ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 39

236
Share

ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 39
ಓಂ ನಮೋ ಹನುಮತೇ ನಮಃ

3. ಆದ್ದರಿಂದ ನೀನು ಯುದ್ಧಕ್ಕೆ ಹೋಗಬೇಡ – ಎಂದು ಬೇಡಿಕೊಂಡಳು.
328) ವಾಲಿಯು ಅವಳನ್ನು ಮೂದಲಿಸಿ, “ರಾಮ ಧರ್ಮಜ್ಞ. ಯಾವ ಅಪಕಾರವೂ ಮಾಡಿಲ್ಲದ ನನಗೆ ಅವನು ಏಕೆ ತೊಂದರೆ ಕೊಟ್ಟಾನು?” ಎಂದು ಮೊಂಡುತನದಿಂದ ಯುದ್ಧಕ್ಕೆ ಹೋದ.
329) ಈ ಬಾರಿ ವಾಲಿ ಸುಗ್ರೀವರ ಯುದ್ಧದಲ್ಲಿ ಪುನಃ ಸುಗ್ರೀವನೇ ಸೋಲುವ ಸ್ಥಿತಿ ಬಂತು. ಆಗ ಮರೆಯಾಗಿ ನಿಂತಿದ್ದ ರಾಮನು ಯಾವ ಬಾಣವನ್ನು ಬಿಡುವುದು ಎಂದು ಯೋಚಿಸಿ, ಒಂದು ವಿಶೇಷವಾದ ಬಾಣದಿಂದ ವಾಲಿಯನ್ನು ಗುರಿಯಿಟ್ಟು ಹೊಡೆಯುವುದು, ಮಹಾಸ್ತ್ರಗಳಿಗೂ ಬಗ್ಗದ ವಾಲಿ, ಆ ಬಾಣದ ಪೆಟ್ಟಿಗೆ ನೆಲಕ್ಕುರುಳುವುದು – ಎಲ್ಲಾ ಕ್ಷಣಾಂತರದಲ್ಲಿ ನಡೆದುಹೋಯಿತು.
330) ವಾಲಿ ನೆಲಕ್ಕುರುಳಿದ ಕೂಡಲೇ ರಾಮನು ಅವನ ಹತ್ತಿರ ಬಂದು ಎದುರಿಗೆ ನಿಂತ. ಆಗ ವಾಲಿ ರಾಮನ ಮೇಲೆ ದೋಷಾರೋಪಣ ಮಾಡಿದ. ಅದಕ್ಕೆ ರಾಮನೂ ತೀಕ್ಷ್ಣವಾಗೇ ಉತ್ತರ ಕೊಟ್ಟನು.
331) ವಾಲಿ ತನ್ನ ತಪ್ಪನ್ನು ಅರಿತುಕೊಂಡ. ತಾರಳನ್ನೂ ಅಂಗದನನ್ನೂ ರಾಮನಿಗೆ ಒಪ್ಪಿಸಿ, ತನ್ನ ಕೊರಳಲ್ಲಿದ್ದ ಇಂದ್ರದತ್ತವಾದ ಮಣಿಮಾಲೆಯನ್ನು ಸುಗ್ರೀವನಿಗೆ ಕೊಟ್ಟು, ನೋವಿನಿಂದ ನರಳುತ್ತಾ ಶ್ರೀರಾಮನನ್ನು ಸ್ತುತಿ ಮಾಡಿದನು.
332) ಹಾಗೆ ಶ್ರೀರಾಮನನ್ನು ಧ್ಯಾನಿಸುತ್ತಾ ವಾಲಿ ಪ್ರಾಣ ಬಿಟ್ಟ.
333) ಇದನ್ನು ನೋಡಿದ ಸುಗ್ರೀವ ದುಃಖದಲ್ಲಿ ಮುಳುಗಿಹೋಗಿ ಆತ್ಮಹತ್ಯೆ ಮಾಡಿಕೊಳ್ಳ ಬೇಕೆಂದು ನಿರ್ಧರಿಸಿದ. ಅತ್ತ ವಾಲಿಯ ಹೆಂಡತಿ ತಾರೆಯೂ ಗಟ್ಟಿಯಾಗಿ ಅಳುತ್ತಾ “ನನ್ನನ್ನು ಕೊಂದು ಬಿಡು ರಾಮಾ!” ಎಂದು ಕಿರುಚುತ್ತಿದ್ದಳು.
334) ಸ್ವಲ್ಪ ಹೊತ್ತಾದ ಮೇಲೆ ರಾಮನೇ ಸ್ವತಃ ಪ್ರತಿಯೊಬ್ಬರ ಹತ್ತಿರ ಹೋಗಿ ತತ್ತ್ವ ಬೋಧೆ ಮಾಡುತ್ತಾ ಸಮಾಧಾನ ಮಾಡಿದ. ಸುಗ್ರೀವ, ಅಂಗದ, ಇತರ ಬಂಧು ಮಿತ್ರರು ಎಲ್ಲರೂ ಸಮಾಧಾನಗೊಂಡರು. ಆದರೆ ತಾರೆಯನ್ನು ಸಂತೈಸಲು ರಾಮನಿಗೂ ಆಗಲಿಲ್ಲ. ಆಗ ರಾಮನ ಸೂಚನೆಯ ಮೇರೆಗೆ ಹನುಮಂತನು ಮುಂದೆ ಬಂದು ತಾರೆಯನ್ನು ಗದರಿಕೊಂಡು, ಅದ್ಭುತರೀತಿಯಲ್ಲಿ ಸಂತೈಸುತ್ತಾ ತತ್ತ್ವ ಬೋಧೆ ಮಾಡಿದ.
335) ಆ ಸಂದರ್ಭದಲ್ಲಿ “ಅಶೋಚ್ಯಾ ನನ್ವಶೋಚಸ್ತ್ವಂ” ಎಂಬ ವಾಕ್ಯವನ್ನು ಪ್ರಯೋಗಿಸಿದ. ನೀನು ತತ್ತ್ವಶಾಸ್ತ್ರ ತಿಳಿದವಳು. ಯಾರಿಗೋಸ್ಕರ ಅಳಬಾರದೋ, ಅವರಿಗೋಸ್ಕರ ಅಳುತ್ತಿದ್ದೀಯೆ – ಎಂದು ಆ ವಾಕ್ಯದ ಅರ್ಥ.
336) ನಂತರದ ಕಾಲದಲ್ಲಿ ಶ್ರೀಕೃಷ್ಣ ಪರಮಾತ್ಮನೂ ತನ್ನ ಭಗವದ್ಗೀತೋಪದೇಶವನ್ನು
ಈ ವಾಕ್ಯದಿಂದಲೇ ಪ್ರಾರಂಭಿಸಿರುವುದು ಗಮನಾರ್ಹ.
337) ಜ್ಞಾನನಿಧಿಯಾದ ಹನುಮಂತ ಮಾಡಿದ ಉಪದೇಶದಿಂದ ತಾರೆಯು ಸಂಪೂರ್ಣವಾಗಿ ದುಃಖಮುಕ್ತಳಾದಳು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share