ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 89

170
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 89
ಓಂ ನಮೋ ಹನುಮತೇ ನಮಃ

ಮೈರಾವಣನ ಮೋಸ
640) ಕೂಡಲೇ ಮೈರಾವಣ ವಿಭೀಷಣನ ರೂಪ ಧರಿಸಿದ. ಆ ರೂಪದಲ್ಲಿ ರಾಮನಾಮ ಗಾಯನ ಮಾಡುತ್ತಾ ಹನುಮಂತನಿದ್ದ ಕಡೆಗೆ ಬಂದ. ಹನುಮಂತ ವಿಭೀಷಣನನ್ನು ನೋಡಿ ನಮಸ್ಕಾರ ಮಾಡಿದ.
641) ನಕಲಿ ವಿಭೀಷಣ ಹೀಗೆ ಹೇಳಿದ.
1. ಹನುಮಂತಾ! ಇದು ರಾಕ್ಷಸರ ಯುದ್ಧ.
2. ಅವರು ನಾನಾ ಮಾಯಾ ವೇಷಗಳನ್ನು ಹಾಕಿಕೊಳ್ಳುತ್ತಿರುತ್ತಾರೆ. ನೀನು ಹುಷಾರಾಗಿರಬೇಕು.
3. ಬಾಲದ ಕೋಟೆ ಕಟ್ಟಿದ್ದೀನಲ್ಲಾ ಎಂದು ಧೈರ್ಯವಾಗಿ ಇದ್ದುಬಿಡಬಾರದು.
4. ಒಳಗೆ ನಮ್ಮ ಪ್ರಭುಗಳು ಸುಖವಾಗಿ ಇದ್ದಾರೋ ಇಲ್ಲವೋ ಎಂದು ಆಗಾಗ್ಗೆ ನೋಡುತ್ತಿರಬೇಕು.
5. ಬೇಕಾದರೆ ನಾನು ಒಂದುಸಾರಿ ಒಳಗೆ ಹೋಗಿ ನೋಡಿಕೊಂಡು ಬರುತ್ತೇನೆ.
642) ಹನುಮಂತ ಅವನ ಮಾತನ್ನು ನಂಬಿ ಮಾಯಾ ವಿಭೀಷಣನನ್ನು ಒಳಗೆ ಬಿಟ್ಟ.
643) ಒಳಗೆ ಹೋಗುತ್ತಲೇ ಅವನು ರಾಮ ಲಕ್ಷ್ಮಣರ ಮೇಲೆ ಮತ್ತು ಬರಿಸುವ ಔಷಧಿಯನ್ನು ಚೆಲ್ಲಿ, ಅವರನ್ನು ತನ್ನ ಮಾಯಾಬಲದಿಂದ ಚಿಕ್ಕವರಂತೆ ಮಾಡಿ, ಒಂದು ಮರದ ಪೆಟ್ಟಿಗೆಯಲ್ಲಿ ಹಾಕಿಕೊಂಡು ಆ ಪೆಟ್ಟಿಗೆಯನ್ನು ತನ್ನ ಹೊಕ್ಕಳಿನಲ್ಲಿ ಇಟ್ಟುಕೊಂಡ.
644) ರಾಮನಾಮ ಹಾಡಿಕೊಂಡು ಹೊರಗೆ ಬಂದು, ‘ರಾಮ ಲಕ್ಷ್ಮಣರು ಹಾಯಾಗಿ ನಿದ್ದೆ ಮಾಡುತ್ತಿದ್ದಾರೆ’ ಎಂದು ಹನುಮಂತನಿಗೆ ಹೇಳಿ ಹೊರಟುಹೋದ.
645) ಅವನು ಹೋದ ಸ್ವಲ್ಪ ಹೊತ್ತಿಗೇ ನಿಜವಾದ ವಿಭೀಷಣ ಬಂದ. ಅವನು ಭಕ್ತಿಯಿಂದ ರಾಮತಾರಕಮಂತ್ರವನ್ನು ಹೇಳುತ್ತಿದ್ದ.
646) ಈ ವಿಭೀಷಣನೂ ಮಾಯಾವಿಭೀಷಣ ಆಡಿದ ಮಾತುಗಳನ್ನೇ ಆಡಿದ. ಇದರಿಂದ ಹನುಮಂತನಿಗೆ ಅನುಮಾನ ಬಂದು, ಇದೇನಯ್ಯಾ! ಈಗ ತಾನೆ ನೋಡಿಕೊಂಡು ಹೋದೆಯಲ್ಲಾ, ಪುನಃ ಅದೇ ಮಾತುಗಳನ್ನು ಆಡ್ತಿದೀಯಲ್ಲಾ!” ಅಂದ.
647) ವಿಭೀಷಣನಿಗೆ ಗಾಬರಿಯಾಯಿತು. “ನಾನು ಬರುತ್ತಿರುವುದೇ ಈಗ. ಮುಂಚೆ ಬಂದಿರಲಿಲ್ಲ” ಎಂದು ಹೇಳಿದ. ಏನೋ ಮೋಸವಾಗಿದೆ ಎಂದು ಇಬ್ಬರಿಗೂ ಅರ್ಥವಾಯಿತು. ಇಬ್ಬರೂ ಸೇರಿ ಪ್ರಾಕಾರದೊಳಗೆ ನೋಡಿದರು. ಅಲ್ಲಿ ರಾಮಲಕ್ಷ್ಮಣರು ಇರಲಿಲ್ಲ.
648) ಹನುಮಂತನಿಗೂ ವಿಭೀಷಣನಿಗೂ ಮೂರ್ಛೆ ಹೋಗುವಂತೆ ಆಯಿತು. ವಿಭೀಷಣನೇ ಮೊದಲು ಚೇತರಿಸಿಕೊಂಡ. ಈಚೆಗೆ ಏನೇನು ನಡೆಯಿತು ಎಂದು ಹನುಮಂತನಿಂದ ಕೇಳಿ ತಿಳಿದುಕೊಂಡ. ಮೊದಲು ಇಲಿಗಳಂತಹ ಯಾವುದೋ ಮೂರು ಪ್ರಾಣಿಗಳು
ಬಂದಿದ್ದವೆಂದೂ, ಆಮೇಲೆ ಆ ನಕಲಿ ವಿಭೀಷಣ ಬಂದು ಒಳಗೆ ಹೋದನೆಂದೂ ಆಂಜನೇಯ ಹೇಳಿದ.
649) ವಿಭೀಷಣ ದೀರ್ಘವಾಗಿ ಆಲೋಚಿಸಿದ. ಹೀಗೆ ಮೋಸ ಮಾಡಬೇಕಾದರೆ ಪಾತಾಳವಾಸಿಯಾದ ಮೈರಾವಣನೊಬ್ಬನಿಗೆ ಮಾತ್ರ ಸಾಧ್ಯ ಎಂದು ನಿಶ್ಚಯಿಸಿಕೊಂಡ. ಹನುಮಂತನಿಗೆ ಅವನನ್ನು ಕುರಿತು ವಿವರಿಸಿ ಹೇಳಿದ.
( ಮುಂದುವರೆಯುವುದು )

ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಸಂಗ್ರಹ :
ಭಾಲರಾ
ಬೆಂಗಳೂರು


Share