ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 47

273
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 47
ಓಂ ನಮೋ ಹನುಮತೇ ನಮಃ

381) ಆಕಾಶದಲ್ಲಿ ನಿಂತು ದೇವತೆಗಳು ಈ ಅದ್ಭುತ ದೃಶ್ಯವನ್ನು ನೋಡಿದರು. ಅವರಿಗೆ ಪರಮಾಶ್ಚರ್ಯವಾಯಿತು. “ಯೋಗಬಲದಿಂದ ಸಮುದ್ರವನ್ನು ಹಾರುವುದೇ ಅಸಾಧ್ಯ. ಮಧ್ಯದಲ್ಲಿ ಹೀಗೆ ವ್ಯವಹರಿಸುವುದಂತೂ ಇನ್ನೂ ಅಸಾಧ್ಯ. ಇದು ಹನುಮಂತನಿಗೊಬ್ಬನಿಗೇ ಸಾಧ್ಯ. ಇದು ಹನುಮಂತನ ವ್ಯಾಮೋಹರಾಹಿತ್ಯಕ್ಕೂ, ಸೋಮಾರಿತನ ಇಲ್ಲದಿರುವುದಕ್ಕೂ ಒಳ್ಳೆ ನಿದರ್ಶನ” ಎಂದು ಅವರು ಹೊಗಳಿದರು. ಹನುಮಂತನ ಕೀರ್ತಿಯನ್ನು ಹಾಡಿದರು.
382) ಇತ್ತ ಸಾಗರ, ಮೈನಾಕರೂ ಅತ್ತ ಆಕಾಶದಲ್ಲಿ ಇಂದ್ರಾದಿದೇವತೆಗಳೂ ರಾಮಕಾರ್ಯಕ್ಕೆ ಜಯವಾಗಲಿ’ ಎಂದು ಆಶೀರ್ವಾದ ಮಾಡಿದರು.
ಸುರಸಾ ವಿಜಯ
383 . ಮೈನಾಕ ಸಾಗರರು ಮಾಡಿದ ಸತ್ಕಾರ್ಯಕ್ಕೆ ದೇವೇಂದ್ರನು ಅವರನ್ನು ಬಗೆಬಗೆಯಾಗಿ ಅಭಿನಂದಿಸಿದ .
384 . ಹನುಮಂತನು ಇದ್ಯಾವುದನ್ನೂ ಲೆಕ್ಕಿಸದೆ ಮುಂದೆ ಮುಂದೆ ಹೋಗುತ್ತಿದ್ದ. ಅದನ್ನು ಗಮನಿಸಿದ ದೇವತೆಗಳಿಗೆ ಹನುಮಂತನನ್ನು ಇನ್ನಷ್ಟು ಪರೀಕ್ಷೆ ಮಾಡಬೇಕೆಂದು ಅನಿಸಿತು.
385 . ಆ ಸಮುದ್ರದಲ್ಲೇ ಇನ್ನೂ ಸ್ವಲ್ಪ ದೂರ ಹೋದರೆ ಸುರಸಾ ಎಂಬ ದೇವತಾ ವೃದ್ಧಾಂಗನೆ ವಾಸಿಸುತ್ತಿದ್ದಳು. ಅವಳು ದಕ್ಷಣನ ಮಗಳು. ನಾಗ ಜಾತಿಯ ಮಾತೆಗಳ ಪೈಕಿ ಒಬ್ಬಳು. ಅಪಾರ ಶಕ್ತಿವಂತಳು. ಬ್ರಹ್ಮನಿಂದ ವರಗಳನ್ನು ಪಡೆದಿದ್ದಂಥವಳು. ಅವಳು ಈಗ ಪ್ರಶಾಂತವಾಗಿ ಏಕಾಂತದಲ್ಲಿ ಸಮುದ್ರಗರ್ಭದಲ್ಲಿ ಜೀವನ ಸಾಗಿಸುತ್ತಿದ್ದಳು.
386 . ದೇವತೆಗಳು ಅವಳ ಹತ್ತಿರ ಹೋಗಿ ವಿನಯದಿಂದ ನಮಸ್ಕರಿಸಿ ಹೀಗೆ ಹೇಳಿದರು :
1 . ಅಮ್ಮ ! ಅದೋ ಅಲ್ಲಿ ನೋಡು. ಒಳ್ಳೆ ತೇಜಸ್ಸಿನಿಂದ ಆಕಾಶದಲ್ಲಿ ಹಾರಿ ಬರುತ್ತಿದ್ದಾನಲ್ಲ ಅವನೇ ಹನುಮಂತ. ವಾಯುಪುತ್ರ .
2 . ಅವನು ಈಗ ರಾಮಕಾರ್ಯಾರ್ಥಾ ಲಂಕಾ ರಾಜ್ಯಕ್ಕೆ ಹೋಗಲಿಕ್ಕಾಗಿ ಯೋಗಬಲದಿಂದ ಸಮುದ್ರವನ್ನು ದಾಟುತ್ತಿದ್ದಾನೆ .
3 . ಅವನ ಶಕ್ತಿ ಯುಕ್ತಿಗಳನ್ನು ಪರೀಕ್ಷಿಸಬೇಕಾದ ಸಮಯ ಬಂದಿದೆ .
4 . ಅದಕ್ಕೆ ನೀನೇ ಸಮರ್ಥಳು. ಆದ್ದರಿಂದ ಇದನ್ನು ದೇವರಕಾರ್ಯವೆಂದು ಭಾವಿಸಿ ಈ ಕೆಲಸವನ್ನು ಮಾಡು.
387 . ಹೀಗೆ ಹೇಳಿ ದೇವತೆಗಳು ಅವಳು ಪರೀಕ್ಷಿಸುವ ವಿಧಾನವನ್ನು ವಿವರಿಸಿದರು. ಅವಳು ಸರಿ ಎಂದು ಒಪ್ಪಿಕೊಂಡಳು .
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share