ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 67

334
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 67
ಓಂ ನಮೋ ಹನುಮತೇ ನಮಃ

511) ಹನುಮಂತನಿಗೆ ಬಹಳ ವಿಚಿತ್ರ ವೆನಿಸಿತು. “ಅರೆರೆ! ಇವನೆಂಥ ವೀರ! ಇವನೆಲ್ಲಿಯ ರಾಜ! ಭಿಕ್ಷುಕನಿಗಿಂತ ಹೀನವಾಗಿ ಹೆಂಗಸನ್ನು ಬೇಡುತ್ತಿದ್ದಾನಲ್ಲಾ! ಕಾಮಾವೇಶ ಅನ್ನುವುದು ಎಂತಹ ಉನ್ನತ ವ್ಯಕ್ತಿಯನ್ನೂ ಇಂತಹ ನೀಚ ಪರಿಸ್ಥಿತಿಗೆ ಇಳಿಸಿಬಿಡುತ್ತದೆ. ಬಲಾತ್ಕಾರ ಮಾಡಿದರೆ ತಲೆ ಒಡೆದು ಸಾಯುವೆ’ ಎಂದು ಬ್ರಹ್ಮನ ಶಾಪ ಇದ್ದುದರಿಂದ ಅವನು ತಡೆದುಕೊಂಡಿದ್ದ. ಇಲ್ಲವಾದರೆ ಈ ನೀಚ ಏನು ಮಾಡಲಿಕ್ಕೂ ಹೇಸುತ್ತಿರಲಿಲ್ಲ. ಅದು ಹಾಗಿರಲಿ. ಅಷ್ಟು ಅಂಗಲಾಚಿ ಬೇಡುತ್ತಿರುವ ರಾವಣನನ್ನು ಪೊರಕೆಯ ಕಡ್ಡಿಗಿಂತಲೂ ನಿಕೃಷ್ಟವಾಗಿ ನೋಡುತ್ತಿರುವ ಈ ಸಾಧ್ವಿ ಯಾರಿರಬಹುದು?” ಅಂದುಕೊಳ್ಳುತ್ತಾ ಹನುಮಂತ ತದೇಕಚಿತ್ತನಾಗಿ ಆ ಸಂಭಾಷಣೆಯನ್ನು ಕೇಳುತ್ತಿದ್ದ.
512) ಈ ಸಂದರ್ಭದಲ್ಲಿ ರಾವಣ ಆಡಿದ ಪ್ರತಿ ವಾಕ್ಯಕ್ಕೂ ಕೆಲವು ವ್ಯಾಖ್ಯಾನಕಾರರು ಎರಡೆರಡು ಅರ್ಥಗಳನ್ನು ಹೇಳಿದ್ದಾರೆ. ಒಂದು ಅರ್ಥ ಮಾಮೂಲಾಗಿ ತಿಳಿಯುವ ಅರ್ಥವೇ. ಎರಡನೇ ಅರ್ಥದ ಪ್ರಕಾರ – ರಾವಣಾಸುರನು ಸೀತೆಯನ್ನು ಕರೆತಂದಿದ್ದು ದುರುದ್ದೇಶದಿಂದ ಅಲ್ಲ. ಅವಳು ಲಕ್ಷ್ಮೀದೇವಿ ಎಂದು ಗ್ರಹಿಸಿ, ಅವಳು ಅನುಗ್ರಹ ಮಾಡಿದರೆ ಶ್ರೀರಾಮನ ಅನುಗ್ರಹ ತನ್ನ ಮೇಲೆ ಹರಿಯುತ್ತದೆಂಬ ಆಸೆಯಿಂದ, ರಾಕ್ಷಸಭಕ್ತಿ ಭಾವದಿಂದ ಅವಳನ್ನು ಎತ್ತುಕೊಂಡು ಬಂದಿದ್ದ. ಆದ್ದರಿಂದಲೇ ನಿದ್ದೆಯಿಂದೇಳುತ್ತಲೇ ಅವಳ ದರ್ಶನ ಮಾಡಿಕೊಂಡು ಅವಳನ್ನು ನಿಗೂಢ ರೀತಿಯಲ್ಲಿ ಪ್ರಾರ್ಥಿಸುತ್ತಿದ್ದ. ಈ ಎರಡನೇ ಅರ್ಥವನ್ನು ಸಮರ್ಥಿಸಿಕೊಳ್ಳಲು ಆ ವ್ಯಾಖ್ಯಾನಕಾರರು ಕೆಲವು ಪದಗಳನ್ನು ಅಲ್ಲಿ ಅಲ್ಲಿ ಎಳೆದಾಕಿ ಅನ್ವಯಿಸಬೇಕಾಗಿದೆ. ಒಂದುವೇಳೆ ಆ ಅಂತರಾರ್ಥಗಳನ್ನು ಅಂಗೀಕರಿಸಿದರೂ ಸಹ ಸೀತಾನುಗ್ರಹಕ್ಕಾಗಿ ಸೀತೆಯನ್ನು ಅಪಹರಿಸಿಕೊಂಡು ಬರುವುದು ರಾಕ್ಷಸ ಕೃತ್ಯವೇ ಆಗುವುದೇ ವಿನಹ ಉಪಾಸನಾ ಕೃತ್ಯ ಎನಿಸಿಕೊಳ್ಳುವುದಿಲ್ಲ. ಆದ್ದರಿಂದ ರಾವಣಾಸುರನು ಮಾಡಿದ ದುಶ್ಚರ್ಯೆಗಳನ್ನು ಭಕ್ತಿ ಚರ್ಯೆ ಎಂಬುದಾಗಿ ಸಮರ್ಥಿಸುವುದು ಸಲ್ಲದು. ಆದರೂ ಆ ಶ್ಲೋಕಗಳ ಅಂತರಾರ್ಥಗಳ ಪರಿಯನ್ನು ತಿಳಿದುಕೊಳ್ಳಲು ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ.
ಶ್ಲೋಕ೤೤
ಮಾಂ ದೃಷ್ಟ್ವಾ ನಾಗನಾಸೋರು ಗೂಹಮಾನಾ ಸ್ತನೋದರಮ್‌೤
ಅದರ್ಶನ ಮಿವಾತ್ಮಾನಂ ಭಯಾನ್ನೇತುಂ
ತ್ವಮಿಚ್ಛಸಿ೤೤
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share