MP ಕವನ ಸಂಗ್ರಹ : ಶ್ರೀಮತಿ . ಆಶಾಲತ

215
Share

ಸವಿನಯ ಪ್ರಾರ್ಥನೆ

ಓ ಗಜಮುಖನೆ ನಿನಗೆ ಕೋಟಿವಂದನೆ
ನೀ ಬರುವ ಅವಧಿಯೊಳ್
ಕಿರಿಯರ ಮೊಗದಲ್ಲಿ ಹೊಮ್ಮವುದು ನಗೆಯ ವೈಭವ
ಭಾದ್ರಪದ ಮಾಸದಿ ನಿನ್ನಾಗಮನ
ಸರ್ವರೂ ಸ್ವಾಗತಿಸುವರು ನಿನ್ನನ್ನು
ಸಡಗರ ಸಂಭ್ರಮಗಳಿಂದ
ವಿಘ್ನ ವಿನಾಶಕನೇ ಸಕಲ ಕಾರ್ಯಗಳಲ್ಲೂ ಸಲ್ಲುವುದು ನಿನಗೆ
ಅಗ್ರ ಪೂಜೆ ||1||

ನಿನ್ನ ಇಡೀ ಕಾಯವೇ ಸಾರುವುದು
ಜಗತ್ತಿಗೆ ಸಂದೇಶವನ್ನು
ನಿನ್ನ ವಿಶಾಲವಾದ ಕರ್ಣಗಳು ವಿವೇಕ, ಜ್ಞಾನದ ಸಂಕೇತ
ನಿನ್ನ ಶಿರವು ನಂಬಿಕೆ, ಬುದ್ದಿವಂತಿಕೆ, ವಿವೇಚನಾ ಶಕ್ತಿಯ ದ್ಯೋತಕ
ನಿನ್ನ ಬೃಹದಾಕಾರದ ಉದರವು ಇಡೀ ಜಗವನ್ನೇ ಅಡಗಿಸಿ ಕೊಂಡಿರುವುದರ ಪ್ರತೀಕ
ನಿನ್ನ ವಾಹನ ಮೂಷಿಕವು ಪ್ರತಿಭೆ, ವಿವೇಕಬುದ್ದಿಯ ಸಂಕೇತ ||2||

ದೇಶದೆಲ್ಲೆಡೆ ಸಡಗರ ಸಂಭ್ರಮಗಳಿಂದ ಆಚರಿಸುವರು
ನಿನ್ನ ಪರ್ವವನ್ನು
ಮಾತಾಪಿತರೇ ‘ಪ್ರತ್ಯಕ್ಷ ದೈವ’ವೆಂದು
ಇಡೀ ಜಗಕ್ಕೆ ತೋರಿದ ‘ಮೊದಲ ಗುರು’ ನೀನು
ನಿನ್ನ ಇಡೀ ಬದುಕೇ ಮಾನವ ಜೀವನಕ್ಕೆ ಸಂದೇಶಗಳ ಕಣಜ
ನಮಿಪೆವು ಗಣಪನೇ ಭಕ್ತಿಭಾವದಿ
ನಿನಗೆ
ಪೂಜಿಪೆವು ಏಕದಂತನೆ ಹೃದಯ
ಪೂರ್ವಕವಾಗಿ ನಿನ್ನನ್ನು ||3||

ವರುಣದೇವನ ಅವಕೃಪೆಗೆ ಪಾತ್ರವಾಗಿದೆ ಇಡೀ
ಭೂಮಂಡಲವು
ಪ್ರಕೃತಿದೇವಿ ಮುನಿದು ಅಟ್ಟಹಾಸದಿ ಮೆರೆದಿಹಳು ಸಾವಿರಾರು ಮೂಕ ಮುಗ್ಧ ಜೀವಿಗಳು ಬಲಿಯಾಗಿಹವು ವರುಣನಾರ್ಭಟಕ್ಕೆ
ಮೂರಾಬಟ್ಟೆಯಾಗಿಹುದು
ಜನಸಾಮಾನ್ಯರ ಬದುಕು
ನಿಲ್ಲಿಸು ವರುಣನಾರ್ಭಟವ
ಶಾಂತಗೊಳಿಸು ಪ್ರಕೃತಿಮಾತೆಯ
ಕರುಣೆ ತೋರಿ ನಿನ್ನ ಮಕ್ಕಳನ್ನು ರಕ್ಷಿಸು, ರಕ್ಷಿಸು ಅನವರತ ಓ
ಸರ್ವಸಿದ್ದಿ ವಿನಾಯಕನೇ ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share