿಯ ಅನಾಪತ್ತಿ ಏನೂ ಕಾಣಿಸುವುದಿಲ್ಲ. (ಶೂನ್ಯಾಂತ ಸಂಖ್ಯೆ ಅಶುಭ ಎಂಬ ಮಾತು ಸತ್ಯವಾದ ಪಕ್ಷದಲ್ಲಿ ವಿಷ್ಣು, ಲಲಿತಾಸ್ತೋತ್ರ ಸಹಸ್ರ ನಾಮಗಳ ಪಾರಾಯಣದಿಂದ ಫಲಪ್ರಾಪ್ತಿಯು ಆಗಬಾರದಿತ್ತು. ಆದರೆ ವಾಸ್ತವ ಹಾಗಿಲ್ಲ. ಹಾಗಾಗಿ ಎಂಟು ನಾಮಗಳನ್ನು ಸೇರಿಸಿಕೊಳ್ಳಬೇಕು ಎಂದು ಹೇಳಿದವರಿಗೆ ಪದಚ್ಛೇದಮಾಡುವ ವಿಷಯದಲ್ಲಿ ಸಾಮರ್ಥ್ಯವಿರಲಿಲ್ಲ ಎಂದು ತಿಳಿದು ಅವರು ತಮ್ಮ ಅಸಾಮರ್ಥವನ್ನು ಮುಚ್ಚಿಡುವುದಕ್ಕಾಗಿ ಮಾತ್ರ ಹಾಗೆ ಹೇಳಿದ್ದರು ಎಂದೂ ಸಹ ತಿಳಿದು ಅವರ ಮತವನ್ನು ತಿರಸ್ಕರಿಸಬೇಕು. (ಸಾವಿರನಾಮಗಳನ್ನೇ ಗ್ರಹಿಸಬೇಕು ಸಾವಿರದೆಂಟು ನಾಮಗಳನ್ನಲ್ಲ.)
ಈ ಸ್ತೋತ್ರದ ಜಪವು ಐಹಿಕ ಸುಖವನ್ನು ಕೋರುವವನು, ಆಮುಷ್ಮಿಕ ಸುಖಕಾಮಿ, ನಿಷ್ಕಾಮಿ ಎಂಬ ಮೂರು ವಿಧದವರಿಗೂ ವಿಹಿತವಾಗಿದೆ. ಅವರಲ್ಲಿ ಮೊದಲನೆಯವನಿಗೆ ಸಿಕ್ಕುವ ಫಲವನ್ನು ಕುರಿತು ಸಾರ್ಧ ಷೋಡಶ (16 1/2) ಹೇಳಿದರು.
ಗ್ರಹಣಶಕ್ತಿಯಿರುವ ಬುದ್ಧಿಯನ್ನು ಪ್ರಜ್ಞಾ ಎನ್ನುತ್ತಾರೆ. ಧಾರಣಾಶಕ್ತಿಯಿರುವ ಬುದ್ಧಿಯನ್ನು ‘ಮೇಧಾ’ ಎನ್ನುವರು. ಅಪಕಾರ, ಪ್ರತೀಕಾರ ಭಾವನೆಗಳು ಇಲ್ಲದಿರುವುದನ್ನು ‘ಕ್ಷಮಾ’ ಎನ್ನುತ್ತಾರೆ. ಪರರು ಅಪಕಾರ ಮಾಡಿದರೂ ಕೋಪ ಬರದಿರುವುದನ್ನು ‘ಕ್ಷಾಂತಿ’ ಎನ್ನುವರು. ಮೋಕ್ಷವನ್ನು ಕೊಡುವ ಕಡೆಯ ವೃತ್ತಿಯನ್ನು ಜ್ಞಾನ ಎಂದೂ ಶಿಲ್ಪಾದಿ ವಿಷಯಕವಾದ ಶಾಸ್ತ್ರಪರಿಜ್ಞಾನವನ್ನು “ವಿಜ್ಞಾನ”ವೆಂದೂ ಕರೆಯುತ್ತಾರೆ.

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share