ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 100

164
Share

ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 100
ಓಂ ನಮೋ ಹನುಮತೇ ನಮಃ

ಸಂಜೀವಿನಿ ಪರ್ವತ ತಂದಿದ್ದು :
ವಿಭೀಷಣ ಹನುಮಂತ ಮೊದಲು ಎದ್ದು ವಾನರಸೈನ್ಯವನ್ನು ಪರಿಶೀಲಿಸಿದರು. ಅನೇಕ ಮಂದಿ ಇಂದ್ರಜಿತ್ತುವಿನ ಬಾಣಕ್ಕೆ ಗುರಿಯಾಗಿ ಮರಣಾವಸ್ಥೆಯಲ್ಲಿದ್ದರು . ಅವರು ಆತುರ ಆತುರವಾಗಿ ಹುಡುಕುತ್ತಿರುವಾಗ ಮೂರ್ಛಾವಸ್ಥೆಯಲ್ಲಿದ್ದ ಜಾಂಬವಂತ ಕಾಣಿಸಿದನು. ಅವನು ಬಹಳ ಮುದುಕ ಅವನ ಕಣ್ಣಿಗೆ ಒಂದು ಬಾಣ ನಾಟಿಕೊಂಡಿತ್ತು. ವಿಭೀಷಣನು ಅವನ ಬೆನ್ನು ಸವರುತ್ತ ” ತಾತಾ ! ಬದುಕಿದ್ದೀಯ ?” ಎಂದ.
ಜಾಂಬವಂತನಿಗೆ ಸ್ಪೃಹೆ ಬಂದು ಮೆಲ್ಲಗೆ ಹೇಳಿದ – ನಾನು ಬದುಕಿರೋದು ಮುಖ್ಯವಲ್ಲ. ಹನುಮಂತ ಬದುಕಿದ್ದಾನೋ ಇಲ್ಲವೋ ಹೇಳು. ಹನುಮಂತ ಬದುಕಿದ್ದರೆ ನಾವೆಲ್ಲ ಬದುಕಿದ್ದಂತೆ.
ಈ ಮಾತು ಹನುಮಂತನಿಗೆ ಕೇಳಿಸಿತು. ಏನಾಯ್ತು ಏನಾಯ್ತು ಅನ್ನುತ್ತ ಹತ್ತಿರ ಬಂದ. ಜಾಂಬವಂತ ಹೀಗೆ ಹೇಳಿದ –
ಹನುಮಂತ ! ವಾನರ ಸೈನ್ಯವನ್ನು ಬದುಕಿಸಲು ಶಕ್ತಿ ಇರುವುದು ನಿನಗೆ ಮಾತ್ರ. ಹಿಮಾಲಯದಲ್ಲಿ ಋಷಭ ಪರ್ವತ ಎಂಬ ಒಂದು ಪರ್ವತವಿದೆ. ಅದರ ಪಕ್ಕ ಕೈಲಾಸ ಶಿಖರವಿದೆ. ಇವೆರಡರ ನಡುವೆ ಸ್ವಲ್ಪ ಮರೆಯಲ್ಲಿ ಔಷಧಿ ಶಿಖರ ಎಂಬ ಶಿಖರವಿದೆ. ಅದರ ಮೇಲೆ ಮೃತಸಂಜೀವಿನೀ, ವಿಶಲ್ಯಕರಣೀ, ಸಾವರ್ಣ್ಯಕರಣೀ, ಸಂಧಾನಕರಣೀ ಎಂಬ ಮೂಲಿಕೆಗಳಿವೆ. ಅಲ್ಲಿನ ಔಷಧಿ ದೇವತೆಗಳನ್ನು ಪ್ರಾರ್ಥಿಸಿ ಆ ಔಷಧಿಗಳನ್ನು ಗುರುತಿಸಿ ಅವುಗಳನ್ನು ತೆಗೆದುಕೊಂಡು ಬಾ . ವಾನರರನ್ನು ಉಳಿಸಲು ಅದೊಂದೇ ಮಾರ್ಗ .
ಹನುಮಂತ ” ಜೈಶ್ರೀರಾಮ್ ” ಎನ್ನುತ್ತಾ ಒಮ್ಮೆಲೇ ತನ್ನ ರೂಪವನ್ನು ಹೆಚ್ಚಿಸಿಕೊಂಡು ಆಕಾಶಕ್ಕೆ ಎಗರಿ ಮೂರನೇ ಬಾರಿಗೆ ಸಮುದ್ರವನ್ನು ದಾಟಿ ಮಧ್ಯೆ ಎಲ್ಲೂ ನಿಲ್ಲದೆ ನೇರವಾಗಿ ಕೈಲಾಸ ಶಿಖರದ ಹತ್ತಿರ ಬಂದಿಳಿದ. ಅಲ್ಲಿ ಓಷಧಿ ಶಿಖರವನ್ನು ಗುರುತಿಸಿದ. ಆದರೆ ಅಲ್ಲಿದ್ದ ಔಷಧಿ ದೇವತೆಗಳು ಹನುಮಂತನ ಭಯಂಕರಾಕಾರವನ್ನು ನೋಡಿ ಕಣ್ಣಿಗೆ ಕಾಣದೆ ಅಂತರ್ಧಾನರಾದರು.
ಅದನ್ನು ಗಮನಿಸಿದ ಹನುಮಂತ ಇವರನ್ನು ಬೇಡಿಕೊಳ್ಳಲು ಸಮಯವಿಲ್ಲವಾದ್ದರಿಂದ ಸ್ವಲ್ಪ ಕೋಪಿಸಿಕೊಂಡು ಪರ್ವತ ಶಿಖರವನ್ನು ಬುಡಸಮೇತ ಕಿತ್ತು ಬಲಗೈನ ಅಂಗೈಯಲ್ಲಿ ಇಟ್ಟುಕೊಂಡು ಎಡಗೈಯಲ್ಲಿ ಗದೆಯನ್ನು ಇಟ್ಟುಕೊಂಡು ಒಂದು ಕ್ಷಣವೂ ವ್ಯರ್ಥ ವಾಗದಂತೆ ಪುನಃ ಅದೇ ವೇಗದಿಂದ ಸಮುದ್ರವನ್ನು ದಾಟಿ ವಾನರ ಸೇನೆಯ ಮಧ್ಯೆ ಬಂದು ನಿಂತ.
( ಮುಂದುವರೆಯುವುದು )

* ರಚನೆ : ಪರಮ ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share