ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 57

221
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 57

ಓಂ ನಮೋ ಹನುಮತೇ ನಮಃ

449) ‘ಈ ಹೊತ್ತಿನಲ್ಲಿ ಯಾರು ಗಮನಿಸುತ್ತಾರೆ’ ಅಂದುಕೊಂಡು ಹನುಮಂತ ಪ್ರಧಾನ ದ್ವಾರವನ್ನು ತಪ್ಪಿಸಿ, ಸ್ವಲ್ಪ ಪಕ್ಕದಿಂದ ಪ್ರಾಕಾರವನ್ನು ಹತ್ತಿ ಒಳಕ್ಕೆ ಧುಮುಕೋಣ ಎಂದು ಸ್ವಲ್ಪ ಹತ್ತಿರ ಹೋದನೋ ಇಲ್ಲವೋ, ಎದುರಿಗೆ ಸಿಡಿಲು ಬಡಿದಂತಾಯಿತು.
450) ಗೋಡೆಯಿಂದ ದೆವ್ವ ಹುಟ್ಟಿದಂತೆ, ಆ ಪ್ರಾಕಾರದಿಂದ ಒಬ್ಬ ಮುದಿ ರಾಕ್ಷಸಿ ಎದ್ದು ಬಂದಳು. ಅವಳು ಭಯಂಕರವಾಗಿ ಕಣ್ಣು ಬಿಡುತ್ತಾ “ಯಾರೋ ನೀನು!” ಎಂದು ಗರ್ಜಿಸಿದಳು.
451) ಹನುಮಂತ ಒಳಗೊಳಗೇ ಆಶ್ಚರ್ಯಪಟ್ಟರೂ, ಹೊರಗೆ ಮಾತ್ರ ಕಪಿಯಂತೆ ಪಿಳಿಪಿಳಿ ನೋಡುತ್ತಾ “ಮೊದಲು ನೀನ್ಯಾರು ಹೇಳು!” ಎಂದು ಕೇಳಿದ. ಅವಳಿಗೆ ರೇಗಿತು. ಆದರೂ ತಡೆದುಕೊಂಡು, “ನನ್ನನ್ನು ಲಂಕಿಣಿ ಎನ್ನುತ್ತಾರೆ. ಈ ಲಂಕಾ ರಾಜ್ಯದ
ಅಧಿದೇವತೆ ನಾನೇ. ನನ್ನ ಅನುಮತಿ ಇಲ್ಲದೆ ಹುಳವಿರಲಿ, ಗಾಳಿಯೂ ಒಳಗೆ ಬರುವಂತಿಲ್ಲ. ಕದಲಬೇಡ. ಕದಲಿದೆಯೋ, ಕೈಕಾಲು ಮುರಿಯುತ್ತೇನೆ, ಜೋಕೆ! ನೀನ್ಯಾರು, ಎಲ್ಲಿಂದ ಬಂದೆ ಹೇಳು?” ಅಂದಳು. ತನ್ನ ಹೆಸರು ಕೇಳಿ ಆ ಕಪಿಮರಿ ಹೆದರಿಬಿಡುತ್ತದೆ
ಅಂದುಕೊಂಡಿದ್ದಳು.
452) ಹನುಮಂತ ಅವಳ ಬೆದರಿಕೆಯನ್ನು ಲೆಕ್ಕಿಸದೇ, “ನಿಮ್ಮೂರು ತುಂಬಾ ಚೆನ್ನಾಗಿದೆಯಂತೆ, ನೋಡೋಣ ಅನ್ನಿಸ್ತು. ಇದೋ, ಹೀಗೆ ಹೋಗಿ, ನೋಡಿ, ಹಾಗೆ ಬಂದುಬಿಡುತ್ತೇನೆ” ಎನ್ನುತ್ತಾ ಒಂದು ಹೆಜ್ಜೆ ಮುಂದೆ ಇಟ್ಟ.
453) ಈ ಜಾತಿಯ ಕೋತಿಗಳು ಇಲ್ಲಿ ಇಲ್ಲವಲ್ಲಾ! ಇದು ಎಲ್ಲಿಂದ ಬಂದಿರಬಹುದು? ಎಂದು ರಾಕ್ಷಸಿಗೆ ಅನುಮಾನ ಬಂದಿತ್ತು. “ಏಯ್! ನಿಲ್ಲು!” ಅನ್ನುತ್ತಾ ಅವನ ತಲೆಯ ಮೇಲೆ ಬಲವಾಗಿ ಹೊಡೆದಳು.
454) ಆ ಏಟಿಗೆ ಕೋತಿಮರಿ ಚುಪ್ಪಾ ಚೂರಾಗಿಬಿಡುತ್ತದೆ ಎಂದು ಅವಳು ಭಾವಿಸಿದಳು. ಆದರೆ ಹಾಗಾಗುವುದರಬದಲು ಹನುಮನಿಗೆ ಕೋಪಬಂದು ಇದ್ದಕ್ಕಿದ್ದಂತೆ ಆಕಾಶಕ್ಕೆಗರಿ ಎಡಗೈಯಿಂದ ಲಂಕಿಣಿಯ ಎದೆಗೆ ಒಂದು ಏಟು ಕೊಟ್ಟ.
455) ನೋಡುವುದಕ್ಕೆ ಒಳ್ಳೆ ಸಿಳ್ಳೆಕ್ಯಾತನ ತರಹ ಇದ್ದರೂ ಏಟುಮಾತ್ರ ಸಿಡಿಲಿಗಿಂತ ಬಲವಾಗಿತ್ತು. ಆ ಹೊಡೆತಕ್ಕೆ ತತ್ತರಿಸಿಹೋದ ಲಂಕಿಣಿ ತಲೆತಿರುಗಿ ಬಿದ್ದಳು.
456) ಎಷ್ಟೇ ಆಗಲಿ, ಹೆಂಗಸು ಅಂತ ಗಟ್ಟಿಯಾಗಿ ಗುದ್ದಲು ಇಷ್ಟವಿಲ್ಲದೇ ಹನುಮಂತ ಎಡಗೈಯಲ್ಲಿ ಒಂದು ಸಣ್ಣ ಏಟು ಕೊಟ್ಟಿದ್ದ. ಅಷ್ಟಕ್ಕೇ ಲಂಕಿಣಿಗೆ ಕಣ್ಣು ಕತ್ತಲೆ ಬಂದು, ನಕ್ಷತ್ರಗಳು ಕಾಣಿಸಿದವು. ಬಾಯಿಂದ ರಕ್ತ ಕಾರಿತು. ವಿಲವಿಲನೆ ಒದ್ದಾಡಿದಳು. ನಂತರ
ಸ್ವಲ್ಪ ಚೇತರಿಸಿಕೊಂಡು ನಿಂತು, ಎರಡೂ ಕೈಗಳನ್ನು ಎತ್ತಿ ನಮಸ್ಕರಿಸಿ ಹೀಗೆ ಹೇಳಿದಳು.
1. ಮಹಾನುಭಾವ! ನೀನು ಯಾರೋ ನನಗೆ ಗೊತ್ತಿಲ್ಲ. ಆದರೆ ಇವತ್ತು ನಿನ್ನ ಹೊಡೆತದಿಂದ ನನಗೆ ಬ್ರಹ್ಮದೇವನ ಮಾತು ಜ್ಞಾಪಕಕ್ಕೆ ಬರುತ್ತಿದೆ.
2. ಒಂದು ಸಾರಿ ನಮ್ಮ ರಾವಣನು ಕೈಲಾಸಕ್ಕೆ ಹೋಗಿ, ಅಲ್ಲಿ ನಂದಿಕೇಶ್ವರ ಮೊದಲಾದವರನ್ನು ಗೋಳು ಹುಯ್ದುಕೊಂಡ. ಶಿವನ ಪರಿವಾರ ಎಂದೂ ಲೆಕ್ಕಿಸದೇ ಗೋಳು ಹುಯ್ದುಕೊಂಡ. ಆಗ ಅವರು ನಿನ್ನ ಪಟ್ಟಣ ಬೂದಿಯಾಗಿಹೋಗುತ್ತದೆ ಎಂದು
ಶಾಪಕೊಟ್ಟರು. ನಮ್ಮವನು ಅದನ್ನು ಲೆಕ್ಕಿಸಲಿಲ್ಲ. ಆದರೆ ಸುಟ್ಟುಹೋಗುವುದು ನಾನಲ್ಲವೇ! ಆದ್ದರಿಂದ ನಾನು ಭಯಪಟ್ಟು ಬ್ರಹ್ಮನ ಹತ್ತಿರಹೋಗಿ ಬೇಡಿಕೊಂಡ.
3. ಆಗ ಬ್ರಹ್ಮದೇವ ನನಗೆ ವರವನ್ನು ಕೊಡುತ್ತಾ “ಈಗಲೇ ಸುಡುವುದಿಲ್ಲ ಬಿಡು, ಒಂದು ಕೋತಿಯ ಕೈಲಿ ನೀನು ಸೋಲು ಅನುಭವಿಸಿದಾಗ ನಿನ್ನ ಲಂಕಾ ರಾಜ್ಯವು ಕುಸಿದಂತೆಯೇ ಸರಿ. ಅಲ್ಲಿಯವರೆಗೂ ದೇವತೆಗಳು ನಿನ್ನನ್ನು ಏನೂ
ಮಾಡಲಾರರು. ಆಗ ಸುಡುವುದೂ ಖಂಡಿತ, ಕುಸಿಯುವುದೂ ಖಂಡಿತ” ಎಂದ.
4. ಇವತ್ತು ನಿನ್ನ ಹೊಡೆತಕ್ಕೆ ನನ್ನ ಪ್ರಾಣ ಕುತ್ತಿಗೆಯವರೆಗೂ ಬಂದಿತ್ತು. ಇನ್ನೊಂದು ಏಟು ಹೊಡೆಯದೇ ಬಿಟ್ಟಿದ್ದು ನಿನ್ನ ದಯೆ!
5. ನಿನ್ನ ಶಕ್ತಿಯನ್ನೂ, ನಿನ್ನ ದಯೆಯನ್ನೂ, ಬ್ರಹ್ಮನ ಮಾತುಗಳನ್ನೂ – ಎಲ್ಲವನ್ನೂ ಸೇರಿಸಿ ನೋಡಿದಾಗ, ನೀನು ಸೀತೆಗೋಸ್ಕರ ಬಂದಿದ್ದೀಯೆ ಎಂದು ನನಗೆ ಅರ್ಥವಾಯಿತು. ನಿನ್ನನ್ನು ಯಾರೂ ತಡೆಯಲಾರರು. ರಾವಣನನ್ನು ಯಾರೂ
ಉಳಿಸಲಾರರು. ವೀರಾ! ನಾನು ಸೋತೆ. ಇಲ್ಲಿಂದ ಹೀಗೇ ಹೊರಟು ಹೋಗುತ್ತೇನೆ. ನೀನು ನಿನ್ನ ಕೆಲಸವನ್ನು ನಿರಾತಂಕವಾಗಿ ಮುಗಿಸಿ, ಜಯಶಾಲಿಯಾಗು.
457) ಹೀಗೆ ಹೇಳಿ ಲಂಕಿಣಿಯು ಇನ್ನೊಂದು ಸಲ ಹನುಮಂತನಿಗೆ ನಮಸ್ಕರಿಸಿ ಮಾಯವಾಗಿಹೋದಳು.
458) ಹನುಮಂತನು ಇನ್ನು ನಿರಾತಂಕವಾಗಿ ಪ್ರಾಕಾರದ ಮೇಲೆ ಹಾರಿ, ಎಡಗಾಲು ನೆಲಕ್ಕೆ ತಾಕುವಂತೆ ಒಳಗಿಳಿದ. (ಶತ್ರುನಾಶವನ್ನು ಬಯಸುವವರು ಶತ್ರುವಿನ ರಾಜ್ಯಕ್ಕೆ ಕಾಲಿರಿಸಬೇಕಾದ ವಿಧಾನ ಇದೇ.)
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share