ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 51

200
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 51
ಓಂ ನಮೋ ಹನುಮತೇ ನಮಃ

409 . ಪ್ರಯಾಣ ಸ್ವಲ್ಪ ದೂರ ಸುಗಮವಾಗಿ ಸಾಗಿತು. ಆಕಾಶದಲ್ಲಿ ಹಾರಾಡುವ ದೊಡ್ಡ ವಿಮಾನದಂತೆ ಹನುಮಂತನ ದೇಹ ತುಂಬಾ ದೊಡ್ಡದಾಗಿತ್ತು. ಅವನು ಆಕಾಶದಲ್ಲಿ ಬಹಳ ಎತ್ತರದಲ್ಲಿ ಹಾರುತ್ತಿದ್ದುದರಿಂದ ಅವನ ನೆರಳು ಸಮುದ್ರ ತೀರದ ಮೇಲೆ ದೊಡ್ಡದಾಗಿ ಹರಡಿದ್ದು, ಒಂದು ಊರಿಗೆ ಊರೇ ಕೊಚ್ಚಿಕೊಂಡು ಹೋಗುತ್ತಿದೆಯೇನೋ ಎನ್ನುವಂತೆ ಇತ್ತು .
ಛಾಯಾ ಗ್ರಹಿಣೀ ಸಂಹಾರ
410 . ಹಾಗೆ ಹಾರಿ ಹೋಗುತ್ತಿದ್ದ ಹನುಮನಿಗೆ ಇದ್ದಕ್ಕಿದ್ದಂತೆ ಎದುರು ಗಾಳಿ ಬೀಸಿದಂತೆ ಭಾಸವಾಯ್ತು. ತನ್ನ ವೇಗ ಕಡಿಮೆಯಾಗುತ್ತಿರುವಂತೆ ಅನಿಸಿತು. ಸರಿಯಾಗಿ ಪರಿಶೀಲಿಸಿ ನೋಡಿದರೆ ತನ್ನ ವೇಗವಷ್ಟೇ
ಅಲ್ಲ , ಆಕಾಶದಲ್ಲಿ ತಾನು ಹೊರಹೋಗುತ್ತಿದ್ದ ಎತ್ತರವು ಕಡಿಮೆಯಾಗುತ್ತಿರುವಂತೆ ಅನಿಸಿತು. ಇನ್ನು ಸ್ವಲ್ಪ ಹೊತ್ತಿಗೆ ತನ್ನನ್ನು ಯಾರೋ ಹಗ್ಗ ಹಾಕಿ ಎಳೆಯುತ್ತಿದ್ದಾರೇನೋ ಅನಿಸಿತು. ಕೆಲಕ್ಷಣಗಳಲ್ಲಿಯೇ ಯಾರೋ ಬಲವಾಗಿ ಗಾಳಿಯನ್ನು ಹೀರಿಕೊಳ್ಳುತ್ತಿದ್ದಂತೆ ತಾನು ಗಾಳಿಯೊಳಗ ಸೇರಿಸಿ ಸೆಳೆಯಲ್ಪಡುತ್ತಿದ್ದಂತೆ ಭಾಸವಾಯಿತು .
411 . ಪರಿಸ್ಥಿತಿ ಸರಿಯಾಗಿ ಅರ್ಥವಾಗುತ್ತಿದ್ದಂತೆ ಹನುಮಂತನ ಬುದ್ಧಿ ಚುರುಕಾಗಿ ಕೆಲಸ ಮಾಡಲು ಶುರು ಮಾಡಿತು. ಕೂಡಲೇ ಅವನಿಗೆ ಸುಗ್ರೀವನು ಹೇಳಿದ ಮಾತು ಜ್ಞಾಪಕಕ್ಕೆ ಬಂತು. ಅವನು ಸಿಂಹಿಕೆಯೆಂಬ ರಾಕ್ಷಸಿಯ ಬಗ್ಗೆ ಹೇಳಿದ್ದ. ಅವಳಿರುವ ಪ್ರದೇಶ ಇದೆ ಎಂದು ಅವನಿಗೆ ಈಗ ಗೊತ್ತಾಯ್ತು .
412 . ಸಿಂಹಿಕೆ ಒಬ್ಬ ರಾಕ್ಷಸಿ. ತಿಮಿಂಗಲದ ಆಕಾರದವಳು. ಅವಳು ನೀರಿನ ಕೆಳಗಡೆಯೇ ಇದ್ದು ಮೇಲೆ ಬಿದ್ದ ನೆರಳುಗಳನ್ನು ಹಿಡಿದುಕೊಂಡು ಮೇಲಿರುವ ವಸ್ತುವನ್ನು ಅದು ಏನೇ ಆಗಿರಲಿ ಪಕ್ಷಿಯೋ, ವಿಮಾನವೋ, ದೇವತೆಯೋ ಎಳೆದುಕೊಂಡು ನುಂಗುವುದು ಅವಳಿಗೆ ಒಂದು ಆಟವಾಗಿತ್ತು. ಅದಕ್ಕೆ ಅವಳಿಗೆ ‘ ಛಾಯಾಗ್ರಾಹಣಿ ‘ಎಂಬ ಬಿರುದು ಇತ್ತು.
413 . ಹನುಮಂತನು ಕ್ಷಣದೊಳಗೆ ಸಮುದ್ರ ಪ್ರಾಂತ್ಯದ ದಿಕ್ಕುಗಳನ್ನು, ಕೋನಗಳನ್ನು ಮನಸ್ಸಿನಲ್ಲೇ ಲೆಕ್ಕ ಹಾಕಿ ನೋಡಿಕೊಂಡ. ಸಂದೇಹವೇ ಇಲ್ಲ. ಇದು ಸುಗ್ರೀವ ಹೇಳಿದ ಛಾಯಾ ಗೃಹಿಣಿಯ ಪ್ರಾಂತ್ಯವೇ. ಇವಳೇ ಛಾಯಾಗ್ರಾಹಣಿ ರಾಕ್ಷಸಿ. ಅವಳಿಗೆ ತನ್ನ ಮೇಲೆ ಹಿಡಿತ ಸಿಕ್ಕಿತ್ತು. ಆದ್ದರಿಂದಲೇ ಅವಳು ನಿಧಾನವಾಗಿ ನೀರಿನಿಂದ ಮೇಲೆ ತಲೆಯನ್ನು ಚಾಚಿ ಭಯಂಕರವಾಗಿ ಬಾಯಿ ತೆಗೆಯುತ್ತಾ ಬಲವಾಗಿ ಸೆಳೆದುಕೊಳ್ಳುತ್ತಿದ್ದಾಳೆ.
414 . ಅವಳ ಬಾಯಿಗೇನಾದರೂ ಬಿದ್ದರೆ ಕತೆ ಮುಗಿದಂತೆ. ಬದುಕಲು ಸಾಧ್ಯವೇ ಇಲ್ಲ. ಆಗಿಹೋಯ್ತು .
415 . ಈ ವಿಷಯ ತೋಚುವುದೇ ತಡ, ಹನುಮಂತನ ಉತ್ಸಾಹ, ಧೈರ್ಯ, ಚುರುಕುತನಗಳು ಒಮ್ಮೆಲೆ ಹೆಚ್ಚಾದವು. ಭಯದ ಮಾತೇ ಇರಲಿಲ್ಲ.
( ಮುಂದುವರೆಯುವುದು )
* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share