MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 188

251
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 188

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ವಶ್ಯಂ ಚತುರ್ವಿಧಂ ನೃಣಾಂ ಜಪಾದಸ್ಯ ಪ್ರಜಾಯತೇ೤
ರಾಜ್ಞೋ ರಾಜಕಲತ್ರಸ್ಯ ರಾಜಪುತ್ರಸ್ಯ ಮಂತ್ರಿಣಃ೤೤
ಜಪ್ಯತೇ ಯಸ್ಯ ವಶ್ಯಾರ್ಥಂ ಸ ದಾಸಸ್ತಸ್ಯ ಜಾಯತೇ೤
ಧರ್ಮಾರ್ಥಕಾಮಮೋಕ್ಷಾಣಾಮನಾಯಾಸೇನ ಸಾಧನಮ್‌೤೤
ಶಾಕಿನೀ ಡಾಕಿನೀ ರಕ್ಷೋ ಯಕ್ಷೋರಗ ಭಯಾಪಹಮ್‌೤
ಸಾಮ್ರಾಜ್ಯಸುಖದಂ ಚೈವ ಸಮಸ್ತರಿಪುಮರ್ದನಮ್‌೤೤
ಸಮಸ್ತ ಕಲಹಧ್ವಂಸಿ ದಗ್ಧಬೀಜಪ್ರರೋಹಣಮ್‌೤
ದುಸ್ಸ್ವಪ್ನನಾಶನಂ ಕ್ರುದ್ಧಸ್ವಾಮಿಚಿತ್ತಪ್ರಸಾದನಂ೤೤
ಷಟ್ಕರ್ಮಾಷ್ಟಮಹಾಸಿದ್ಧಿ ತ್ರಿಕಾಲಜ್ಞಾನ ಸಾಧನಮ್‌೤
ಪರಕೃತ್ಯಾಪ್ರಶಮನಂ ಪರಚಕ್ರವಿಮರ್ದನಮ್‌೤೤
ಸಂಗ್ರಾಮರಂಗೇ ಸರ್ವೇಷಾಮಿದಮೇಕಂ ಜಯಾವಹಮ್‌೤
ಸರ್ವವಂಧ್ಯಾತ್ವದೋಷಘ್ನಂ ಗರ್ಭರಕ್ಷೈಕಕಾರಣಮ್‌೤೤
ಪಠ್ಯತೇ ಪ್ರತ್ಯಹಂ ಯತ್ರ ಸ್ತೋತ್ರಂ ಗಣಪತೇರಿದಮ್‌೤
ದೇಶೇ ತತ್ರ ನ ದುರ್ಭಿಕ್ಷಮೀತಯೋ ದುರಿತಾನಿ ಚ೤೤
ನ ತದ್‌ಗೃಹಂ ಜಹಾತಿ ಶ್ರೀರ್ಯತ್ರಾಯಂ ಪಠ್ಯತೇ ಸ್ತವಃ೤
ಕ್ಷಯ ಕುಷ್ಠಪ್ರಮೇಹಾರ್ಶೋಭಗಂದರವಿಷೂಚಿಕಾಃ೤೤
ಭಾ: ಚತುರ್ವಿಧಾ ಸುರನರ ತಿರ್ಯಕ್‌ಸ್ಥಾವರ ವಶ್ಯಭೇದಾತ್
ನರವಶ್ಯವಿಶೇಷಂ ಪ್ರಾಹ- ರಾಜ್ಞ ಇತಿ೤
ದಗ್ಧಸ್ಯ ರೋಗಾಗ್ನಿಪೃಷ್ಠಸ್ಯ ಬೀಜಸ್ಯ ರೇತಸಃ ಪ್ರರೋಹಣಂ
ಪ್ರಜೋತ್ಪಾದನಸಾಮರ್ಥ್ಯಪ್ರದಮ್‌೤೤
ಷಟ್ಕರ್ಮಾಣಿ ಮೋಹನಮಾಕರ್ಷಣಂ ಸ್ತಂಭನಂ
ವಿದ್ವೇಷಣಮುಚ್ಚಾಟನಂ ಮಾರಣಂ ಚೇತಿ ಭೇದಾತ್‌೤
ಶಾಂತಿವಶ್ಯಯೋಸ್ತಂತ್ರೇಷು ಷಟ್ಕರ್ಮಮಧ್ಯೇ ಪರಿಗಣನೇ7ಪಿ ಪ್ರಕೃತೇ
ತಯೋಃ ಪಾರ್ಥಕ್ಯೇನ ನಿರ್ದೇಶಾನ್ಮೋಹನಾಕರ್ಷಣೇ ಮೇಲಿತೇ೤
ಪರಕೃತ್ಯಾ ಶತ್ರುಭಿಃ ಸ್ವಮಾರಣೋದ್ದೇಶೇನ ನಿರ್ಮಿತಾ ರಾಕ್ಷಸೀ೤
ಶಾಂತಿಕರ್ಮಾಹ – ಕ್ಷಯೇತ್ಯಾದಿನಾ೤

ತಾ:-ದೇವ, ಮನುಷ್ಯ, ಪಶು, ಸ್ಥಾವರಗಳೆಂಬ ನಾಲ್ಕುತರದ ಸೃಷ್ಟಿವಿಶೇಷವನ್ನು ವಶಮಾಡಿಕೊಳ್ಳುವ ವಿಧಾನದಲ್ಲಿ ಮನುಷ್ಯನನ್ನು ವಶಮಾಡಿಕೊಳ್ಳುವ ವಿಧಾನವನ್ನು ರಾಜ್ಞಃ – ಎಂದು ಪ್ರಾರಂಭಿಸಿ ತಿಳಿಸಿದ್ದಾರೆ. ರಾಜ, ರಾಜಪತ್ನಿ, ರಾಜಪುತ್ರ, ಮಂತ್ರಿಗಳೆಂಬ ನಾಲ್ಕುವಿಧ ಜನರೂ ಈ ಸಹಸ್ರನಾಮದ ಪಾರಾಯಣದಿಂದ ವಶರಾಗುತ್ತಾರೆ. ದಾಸರಂತೆ ನಡೆದುಕೊಳ್ಳುತ್ತಾರೆ. ಈ ಸಹಸ್ರನಾಮವು ಧರ್ಮಾರ್ಥ ಕಾಮ ಮೋಕ್ಷಗಳನ್ನು ಅನಾಯಾಸವಾಗಿ ಸಾಧಿಸಿಕೊಡುವ ಸಾಧನೆಯಾಗಿದೆ. ಶಾಕಿನೀ, ಡಾಕಿನೀ, ರಾಕ್ಷಸ, ಯಕ್ಷ, ನಾಗ ಇವರುಗಳಿಂದ ಉಂಟಾದ ಭಯವನ್ನು ಹೋಗಲಾಡಿಸುತ್ತದೆ. ಸಾಮ್ರಾಜ್ಯಸುಖವನ್ನು ಕೊಡುತ್ತದೆ. ಶತ್ರುಭಯಂಕರವಾಗಿದೆ. ಕಲಹಗಳನ್ನು ನಾಶಮಾಡುತ್ತದೆ. ಪ್ರಜೋತ್ಪಾದನ ಸಾಮರ್ಥ್ಯವನ್ನು ಅನುಗ್ರಹಿಸುತ್ತದೆ.
ರೋಗದಿಂದ ರೇತೋನಾಶವಾದರಿಗೆ ರೇತಃಪ್ರದಾನವಾಗಿದೆ. ದುಃಸ್ವಪ್ನಗಳನ್ನು ನಾಶಮಾಡುತ್ತದೆ. ಕೋಪದಲ್ಲಿರುವ ಪ್ರಭುವನ್ನು ಪ್ರಸನ್ನಚಿತ್ತನನ್ನಾಗಿ ಮಾಡುತ್ತದೆ. ಮೋಹನ, ಆಕರ್ಷಣ, ಸ್ತಂಭನ, ವಿದ್ವೇಷಣ, ಉಚ್ಛಾಟನ, ಮಾರಣಗಳೆಂಬ ಷಟ್ಕರ್ಮಗಳ ಸಾಧನೆಯಾಗಿದೆ. ಇದು ಅಷ್ಟಸಿದ್ಧಿಗಳನ್ನೂ, ತ್ರಿಕಾಲಜ್ಞಾನವನ್ನೂ, ಸಾಧಿಸಿಕೊಡುತ್ತದೆ. ನಮ್ಮ ನಾಶಕ್ಕಾಗಿ ಶತ್ರುಗಳಿಂದ ಸೃಜಿಸಲ್ಪಟ್ಟ ರಾಕ್ಷಸಿಯನ್ನು (ಪರಕೃತ್ಯೆಯನ್ನು) ಶಮನಮಾಡುತ್ತದೆ. ಶತ್ರುಸೈನ್ಯವನ್ನು ನಾಶಮಾಡುತ್ತದೆ. ಕೇವಲ ಈ ಸಹಸ್ರನಾಮವು ಮಾತ್ರ ಎಲ್ಲರಿಗೂ ಯುದ್ಧರಂಗದಲ್ಲಿ ಜಯವನ್ನು ಕೊಡಬಲ್ಲದು. ಮಕ್ಕಳನ್ನು ಹಡೆಯದ ಹೆಂಗಸಿನ ದೋಷಗಳನ್ನು ಹೋಗಲಾಡಿಸಿ ಸಂತಾನವನ್ನು ಅನುಗ್ರಹಿಸುವುದು. ಗರ್ಭಚ್ಯುತಿಯಾಗದಂತೆ ಕಾಪಾಡುವುದು. ಯಾವದೇಶದಲ್ಲಿ ಜನರು ಈ ಗಣಪತಿಸ್ತೋತ್ರವನ್ನು ಪ್ರತಿನಿತ್ಯ ಪಠಿಸುತ್ತಾರೆಯೋ ಅಲ್ಲಿ ದುರ್ಭಿಕ್ಷವಾಗಲಿ, ಈತಿ ಬಾಧೆಯಾಗಲಿ, ದುರಿತವಾಗಲಿ ಇರುವುದಿಲ್ಲ. ಯಾವ ಮನೆಯಲ್ಲಿ ಇದನ್ನು ಪಠಿಸುತ್ತಾರೆಯೋ ಆ ಮನೆಯನ್ನು ಸಂಪತ್ತು ಎಂದಿಗೂ ಬಿಟ್ಟು ಹೋಗುವುದಿಲ್ಲ. ಇನ್ನು ಕ್ಷಯ ಇತ್ಯಾದಿ ಪದಗಳಿಂದ ಶಾಂತಿ ಕರ್ಮವನ್ನು ಹೇಳುತ್ತಾರೆ. ಕ್ಷಯ, ಕುಷ್ಠ, ಶುಕ್ರಧಾತುವು ಯಾವಾಗಲೂ ಸ್ರವಿಸುವುದು, ವಾಂತಿ ಭೇದಿ ರೋಗ (ಕಾಲರಾ ವ್ಯಾಧಿ) ಈ ರೋಗಗಳೆಲ್ಲವೂ ಈ ಸಹಸ್ರನಾಮಪಾರಾಯಣದಿಂದ ಶಮಿಸಲ್ಪಡುತ್ತವೆ.

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share