ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 44

302
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 44
ಓಂ ನಮೋ ಹನುಮತೇ ನಮಃ

366) ಮೈನಾಕ ಹಿಮವಂತನ ಮಗ. ರೆಕ್ಕೆಗಳಿರುವ ಪರ್ವತ. ಮೇಲೆ, ಕೆಳಗೆ, ಪಕ್ಕಗಳಿಗೆ ಇಷ್ಟಬಂದಂತೆ ಹಾರಾಡಬಲ್ಲ ಶಕ್ತಿಶಾಲಿ.
367) ಸೃಷ್ಟಿಯ ಪ್ರಾರಂಭದಲ್ಲಿ ಬೆಟ್ಟಗಳಿಗೆ ರೆಕ್ಕೆಗಳಿದ್ದವಂತೆ. ಆಗ ಅವು ಆಗಾಗ್ಗೆ ಎಗರಿ, ಇಷ್ಟಬಂದಕಡೆ ಹೋಗುತ್ತಿದ್ದವಂತೆ. ಇದರಿಂದ ಸಾವಿರಾರು ಜೀವಿಗಳು ಅವುಗಳ ಕೆಳಗೆ ಸಿಕ್ಕಿಕೊಂಡು ಜಜ್ಜಿಹೋಗುತ್ತಿದ್ದವಂತೆ. ಇದನ್ನು ಗಮನಿಸಿದ ದೇವೇಂದ್ರ ಆ ಪರ್ವತಗಳ ರೆಕ್ಕೆಗಳನ್ನು ತನ್ನ ವಜ್ರಾಯುಧದಿಂದ ಕತ್ತರಿಸಿಹಾಕಿದನಂತೆ. ಆದ್ದರಿಂದಲೇ ಇಂದ್ರನಿಗೆ “ಗಿರಿಭಿತ್‌” ಎಂಬ ಹೆಸರು ಬಂದಿದ್ದು. ಗಿರಿಭಿತ್ ಎಂದರೆ ಬೆಟ್ಟಗಳನ್ನು ಕಡಿದು ಹಾಕಿದವನು.
368) ಹೀಗೆ ದೇವೇಂದ್ರನು ಬೆಟ್ಟಗಳ ರೆಕ್ಕೆಗಳನ್ನು ಕತ್ತರಿಸುತ್ತಿದ್ದ ಕಾಲದಲ್ಲಿ ಹಿಮವಂತನ ಮಗನಾದ ಮೈನಾಕನು ಸಮುದ್ರನೊಡನೆ ಸ್ನೇಹ ಬೆಳೆಸಿ
ಆ ನೀರೊಳಗೆ ಅವಿತುಕೊಂಡ.
369) ಸಮುದ್ರನೂ ಒಂದು ಕಾರಣವಿಟ್ಟುಕೊಂಡೇ ಮೈನಾಕನಿಗೆ ಆಶ್ರಯ ಕೊಟ್ಟಿದ್ದು. ಪಾತಾಳವಾಸಿಗಳಾದ ರಾಕ್ಷಸರು ತಮ್ಮ ಲೋಕದಿಂದ ಸಮುದ್ರ ತಳಕ್ಕೆ ಒಂದು ಮಾರ್ಗವನ್ನು ಕಲ್ಪಿಸಿಕೊಂಡು, ಅದರ ಮೂಲಕ ಸಮುದ್ರಕ್ಕೆ ಬಂದು, ಅಲ್ಲಿಂದ ಹೊರಗೆ ಬಂದು ಲೋಕಗಳನ್ನು ಪೀಡಿಸುತ್ತಿದ್ದರು. ದೇವತೆಗಳು, ದೇವೇಂದ್ರ ಅವರನ್ನು ಅಟ್ಟಿಸಿಕೊಂಡು ಬಂದರೆ ಸಮುದ್ರದೊಳಗೆ ಹೋಗಿ ಅಲ್ಲಿಂದ ಪಾತಾಳಕ್ಕೆ ತಪ್ಪಿಸಿಕೊಂಡುಬಿಡುತ್ತಿದ್ದರು.
370) ಈ ಸಮಸ್ಯೆಯನ್ನು ಪರಿಷ್ಕರಿಸಲು ದೇವೇಂದ್ರ ಒಂದುಸಾರಿ ಅಗಸ್ತ್ಯ ಮಹರ್ಷಿಯ ಸಹಾಯ ಕೇಳಿಕೊಂಡ. ಅಗಸ್ತ್ಯನು ಸಮುದ್ರದ ನೀರನ್ನು ಆಪೋಷನ ತೆಗೆದುಕೊಂಡು, ಒಳಗೆ ಅವಿತುಕೊಂಡಿದ್ದ ರಾಕ್ಷಸರನ್ನೆಲ್ಲಾ ಹೊರಗೆ ಹಾಕಿದ. ದೇವೇಂದ್ರ ಅವರನ್ನೆಲ್ಲಾ ಸಂಹಾರ ಮಾಡಿದ. ಲೋಕಹಿತಾರ್ಥ ಅಗಸ್ತ್ಯ ಸಮುದ್ರವನ್ನು ಪುನಃ ನೀರಿನಿಂದ ತುಂಬಿಸಿದ.
371) ಆದರೆ ಇನ್ನೂ ಅನೇಕಮಂದಿ ರಾಕ್ಷಸರು ಪಾತಾಳದಲ್ಲಿ ಉಳಿದಿದ್ದರು. ಅವರಿಂದ ಹಳೆಯ ಸಂಕಟ ಮುಂದುವರೆಯಿತು. ಆದ್ದರಿಂದ ಸಮುದ್ರನು ಮೈನಾಕನಿಗೆ ಆಶ್ರಯಕೊಟ್ಟು, ಆ ಪಾತಾಳದ ದ್ವಾರದಲ್ಲಿ ಕೂತುಕೊಳ್ಳುವಂತೆ ಹೇಳಿದ. ಇದರಿಂದ ರಾಕ್ಷಸರ ಬಾಗಿಲನ್ನು ಮುಚ್ಚಿದಂತೆ ಆಯಿತು.
372) ರಾಕ್ಷಸರು ಬಾಗಿಲನ್ನು ಅಗಲ ಮಾಡಿಕೊಳ್ಳಲು ನೋಡಿದರು. ಆದರೆ ಮೈನಾಕನಿಗೆ ಎಲ್ಲಾ ದಿಕ್ಕುಗಳಿಗೂ ಹಿಗ್ಗುವಂಥ ಶಕ್ತಿ ಇದ್ದುದರಿಂದ, ಅವರ ಆಟವೇನೂ ನಡೆಯಲಿಲ್ಲ. ಹೀಗೆ ಮೈನಾಕನಿಂದ ಪಾತಾಳಲೋಕದ ರಾಕ್ಷಸರ ಕಾಟ ಕಡಿಮೆ ಆಯಿತು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share