ಶ್ರೀ ಆಂಜನೇಯ ಚರಿತ್ರೆ – ಭಾಗ – 1: ಪುಟ – 15

274
Share

ಶ್ರೀ ಆಂಜನೇಯ ಚರಿತ್ರೆ – ಭಾಗ – 1: ಪುಟ – 15

ಓಂ ನಮೋ ಹನುಮತೇ ನಮಃ

ವಾಲಿ – ಸುಗ್ರೀವರ ಜನನ
137) ಅಷ್ಟರಲ್ಲಿ ದೈವಯೋಗ ವಶಾತ್ ದೇವೇಂದ್ರನು ಅಲ್ಲಿಗೆ ಬಂದ. ಬರುತ್ತಲೇ ಅವನ ದೃಷ್ಟಿಯು ಬೆದರುತ್ತಿದ್ದ ಹೆಣ್ಣುಕೋತಿಯ ಮೇಲೆ ಬಿತ್ತು. ಇದು ಯಾರು ಎಂದು ಯೋಚಿಸಿದಾಗ ಅವನಿಗೆ ನಡೆದಿದ್ದೆಲ್ಲಾ ತಿಳಿಯಿತು. ಬಲಶಾಲಿ ಗಂಡು ಕೋತಿಯಾದ ಋಕ್ಷರಜಸನು ಹೀಗೆ ಬದಲಾಗಿದ್ದಾನೆ ಎಂದು ತಿಳಿಯುತ್ತಲೇ ಇಂದ್ರನಿಗೆ ಫಕ್ಕನೆ ನಗು ಬಂತು. ಅವನು ಗಂಧರ್ವ ವಿಹಾರ ಭೂಮಿಯಲ್ಲಿ ಇದ್ದುದರಿಂದ ಅವನಿಗೆ ಸಲಿಗೆ ಉಂಟಾಗಿ, ಆ ಕೋತಿ ಸುಂದರಿಯ ಜೊತೆ ಸರಸ ಪ್ರಾರಂಭಿಸಿದ.
138) ದೈವಯೋಗ ವಿಚಿತ್ರವಾದದ್ದು. ಅದು ಯಾವ ಕ್ಷಣದಲ್ಲಿ ಯಾವ ಜೀವಿಯ ಕೈಲಿ ಏನು ಮಾಡಿಸುತ್ತದೋ ಯಾರಿಗೂ ಗೊತ್ತಾಗುವುದಿಲ್ಲ. ಸರಸವಾಡುತ್ತಿದ್ದ ದೇವೇಂದ್ರನಿಗೆ ನಿಜಕ್ಕೂ ಮೋಹ ಉಂಟಾಯಿತು. ಆದರೆ ಗಂಡಸಿನೊಡನೆ ಸರಸ ಇಷ್ಟವಿಲ್ಲದ ಋಕ್ಷರಜಸನು ತಪ್ಪಿಸಿಕೊಂಡು ದೂರದೂರ ಹೋಗುತ್ತಿದ್ದ.
139) ಈ ಹೆಣಗಾಟದಲ್ಲಿ ದೇವೇಂದ್ರನು ಆ ಕಪಿಸುಂದರಿಯನ್ನು ಗಟ್ಟಿಯಾಗಿ ತಬ್ಬಿಕೊಂಡ. ದೇವತಾ ಶಕ್ತಿ ವಿಶೇಷದಿಂದ ಆ ಕೋತಿಯ ಬಾಲದಿಂದ ಒಂದು ಕಪಿಮರಿ ಹುಟ್ಟಿತು. ಬಾಲದಿಂದ ಹುಟ್ಟಿದ್ದರಿಂದ ಅವನಿಗೆ ‘ವಾಲಿ’ ಎಂಬ ಹೆಸರು ಬಂದಿತು.
140) ಈ ವಾನರ ಪುತ್ರೋತ್ಸವದಿಂದ ದೇವೇಂದ್ರನ ಮತ್ತು ಕಡಿಮೆ ಯಾಯಿತು. ತನ್ನನ್ನು ತಾನು ಸಂಭಾಳಿಸಿಕೊಂಡು, ಹುಟ್ಟಿದ ಮಗನಿಗೆ ಆಶೀರ್ವಾದ ಮಾಡಿ, ಮೆಲ್ಲಗೆ ಅಲ್ಲಿಂದ ಜಾರಿಕೊಂಡ.
141) ದೈವಯೋಗ ವಿಚಿತ್ರವಾದುದು. ಮೇಲಿನಿಂದ ದೇವೇಂದ್ರನ ಸರಸವನ್ನು ಗಮನಿಸುತ್ತಿದ್ದ ಸೂರ್ಯದೇವನಿಗೆ ಆಗಿಂದಲೂ ಮನಸ್ಸಿನಲ್ಲಿ ಕಾವೇರುತ್ತಿತ್ತು. ಇಂದ್ರ ಹೋದನಂತರ ಸೂರ್ಯದೇವ ಇಳಿದ. ಇಳಿಯುತ್ತಲೇ ಋಕ್ಷ ರಜಸನ ಕುತ್ತಿಗೆಯನ್ನು ಬಲವಾಗಿ ಅಪ್ಪಿಕೊಂಡ. ಆಗ, ಆ ಕುತ್ತಿಗೆಯಿಂದ ಒಬ್ಬ ಮಗ ಹುಟ್ಟಿದ. ಅವನಿಗೆ ಕಾಲಕ್ರಮದಲ್ಲಿ ‘ಸುಗ್ರೀವ’ ಎಂಬ ಹೆಸರು ಬಂತು.
142) ಸೂರ್ಯನ ಗಟ್ಟಿಯಾದ ಆಲಿಂಗನದಿಂದ ಆ ಕಪಿಕನ್ಯೆ ತತ್ತರಿಸಿ ಹೋದಳು. ಅಳಲು ಪ್ರಾರಂಭಿಸಿದಳು. ಆಗ ಸೂರ್ಯ ಸ್ವಲ್ಪ ಮೆತ್ತಗಾದ. ಅವಳನ್ನು ಸಂತೈಸಿದ. ಋಕ್ಷರಜಸನಿಗೆ ಆ ಕೊಳದ ಮಹಿಮೆಯನ್ನು ಹೇಳಿದ. “ಏನೂ ಗಾಬರಿಯಾಗಬೇಡ. ಇನ್ನೊಂದು ಸಾರಿ
ಆ ಕೊಳದಲ್ಲಿ ಮುಳುಗಿ ಏಳು, ಪುನಃ ಗಂಡಸಾಗುತ್ತೀಯೆ” ಎಂದು ಹೇಳಿ ಹೊರಟು ಹೋದ.
143) ಋಕ್ಷರಜಸನು ಹಾಗೇ ಮಾಡಿ, ಪುನಃ ಗಂಡುತನವನ್ನು ಪಡೆದ. ದಡದ ಮೇಲೆ ಬಂದ. ಇನ್ನೇನು ಹೊರಟುಹೋಗಬೇಕು, ಅಷ್ಟರಲ್ಲಿ ಆಗತಾನೆ ಹುಟ್ಟಿದ್ದ ಆ ಎರಡು ಕಪಿಮರಿಗಳು ಕಾಣಿಸಿದವು. ಅವುಗಳನ್ನು ನೋಡಿ ಅವನ ಮನಸ್ಸು ಕರಗಿಹೋಯಿತು. ದೈವಲೀಲೆಗೆ ಆಶ್ಚರ್ಯ ಪಡುತ್ತಾ ಆ ಎರಡು ಮಕ್ಕಳನ್ನು ಕಂಕುಳಲ್ಲಿರಿಸಿಕೊಂಡು ತನ್ನ ಮನೆ ತಲುಪಿದ.
144) ಹೀಗೆ ಗಂಡಿಗೆ ಹುಟ್ಟಿದ ವಾಲಿ-ಸುಗ್ರೀವರು ಆಂಜನೇಯನಿಗೆ ಸೋದರ ಮಾವಂದಿರಾದರು. ಇವರು ಹುಟ್ಟಿದ ಸ್ವಲ್ಪ ಕಾಲಕ್ಕೆ ಆಂಜನೇಯ ಹುಟ್ಟಿದಂತೆ ತೋರುತ್ತದೆ.
145) ಶಿವಾಂಶ ಸಂಭೂತನಾದ ಆಂಜನೇಯನು ಹುಟ್ಟಿದಾಗ ಲೋಕದಲ್ಲೆಲ್ಲಾ ಶುಭಶಕುನಗಳು ಕಾಣಿಸಿಕೊಂಡವು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share