MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 29

278
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 29

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

146 . ಓಂ ಸತ್ಯಶಿರೋರುಹಾಯ ನಮಃ
147 . ಓಂ ಜಗಜ್ಜನ್ಮಲಯೋನ್ಮೇಷನಿಮೇಷಾಯ ನಮಃ
148 . ಓಂ ಅಗ್ನ್ಯರ್ಕ ಸೋಮದೃಶೇ ನಮಃ
149 . ಓಂ ಗಿರೀಂದ್ರೈಕರದನಾಯ ನಮಃ
150 . ಓಂ ಧರ್ಮಾಧರ್ಮೋಷ್ಠಾಯ ನಮಃ

146. ಓಂ ಸತ್ಯಶಿರೋರುಹಃ-
ಭಾ: ಸತ್ಯಲೋಕೋ ಯಸ್ಯ ಕೈಶ್ಯಮಸೌ ಸತ್ಯಶಿರೋರುಹಃ।

ಸತ್ಯಲೋಕವು ಯಾವ ದೇವನ ತಲೆಗೂದಲಾಗಿದೆಯೋ ಅವನು ಸತ್ಯಶಿರೋರುಹನು. (ತಲೆಯಲ್ಲಿ ಯಾವಾಗಲೂ ಸತ್ಯವನ್ನೇ ತುಂಬಿಸಿಕೊಂಡು ಇರುತ್ತಾನೆ ಎಂದರ್ಥ)
ಓಂ ಸತ್ಯಶಿರೋರುಹಾಯ ನಮಃ

147. ಓಂ ಜಗಜ್ಜನ್ಮಲಯೋನ್ಮೇಷ ನಿಮೇಷಃ –
ಭಾ: ಉನ್ಮೇಷಾಜ್ಜಾಯತೇ ಯಸ್ಯ ನಿಮೇಷಾಲ್ಲೀಯತೇ ಜಗತ್‌।
ಜಗಜ್ಜನ್ಮಲಯೋನ್ಮೇಷ ನಿಮೇಷ ಇತಿ ಸ ಸ್ಮೃತಃ॥

ಯಾರು ಕಣ್ಣು ತೆರೆದರೆ ಜಗತ್ತಿನ ಸೃಷ್ಟಿಯೂ, ಕಣ್ಣು ಮುಚ್ಚಿದರೆ ಜಗತ್ತಿನ ಪ್ರಳಯವೂ ಆಗುತ್ತದೆಯೋ ಅವನು ಜಗಜ್ಜನ್ಮಲಯೋನ್ಮೇಷನಿವುಷನು.
ಓಂ ಜಗಜ್ಜನ್ಮಲಯೋನ್ಮೇಷನಿವುಷಾಯ ನಮಃ

148. ಓಂ ಅಗ್ನ್ಯರ್ಕ ಸೋಮದೃಕ್-
ಭಾ: ಊರ್ಧ್ವದಕ್ಷಿಣವಾಮಾನಿ ನೇತ್ರಾಣಿ ಜಗದಾತ್ಮನಃ।
ವಹ್ನಿಸೂರ್ಯೇಂದವೋ ಯಸ್ಯ ಕ್ರಮಾತ್ಸೋಗ್ನ್ಯರ್ಕ ಸೋಮದೃಕ್‌॥

ವಿಶ್ವವೇ ಆತ್ಮವಾಗಿರುವ ಗಣೇಶನ ಹಣೆಯಲ್ಲಿರುವ ಕಣ್ಣು ಅಗ್ನಿಯೂ, ಬಲಗಣ್ಣು ಸೂರ್ಯನೂ, ಎಡಗಣ್ಣು ಚಂದ್ರನೂ ಆಗಿದ್ದಾರೆ. ಆದ್ದರಿಂದ ಅವನು ಅಗ್ನ್ಯರ್ಕಸೋಮದೃಕ್.
ಓಂ ಅಗ್ನ್ಯರ್ಕ ಸೋಮದೃಶೇ ನಮಃ
ಗಿರೀಂದ್ರೈಕರದೋ ಧರ್ಮಾಧರ್ಮೋಷ್ಠಃ ಸಾಮ ಬೃಂಹಿತಃ।

ಗ್ರಹರ್ಕ್ಷದಶನೋ ವಾಣೀಜಿಹ್ವೋ ವಾಸವ ನಾಸಿಕಃ॥

149. ಓಂ ಗಿರೀಂದ್ರೈಕರದಃ-
ಭಾ: ಏಕಸ್ಥೂಲೋ ಬಹಿರ್ದಂತೋ ಗಿರೀಂದ್ರಃ ಕನಕಾಚಲಃ।

ವಿರಾಡ್ರೂಪಜುಷೋ ಯಸ್ಯ ಗಿರೀಂದ್ರೈಕರದೋ ಹಿ ಸಃ೤೤
ಬೃಹತ್ ಏಕಶಿಲಾ ರೂಪವಾದ ಗಿರೀಂದ್ರನೆಂದು ಕೀರ್ತಿಸಲ್ಪಟ್ಟ ಕನಕಾಚಲವು (ಮೇರುಪರ್ವತವು) ವಿರಾಡ್ರೂಪವನ್ನು ಹೊಂದಿದ ಗಣೇಶನಿಂದ ಹೊರಬಂದಿರುವ ದಂತವಾಗಿರುವುದರಿಂದ ಅವನು ಗಿರೀಂದ್ರೈಕರದನು.
ಓಂ ಗಿರೀಂದ್ರೈಕರದನಾಯ ನಮಃ
ಭಾ:- ಯತ್ತು ಪ್ರಾಚಾ ಗಿರೀಂದ್ರಪದಂ ಹಿಮವತ್ಪರ್ವತೇನ ವ್ಯಾಖ್ಯಾತಂ ತತ್ ಸುಮೇರುಕೂಟದಂತಾಯ ಇತಿ ಗಣೇಶಸ್ತವರಾಜ ವಿರುದ್ಧತ್ವಾತ್ ಅನಾದೇಯಂ೤ ಮೇರುಪೃಷ್ಠಃ ಇತಿ ನಾಮ್ನಾ ಪೌನರುಕ್ತ್ಯಂತು ಅಗ್ನ್ಯರ್ಕಸೋಮದೃಕ್, ಸೋಮಾರ್ಕ ಘಂಟಃ ಇತಿವತ್ ನ ದೋಷಾವಹಮ್‌।

ಕ.ವಿ ಪ್ರಾಚೀನ ಪಂಡಿತರು ಕೆಲವರು ಗಿರೀಂದ್ರ ಎಂಬ ಪದಕ್ಕೆ ಹಿಮಾಲಯ ಎಂಬ ಅರ್ಥವನ್ನು ಹೇಳಿದ್ದಾರೆ. ಹಾಗೆ ವ್ಯಾಖ್ಯಾನ ಮಾಡುವುದರಿಂದ “ಸುಮೇರುಕೂಟದಂತಾಯ” ಎಂಬ ಗಣೇಶಸ್ತವರಾಜದ ವಾಕ್ಯದೊಂದಿಗೆ ವಿರೋಧ ಬಂದಂತಾಗುತ್ತದೆ. (ಆದ್ದರಿಂದ ಗಿರೀಂದ್ರ ಎಂಬ ಪದಕ್ಕೆ ಹಿಮವತ್ಪರ್ವತ ಎಂದು ಅರ್ಥೈಸಬಾರದು. ಒಂದು ವೇಳೆ ಆ ಅರ್ಥವಿದ್ದರೂ ಈ ಸಂದರ್ಭದಲ್ಲಿ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು.)
ಗಣೇಶನು ಮೇರುದಂತನು ಎಂದು ಹೇಳುವುದರಿಂದ ಮೇರು ಪೃಷ್ಠನೆಂಬ ನಾಮದಿಂದ ಪುನರುಕ್ತಿದೋಷವೇನೂ ಬರುವುದಿಲ್ಲ. ಅಗ್ನ್ಯರ್ಕಸೋಮದೃಕ್ ಸೋಮಾರ್ಕಘಂಟಃ ಎಂಬ ಎರಡು ನಾಮಗಳೂ ಸಹಸ್ರನಾಮದಲ್ಲಿಯೇ ಬಂದಿವೆ. ಅಲ್ಲಿ ಸೋಮ, ಅರ್ಕ ಎಂಬ ಪದಗಳ ಪುನರುಕ್ತಿಯೇ ಹೊರತು ನಾಮದ ಪುನರುಕ್ತಿಯಾಗಲಿಲ್ಲ. ಹಾಗೆಯೇ ಈ ಸಂದರ್ಭದಲ್ಲಿಯೂ ಪದಗಳ ಪುನರುಕ್ತಿಯೇ ಹೊರತು ನಾಮದ ಅಥವಾ ನಾಮಾರ್ಥದ ಪುನರುಕ್ತಿಯಲ್ಲ ಎಂದು ತಿಳಿಯಬೇಕು.

150. ಓಂ ಧರ್ಮಾಧರ್ಮೋಷ್ಠಃ : –
ಭಾ: ಪಾಪಪುಣ್ಯೇ ಯದೋಷ್ಠೌ ಸ ಧರ್ಮಾಧರ್ಮೋಷ್ಠ ಉಚ್ಯತೇ।
ಧರ್ಮೋತ್ತರೋಷ್ಠೋ ದುರಿತಾಧರೋಷ್ಠ ಇತಿ ಚ ಸ್ಮೃತೇಃ॥

ಯಾರ ತುಟಿಗಳು ಪಾಪ-ಪುಣ್ಯಗಳ ಸ್ವರೂಪಗಳಾಗಿವೆಯೋ ಅವನು ಧರ್ಮಾಧರ್ಮೋಷ್ಠನು. ‘ಧರ್ಮೋತ್ತರೋಷ್ಠೋ ದುರಿತಾಧರೋಷ್ಠಃ’ (ಮೇಲಿನ ತುಟಿಯು ಧರ್ಮರೂಪವು. ಕೆಳ ತುಟಿಯು ಪಾಪ ರೂಪವು) ಎಂಬ ಸ್ಮೃತಿವಾಕ್ಯವು ಕೂಡಾ ಈ ವಿಷಯವನ್ನೇ ತಿಳಿಸುತ್ತಿದೆ.
ಓಂ ಧರ್ಮಾಧರ್ಮೋಷ್ಠಾಯ ನಮಃ

(ಮುಂದುವರೆಯುವುದು )
( ಸಂಗ್ರಹ )
* ಭಾಲರ
ಬೆಂಗಳೂರು


Share