MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 132

219
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 132

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

686 . ಓಂ ರುಷ್ಟಚಿತ್ತಪ್ರಸಾದನಾಯ ನಮಃ
697 . ಓಂ ಪರಾಭಿಚಾರಶಮನಾಯ ನಮಃ
688 . ಓಂ ದುಃಖಭಂಜನಕಾರಕಾಯ ನಮಃ
689 . ಓಂ ಲವಾಯ ನಮಃ
690 . ಓಂ ತ್ರುಟಯೇ ನಮಃ

686. ಓಂ ರುಷ್ಟಚಿತ್ತಪ್ರಸಾದನಃ –
ಭಾ: ಸೇವಕೇಷು ಕ್ರೋಧಜುಷಾಂ ರಾಜ್ಞಾಂ ಚಿತ್ತಾನಿ ಶೋಧಯೇತ್‌|
ಸ್ನೇಹಶಾಲೀನಿ ಕುರ್ವಾಣೋ ರುಷ್ಟಚಿತ್ತಪ್ರಸಾದನಃ||
ಸೇವಕರಲ್ಲಿ ಕೋಪದಿಂದಿರುವ ರಾಜರ ಮನಸ್ಸುಗಳನ್ನು ಶೋಧಿಸಿ (ಸರಿಪಡಿಸಿ, ಶುದ್ಧಿಮಾಡಿ) ಅವರನ್ನು ಸೇವಕರಲ್ಲಿ ಸ್ನೇಹವಂತರನ್ನಾಗಿ ಮಾಡುವುದರಿಂದ ರುಷ್ಟಚಿತ್ತಪ್ರಸಾದನನು.
ಓಂ ರುಷ್ಟಚಿತ್ತಪ್ರಸಾದನಾಯ ನಮಃ
ಪರಾಭಿಚಾರಶಮನೋ ದುಃಖಭಂಜನಕಾರಕಃ|
ಲವಸ್ಸ್ತ್ರುಟಿಃ ಕಲಾ ಕಾಷ್ಠಾ ನಿಮೇಷಸ್ತತ್ಪರಃ ಕ್ಷಣಃ||

687. ಓಂ ಪರಾಭಿಚಾರಶಮನಃ –
ಭಾ: ಪರಾಭಿಚಾರ ಶಮನೋ ಮಾರಣಾಖ್ಯಸ್ಯ ಕರ್ಮಣಃ|
ಸ್ವಶತ್ರುಭಿಃ ಪ್ರಣೀತಸ್ಯ ನಿಷ್ಫಲೀಕರಣಾನ್ಮತಃ||
ಶತ್ರುಗಳ ಮಾರಣ, ಆಭಿಚಾರಿಕ (ಮಾಟ) ಹೋಮಗಳೆಂಬ ದುಷ್ಕರ್ಮಗಳನ್ನು ನಿಷ್ಫಲಗೊಳಿಸುವುದರಿಂದ ಪರಾಭಿಚಾರಶಮನನು.
ಓಂ ಪರಾಭಿಚಾರಶಮನಾಯ ನಮಃ

688. ಓಂ ದುಃಖಭಂಜನಕಾರಕಃ :-
ಭಾ: ಭಂಜಯನ್ ಸರ್ವದುಃಖಾನಿ ದುಃಖಭಂಜನ ಕಾರಕಃ|
ದುಃಖಗಳನ್ನೆಲ್ಲಾ ನಾಶಮಾಡುವುದರಿಂದ ದುಃಖಭಂಜನಕಾರಕನು.
ಓಂ ದುಃಖಭಂಜನಕಾರಕಾಯ ನಮಃ
ಭಾ:- ಅಥ ಕಾಲಸ್ವರೂಪತ್ವಮುಕ್ತಂ ವಿಂಶತಿನಾಮಭಿಃ|
ಇನ್ನು ಮುಂದಿನ ಇಪ್ಪತ್ತು ನಾಮಗಳಲ್ಲಿ ಗಣಪತಿಯ ಕಾಲಸ್ವರೂಪತ್ವವು ಹೇಳಲ್ಪಡುತ್ತದೆ.

689. ಓಂ ಲವಃ:-
ಭಾ: ಪದ್ಮಪತ್ರಸಹಸ್ರಸ್ಯ ಸೂಕ್ಷ್ಮಸೂಚ್ಯಾಭಿವೇಧನೇ|
ದಲೇ ದಲೇ ಲವಃ ಕಾಲಃ………………..||
ಸಾವಿರ ಪದ್ಮಪತ್ರಗಳನ್ನು ಒಂದರ ಮೇಲೊಂದಿಟ್ಟು ಚೂಪಾದ ಸೂಜಿಯಿಂದ ಚುಚ್ಚಿದಾಗ ಒಂದು ಎಲೆಯಿಂದ ಇನ್ನೊಂದು ತಾವರೆ ಎಲೆಯೊಳಗೆ ಸೂಜಿ ತೂರುವ ಕಾಲವನ್ನು ‘ಲವ’ ಎನ್ನುತ್ತಾರೆ. ಗಣೇಶನು ಲವಕಾಲ ಸ್ವರೂಪನಾಗಿದ್ದಾನೆ.
ಓಂ ಲವಾಯ ನಮಃ

690. ಓಂ ತ್ರುಟಿಃ :-
ಭಾ: …………..ಸಹಸ್ರೇಣ ಲವೈಸ್ಸ್ತ್ರುಟಿಃ||
ಸಾವಿರ ಲವಗಳನ್ನು ಒಂದು ‘ತ್ರುಟಿ’ ಕಾಲ ಎನ್ನುತ್ತಾರೆ. ಗಣಪತಿ ತ್ರುಟಿಕಾಲ ಸ್ವರೂಪನು.
ಓಂ ತ್ರುಟಯೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share