ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 74

182
Share

ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 74
ಓಂ ನಮೋ ಹನುಮತೇ ನಮಃ

531) ತ್ರಿಜಟೆ ಹೀಗೆ ಹೇಳಿದಾಗ ರಾಕ್ಷಸಸ್ತ್ರೀಯರೆಲ್ಲರೂ ತಣ್ಣಗಾದರು. ಕೆಲವರು ಯಾವುದಕ್ಕೂ ಒಳ್ಳೇದು, ಇವಳು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅನ್ನುತ್ತಿದ್ದಾಳೆ – ಎಂದು ರಾಜನಿಗೆ ವಾರ್ತೆಕೊಟ್ಟು ಬರುವುದು ಒಳ್ಳೆಯದು” ಎಂದುಕೊಂಡು ಅಲ್ಲಿಂದ ಜಾರಿಕೊಂಡರು. ಇನ್ನು ಕೆಲವರು ತೂಕಡಿಸಿ ನಿದ್ದೆ ಹೋದರು.

ಸೀತಾದೇವಿ ಆಲೋಚನೆಗಳು

532) ಇವರ ಸಂಭಾಷಣೆ ಹೀಗೆ ನಡೆಯುತ್ತಿರುವಾಗ, ಅತ್ತ ಶಿಂಶುಪಾ ವೃಕ್ಷದ ಕೆಳಗೆ ಸೀತಾದೇವಿಯ ಆಲೋಚನೆಗಳು ಇನ್ನೊಂದು ರೀತಿಯಲ್ಲಿ ಸಾಗುತ್ತಿವೆ. ಆಲೋಚನೆಯ ಭಾರ ಹೆಚ್ಚಾಗಿ, ಅವಳು ಮಾತಾಡುತ್ತಿದ್ದಾಳೆ –
1. ಆಗಿ ಹೋಯ್ತು. ನನಗೆ ಬದುಕುವ ಯೋಗ ಇಲ್ಲ. ಇನ್ನೆರಡು ತಿಂಗಳಾಗುವುದರೊಳಗೆ ಈ ರಾಕ್ಷಸರು ನನ್ನನ್ನು ಹೇಗೂ ಕೊಂದುಬಿಡುತ್ತಾರೆ. ಅದಕ್ಕಿಂತ ಮುಂಚೆ ನಾನೇ ಆತ್ಮಹತ್ಯೆ ಮಾಡಿಕೊಂಡರೆ ತಪ್ಪೇನು?
2. ನಾನು ಬದುಕಿ ಉಳಿಯ ಬೇಕಾದರೆ ರಾವಣನು ಹೇಳಿದ್ದಕ್ಕೆ ಒಪ್ಪಿಕೊಳ್ಳಬೇಕು. ಸತ್ತರೂ ಆ ಕೆಲಸ ಮಾಡಲಾರೆ.
3. ಇದೆಲ್ಲಾ ನನ್ನ ಸ್ವಯಂಕೃತ ಅಪರಾಧ. ಆ ಯಮನೇ ಜಿಂಕೆಯ ರೂಪದಲ್ಲಿ ಬಂದು ನನ್ನನ್ನು ಆಸೆಗೆ ಒಳಪಡಿಸಿದ. ಆದ್ದರಿಂದಲೇ ನಾನು ಜಿಂಕೆ ತಂದು ಕೊಡುವಂತೆ ನನ್ನ ಗಂಡನನ್ನು ಕಳಿಸಿದ್ದು.
4. ನಾನೊಬ್ಬ ಮೂಢೆ. ಆದ್ದರಿಂದಲೇ, ಪಾಪ, ಆ ಲಕ್ಷ್ಮಣನನ್ನು ಬಾಯಿಗೆ ಬಂದಂತೆ ಬೈದು, ಬಲವಂತವಾಗಿ ಅಟ್ಟಿದೆ.
5. ಓ ರಾಮಾ! ಓ ಲಕ್ಷ್ಮಣಾ! ಓ ಕೌಸಲ್ಯಾ! ಓ ಸುಮಿತ್ರಾ! ಇವತ್ತು ನನ್ನ ಕತೆ ಮುಗಿಯಿತು. ನಾನು ಪತಿವ್ರತಾ ಧರ್ಮವನ್ನು ಹುಷಾರಾಗಿ ಪಾಲಿಸಿಕೊಂಡು ಬಂದಿದ್ದೇನೆ. ಆದರೆ ಆ ಧರ್ಮ ನನ್ನನ್ನು ಕಾಪಾಡುತ್ತಿಲ್ಲ. ಓ ರಾಮಾ! ನಾನು ಬದುಕಿದ್ದೇನೆಂದೂ, ಇಲ್ಲಿದ್ದೇನೆಂದೂ ನಿಮಗೆ ಗೊತ್ತಿಲ್ಲ. ನನಗೋಸ್ಕರ ನಾಲ್ಕುದಿನ ಬಾಧೆಪಡುತ್ತೀರ. ಅಷ್ಟರಲ್ಲಿ ಹೇಗೂ ನಿಮ್ಮ ವನವಾಸ ಮುಗಿಯುತ್ತದೆ. ನಿಮ್ಮ ರಾಜ್ಯ ನಿಮಗೆ ಸಿಗುತ್ತದೆ. ಆಗ ನೀವು ಎಷ್ಟುಮಂದಿಯನ್ನಾದರೂ ಮದುವೆಯಾಗಬಹುದು.
6. ನಾನು ಮಾತ್ರ ಇಲ್ಲಿ ನಿಮ್ಮ ಮೇಲೇ ಮನಸ್ಸಿಟ್ಟುಕೊಂಡು ದಿಕ್ಕಿಲ್ಲದ ಸಾವು ಸಾಯುತ್ತೇನೆ.
7. ಈ ರಾಕ್ಷಸ ರಾಜ್ಯದಲ್ಲಿ ನನಗೆ ವಿಷವಾಗಲೀ, ಕತ್ತಿಯಾಗಲೀ ಬೇಕೆಂದರೆ ಯಾರು ಕೊಡುತ್ತಾರೆ?
8. ಹೇಗೂ ನನ್ನ ಜಡೆ ಉದ್ದವಾಗಿದೆ. ಇದರಿಂದಲೇ ನೇಣುಹಾಕಿಕೊಂಡರೆ ಹೇಗೆ?
533) ಸೀತಾದೇವಿಯ ಯೋಚನೆ ಈ ಹಂತಕ್ಕೆ ಬಂದಾಗ ಆಕಾಶದಲ್ಲಿ ಬೆಳಕು ಹರಿಯುತ್ತಿತ್ತು. ಸುತ್ತಮುತ್ತ ಏನೇನೋ ದೃಶ್ಯಗಳು ಅಸ್ಪಷ್ಟವಾಗಿ ಕಾಣಿಸುತ್ತಿದ್ದವು. ಅವೆಲ್ಲಾ ಶುಭಶಕುನಗಳಂತೆಯೇ ಕಂಡವು. ಸೀತಾದೇವಿ ಪುನಃ ಹೀಗೆ ಯೋಚಿದಳು –
1. ಇದೇನಿದು! ಇದ್ದಕ್ಕಿದ್ದಂತೆ ನನ್ನ ಎಡಗಣ್ಣು, ಎಡಭುಜ, ಎಡಗಾಲು ಅದುರುತ್ತಿದೆ.
2. ದಿಕ್ಕುಗಳಲ್ಲಾ ಪ್ರಶಾಂತವಾಗಿ ಇರುವಂತೆ ಕಾಣಿಸುತ್ತಿದೆ.
3. ಹಿಂದೆ ಇಂತಹ ಶಕುನಗಳು ಕಾಣಿಸಿದಾಗಲೆಲ್ಲಾ ನನಗೆ ಖಂಡಿತಾ ಒಳ್ಳೆಯದೇ ಆಗಿದೆ. ಒಂದು ಸಾರಿಯೂ ವ್ಯರ್ಥವಾಗಿಲ್ಲ.
4. ಆದರೆ ಈಗ, ಈ ದೇಶದಲ್ಲಿ ನನಗೆ ಏನು ಶುಭವಾದೀತು?
5. ಆದರೂ ಸ್ವಲ್ಪ ಕಾದು ನೋಡೋಣ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share