ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 78

219
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 78
ಓಂ ನಮೋ ಹನುಮತೇ ನಮಃ

ಹನುಮಂತ ಸೀತಾದೇವಿಯನ್ನು ಪ್ರಶ್ನಿಸಿದ್ದು
547) ಇದೆಲ್ಲವನ್ನೂ ಗಮನಿಸುತ್ತಿದ್ದ ಹನುಮಂತ ಮರದ ಮೇಲಿಂದ ಕೆಳಗಿಳಿದು ಸೀತಾದೇವಿಗೆ ಸ್ವಲ್ಪ ದೂರದಲ್ಲಿ ನಿಂತು, ಕೈಗಳನ್ನೆತ್ತಿ ತಲೆಯಮೇಲೆ ಅಂಜಲಿ ಜೋಡಿಸಿ, ಶಿರಬಾಗಿ ನಮಸ್ಕರಿಸಿದ. ಒಂದೊಂದೇ ವಾಕ್ಯವಾಗಿ ಮೆಲ್ಲನೆ ಹೀಗೆ ಮಾತಾಡಿದ –
1. ಯಾರಮ್ಮಾ ನೀನು? ಎಷ್ಟು ಪವಿತ್ರಳಾಗಿ ಕಾಣುತ್ತಿದ್ದೀಯೆ! ಆದರೆ ಕಣ್ಣೀರು ಸುರಿಸುತ್ತಿರುವೆಯಲ್ಲಾ!
2. ನೀನು ದೇವತಾ ಸ್ತ್ರೀಯೋ? ಅಥವಾ ಗಂಧರ್ವ ಸ್ತ್ರೀಯೋ? ರಾಕ್ಷಸ ಸ್ತ್ರೀಯೋ! ಎಲ್ಲಿಯವಳು ನೀನು?
3. ನೀನು ದೇವತೆಯೇ ಇರಬೇಕು ಅನಿಸುತ್ತದೆ. ನೀನು ಏಕಾದಶ ರುದ್ರರಪೈಕಿ ಯಾರ ಹೆಂಡತಿಯೋ ಏನೋ! ಅಥವಾ ಅಷ್ಟವಸುಗಳ ಅರ್ಧಾಂಗಿಯೋ? ಅಥವಾ ಸಪ್ತಮರುತ್ತುಗಳ ಸತೀಮಣಿಯೋ? ಯಾರಮ್ಮಾ ನೀನು?
4. ಇಷ್ಟು ಮಾತಾಡಿದ ಹನುಮಂತ ಒಂದು ಕ್ಷಣ ಸುಮ್ಮನಾದ. ತನ್ನ ಮಾತುಗಳಲ್ಲಿ ಅವಳ ಸೌಂದರ್ಯವನ್ನು ಮೆಚ್ಚಿಕೊಂಡಂತಿತ್ತು. ಅದು ಸೀತಾದೇವಿಗೆ ಇಷ್ಟವಾಗದಿರಬಹುದು. ಆದ್ದರಿಂದ ಕೂಡಲೇ ಮಾತಿನ ಪರಿಯನ್ನು ಬದಲಾಯಿಸಿದ.
5. ಅಮ್ಮಾ! ವಶಿಷ್ಟನ ಮೇಲೆ ಕೋಪಿಸಿಕೊಂಡು ಸಪ್ತರ್ಷಿಮಂಡಲವನ್ನೇ ತೊರೆದು ಬಂದ ಅರುಂಧತಿ ದೇವಿಯೇ ತಾಯಿ ನೀನು? ಅಥವಾ ಚಂದ್ರನನ್ನು ಬಿಟ್ಟು ಬಂದ ರೋಹಿಣೀ ದೇವಿಯೋ?
6. ಅಮ್ಮಾ! ನಿನ್ನ ಗಂಡ ಯಾರು? ತಂದೆಯಾರು? ಬಂಧುಗಳು ಯಾರು? ಯಾಕೆ ಅಳುತ್ತಿದ್ದೀಯ? ಅವರೇನಾದರೂ ಮರಣಿಸಿದರೇ? ಅಥವಾ ಅಂತಹ ವಾರ್ತೆ ಕೇಳಿದೆಯಾ?
7. ಅಮ್ಮಾ! ಏನೂ ಅನ್ಕೋಬೇಡ. ನೋಡಿದರೆ ನೀನು ಮಾನವ ಮಹಿಳೆಯೇನೋ ಅನಿಸುತ್ತಿದೆ. ಏಕೆಂದರೆ, ನಿನ್ನ ಕಾಲುಗಳು ನೆಲಕ್ಕೆ ಮುಟ್ಟುತ್ತಿವೆ. ನಿನ್ನ ರೆಪ್ಪೆಗಳು ಮಾತುಮಾತಿಗೂ ಅಲುಗಾಡುತ್ತಿವೆ.
8. ನಿನ್ನ ಸಾಮುದ್ರಿಕಾ ಲಕ್ಷಣಗಳನ್ನು ನೋಡಿದರೆ ನೀನು ರಾಜಪುತ್ರಿ ಅನಿಸುತ್ತಿದೆ. ರಾಜಪುತ್ರಿಯೇ ಏನು, ಚಕ್ರವರ್ತಿಯ ಪಟ್ಟದರಾಣಿ ಅನಿಸುತ್ತಿದೆ.
9. ಇಷ್ಟೊಂದು ಏಕೆ ಕೇಳುತ್ತಿದ್ದೇನೆ ಎಂದುಕೊಳ್ಳಬೇಡ. ಒಂದು ಚಿಕ್ಕ ಸಂದೇಹ-

ಶ್ಲೋಕ೤೤
ರಾವಣೇನ ಜನಸ್ಥಾನಾತ್
ಬಲಾದಪಹೃತಾ ಯದಿ೤
ಸೀತಾ ತ್ವಮಸಿ ಭದ್ರಂ ತೇ ತನ್ ಮಮಾಚಕ್ಷ್ವ ಪೃಚ್ಛತಃ೤೤

ರಾವಣಾಸುರನು ಜನಸ್ಥಾನದಿಂದ ಎತ್ತಿಕೊಂಡು ಬಂದ ವನಿತೆ ನೀನೇ ಆಗಿದ್ದರೆ, ನೀನು ಸೀತೆಯೇ! ಭಯ ಬೇಡ. ನಿನಗೆ ಒಳ್ಳೆಯದಾಗುತ್ತದೆ. ನನಗೆ ಹೇಳು.
10. ಹೀಗೆ ಹೇಳಿ ಹನುಮಂತ ಸೀತೆಯ ಕಣ್ಣೊಳಗೆ ನೋಡುತ್ತಾ ಒಂದು ಕ್ಷಣ ಸುಮ್ಮನಿದ್ದ. ನಂತರ ಮಾತು ಮುಂದುವರೆಸಿದ.
11. ಅಮ್ಮಾ! ಶ್ರೀರಾಮನು ನನಗೆ ಹೇಳಿದ ಲಕ್ಷಣಗಳೆಲ್ಲವೂ ನಿನ್ನಲ್ಲಿ ಕಾಣಿಸುತ್ತಿವೆ. ಆದರೆ ಎರಡೇ ಎರಡು ವ್ಯತ್ಯಾಸ. ನೀನು ದುಃಖದಲ್ಲಿ ಮುಳುಗಿರುವಂತೆ ಕಾಣಿಸುತ್ತಿದ್ದೀಯ. ತಾಪಸಾಂಗನೆಯಂತೆ ಬಡಕಲಾಗಿದ್ದೀಯ. ಈ ಲಕ್ಷಣಗಳಿಂದ ನಾನು ಇನ್ನೂ ಖಚಿತವಾಗಿ ಹೇಳುತ್ತೇನೆ – ನೀನು ರಾಮನ ಪಟ್ಟದರಾಣಿಯೇ. ಸಂದೇಹವೇ ಇಲ್ಲ.
ಶ್ಲೋಕ೤೤
ಯಥಾಹಿ ತವ ವೈ ದೈನ್ಯಂ ರೂಪಂ
ಚಾಪ್ಯತಿ ಮಾನುಷಮ್‌೤
ತಪಸಾ ಚಾನ್ವಿತೋ ವೇಷಃ ತ್ವಂ
ರಾಮ ಮಹಿಷೀ ಧ್ರುವಮ್‌೤೤
ಅಮ್ಮಾ! ನಿನ್ನ ದೈನ್ಯವನ್ನೂ, ಮಾನವಾತೀತ ಸೌಂದರ್ಯವನ್ನೂ, ತಪೋಯುಕ್ತವಾದ ವೇಷವನ್ನೂ ನೋಡಿದರೆ ನೀನು ರಾಮನ ಪಟ್ಟದ ರಾಣಿಯೇ. ಸಂದೇಹವಿಲ್ಲ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು

Share