ಶ್ರೀ ಆಂಜನೇಯ ಚರಿತ್ರೆ : ಭಾಗ 1 – ಪುಟ – 20

269
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 20
ಓಂ ನಮೋ ಹನುಮತೇ ನಮಃ

177) ಬ್ರಹ್ಮದೇವನು ಬಾಲಾಂಜನೇಯನನ್ನು ವಾಯುದೇವನಿಗೆ ಹಿಂದಿರುಗಿಸುತ್ತಾ ಹೀಗೆ ಹೇಳಿದ. “ವಾಯುದೇವಾ! ನೀನು ಕೋಪಿಸಿಕೊಂಡಿದ್ದರೂ ದೇವಕಾರ್ಯಕ್ಕೆ ಅನುಕೂಲವಾದ ಕೆಲಸವನ್ನೇ ಮಾಡಿದ್ದೀಯೆ. ಇವನು ಬಹಳ ಕಾರಣಿಕನಾದ ಬಾಲಕ. ಇವನಿಗೆ ಇಲ್ಲದ ಶಕ್ತಿಯೇ ಇಲ್ಲ. ಇವನು ಮುಂದೆ ಅವತಾರ ಪುರುಷನಾದ ಶ್ರೀರಾಮನಿಗೆ ಸಹಾಯಮಾಡುತ್ತಾನೆ. ತನ್ನ ಅದ್ಭುತ ಕಾರ್ಯಗಳಿಂದ ಲೋಕವನ್ನೇ ಬೆರಗಾಗಿಸುತ್ತಾನೆ”.
178) ಹೀಗೆ ಹೇಳಿ, ಬ್ರಹ್ಮದೇವನು ದೇವತೆಗಳೊಡನೆ ಹಿಂದಿರುಗಿದ.
ಹನುಮಂತನ ವಿದ್ಯಾಭ್ಯಾಸ
179) ಹೀಗಿರುವಾಗ ಋಕ್ಷರಜಸನೆಂಬ ವಾನರನು ಗೌತಮನ ಮಕ್ಕಳಾದ ವಾಲಿ ಸುಗ್ರೀವರನ್ನು ದತ್ತು ತೆಗೆದುಕೊಂಡ.
180) ದತ್ತು ತೆಗೆದುಕೊಂಡ ಮುಹೂರ್ತದ ವಿಶೇಷದಿಂದ ಅವನ ಅದೃಷ್ಟ ಕೂಡಿಬಂದು, ಇಡೀ ವಾನರ ರಾಜ್ಯಕ್ಕೇ ಚಕ್ರವರ್ತಿ ಆದ.
181) ಹನುಮಂತನ ತಂದೆಯಾದ ಕೇಸರಿಯೂ ಸಹ ಋಕ್ಷರಜಸನ ಸಾಮಂತ ರಾಜರ ಪೈಕಿ ಒಬ್ಬ.
182) ಆಂಜನೇಯ, ವಾಲಿ, ಸುಗ್ರೀವ ಎಲ್ಲರೂ ಒಂದೇ ಗುರುಕುಲದಲ್ಲಿ ಇದ್ದರು.
183) ಇವರ ಪೈಕಿ ಆಂಜನೇಯ ಅನಂತ ಬಲ ಸಂಪನ್ನನಾಗಿದ್ದ. ಅಸಾಧ್ಯ ಚೇಷ್ಟೆ ಮಾಡುತ್ತಿದ್ದ. ಅವನ ಚೇಷ್ಟೆಗಳೂ ವಿಚಿತ್ರವಾಗಿ ಇರುತ್ತಿತ್ತು.
1. ಇದ್ದಕ್ಕಿದ್ದಂತೆ ತನ್ನ ಆಕಾರವನ್ನು ಹಿಗ್ಗಿಸಿಕೊಂಡು ಎಲ್ಲರನ್ನೂ ಹೆದರಿಸುತ್ತಿದ್ದ.
2. ಕ್ಷಣ ಮಾತ್ರದಲ್ಲಿ ಆಕಾರವನ್ನು ಕುಗ್ಗಿಸಿಕೊಂಡು ಕಿಟಕಿಯ ತೂತಿನ ಮೂಲಕ ತೂರಿ ಹೋಗುತ್ತಿದ್ದ.
3. ನೋಡಿಕೊಂಡು ನಡೆಯುತ್ತಿರಲಿಲ್ಲ. ಹೀಗಾಗಿ, ಮನೆಯಲ್ಲಿದ್ದ ಪಾತ್ರೆಗಳನ್ನೆಲ್ಲಾ ಉರುಟಿಸಿಬಿಡುತ್ತಿದ್ದ.
4. ಹೋಮಪಾತ್ರೆಗಳನ್ನು ತೊಳೆದುಕೊಂಡು ಬಾ ಎಂದು ಏನಾದರೂ ಹೇಳಿದರೆ, ಅವನ ಬಲಕ್ಕೆ ಅವೆಲ್ಲಾ ನೆಗ್ಗಿಹೋಗುತ್ತಿದ್ದವು.
5. ಅವನು ತಮಾಷೆಗೆ ‘ಉಫ್‌’ ಎಂದು ಊದಿದರೆ ಸಾಕು, ಮನೆಯಲ್ಲಿದ್ದ ಅಗ್ನಿಹೋತ್ರ ಆರಿಹೋಗುತ್ತಿತ್ತು.
6. ಕೆಲವು ಬಾರಿ ಬೆಂಕಿ ಕಿಡಿಗಳು ಎದ್ದು, ಮನೆಯೇ ಹತ್ತಿಕೊಳ್ಳುತ್ತಿತ್ತು.
7. ಒಣಗಲು ಹರವಿದ್ದ ಬಟ್ಟೆಗಳನ್ನು ಹರಿದುಹಾಕಿ ಬಿಡುತ್ತಿದ್ದ.
8. ಸಹಪಾಠಿಗಳು ಅಳುತ್ತಿದ್ದರೆ ಅವರನ್ನು ನೋಡಿ ನಗುತ್ತಿದ್ದ.
9. ಶಿಕ್ಷಿಸೋಣವೆಂದರೆ ಗುರುಗಳ ಕೈಗೇ ಸಿಗುತ್ತಿರಲಿಲ್ಲ.
10. ಕೋಪಬಂದು ಶಾಪಕೊಟ್ಟರೂ ಆ ಶಾಪ ಅವನಿಗೆ ತಟ್ಟುತ್ತಿರಲಿಲ್ಲ.
184) ಅಂಜನಾ ಕೇಸರಿಯರಿಗೆ ಇವನ ಮೇಲೆ ಸದಾ ದೂರುಗಳು ಬರುತ್ತಿದ್ದವು.
185) ಅವರು ಅವನನ್ನು ಉಪಾಯದಿಂದ, ಭಯದಿಂದ, ಹತೋಟಿಯಲ್ಲಿ ಇಟ್ಟುಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡಿದರೂ ಏನೂ ಪ್ರಯೋಜನ ಆಗಲಿಲ್ಲ.
( ಮುಂದುವರೆಯುವುದು )

ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share