ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 88

201
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 88
ಓಂ ನಮೋ ಹನುಮತೇ ನಮಃ

629) ಸರಿ ಎಂದು ಸೂಚೀಮುಖನು ಬಾಲದ ಕೋಟೆಯ ಹತ್ತಿರಬಂದ. ಹನುಮಂತನ ತೇಜಸ್ಸು ನೋಡುತ್ತಿದ್ದಂತೆ ಅವನಿಗೆ ಎದೆ ಒಡೆದಂತೆ ಆಯಿತು. ಹೇಗೋ ಧೈರ್ಯಮಾಡಿ ಒಂದು ಮೂಲೆಯಿಂದ ತನ್ನ ಸೂಚೀ ಮುಖದಿಂದ ನೆಲವನ್ನು ಅಗೆಯಲು
ಶುರುಮಾಡಿ, ಬಾಲದ ಕೆಳಗೆ ಬಂದ.
630) ಹನುಮಂತನಿಗೆ ಏನೋ ಸ್ವಲ್ಪ ಕದಲಿದಂತೆ ಆಯಿತು. ಆದರೆ ಯಾರೂ ಕಾಣಿಸುತ್ತಿಲ್ಲ. ಅವನು ಇನ್ನಷ್ಟು ಹುಷಾರಾಗಿ ಬಾಲವನ್ನು ಸರಿಮಾಡಿಕೊಂಡು ಕುಳಿತ.
631) ಹಾಗೆ ಸಾವರಿಸಿಕೊಂಡಾಗ ಅವನ ಬಾಲವು ಸೂಚೀಮುಖನ ತಲೆಗೆ ತಗುಲಿ, ಅವನ ತಲೆ ಫಳ್ಳನೆ ಒಡೆದು ಅವನಿಗೆ ಪ್ರಜ್ಞೆ ಹೋಗುವಂತೆ ಆಯಿತು.
632) ಹನುಮಂತನ ಕಣ್ಣಿಗೇನಾದರೂ ಬಿದ್ದರೆ ಪ್ರಾಣವೂ ಉಳಿಯುವುದಿಲ್ಲ ಎಂದುಕೊಂಡ ಆ ಸೂಚೀಮುಖ, ಅಳುವಿನ ಶಬ್ದವೂ ಕೇಳಿಸದಂತೆ ಬಾಯಿ ಮುಚ್ಚಿಕೊಂಡು ಪಾತಾಳಕ್ಕೆ ಪಲಾಯನ ಮಾಡಿದ.
633) ಮೈರಾವಣನು ಅವನನ್ನು ನೋಡಿ, ‘ಛೀ!’ ಎಂದು ಅಸಹ್ಯಪಟ್ಟುಕೊಂಡು, ಮೂಷಿಕ ಮುಖನೆಂಬ ಇನ್ನೊಬ್ಬ ಸೇನಾಧಿಪತಿಯನ್ನು ಕರೆದು ಹೀಗೆ ಹೇಳಿದನು.
1. ಮೂಷಿಕ ಮುಖಾ! ಇವನು ವೇಷ ಬದಲಾಯಿಸದ ಹೊರತು ಚಿಕ್ಕಿಲಿ ಆಗಲಾರ. ನಿನಗೋ ಸಹಜವಾಗೇ ತಲೆ ಇಲಿತಲೆಯಂತೆ ಇದೆ.
2. ನೀನು ಹೋಗಿ ಆ ರಾಮಲಕ್ಷ್ಮಣರನ್ನು ಇಲ್ಲಿಗೆ ತಂದರೆ ನನ್ನ ಅರ್ಧರಾಜ್ಯ ನಿನ್ನದು.
634) ಮೂಷಿಕ ಮುಖ ಆನಂದದಿಂದ ಉಬ್ಬಿಹೋದ. ಇದೋ ನಿಮಿಷಾರ್ಧದಲ್ಲಿ ಬಂದು ಬಿಡುತ್ತೇನೆ ಎಂದು ಹೇಳಿ ಬಾಲದ ಕೋಟೆಯಹತ್ತಿರ ಹೋದ.
635) ಬಾಲದ ಕೋಟೆಯ ಸುತ್ತಲೂ ತಿರುಗಾಡಿ, ನೆಲಕ್ಕೂ ಬಾಲಕ್ಕೂ ನಡುವೆ ಇರುವ ಸಂದಿಯೊಳಗಿಂದ ತೂರಿಹೋಗೋಣವೆಂದು ದೂರದಿಂದ ಓಡಿಕೊಂಡುಬಂದು ಬಲವಾಗಿ ಬಾಲಕ್ಕೆ ಗುದ್ದಿದ. ಅವನು ಬಂದು ಅಪ್ಪಳಿಸಿದ್ದು ಹನುಮಂತನಿಗೆ ಗೊತ್ತಾಗಲೂ
ಇಲ್ಲ. ಆದರೆ ಮೂಷಿಕಮುಖನ ಮೂತಿ ಮಾತ್ರ ಜಜ್ಜಿಹೋಯಿತು.
636) ಇವನೂ ಹೆದರಿ ಪಾತಾಳಕ್ಕೆ ಬಂದಾಗ ಮೈರಾವಣನಿಗೆ ತಲೆ ಕೆಟ್ಟಂತಾಯಿತು. ಅವನು ಚೆನ್ನಾಗಿ ಯೋಚಿಸಿ, ಪಾಷಾಣಭೇದಿ ಎಂಬ ಮತ್ತೊಬ್ಬ ಸೇನಾಪತಿಯನ್ನು ಕರೆದು ಹೀಗೆ ಹೇಳಿದ.
1. ಪಾಷಾಣ ಭೇದೀ! ನೀನು ಮುಟ್ಟಿದರೆ ಸಾಕು, ಬೆಟ್ಟಗಳೂ ಪುಡಿ ಪುಡಿಯಾಗುತ್ತವೆ. ಇದು ನಿನಗಿರುವ ವರಬಲ.
2. ಇನ್ನು ನೀನು ರಂಗಕ್ಕೆ ಧುಮುಕಲೇಬೇಕಾಗಿದೆ. ಆ ವಾನರವೀರನ ಬಾಲದ ಕೋಟೆಯನ್ನು ಇನ್ನು ಯಾರೂ ಭೇದಿಸಲಾರರು. ನೀನೇ ಹೊರಡು.
637) ಪಾಷಾಣಭೇದಿ ಗರ್ವದಿಂದ ಉಬ್ಬಿಹೋದ. ಲಂಕೆಗೆ ಧಾವಿಸಿದ. ಬಂದು ನೋಡುತ್ತಾನೆ! ಹನುಮಂತ ಸೂರ್ಯಮಂಡಲದಂತೆ ಪ್ರಕಾಶಿಸುತ್ತಿದ್ದಾನೆ.
638) ಧೈರ್ಯ ತಂದುಕೊಂಡು, ಬಾಲದ ಒಂದು ಭಾಗವನ್ನು ಮುಟ್ಟಿದ. ತನಗಿದ್ದ ವರ ಏನೂ ಕೆಲಸ ಮಾಡಲಿಲ್ಲ. ಬಾಲವನ್ನು ಗಟ್ಟಿಯಾಗಿ ಉಜ್ಜಿದ, ಎಳೆದ, ನೂಕಿದ. ಏನೂ ಆಗಲಿಲ್ಲ. ಕೊನೆಗೆ ಕೋಪ ನೆತ್ತಿಗೇರಿ ಜೋರಾಗಿ ಗುದ್ದಿದ. ಅಷ್ಟೇ! ತಲೆಯ ಮೂಳೆ
ಮುರಿಯಿತು. ಹೆದರಿ ಓಡಿಹೋದ.
639) ಮೈರಾವಣನಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ಇನ್ಯಾರನ್ನು ಕಳಿಸುವುದು ಎಂದು ಯೋಚಿಸಿದ. ಕೊನೆಗೆ ಒಂದು ಹೊಸ ಉಪಾಯ ಹೊಳೆಯಿತು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share