ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 61

301
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 61
ಓಂ ನಮೋ ಹನುಮತೇ ನಮಃ

478) ಆಂಜನೇಯನು ಈ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಂಡು, ಕಂದಕವನ್ನೂ, ಪ್ರಾಕಾರವನ್ನೂ, ಸೇನಾವಲಯವನ್ನೂ ದಾಟಿ ಭವನದೊಳಗೆ ಕಾಲಿಟ್ಟ.
479) ಆ ವೈಭವವನ್ನು ನೋಡುತ್ತಿದ್ದರೆ ತಲೆ ತಿರುಗುತ್ತಿದೆ. ಅಷ್ಟದಿಕ್ಪಾಲಕರ ಭವನಗಳಲ್ಲೂ ಇಂತಹ ವೈಭವ ಇರುವುದಿಲ್ಲವೇನೋ! (ಇಲ್ಲಿ ವಾಲ್ಮೀಕಿಯು ವಿಸ್ತಾರವಾದ, ಸುಂದರವಾದ ವರ್ಣನೆ ಮಾಡಿದ್ದಾನೆ). ಅಲ್ಲಿ ಪ್ರತಿಯೊಂದು ಕೊಠಡಿಯಲ್ಲೂ ಚಿತ್ರ ವಿಚಿತ್ರವಾದ, ಆಶ್ಚರ್ಯಕರವಾದ ದೃಶ್ಯಗಳು ಕಾಣಿಸುತ್ತಿವೆ. ಅನೇಕ ಕಡೆ ಸುಂದರವಾದ ಹೆಂಗಸರು ನಿದ್ರಾಸ್ಥಿತಿಯಲ್ಲಿ ಕಾಣಿಸುತ್ತಿದ್ದಾರೆ. ಹನುಮಂತನು ಪ್ರತಿಯೊಬ್ಬ ವ್ಯಕ್ತಿಯನ್ನೂ ಗಮನಿಸಿಕೊಳ್ಳುತ್ತಾ ಮುಂದೆಹೋಗುತ್ತಿದ್ದಾನೆ.
480) ಆ ಭವನದಲ್ಲಿ ಅನೇಕ ಮದ್ಯಶಾಲೆಗಳು ಕಾಣಿಸಿದವು. ಅನೇಕ ನಾಟ್ಯಶಾಲೆಗಳು, ಅನೇಕ ಪಾಕಶಾಲೆಗಳು, ಅನೇಕ ಭೋಜನಶಾಲೆಗಳು ಕಂಡವು. ಪ್ರತಿಯೊಂದು ಸ್ಥಳದಲ್ಲೂ ಸಂಪತ್ತು ತಾಂಡವವಾಡುತ್ತಿತ್ತು. ಹಾಗೇ ಹೋಗುತ್ತಾ ಹೋಗುತ್ತಾ ಇನ್ನೊಂದು
ಬಹಳ ವಿಶಾಲವಾದ ಕೊಠಡಿ ಕಾಣಿಸಿತು.
481) ಅದರೊಳಗೆ ಕಾಲಿರಿಸಿದ ಹನುಮಂತ, ಮೊದಲು ಒಂದು ಸಾರಿ ಕಾಲು ಹಿಂತೆಗೆದು, ಪುನಃ ಸಾವರಿಸಿಕೊಂಡು ಮುಂದೆ ಕಾಲಿರಿಸಿದ.
482) ಆ ಕೋಣೆಯಲ್ಲಿ ಬೃಹದಾಕಾರದ ಮಂಚದ ಮೇಲೆ ಉದ್ದಿನ ಕಾಳಿನ ರಾಶಿಯಂತೆ ಇದ್ದ ಒಬ್ಬ ಧಡೂತಿ ವ್ಯಕ್ತಿ ಮೈಮರೆತು ನಿದ್ರೆ ಹೋಗುತ್ತಿದ್ದ. ನಿದ್ದೆಯಲ್ಲಿರುವಾಗ ಅವನ ಶರೀರದ ಗಾತ್ರವನ್ನು ನೋಡಿದರೇನೇ ಹನುಮಂತನಂಥವನಿಗೇ ಮೈ ನಡುಗಿತು.
ಭಯವಾದಂತೆ ಆಯಿತು. ಅದು
ಆ ವ್ಯಕ್ತಿಯ ಸಾರ. ಅವನೇ ರಾವಣಾಸುರ ಎಂದು ಹನುಮಂತ ಕೂಡಲೇ ತಿಳಿದುಕೊಂಡ.
483) ಆ ಕೊಠಡಿಯಲ್ಲಿ ಸುಮಾರು ನೂರಾರು ಯುವತಿಯರು ಮಲಗಿದ್ದರು. ಒಬ್ಬೊಬ್ಬರೂ ಒಳ್ಳೆ ಮಿಂಚಿನ ಬಳ್ಳಿಯಂತಿದ್ದರು. ಅವರು ಮಲಗಿದ್ದ ಭಂಗಿಯನ್ನು ನೋಡಿದರೆ ಅವರೆಲ್ಲಾ ಕಂಠಪೂರ್ತಿ ಕುಡಿದು, ಆಟಗಳಿಂದ, ಗಾಯನದಿಂದ ರಾಕ್ಷಸ
ಚಕ್ರವರ್ತಿಯನ್ನು ಸಂತೋಷಪಡಿಸಿ ಸುಸ್ತಾಗಿ ನಿದ್ರೆ ಮಾಡುತ್ತಿದ್ದಂತೆ ಇತ್ತು. ಅವರಲ್ಲಿ ಕೆಲವರು ದೇವ ಜಾತಿಯವರು, ಕೆಲವರು ಗಂಧರ್ವ ಜಾತಿಯವರು, ಕೆಲವರು ಮಾನವ ಜಾತಿಯವರು, ಇನ್ನು ಕೆಲವರು ರಾಕ್ಷಸ ಜಾತಿಯವರೂ ಇದ್ದರು.
484) ಆ ಸ್ಥಿತಿಯಲ್ಲಿ ಅವರೆಲ್ಲರನ್ನೂ ಪರಿಶೀಲಿಸಿ ನೋಡುವುದು, ಹನುಮಂತನಿಗೆ ಮುಜುಗರವಾಗಿತ್ತು. ಆದರೆ ಅದು ತನ್ನ ಕರ್ತವ್ಯವಾಗಿದ್ದರಿಂದ ಪ್ರತಿಯೊಬ್ಬರನ್ನೂ ಜಾಗರೂಕತೆಯಿಂದ ಪರಿಶೀಲಿಸಿ ನೋಡಿದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರಾ
ಬೆಂಗಳೂರು


Share