ದಸರಾ-ಮಳೆಯ ನಡುವೆಯೂ ಯುವ ದಸರಾ ಮಳೆಯಲ್ಲಿ ಮಿಂದೆದ್ದ ಯುವ ಸಮೂಹ ಫೋಟೋಗಳ ಹೈಲೈಟ್ಸ್ ವೀಕ್ಷಿಸಿ

164
Share

 

ಮಳೆಯ ನಡುವೆಯೂ ಯುವ ಸಂಭ್ರಮದ ಮಳೆಯಲ್ಲಿ ಮಿಂದೆದ್ದ ಯುವ ಸಮೂಹ*

ಮೈಸೂರು, ಸೆ.30:- ಒಂದು ಕಡೆ ಧರೆಗೆ ಮಳೆಯ ಸಿಂಚನವಾಗುತ್ತಿದ್ದರೆ ಇನ್ನೊಂದು ಕಡೆ ಮಳೆಗೆ ಸೆಡ್ಡು ಹೊಡೆಯುವಂತೆ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ರಿಯಲ್ ಸ್ಟಾರ್ ಉಪೇಂದ್ರ ಅವರ ಮತ್ತೇರಿಸುವಂತ ಡೈಲಾಗ್ಸ್, ಸಾಧುಕೋಕಿಲ ಹಾಗೂ ಚಿಕ್ಕಣ್ಣ ಅವರ ಹಾಸ್ಯ ಚಟಾಕಿ ಹಾಗೂ ಕಲಾವಿದರ ಸಂಗಮ.

ಇಂತಹ ದೃಶ್ಯ ಕಂಡು ಬಂದಿದ್ದು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ 3ನೇ ದಿನದ ಯುವ ದಸರಾದ ಸ್ಯಾಂಡಲ್ ವುಡ್ ನೈಟ್ ನಲ್ಲಿ. ವೇದಿಕೇಯ ಮೇಲೆ ಉಪೇಂದ್ರ ಹಾಗೂ ಸಾಧುಕೋಕಿಲ ಅವರು ರಕ್ತ ಕಣ್ಣೀರು ಚಿತ್ರದ ಹಾಡನ್ನು ಹಾಡುವುದರ ಜೊತೆಗೆ ನರ್ತಿಸಿ ಅಭಿಮಾನಿಗಳನ್ನು ರಂಜಿಸಿದರು.

ಚಿಕ್ಕಣ್ಣ ಅವರು ಮಾತನಾಡಿ, ಉಪಾಧ್ಯಕ್ಷ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ. ಅದನ್ನು ಯಶಸ್ವಿಯಾಗಿ ಬೆಳೆಸಬೇಕು. ಎಂದು ಹೇಳಿ ಪುನೀತ್ ರಾಜ್ ಕುಮಾರ್ ಅವರಿಗಾಗಿ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಹಾಡಿದರು.

ವೇದಿಕೆಯ ಮೇಲೆ ಸಾಧುಕೋಕಿಲ ಅವರು ಮುಕುಂದ ಮುರಾರಿ ಚಿತ್ರದ ನೀನೆ ರಾಮ ನೀನೇ ಶಾಮ ನೀನೇ ಅಲ್ಲಾ ನೀನೇ ಏಸು ಗೀತೆ ಹಾಡಿ ತಲೆದೂಗುವಂತೆ ಹಾಡಿದರು. ಪುನೀತ್ ರಾಜ್ ಕುಮಾರ್ ಅವರ ಕುರಿತು ಮಾತನಾಡಿ, ಅವರು ಎಲ್ಲೂ ಹೋಗಿಲ್ಲ. ನಮ್ಮ ನಿಮ್ಮ ನಡುವೆಯೇ ಇದ್ದಾರೆ ಎಂದು ಅವರಿಗಾಗಿ ಸೂಚನೆಯೂ, ಯೋಚನೆಯೂ ಇರಲಿಲ್ಲ ನೀ ಹೋದ ಕಾರಣ ತಿಳಿದಿಲ್ಲ ಎಂದು ಭಾವುಕರಾಗಿ ಹಾಡುವ ಮೂಲಕ ಪುನೀತ್ ಅವರಿಗೆ ನಮನ ಸಲ್ಲಿಸಿದರು.

ಸೋನು, ದೀರನ್ ರಾಮ್ ಕುಮಾರ್, ನಿಧಿ ಸುಬ್ಬಯ್ಯ ಹಾಗೂ ಹರ್ಷಿಕಾ ಪೂಣಚ್ಛ ಅವರ ನೃತ್ಯ ನೋಡುಗರ ಆಕರ್ಷಣೆಯಾಗಿತ್ತು. ಕೆಂಡ ಸಂಪಿಗೆಯ ನಾಯಕಿ ಮಾನ್ವೀತ ಅವರು ಪುನೀತ್ ರಾಜ್‍ಕುಮಾರ್ ಹಾಗೂ ದರ್ಶನ್ ಅವರ ಗೀತೆಗಳಿ ನೃತ್ಯ ಮಾಡಿ ನೆರೆದಿದ್ದವರನ್ನು ರಂಜಿಸಿದರು. ಗುರುಶಿಷ್ಯರು ಚಿತ್ರದ ನಾಯಕಿ ನಿಶ್ವಿಕ ನಾಯ್ಡು ಅವರು ತಮ್ಮದೆ ಚಿತ್ರದ ಗೀತೆಗೆ ನರ್ತಿಸಿದರು.

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕಲಾವಿದರ ತಂಡದಿಂದ ವೇದಿಕೆ ಮೇಲೆ ವಿವಿಧ ಪ್ರಕಾರದ ಜಾನಪದ ನೃತ್ಯಗಳನ್ನು ಮಾಡಿ ನೆರೆದಿದ್ದ ಕಲಾರಸಿಕರನ್ನು ರಂಜಿಸಿದರು. ಮೈಸೂರಿನ ಎಸ್.ಕೆ.ವಿ.ಪದವಿ ಪೂರ್ವ ಕಾಲೇಜಿನ ಬಾಲಕಿಯರು ಶಿವಾರಜ್ ಕುಮಾರ್ ಅಭಿನಯದ ಜೋಗಿ ಚಿತ್ರದ ಚೆಲ್ಲಿದರೂ ಮಲ್ಲಿಗೆಯಾ ಹಾಗೂ ಜನುಮದ ಜೋಡಿ ಚಿತ್ರದ ಶುಭವಾಗುತೈತೆ ಕಣಮೋ ಗೀತೆಗೆ, ಪುನೀತ್ ರಾಜ್ ಕುಮಾರ್ ನಟಿಸಿರುವ ಹುಡುಗರು ಚಿತ್ರದ ಗಲ್ಲು ಗಲ್ಲು ಎನ್ನುತಾವು ಗೆಜ್ಜೆ ಹಾಗೂ ಸತ್ಯ ಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕಿಳ್ಯಾವೊದು ಹಾಡಿಗೆ ಹೆಜ್ಜೆ ಹಾಕಿ ಸಭಿಕರಿಂದ ಸೈ ಎನಿಸಿಕೊಂಡರು.

ಸ್ಲಂ ಡಾಗ್ ಚಿತ್ರದ ಜೈಹೋ ಹಾಡಿಗೆ ಹಾಗೂ ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ ನವಗ್ರಹ ಚಿತ್ರದ ಅಂಬಾರಿ ಊರಿನಲ್ಲಿ ಗೀತೆ ಹಾಗೂ ರವಿಚಂದ್ರನ್ ಅಭಿನಯದ ಸಿಪಾಯಿ, ಕಲಾವಿದ ಚಿತ್ರ ಸೇರಿದಂತೆ ಹಲವಾರು ಚಿತ್ರಗಳಿಗೆ ಮನಮೋಹಕವಾಗಿ ನೃತ್ಯ ಮಾಡಿದ ಸ್ಥಳೀಯ ನೃತ್ಯ ತಂಡವು ಪ್ರೇಕ್ಷಕರನ್ನು ಮೈ ಮರೆಸುವಂತೆ ಕುಣಿಯುವಂತೆ ಮಾಡಿದರು.

ಡಾರ್ಲಿಂಗ್ ಕೃಷ್ಣ, ಅಭಿಷೇಕ್ ಅಂಬರೀಶ್, ಧನ್ವೀರ್, ಪ್ರಜ್ಞಾ, ಸೇರಿದಂತೆ ಅನೇಕ ನಟ-ನಟಿಯರು ಯುವ ದಸಾರ ಕಾರ್ಯಕ್ರಮಕ್ಕೆ ಮೆರಗು ತಂದರು.

ಯುಕ್ರೇನ್ ದೇಶದ ಲೇಸರ್ ಆ್ಯಕ್ಟ್ & ಸಿಗ್ನೇಚರ್ ಗ್ರೂಪ್ ನೃತ್ಯ ತಂಡದಿಂದ ನಡೆದ ನಾಟ್ಯವು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮ ಶೇಖರ್, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಶಾಸಕ ಎಲ್.ನಾಗೇಂದ್ರ, ಜಿಲ್ಲಾ ಪೊಲೀಸ್ ಆರ್.ಚೇತನ್ ಸೇರಿದಂತೆ ಇತರರು ಹಾಜರಿದ್ದರು.

 


Share