MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 157

895
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 157

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

850 . ಓಂ ಚತುರ್ವಿಧೋಪಾಯಮಯಾಯ ನಮಃ
851 . ಓಂ ಚತುರ್ವರ್ಣಾಶ್ರಮಾಶ್ರಯಾಯ ನಮಃ
852 . ಓಂ ಚತುರ್ವಿಧವಚೋವೃತ್ತಿಪರಿವೃತ್ತಿಪ್ರವರ್ತಕಾಯ ನಮಃ
853 . ಓಂ ಚತುರ್ಥೀಪೂಜನಪ್ರೀತಾಯ ನಮಃ
854 . ಓಂ ಚತುರ್ಥೀ ತಿಥಿ ಸಂಭವಾಯ ನಮಃ

850. ಓಂ ಚತುರ್ವಿಧೋಪಾಯಮಯಃ-
ಭಾ: ಭೇದೋ ದಂಡಃ ಸಾಮ ದಾನಮಿತ್ಯುಪಾಯಚತುಷ್ಟಯಮ್‌|
ಚತುರ್ವಿಧೋಪಾಯಮಯಸ್ತಜ್ಜನ್ಯಫಲಸಾಧಕಃ||
ಸಾಮ-ದಾನ-ಭೇದ-ದಂಡಗಳೆಂಬ ನಾಲ್ಕು ಉಪಾಯಗಳಿಂದ ದೊರಕುವ ಫಲಗಳನ್ನು ಸಾಧಿಸಿಕೊಡುವುದರಿಂದ ಗಣೇಶನು ಚತುರ್ವಿಧೋಪಾ ಯಮಯನಾಗಿದ್ದಾನೆ.
ಓಂ ಚತುರ್ವಿಧೋಪಾಯಮಯಾಯ ನಮಃ

851. ಓಂ ಚತುರ್ವರ್ಣಾಶ್ರಮಾಶ್ರಯಃ-
ಭಾ: ಬ್ರಾಹ್ಮಣಬ್ರಹ್ಮಚರ್ಯಾದಿ ವರ್ಣಾಶ್ರಮವಿಭಾಗಶಃ|
ವಿಹಿತೈಃ ಕರ್ಮಭಿಃ ಪ್ರಾಪ್ಯಶ್ಚತುರ್ವರ್ಣಾಶ್ರಮಾಶ್ರಯಃ||
ಬ್ರಾಹ್ಮಣಾದಿ ನಾಲ್ಕು ವರ್ಣದವರಿಗೂ ಬ್ರಹ್ಮಚಾರಿ ಮೊದಲಾದ ನಾಲ್ಕು ಆಶ್ರಮದವರಿಗೂ ವಿಹಿತವಾದ ಕರ್ಮಗಳಿಂದ ಹೊಂದತಕ್ಕವನಾದ್ದರಿಂದ ಚತುರ್ವರ್ಣಾಶ್ರಮಾಶ್ರಯನು.
ಓಂ ಚತುರ್ವರ್ಣಾಶ್ರಮಾಶ್ರಯಾಯ ನಮಃ

852. ಓಂ ಚತುರ್ವಿಧ ವಚೋವೃತ್ತಿ ಪರಿವೃತ್ತಿ ಪ್ರವರ್ತಕಃ-
ಭಾ: ಗುಹಾಯಾಂ ವರ್ತಯಂಸ್ತಿಸ್ರಃ ಪಶ್ಯಂತೀ ಮಧ್ಯಮಾ ಪರಾ|
ವೈಖರೀ ಪರಿತೋ ಬಾಹ್ಯವರ್ತನೇನ ಪ್ರವರ್ತಯನ್‌||
ಹೃದಯಗುಹೆಯಲ್ಲಿದ್ದು ಪರಾ, ಪಶ್ಯಂತೀ, ಮಧ್ಯಮಾ ಎಂಬ ಮೂರು ವಿಧವಾದ ವಾಕ್ಕುಗಳನ್ನು ಅಂತರಂಗದಲ್ಲಿ ಪ್ರೇರೇಪಿಸುತ್ತಾನೆ. (ಈ ಮೂರು ವಾಕ್ಕುಗಳು ಹೊರಗೆ ಕೇಳುವುದಿಲ್ಲ. ಮಾತು ಹೊರಬರಲು ಸೂಕ್ಷ್ಮ, ನಾದ, ಶಬ್ದರೂಪಗಳಲ್ಲಿ ವೈಖರೀ ವಾಕ್ಕಿಗೆ ಸಹಕರಿಸುತ್ತವೆ)
ವೈಖರೀ ವಾಕ್ಕನ್ನು ಮುಖದಿಂದ ಹೊರಗೆಡಹಿ ಕಿವಿಗೆ ಕೇಳಿಸುವಂತೆ ಮಾಡುತ್ತಾನೆ. ಹೀಗಾಗಿ ಗಣಪತಿಯು ನಾಲ್ಕು ವಿಧವಾದ ವಾಕ್ಕುಗಳಿಗೂ ಪ್ರೇರಕನಾಗಿದ್ದಾನೆ. ಆದ್ದರಿಂದ ಅವನು ಚತುರ್ವಿಧವಚೋವೃತ್ತಿಪರಿವೃತ್ತಿಪ್ರವರ್ತಕನು.
ಓಂ ಚತುರ್ವಿಧವಚೋವೃತ್ತಿಪರಿವೃತ್ತಿಪ್ರವರ್ತಕಾಯ ನಮಃ
ಚತುರ್ಥೀಪೂಜನಪ್ರೀತಶ್ಚತುರ್ಥೀತಿಥಿಸಂಭವಃ|
ಪಂಚಾಕ್ಷರಾತ್ಮಾ ಪಂಚಾತ್ಮಾ ಪಂಚಾಸ್ಯಃ ಪಂಚಕೃತ್ಯಕೃತ್‌||

853. ಓಂ ಚತುರ್ಥೀಪೂಜನಪ್ರೀತಃ
854. ಓಂ ಚತುರ್ಥೀತಿಥಿಸಂಭವಃ
ಭಾ: ಚತುರ್ಥೀ ಪೂಜನಪ್ರೀತಶ್ಚತುರ್ಥೀ ತಿಥಿ ಸಂಭವಃ|
ಇತಿ ನಾಮದ್ವಯಂ ಸ್ಪಷ್ಟಂ ಸ್ಯಾದ್ಗಣೇಶಪುರಾಣತಃ||
ಚೌತಿಯ ದಿನ ಗಣೇಶನನ್ನು ಪೂಜಿಸಿದರೆ ಅವನಿಗೆ ಸಂತೋಷವಾಗುತ್ತದೆ ಎಂದು ಗಣೇಶ ಪುರಾಣವು ತಿಳಿಸುತ್ತಿದೆ. ಆದ್ದರಿಂದ ಅವನು ಚತುರ್ಥೀಪೂಜನಪ್ರೀತನು. (ಸಂಕಷ್ಟಚತುರ್ಥಿ ಗಣೇಶನಿಗೆ ಬಹಳ ಪ್ರಿಯ.)
ಓಂ ಚತುರ್ಥೀಪೂಜನಪ್ರೀತಾಯ ನಮಃ
ಗಣೇಶನು ಭಾದ್ರಪದ ಶುದ್ಧಚತುರ್ಥಿಯಲ್ಲಿ ಜನಿಸಿದ್ದಾನೆಂದು ಗಣೇಶ ಪುರಾಣವು ಹೇಳುತ್ತಿದೆ. ಆದಕಾರಣ ಅವನನ್ನು ಚತುರ್ಥೀತಿಥಿಸಂಭವನೆಂದು ತಿಳಿಯಬೇಕು.
ಓಂ ಚತುರ್ಥೀ ತಿಥಿ ಸಂಭವಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share