ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 32

280
Share

ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 32
ಓಂ ನಮೋ ಹನುಮತೇ ನಮಃ

287) ರಾವಣ ಇವರಿಗೆ ಹೊಸಬನೇನಲ್ಲ. ಸುಗ್ರೀವನ ಅಣ್ಣ ವಾಲಿಯ ಕೈಲಿ ಅನೇಕಬಾರಿ ಪೆಟ್ಟುತಿಂದು, ಕೊನೆಗೆ ವಾಲಿಯ ಜೊತೆ ಸಂಧಿಮಾಡಿಕೊಂಡು ಸ್ನೇಹದಿಂದ ಇದ್ದ. ಆಗಾಗ್ಗೆ ವಾಲಿಯ ರಾಜ್ಯಕ್ಕೆ ಬಂದು ಹೋಗುತ್ತಿದ್ದ. ಸುಗ್ರೀವನಿಗೆ ಯಾವಾಗಲೂ ರಾವಣ ಎದುರಾಗಿ ಇರಲಿಲ್ಲ. ಆದರೆ ಅವನೂ ವಾಲಿಯಷ್ಟು ಬಲಶಾಲಿಯೇ. ರಾವಣನನ್ನು ಎದುರಿಸಬಲ್ಲ ಸಾಮರ್ಥ್ಯ ಇದ್ದವನೇ. ಆದರೇನು! ಈಗ ತನ್ನ ಪರಿಸ್ಥಿತಿಯೇ ಹೀಗಿರುವಾಗ ಹೊಸ ಸಂಕಟವನ್ನು ಏಕೆ ಮೈಮೇಲೆ ಎಳೆದುಕೊಳ್ಳಬೇಕು?
288) “ಹೋಗಲಿ, ಇವಳ ಪೈಕಿಯವರು ಯಾರಾದರೂ ಬಂದು ಕೇಳಿದರೆ, ಅವರಿಗೆ ಈ ಬಟ್ಟೆಯ ಗಂಟನ್ನು ಕೊಡೋಣ” ಅಂದುಕೊಂಡು, ಅವರು ಅದನ್ನು ಒಂದು ಗುಹೆಯೊಳಗೆ ಭದ್ರವಾಗಿ ಇರಿಸಿದರು.
289) ಇದಾದ ಕೆಲವು ದಿನಗಳ ನಂತರ ‘ರಾವಣನು ಕಳ್ಳತನದಿಂದ ಬಂದು, ದಶರಥನ ಮಗನಾದ ರಾಮನ ಹೆಂಡತಿಯನ್ನು ಹಾರಿಸಿಕೊಂಡು ಹೋದನಂತೆ’ ಅನ್ನುವ ವಾರ್ತೆ ಬಂತು. ಅದನ್ನು ಕೇಳಿದ ಹನುಮ-ಸುಗ್ರೀವರಿಗೆ, ತಾವು ಆಕಾಶದಲ್ಲಿ ನೋಡಿದ ಸಂಘಟನೆ ಜ್ಞಾಪಕ ಬಂತು. ಅದು ಅದೇ ಹೌದೋ ಅಲ್ಲವೋ ಅಂದುಕೊಂಡು ಅವರು ಸುಮ್ಮನೆ ಇದ್ದುಬಿಟ್ಟರು.
ರಾಮ ಲಕ್ಷ್ಮಣ ದರ್ಶನ
290) ಅವರು ವಾಸ ಮಾಡುತ್ತಿದ್ದ ಋಷ್ಯಮೂಕ ಪರ್ವತದ ಹತ್ತಿರದಲ್ಲೇ ‘ಪಂಪಾನದಿ’ ಎಂಬ ನದಿಯೊಂದು ಹರಿಯುತ್ತಿತ್ತು. ಹತ್ತಿರದಲ್ಲೇ ಒಂದು ದೊಡ್ಡ ಆಳವಾದ ಹಳ್ಳವೊಂದು ಇತ್ತು. ನದಿಯ ನೀರು ಆ ಹಳ್ಳದೊಳಗೆ ಬಂದು ತುಂಬುತ್ತಿತು. ಆ ಹಳ್ಳ ತುಂಬಿದ ನಂತರ ಹೆಚ್ಚಿನ ನೀರು ಮುಂದೆ ಹರಿದುಕೊಂಡು ಹೋಗುತ್ತಿತ್ತು. ಹೀಗೆ ಸದಾ ಹೊಸ ನೀರು ಬಂದು ತುಂಬುತ್ತಿದ್ದುದರಿಂದ ಆ ಸರೋವರವು ಸ್ವಚ್ಚವಾಗಿಯೂ ನಿರ್ಮಲವಾಗೂ ಇರುತ್ತಿತ್ತು. ಆದ್ದರಿಂದ ಅದನ್ನು ಪಂಪಾನದಿ ಎಂದೂ, ಪಂಪಾಸರೋವರ ಎಂದೂ ಕರೆಯುತ್ತಿದ್ದರು. ಪಂಪಾ ಅಂದರೆ ದುಃಖಹಾರಿಣಿ.
291) ಈ ಸರೋವರ ಆಂಜನೇಯ ಸ್ವಾಮಿಗೆ ತುಂಬಾ ಪ್ರಿಯ. ಗಂಧಮಾದನದಲ್ಲಿ ಇದ್ದಾಗಲೂ ಅವನು ಆಗಾಗ ಈ ಪಂಪಾ ಸರೋವರಕ್ಕೆ ಬಂದು ಹೋಗುತ್ತಿದ್ದುದು ಉಂಟು. ಋಷ್ಯಮೂಕ ಪರ್ವತದ ಶಿಖರದ ಮೇಲೆ ನಿಂತು ನೋಡಿದರೆ ಈ ಪಂಪಾನದಿ, ಪಂಪಾ ಸರೋವರ, ಹಾಗೂ ಅದರ ಸುತ್ತಲಿನ ಬಯಲು ಪ್ರದೇಶ ಚೆನ್ನಾಗಿ ಕಾಣಿಸುತ್ತಿತ್ತು. ಆ ಸೌಂದರ್ಯವನ್ನು ಸವಿಯುತ್ತಾ ಗಂಟೆಗಟ್ಟಲೆ ಕಾಲಕಳೆಯುವುದು
ಆ ದಿನಗಳಲ್ಲಿ ಹನುಮಂತ ಸುಗ್ರೀವರಿಗೆ ಕಾಲಕ್ಷೇಪದ ಒಂದು ಮಾರ್ಗವಾಗಿತ್ತು.
292) ಒಂದುದಿನ ಹಾಗೇ ಸುಮ್ಮನೆ ನೋಡುತ್ತಾ ಕುಳಿತಿರುವಾಗ ಆ ಪಂಪಾಸರೋವರ ಪ್ರಾಂತ್ಯದಲ್ಲಿ ಬಿಲ್ಲು ಧರಿಸಿದ್ದ ಇಬ್ಬರು ದೃಢಕಾಯರು ಅತ್ತಿಂದಿತ್ತ ತಿರುಗಾಡುತ್ತಾ ಇರುವುದು ಕಾಣಿಸಿತು.
293) ಏಕೋ ಏನೋ, ಅಷ್ಟು ದೂರದಿಂದ ನೋಡಿದರೂ, ಅವರನ್ನು ನೋಡುತ್ತಲೇ ಹನುಮಂತನ ಹೃದಯ ಮೆತ್ತಗಾಯಿತು, ಉಲ್ಲಾಸವಾಯಿತು. ಸುಗ್ರೀವನು ಮಾತ್ರ ಭಯದಿಂದ ಗುಹೆಯೊಂದರಲ್ಲಿ ಅವಿತುಕೊಂಡ. ಆಗ ಹನುಮಂತ-ಸುಗ್ರೀವರ ನಡುವೆ ನಡೆದ ಸಂಭಾಷಣೆ ಹೀಗಿತ್ತು.
ಹನುಮಂತ : ಯಾಕಯ್ಯಾ ಅಷ್ಟೊಂದು ಭಯಪಡ್ತಿದೀಯಾ?
ಸುಗ್ರೀವ : ಅವರಿಬ್ಬರನ್ನು ನೋಡಿದೆಯಾ? ಅವರ ನಡಿಗೆ ನೋಡಿದರೇನೇ ಅವರ ಪರಾಕ್ರಮ ತಿಳಿಯುತ್ತದೆ. ಅವರು ರಾಕ್ಷಸರನ್ನೂ ಚುಪ್ಪಾ ಚೂರು ಮಾಡಿಬಿಡುತ್ತಾರೆ.
ಹನುಮಂತ : ಮಾಡಲಿ ಬಿಡಯ್ಯಾ! ನಮಗೇನು?
ಸುಗ್ರೀವ : ಅದೇನು ಹಾಗೆ ಮಾತಾಡ್ತೀಯ? ಅವರು ಮನುಷ್ಯರು. ಅವರಿಗೆ ಈ ದಟ್ಟವಾದ ಕಾಡಲ್ಲಿ ಏನು ಕೆಲಸ? ಬಹುಶಃ ನಮ್ಮಣ್ಣ ವಾಲಿ ಇವರನ್ನು ಎಲ್ಲೋ ಹುಡುಕಿ ತಂದು
ಈ ಋಷ್ಯಮೂಕ ಪರ್ವತಕ್ಕೆ ಕಳಿಸಿ ನನ್ನನ್ನು ಸಾಯಿಸಲು ಹೇಳಿ ಕಳಿಸಿರಬಹುದು. ಆದ್ದರಿಂದಲೇ ಅವರಿಗೆ ಸರಿಯಾಗಿ ಗೊತ್ತಾಗದೇ ಹುಡುಕುತ್ತಿರಬಹುದು.
ಹನುಮಂತ : ಅಲ್ಲಪ್ಪಾ, ಆ ದಶರಥನ ಮಕ್ಕಳ್ಯಾರೋ ಹೆಂಡತಿಗೋಸ್ಕರ ಹುಡುಕುತ್ತಿದ್ದಾರೆ ಅಂತ ಈಚೆಗೆ ತಾನೆ ಕೇಳಿದ್ದೆವಲ್ಲಾ!
ಸುಗ್ರೀವ : ಯಾವಾಗಲೂ ನೀನು ಯೋಚನೆ ಮಾಡೋದೇ ಹೀಗೆ. ಅವರಾದರೋ ಕ್ಷತ್ರಿಯರಾಜಕುಮಾರರು. ಇವರು ಒಳ್ಳೆ ಭಿಕಾರಿಗಳಂತೆ ಕಾಣಿಸುತ್ತಿದ್ದಾರೆ. ಋಷಿಪುತ್ರರಂತೆ ಇದ್ದಾರೆ. ಇವರು ಯಾಕೆ ಅವರಾಗುತ್ತಾರೆ?
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರಾ
ಬೆಂಗಳೂರು


Share