ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ 97

169
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 97
ಓಂ ನಮೋ ಹನುಮತೇ ನಮಃ

ಮೈರಾವಣ ಸಂಹಾರ
ಹನುಮಂತ ಶರೀರವನ್ನು ಹಿಗ್ಗಿಸಿಕೊಂಡು ಸುತ್ತಲೂ ನೋಡಿದ. ಮೈರಾವಣನ ಅಂತಃಪುರವನ್ನು ಗುರ್ತಿಸಿದ. ಕಿಂಚಿತ್ತೂ ಸಮಯ ಹಾಳುಮಾಡದೇ ಒಂದೇ ಹಾರಿಗೆ ಆ ಭವನದ ಕಿಟಕಿಯ ಮೂಲಕ ತೂರಿ ಒಳಗೆ ಬಂದು ಇಳಿದ. ದೈವ ಯೋಗವೋ ಏನೋ! ಅವನು ನೇರವಾಗಿ ಮೈರಾವಣನ ಮುಂದೆಯೇ ಬಂದು ಇಳಿದಿದ್ದ.
ಇದ್ದಕ್ಕಿದ್ದಂತೆ ಬಂದು ಇಳಿದ ಹನುಮಂತನನ್ನು ನೋಡಿ ಮೈರಾವಣ ಕಂಗಾಲಾದ. ಮೈರಾವಣನ ತೇಜಸ್ಸು ನೋಡಿ ಹನುಮಂತನೂ ಅವಾಕ್ಕಾಗಿ ನಿಂತುಬಿಟ್ಟ. ಆದರೆ ಕ್ಷಣದಲ್ಲೇ ಚೇತರಿಸಿಕೊಂಡು, ಕೋಪದಿಂದ ಅಷ್ಟೇ ವೇಗವಾಗಿ ಮುಂದೆ ಹಾರಿ, ಮೈರಾವಣನ ತಲೆಗೆ ಬಲವಾಗಿ ಗುದ್ದಿದ.
ಇಬ್ಬರೂ ದೇಹವನ್ನು ಬೃಹದಾಕಾರ ಮಾಡಿಕೊಂಡು ಘೋರವಾಗಿ ಯುದ್ಧ ಮಾಡಿದರು. ಇಬ್ಬರ ದೇಹಗಳೂ ರಕ್ತಮಯ ಆದವು. ಹನುಮಂತನ ಹೊಡೆತಕ್ಕೆ ಮೈರಾವಣನ ಪ್ರಾಣ ಹಾರಿಹೋಗುತ್ತಿದೆ. ಆದರೆ ಅವನು ಮರುಕ್ಷಣದಲ್ಲೇ ಪುನಃ ಹುಟ್ಟಿಬರುತ್ತಿದ್ದಾನೆ.
ಹೀಗೇ ಕಾಲಹರಣ ಆಗುತ್ತಿದ್ದರೆ ಬೆಳಕು ಹರಿಯುತ್ತದೆ ಎಂದು ಹನುಮಂತ ಕಳವಳ ಪಡುತ್ತಿದ್ದಾನೆ. ಏನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ, ಈ ಗುದ್ದಾಟದ ಗಲಾಟೆಯಲ್ಲಿ ಅವರಿಬ್ಬರೂ ದುರ್ದಂಡಿ ಇದ್ದ ಕೊಠಡಿಯ ಬಾಗಿಲಹತ್ತಿರ ಬಂದು ಬಿದ್ದರು.
ಅವಳು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಳು. ಈ ಸಮಯದಲ್ಲಿ ಅಣ್ಣನ ಮೇಲೆ ವ್ಯಾಮೋಹ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ನಿರ್ಧರಿಸಿ, ಗಟ್ಟಿಯಾಗಿ ಕೂಗಿ ಹೇಳಿದಳು –
ಹನುಮಂತಾ! ನನ್ನ ಅಣ್ಣನ ಪ್ರಾಣಗಳು ಅವನ ಶರೀರದಲ್ಲಿ ಇಲ್ಲ. ಅದೋ! ದೂರದಲ್ಲಿ ಕಾಣಿಸುತ್ತಿರುವ ಬೆಟ್ಟದ ಗುಹೆಯಲ್ಲಿ ಒಂದು ದೊಡ್ಡ ಬಂಡೆಯ ಕೆಳಗೆ ಐದು ದುಂಬಿಗಳಿವೆ. ಅವೇ ನನ್ನ ಅಣ್ಣನ ಪಂಚ ಪ್ರಾಣಗಳು.
ಮೈರಾವಣನು ದುರ್ದಂಡಿಯನ್ನು ಬಾಯಿಗೆಬಂದಂತೆ ಬೈಯಲಾರಂಭಿಸಿದ. ಅಷ್ಟರಲ್ಲಿ ಹನುಮಂತನು ಆಕಾಶದೆತ್ತರಕ್ಕೆ ಬೆಳೆದು, ಒಂದು ಕಾಲಿನಿಂದ ಮೈರಾವಣನನ್ನು ಮೆಟ್ಟಿನಿಂತು, ಇನ್ನೊಂದು ಕಾಲನ್ನು ಆ ಬೆಟ್ಟದವರೆಗೂ ಚಾಚಿ, ಆ ಬಂಡೆಯನ್ನು ತಳ್ಳಿಹಾಕಿದ. ಅಲ್ಲಿದ್ದ ಐದು ದುಂಬಿಗಳನ್ನೂ ಕಾಲಿಂದ ಹೊಸಕಿ ಸಾಯಿಸಿದ. ಇನ್ನೊಂದು ಕಾಲಿನ ಕೆಳಗೆ ಸಿಕ್ಕು ಒದ್ದಾಡುತ್ತಿದ್ದ ಹಾಗೆ ಮೈರಾವಣ ಪ್ರಾಣಬಿಟ್ಟ.
ಹನುಮಂತನ ಮೇಲೆ ಹೂಮಳೆಗರೆಯಿತು.
ಆಕಾಶದಲ್ಲಿ ದೇವತೆಗಳು ನಿಂತು ಹನುಮಂತನನ್ನು ಹೊಗಳಿ ಹಾಡಿದರು.
( ಮುಂದುವರೆಯುವುದು )

* ರಚನೆ : ಪರಮ ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share